ಎರಡನೇ ಏಕದಿನ: ವಿಂಡೀಸ್ ವಿರುದ್ಧ ಭಾರತದ ಮಹಿಳಾ ತಂಡಕ್ಕೆ ಭರ್ಜರಿ ಜಯ
ವಡೋದರ : ಆರಂಭಿಕ ಆಟಗಾರ್ತಿ ಹಾಗೂ ನಾಯಕಿ ಹ್ಯಾಲಿ ಮ್ಯಾಥ್ಯೂಸ್ ಶತಕದ (106 ರನ್, 109 ಎಸೆತ, 13 ಬೌಂಡರಿ) ಹೊರತಾಗಿಯೂ ವೆಸ್ಟ್‌ಇಂಡೀಸ್ ಕ್ರಿಕೆಟ್ ತಂಡವು ಭಾರತ ವಿರುದ್ಧದ 2ನೇ ಏಕದಿನ ಅಂತರ್ರಾಷ್ಟ್ರೀಯ ಪಂದ್ಯದಲ್ಲಿ 115 ರನ್ ಅಂತರದಿಂದ ಸೋಲುಂಡಿದೆ.
ಈ ಗೆಲುವಿನ ಮೂಲಕ ಭಾರತ ತಂಡವು 3 ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆ ಪಡೆದು ಸರಣಿ ವಶಪಡಿಸಿಕೊಂಡಿದೆ.
ಮಂಗಳವಾರ ನಡೆದ ಪಂದ್ಯದಲ್ಲಿ ಗೆಲ್ಲಲು 359 ರನ್ ಗುರಿ ಬೆನ್ನಟ್ಟಿದ ವೆಸ್ಟ್‌ಇಂಡೀಸ್ ತಂಡವು 46.2 ಓವರ್‌ಗಳಲ್ಲಿ 243 ರನ್‌ಗೆ ಆಲೌಟಾಯಿತು.
ನಾಯಕಿ ಮ್ಯಾಥ್ಯೂಸ್ ಹೊರತುಪಡಿಸಿ ಶೆಮೈನ್ ಕ್ಯಾಂಪ್‌ಬೆಲ್(38 ರನ್), ಝೈದಾ ಜೇಮ್ಸ್(25 ರನ್), ಫ್ಲೆಚರ್(22 ರನ್)ಮಾತ್ರ ಎರಡಂಕೆಯ ಸ್ಕೋರ್ ಗಳಿಸಿದರು.
ಭಾರತದ ಬೌಲಿಂಗ್ ವಿಭಾಗದಲ್ಲಿ ಪ್ರಿಯಾ ಮಿಶ್ರಾ(3-49)ಯಶಸ್ವಿ ಪ್ರದರ್ಶನ ನೀಡಿದರು.ಪ್ರತಿಕಾ ರಾವಲ್(2-37), ದೀಪ್ತಿ ಶರ್ಮಾ(2-40) ಹಾಗೂ ಟೈಟಾಸ್ ಸಾಧು(2-42) ತಲಾ ಎರಡು ವಿಕೆಟ್‌ಗಳನ್ನು ಪಡೆದು ವಿಂಡೀಸ್ ಪಡೆಯನ್ನು ಕಟ್ಟಿಹಾಕಿದರು.
*ಹರ್ಲೀನ್ ಡೆವೊಲ್ ಚೊಚ್ಚಲ ಶತಕ: ಭಾರತ 358/5
ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ ಭಾರತ ಮಹಿಳಾ ತಂಡವು ಹರ್ಲೀನ್ ಡಿಯೋಲ್ ಅವರ ಚೊಚ್ಚಲ ಶತಕದ(115 ರನ್, 103 ಎಸೆತ, 16 ಬೌಂಡರಿ)ಸಹಾಯದಿಂದ ವೆಸ್ಟ್‌ಇಂಡೀಸ್ ವಿರುದ್ಧ ನಿಗದಿತ 50 ಓವರ್‌ಗಳಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ 358 ರನ್ ಗಳಿಸಿದೆ.
ತನ್ನ ಹಿಂದಿನ ಗರಿಷ್ಠ ಏಕದಿನ ಸ್ಕೋರ್ ದಾಖಲೆಯನ್ನು ಸರಿಗಟ್ಟಿದ ಭಾರತ ತಂಡವು ಇದೀಗ ವೆಸ್ಟ್‌ಇಂಡೀಸ್ ವಿರುದ್ಧ ದೊಡ್ಡ ಮೊತ್ತ ಕಲೆೆ ಹಾಕಿದೆ.
ಡಿಯೋಲ್ ಅವರ 103 ಎಸೆತಗಳ ಇನಿಂಗ್ಸ್‌ನಲ್ಲಿ 16 ಬೌಂಡರಿಗಳಿದ್ದವು. ಡಿಯೋಲ್‌ಗೆ ಪ್ರತಿಕಾ ರಾವಲ್(76 ರನ್, 86 ಎಸೆತ, 10 ಬೌಂಡರಿ, 1 ಸಿಕ್ಸರ್), ಸ್ಮತಿ ಮಂಧಾನ(53 ರನ್, 47 ಎಸೆತ, 7 ಬೌಂಡರಿ, 2 ಸಿಕ್ಸರ್) ಹಾಗೂ ಜೆಮಿಮಾ ರೋಡ್ರಿಗಸ್(52 ರನ್, 36 ಎಸೆತ, 6 ಬೌಂಡರಿ, 1 ಸಿಕ್ಸರ್)ಅರ್ಧಶತಕದ ಕೊಡುಗೆಯ ಮೂಲಕ ಉತ್ತಮ ಸಾಥ್ ನೀಡಿದರು.
