ಆರು ರಾಜ್ಯಗಳ ಏಳು ಉಪಚುನಾವಣೆ: ಇಂಡಿಯಾ ಕೂಟಕ್ಕೆ ಮೊದಲ ಅಗ್ನಿಪರೀಕ್ಷೆ
ಹೊಸದಿಲ್ಲಿ: ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ನ್ಯಾಷನಲಿಸ್ಟ್ ಡೆಮಾಕ್ರಟಿಕ್ ಅಲಯನ್ಸ್ (ಎನ್ಡಿಎ) ಕೂಟವನ್ನು ಎದುರಿಸಲು ಸಜ್ಜಾಗಿರುವ ಇಂಡಿಯನ್ ನ್ಯಾಷನಲ್ ಡೆವಲಪ್ಮೆಂಟಲ್ ಇನಕ್ಲೂಸಿವ್ ಅಲಯನ್ಸ್ (ಇಂಡಿಯಾ) ಕೂಟಕ್ಕೆ ಮಂಗಳವಾರ ನಡೆಯುವ ಆರು ರಾಜ್ಯಗಳ ಉಪಚುನಾವಣೆ ಮೊದಲ ಅಗ್ನಿಪರೀಕ್ಷೆ ಎನಿಸಲಿದೆ.
ಉತ್ತರ ಪ್ರದೇಶದ ಘೋಸಿ, ಪಶ್ಚಿಮ ಬಂಗಾಳದ ಧೂಪಗುರಿ, ಕೇರಳದ ಪುದುಪಳ್ಳಿ, ಉತ್ತರಾಖಂಡದ ಬಗೇಶ್ವರ, ಜಾರ್ಖಂಡ್ ನ ದುಮ್ರಿ ಮತ್ತು ತ್ರಿಪುರಾದ ಬೊಕ್ಸಾನಗರ ಹಾಗೂ ಧನಪುರ ಹೀಗೆ ಏಳು ಕ್ಷೇತ್ರಗಳಿಗೆ ಉಪ ಚುಣಾವಣೆ ನಡೆಯಲಿದೆ. ಸೆಪ್ಟೆಂಬರ್ 8ರಂದು ಮತ ಎಣಿಕೆ ನಡೆಯಲಿದೆ. ದೂಪಗುರಿ, ಪುದುಪಳ್ಳಿ, ಬಗೇಶ್ವರ, ದುಮ್ರಿ ಹಾಗೂ ಬೊಕ್ಸಾನಗರದಲ್ಲಿ ಹಾಲಿ ಶಾಸಕರ ನಿಧನದಿಂದ ಉಪಚುನಾವಣೆ ನಡೆಯುತ್ತಿದ್ದರೆ, ಘೋಸಿ ಹಾಗೂ ಧನಪುರ ಕ್ಷೇತ್ರಗಳ ಶಾಸಕರು ರಾಜೀನಾಮೆ ನೀಡಿರುವ ಕಾರಣದಿಂದ ಉಪಚುನಾವಣೆ ನಡೆಯುತ್ತಿದೆ.
ಉತ್ತರ ಪ್ರದೇಶದ ಘೋಸಿಯಲ್ಲಿ ಸಮಾಜವಾದಿ ಪಕ್ಷದ ಶಾಸಕ ದಾರಾ ಸಿಂಗ್ ಚೌಹಾಣ್ ರಾಜೀನಾಮೆಯಿಂದಾಗಿ ಈ ಕ್ಷೇತ್ರ ತೆರವಾಗಿತ್ತು. ರಾಜೀನಾಮೆ ಬಳಿಕ ಬಿಜೆಪಿ ಸೇರಿರುವ ಚೌಹಾಣ್ ಹೊಸ ಪಕ್ಷದ ಅಭ್ಯರ್ಥಿಯಾಗಿ ಸಮಾಜವಾದಿ ಪಕ್ಷದ ಸುಧಾಕರ್ ಸಿಂಗ್ ವಿರುದ್ಧ ಸೆಣೆಸುತ್ತಿದ್ದಾರೆ. 2012 ರಿಂದ 17ರವರೆಗೆ ಶಾಸಕರಾಗಿದ್ದ ಸಿಂಗ್ ಬಳಿಕ ಚುನಾವಣೆಗಳಲ್ಲಿ ಸತತವಾಗಿ ಸೋಲು ಅನುಭವಿಸಿದರು. ಇಲ್ಲಿ ಕಾಂಗ್ರೆಸ್ ಪಕ್ಷ ತನ್ನ ಮಿತ್ರಪಕ್ಷವಾದ ಸಮಾಜವಾದಿ ಪಕ್ಷದ ಅಭ್ಯರ್ಥಿಯನ್ನು ಬೆಂಬಲಿಸಿದೆ.
ತಮ್ಮ ಲೋಕಸಭಾ ಕ್ಷೇತ್ರವನ್ನು ಉಳಿಸಿಕೊಳ್ಳುವ ಸಲುವಾಗಿ ತ್ರಿಪುರಾದ ಧನಪುರ ಕ್ಷೇತ್ರಕ್ಕೆ ಬಿಜೆಪಿಯ ಪ್ರಯಿಮಾ ಭೂಮಿಕ್ ರಾಜೀನಾಮೆ ನೀಡಿರುವುದರಿಂದ ಇಲ್ಲಿ ಉಪಚುನಾವಣೆ ನಡೆಯುತ್ತಿದೆ.