ಸಂವಿಧಾನದಲ್ಲಿ ಭಾರತೀಯವಾದದ್ದು ಏನೂ ಇಲ್ಲ ಎಂಬ ಸಾವರ್ಕರ್ ನಿಲುವಿಗೆ ಬಿಜೆಪಿ ಬದ್ಧವಾಗಿದೆಯೇ?; ಸಂಸತ್ತಿನಲ್ಲಿ ರಾಹುಲ್ ಗಾಂಧಿ ವಾಗ್ದಾಳಿ

Update: 2024-12-14 09:48 GMT

ರಾಹುಲ್‌ ಗಾಂಧಿ (PTI)

ಹೊಸದಿಲ್ಲಿ: ನಮ್ಮ ಸಂವಿಧಾನದಲ್ಲಿ ಭಾರತೀಯವಾದದ್ದು ಏನೂ ಇಲ್ಲವೆಂದು ಹಿಂದುತ್ವವಾದಿ ವಿನಾಯಕ್ ದಾಮೋದರ್ ಸಾವರ್ಕರ್ ಅಭಿಪ್ರಾಯ ಪಟ್ಟಿದ್ದರು ಎಂಬುದನ್ನು ಉಲ್ಲೇಖಿಸಿ ಆಡಳಿತಾರೂಢ ಬಿಜೆಪಿಯ ವಿರುದ್ಧ ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದರು. ಲೋಕಸಭೆಯಲ್ಲಿ ನಡೆದ ಸಂವಿಧಾನದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ರಾಹುಲ್ ಗಾಂಧಿ, ಸಂವಿಧಾನದ ಜಾಗದಲ್ಲಿ ಮನುಸ್ಮೃತಿಯನ್ನು ಜಾರಿಗೆ ತರಬೇಕು ಎಂದು ಸಾವರ್ಕರ್ ಆಗ್ರಹಿಸಿದ್ದರು ಎಂದು ಆರೋಪಿಸಿದರು.

"ನಮ್ಮ ಸಂವಿಧಾನದಲ್ಲಿ ಭಾರತೀಯವಾದದ್ದು ಏನೂ ಇಲ್ಲ ಎಂದು ವಿ.ಡಿ.ಸಾವರ್ಕರ್ ತಮ್ಮ ಬರಹಗಳಲ್ಲಿ ಸ್ಪಷ್ಟವಾಗಿ ಪ್ರತಿಪಾದಿಸಿದ್ದಾರೆ. ಸಂವಿಧಾನವನ್ನು ನೀವು (ಬಿಜೆಪಿ) ರಕ್ಷಿಸುವ ಮಾತನಾಡುವಾಗ ಸಾವರ್ಕರ್ರನ್ನು ವಿಡಂಬಿಸುತ್ತಿದ್ದೀರಿ, ಅವರನ್ನು ನಿಂದಿಸುತ್ತಿದ್ದೀರಿ ಹಾಗೂ ನೀವು ಅವರಿಗೆ ಅವಮಾನ ಮಾಡುತ್ತಿದ್ದೀರಿ" ಎಂದು ರಾಹುಲ್ ಗಾಂಧಿ ವ್ಯಂಗ್ಯವಾಡಿದರು.

ಬಿಜೆಪಿಯನ್ನು ಮಹಾಭಾರತದ ದ್ರೋಣಾಚಾರ್ಯರಿಗೆ ಹೋಲಿಸಿದ ರಾಹುಲ್ ಗಾಂಧಿ, ದ್ರೋಣಾಚಾರ್ಯರು ಏಕಲವ್ಯನ ಹೆಬ್ಬೆರಳು ಕತ್ತರಿಸಿದಂತೆ, ಬಿಜೆಪಿ ದೇಶದ ಯುವಜನರ ಆಕಾಂಕ್ಷೆಗಳನ್ನು ಮುರಿದು ಹಾಕುತ್ತಿದೆ ಎಂದೂ ಅವರು ಆರೋಪಿಸಿದರು.

"ಸರಕಾರಿ ಉದ್ಯೋಗಗಳಿಗೆ ಲ್ಯಾಟರಲ್ ಪ್ರವೇಶ ನೀತಿಯನ್ನು ಜಾರಿಗೊಳಿಸುವ ಮೂಲಕ, ನೀವು ಯುವಕರು, ಹಿಂದುಳಿದವರು ಹಾಗೂ ಬಡವರ ಹೆಬ್ಬೆರಳನ್ನು ಕತ್ತರಿಸಿ ಹಾಕುತ್ತಿದ್ದೀರಿ" ಎಂದು ಅವರು ಬಿಜೆಪಿಯ ವಿರುದ್ಧ ವಾಗ್ದಾಳಿ ನಡೆಸಿದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News