ಬಲಗೈ ಆಟಗಾರ್ತಿ ಡಿಯೋಲ್ ಅವರು ಡಿಯಾಂಡ್ರಾ ಡಾಟ್ಟಿನ್ ಬೌಲಿಂಗ್‌ನಲ್ಲಿ ಮೂರು ಬೌಂಡರಿಗಳನ್ನು ಗಳಿಸಿದರು. ಈ ಮೂಲಕ ತನ್ನ ಸ್ಕೋರನ್ನು 90ಕ್ಕೆ ತಲುಪಿಸಿದರು. ಶಮಿಲಿಯಾ ಬೌಲಿಂಗ್‌ನಲ್ಲಿ ಬೌಂಡರಿ ಗಳಿಸಿದ ಡಿಯೋಲ್ 98 ಎಸೆತಗಳಲ್ಲಿ ಶತಕವನ್ನು ಪೂರೈಸಿದರು.
ಸ್ಮತಿ ಮಂಧಾನ ಹಾಗೂ ಪ್ರತಿಕಾ ರಾವಲ್ ಮೊದಲ ವಿಕೆಟ್‌ನಲ್ಲಿ 16.3 ಓವರ್‌ಗಳಲ್ಲಿ 110 ರನ್ ಜೊತೆಯಾಟ ನಡೆಸಿ ಭಾರತದ ಬೃಹತ್ ಮೊತ್ತಕ್ಕೆ ಭದ್ರ ಬುನಾದಿ ಹಾಕಿಕೊಟ್ಟರು. ಸ್ಮತಿ ಹಾಗೂ ಪ್ರತಿಕಾ ಸತತ ಎರಡನೇ ಬಾರಿ ಮೊದಲ ವಿಕೆಟ್‌ಗೆ ಶತಕದ ಜೊತೆಯಾಟ ನಡೆಸಿದರು.
58 ಎಸೆತಗಳಲ್ಲಿ ತನ್ನ ಚೊಚ್ಚಲ ಏಕದಿನ ಅರ್ಧಶತಕ ಗಳಿಸಿದ ಪ್ರತಿಕಾ ರಾವಲ್ ತನ್ನ 2ನೇ ಏಕದಿನ ಪಂದ್ಯದಲ್ಲಿ ಮೊದಲ ಶತಕ ಗಳಿಸುವ ವಿಶ್ವಾಸ ಮೂಡಿಸಿದ್ದರು. ಆದರೆ ಝೈದಾ ಜೇಮ್ಸ್‌ಗೆ ವಿಕೆಟ್ ಒಪ್ಪಿಸಿದರು.
ರಾವಲ್ ಅವರು ಡಿಯೋಲ್‌ರೊಂದಿಗೆ 2ನೇ ವಿಕೆಟ್‌ನಲ್ಲಿ 62 ರನ್ ಸೇರಿಸಿದರು.
ನಾಯಕಿ ಹರ್ಮನ್‌ಪ್ರೀತ್ ಕೌರ್(22 ರನ್) ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ. ಆಗ ಡೆವೊಲ್‌ರೊಂದಿಗೆ ಕೈಜೋಡಿಸಿದ ರೋಡ್ರಿಗಸ್ ಅವರು 4ನೇ ವಿಕೆಟ್‌ಗೆ 12 ಓವರ್‌ಗಳಲ್ಲಿ 116 ರನ್ ಪಾಲುದಾರಿಕೆ ನಡೆಸಿದರು.ಈ ಮೂಲಕ ಭಾರತದ ಸ್ಕೋರನ್ನು 300ರ ಗಡಿ ದಾಟಿಸಿದರು.
ರೋಡ್ರಿಗಸ್ 34 ಎಸೆತಗಳಲ್ಲಿ ಅರ್ಧಶತಕ ತಲುಪಿದರು. ಡಿಯೋಲ್ 48ನೇ ಓವರ್‌ನಲ್ಲಿ ಕಿಯಾನಾ ಜೋಸೆಫ್‌ಗೆ ವಿಕೆಟ್ ಒಪ್ಪಿಸಿದರು.
*ಸಂಕ್ಷಿಪ್ತ ಸ್ಕೋರ್
ಭಾರತದ ಮಹಿಳಾ ತಂಡ: 358/5
(ಹರ್ಲೀನ್ ಡಿಯೋಲ್ 115, ಪ್ರತಿಕಾ ರಾವಲ್ 76, ಸ್ಮತಿ ಮಂಧಾನ 53, ಜೆಮಿಮಾ ರೋಡ್ರಿಗಸ್ 52, ಕಿಯಾನಾ ಜೋಸೆಫ್ 1-27)
ವೆಸ್ಟ್‌ಇಂಡೀಸ್: 46.2 ಓವರ್‌ಗಳಲ್ಲಿ 243/10
(ಹ್ಯಾಲಿ ಮ್ಯಾಥ್ಯೂಸ್ 106, ಶೆಮೈನ್ ಕ್ಯಾಂಪ್‌ಬೆಲ್ 38, ಝೈದಾ ಜೇಮ್ಸ್ 25, ಪ್ರಿಯಾ ಮಿಶ್ರಾ 3-49)