ಅಮೇಥಿ ಕಾಂಗ್ರೆಸ್ ಕಚೇರಿ ಮುಂದೆ ಹಲವು ವಾಹನಗಳ ಮೇಲೆ ದಾಳಿ: ಬಿಜೆಪಿ ಕೈವಾಡ ಆರೋಪ
ಅಮೇಥಿ: ಉತ್ತರ ಪ್ರದೇಶದ ಅಮೇಥಿಯಲ್ಲಿ ಕಾಂಗ್ರೆಸ್ ಕಚೇರಿ ಮುಂದೆ ನಿಲ್ಲಿಸಲಾದ ಹಲವು ವಾಹನಗಳ ಮೇಲೆ ಭಾನುವಾರ ರಾತ್ರಿ ದಾಳಿ ಮಾಡಿ ಜಖಂಗೊಳಿಸಲಾಗಿದೆ. ಘಟನೆ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ. ಆದರೆ ಈ ದಾಳಿಗೆ ಬಿಜೆಪಿ ಹೊಣೆ ಎಂದು ಕಾಂಗ್ರೆಸ್ ಆಪಾದಿಸಿದ್ದು, ಕೆಲ ಕಾಂಗ್ರೆಸ್ ಕಾರ್ಯಕರ್ತರಿಗೂ ಗಾಯಗಳಾಗಿವೆ.
ಈ ಘಟನೆ ವೇಳೆ ಸ್ಥಳೀಯರ ವಾಹನಗಳಿಗೂ ಹಾನಿಯಾಗಿದ್ದು, ಪೊಲೀಸ್ ಅಧಿಕಾರಿಗಳು ಇದಕ್ಕೆ ಮೂಕಪ್ರೇಕ್ಷಕರಾಗಿದ್ದಾರೆ ಎಂದು ಕಾಂಗ್ರೆಸ್ ಎಕ್ಸ್ ಪೋಸ್ಟ್ ನಲ್ಲಿ ಆಪಾದಿಸಿದೆ.
"ಸ್ಮೃತಿ ಇರಾನಿ ಮತ್ತು ಬಿಜೆಪಿ ಕಾರ್ಯಕರ್ತರಿಗೆ ಅಮೇಥಿಯಲ್ಲಿ ಭೀತಿ ಕಾಡುತ್ತಿದೆ. ಸೋಲುವ ಭೀತಿಯಿಂದ ಹತಾಶರಾಗಿ ಬಿಜೆಪಿ ಗೂಂಡಾಗಳು ಬಡಿಗೆ ಮತ್ತು ರಾಡ್ಗಳೊಂದಿಗೆ ಕಾಂಗ್ರೆಸ್ ಕಚೇರಿಯ ಬಳಿ ಆಗಮಿಸಿ, ಅಲ್ಲಿ ನಿಲ್ಲಿಸಿದ್ದ ವಾಹನಗಳನ್ನು ಧ್ವಂಸಗೊಳಿಸಿದ್ದಾರೆ. ಅಮೇಥಿಯ ಜನ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ಮೇಲೂ ದಾಳಿ ನಡೆದಿದೆ. ದಾಳಿಯಲ್ಲಿ ಹಲವು ಮಂದಿ ಗಾಯಗೊಂಡಿದ್ದಾರೆ. ಇದು ಬಿಜೆಪಿ ಅಮೇಥಿಯಲ್ಲಿ ಹೀನಾಯವಾಗಿ ಸೋಲು ಅನುಭವಿಸಲಿದೆ ಎನ್ನುವುದರ ಸೂಚನೆ" ಎಂದು ಕಾಂಗ್ರೆಸ್ ಪಕ್ಷ ಘಟನೆಯ ವಿಡಿಯೊ ಸಹಿತ ಹಿಂದಿಯಲ್ಲಿ ಪೋಸ್ಟ್ ಮಾಡಿದೆ.
ಕಾಂಗ್ರೆಸ್ ವಕ್ತಾರೆ ಸುಪ್ರಿಯಾ ಶ್ರಿನೇತ್ ಈ ಬಗ್ಗೆ ಹೇಳಿಕೆ ನೀಡಿ, ಬಿಜೆಪಿ ಕಾರ್ಯಕರ್ತರು ತಮ್ಮ ಗೂಂಡಾಗಿರಿ ನಡೆಸುತ್ತಿದ್ದರೆ, ಪೊಲೀಸರು ಇದಕ್ಕೆ ಮೂಕಪ್ರೇಕ್ಷಕರಾಗಿದ್ದರು ಎಂದು ಆಪಾದಿಸಿದ್ದಾರೆ. "ಬಿಜೆಪಿಯವರೇ, ಬದಲಾವಣೆಯ ಗಾಳಿ ಬೀಸುತ್ತಿದೆ. ವಾಹನಗಳನ್ನು ಹಾಳುಗೆಡವುದರಿಂದ ಸಮಸ್ಯೆ ಬಗೆಹರಿಯುವುದಿಲ್ಲ" ಎಂದು ಎಕ್ಸ್ ಪೋಸ್ಟ್ ನಲ್ಲಿ ಅವರು ಅಣಕಿಸಿದ್ದಾರೆ.