"ಸರ್ಕಾರ್ ತೋ ಗಯೀ ಹುಯೀ ಹೇ": ಪಹಲ್ಗಾಮ್ ಘಟನೆಯಲ್ಲಿ ತಂದೆಯನ್ನು ಕಳೆದುಕೊಂಡ ಬಾಲಕನ ಪ್ರಶ್ನೆ

Update: 2025-04-25 08:15 IST
"ಸರ್ಕಾರ್ ತೋ ಗಯೀ ಹುಯೀ ಹೇ": ಪಹಲ್ಗಾಮ್ ಘಟನೆಯಲ್ಲಿ ತಂದೆಯನ್ನು ಕಳೆದುಕೊಂಡ ಬಾಲಕನ ಪ್ರಶ್ನೆ

PC: Screengrab/ X.com/ ANI 

  • whatsapp icon

ಸೂರತ್: ಪಹಲ್ಗಾಮ್ ಭಯೋತ್ಪಾದಕ ದಾಳಿಯ ಹೃದಯ ವಿದ್ರಾವಕ ಘಟನೆ ದೇಶಾದ್ಯಂತ ಹಲವರ ಆತ್ಮಪ್ರಜ್ಞೆಯನ್ನು ಕಲಕಿದರೆ, ಘಟನೆಯಲ್ಲಿ ತಂದೆಯನ್ನು ಕಳೆದುಕೊಂಡ ಸೂರತ್ ನ ಪುಟ್ಟ ಬಾಲಕನೊಬ್ಬ ಪ್ರದರ್ಶಿಸಿರುವ ಧೈರ್ಯ ಸಾರ್ವತ್ರಿಕ ಗಮನ ಸೆಳೆದಿದೆ.

ಸೂರತ್ನ ವರ್ಚಾ ಪ್ರದೇಶದ ಶೈಲೇಶ್ ಕಲ್ತಿಯಾ ಅವರ ಪುತ್ರ ನಕ್ಷ್ ಕಲ್ತಿಯಾ ತನ್ನ ಆಘಾತವನ್ನು ಹಂಚಿಕೊಂಡಿರುವುದು ಮಾತ್ರವಲ್ಲದೇ, ಮುಖ್ಯವಾಹಿನಿಯ ಬಹುತೇಕ ಮಾಧ್ಯಮಗಳು ಕಡೆಗಣಿಸಿರುವ ಗಂಭೀರ ಭದ್ರತಾ ಲೋಪವನ್ನು ಪ್ರಶ್ನಿಸಿದ್ದಾನೆ.

ಎಎನ್ಐ ಪ್ರಸಾರ ಮಾಡಿರುವ ವಿಡಿಯೊ ತುಣುಕು ಇದೀಗ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ಮಿನಿ ಸ್ವಿಡ್ಜರ್ಲೆಂಡ್ ಎನಿಸಿದ ಜಮ್ಮು-ಕಾಶ್ಮೀರದ ಪಹಲ್ಗಾಮ್ ಘಟನೆಯ ಭಯಾನಕ ಅನುಭವವನ್ನು ಈ ವಿಡಿಯೊದಲ್ಲಿ ಮೆಲುಕು ಹಾಕಿದ್ದಾನೆ. ಘಟನೆಯಲ್ಲಿ ಈ ಪುಟ್ಟ ಬಾಲಕ ತಂದೆಯನ್ನು ಕಳೆದುಕೊಂಡಿದ್ದ.

ಆತನ ಮಾತುಗಳಲ್ಲಿ ಕೇವಲ ನೋವಿನ ಛಾಯೆ ಮಾತ್ರ ಇರುವುದಲ್ಲ; ಬದಲಾಗಿ ಮಾತಿನ ಸ್ಪಷ್ಟತೆ ಮತ್ತು ಧೈರ್ಯವನ್ನು ಜಾಲತಾಣಗಳಲ್ಲಿ ವ್ಯಾಪಕವಾಗಿ ಶ್ಲಾಘಿಸಲಾಗುತ್ತಿದ್ದು, "ಚುನಾಯಿತ ಪ್ರತಿನಿಧಿಗಳಿಗಿಂತ ಹೆಚ್ಚು ಪ್ರಜ್ಞಾಪೂರ್ವಕ ಮತ್ತು ಸದ್ದು ಕಳೆದುಕೊಂಡಿರುವ ಮಾಧ್ಯಮಗಳಿಗಿಂತ ಗಟ್ಟಿಧ್ವನಿ" ಎಂದು ನೆಟ್ಟಿಗರು ಬಣ್ಣಿಸಿದ್ದಾರೆ.

ಭದ್ರತಾ ವೈಫಲ್ಯದ ಹಿನ್ನೆಲೆಯಲ್ಲಿ ಸರ್ಕಾರದ ಬಗ್ಗೆ ಏನಾದರೂ ಹೇಳುವುದು ಇದೆಯೇ ಎಂದು ವರದಿಗಾರರೊಬ್ಬರು ಪ್ರಶ್ನಿಸಿದಾಗ ತನ್ನ ಭಾವನೆಗಳನ್ನು ಹಿಡಿದಿಟ್ಟುಕೊಳ್ಳಲಾಗದ ನಕ್ಷ್, "ಸರ್ಕಾರ್ ತೋ ಗಯಿ ಹುಯಿ ಹೈ, ಮತ್ಲಬ್ ಇತ್ನಾ ಬಡಾ ಆತಂಕ್ ವಾದಿ ಹಮ್ಲಾ ಹುವಾ, ಉನ್ಹೇ ಕುಚ್ ಪತಾ ಹಿ ನಹಿ ಹೇ" (ಸರ್ಕಾರದ ಅಸ್ತಿತ್ವವೇ ಇಲ್ಲ. ಇಷ್ಟೊಂದು ದೊಡ್ಡ ಭಯೋತ್ಪಾದಕ ದಾಳಿ ನಡೆದಿದೆ. ಆದರೆ ಅವರಿಗೆ ಅದರ ಬಗ್ಗೆ ಏನೂ ತಿಳಿದಿಲ್ಲ.) ಎಂದಿದ್ದಾನೆ. ಪಕ್ಕದಲ್ಲಿದ್ದ ಸೇನಾ ನೆಲೆ ಒಂದು ಗಂಟೆ ಕಳೆದರೂ ಏಕೆ ನೆರವಿಗೆ ಬಂದಿಲ್ಲ ಎಂದು ಖಾರವಾಗಿ ಪ್ರಶ್ನಿಸಿದ್ದಾನೆ. ಈ ಪ್ರದೇಶಕ್ಕೆ ಹೆಚ್ಚಿನ ಭದ್ರತೆ ಒದಗಿಸುವ ಅಗತ್ಯವನ್ನು ಬಾಲಕ ಪ್ರತಿಪಾದಿಸಿದ್ದಾನೆ.

ಬಾಲಕನ ಈ ಮಾತುಗಳು ವೈರಲ್ ಆಗಿದ್ದು, ಈತನ ಪ್ರೌಢಿಮೆ ಮತ್ತು ವಯಸ್ಸಿಗೆ ಮೀರಿದ ತಿಳಿವಳಿಕೆ ಬಗ್ಗೆ ಜಾಲತಾಣಗಳಲ್ಲಿ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ. ರಾಜಕೀಯ ಮುಖಂಡರು ಮತ್ತು ಮಾಧ್ಯಮಗಳ ಮೌನ ಹಾಗೂ ಬಾಲಕನ ವಿವೇಕಯುತ ಹಾಗೂ ನೇರ ನುಡಿಯನ್ನು ಹಲವರು ಹೋಲಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News