ಕ್ಷಯರೋಗ ಔಷಧಿಗಳ ಕೊರತೆ: ಪ್ರಧಾನಿ ಮೋದಿ ಮಧ್ಯಪ್ರವೇಶ ಕೋರಿದ ಕ್ಷಯ, ಎಚ್‌ಐವಿ ರೋಗಿಗಳು

Update: 2024-03-24 11:04 GMT

Photo; thequint.com

ಹೊಸದಿಲ್ಲಿ: ಇಂದು ವಿಶ್ವ ಕ್ಷಯರೋಗ ದಿನವಾಗಿದ್ದು, ಈ ಸಂದರ್ಭದಲ್ಲಿ ಕ್ಷಯ ಮತ್ತು ಎಚ್‌ಐವಿ ರೋಗಿಗಳು, ಸಾಮಾಜಿಕ ಕಾರ್ಯಕರ್ತರು ಮತ್ತು ಜನಾರೋಗ್ಯ ತಜ್ಞರು ಆಗಾಗ್ಗೆ ಕ್ಷಯ ಪ್ರತಿರೋಧಕ ಔಷಧಿಗಳ ಕೊರತೆಯನ್ನು ನಿವಾರಿಸಲು ತುರ್ತು ಮಧ್ಯಪ್ರವೇಶ ಕೋರಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರವನ್ನು ಬರೆದಿದ್ದಾರೆ.

ಡ್ರಗ್-ಸೆನ್ಸಿಟಿವ್ (ಔಷಧಿ ಸಂವೇದನಾಶೀಲ) ಕ್ಷಯರೋಗ (ಡಿಎಸ್-ಟಿಬಿ)ದ ಚಿಕಿತ್ಸೆಗೆ ಅತ್ಯಗತ್ಯವಾದ ಔಷಧಿಗಳ ಕೊರತೆಯನ್ನು ಪತ್ರವು ಎತ್ತಿ ತೋರಿಸಿದೆ. ‘ವಿಶ್ವದಲ್ಲಿ ಅತಿ ಹೆಚ್ಚು ಕ್ಷಯರೋಗಿಗಳಿರುವ ದೇಶವಾಗಿ ಭಾರತವು ಕ್ಷಯರೋಗದ ಚಿಕಿತ್ಸೆಗೆ ಅತ್ಯಗತ್ಯವಾಗಿರುವ ಔಷಧಿಗಳ ಕೊರತೆಯನ್ನು ಎದುರಿಸುತ್ತಿರುವುದು ನಮ್ಮನ್ನು ವಿಚಲಿತರನ್ನಾಗಿಸಿದೆ’ ಎಂದು ಪತ್ರದಲ್ಲಿ ಹೇಳಲಾಗಿದೆ.

ಫೆ.2024ರವರೆಗೆ ಐಸೊನಿಯಾಝಿಡ್,ರೆಫಾಂಪಿಸಿನ್, ಪೈರಾಝೈನಾಮೈಡ್‌ನಂತಹ ಅಗತ್ಯ ಔಷಧಿಗಳ ಕೊರತೆಯಿತ್ತು. ಇದು ಪೀಡಿತ ಪ್ರದೇಶಗಳಲ್ಲಿಯ ಸಮುದಾಯ/ಕ್ಷಯರೋಗಿಗಳಿಂದ ಲಭಿಸಿರುವ ಸೀಮಿತ ಮಾಹಿತಿಯಾಗಿದ್ದು,ಇದು ನೈಜ ಕೊರತೆಗಳ ಒಂದು ಭಾಗ ಮಾತ್ರವಾಗಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.

ಟಿಬಿ ಪ್ರತಿರೋಧಕ ಔಷಧಿಗಳ ನಿರಂತರ ಕೊರತೆಯು ಚಿಕಿತ್ಸೆಯಲ್ಲಿರುವ ಕ್ಷಯರೋಗಿಗಳ ಮೇಲೆ ತೀವ್ರ ಪರಿಣಾಮವನ್ನು ಬೀರುತ್ತದೆ ಮತ್ತು ಚಿಕಿತ್ಸೆಗೆ ವ್ಯತ್ಯಯವನ್ನುಂಟು ಮಾಡುತ್ತದೆ ಮತ್ತು ಔಷಧಿ ಪ್ರತಿರೋಧಕ ಕ್ಷಯರೋಗದ ಅಭಿವೃದ್ಧಿಯ ಹೆಚ್ಚಿನ ಅಪಾಯಕ್ಕೆ ಕಾರಣವಾಗುತ್ತದೆ. ಇದು ಚಿಕಿತ್ಸೆಯ ಫಲಿತಾಂಶದ ಮೇಲೂ ಪ್ರತಿಕೂಲ ಪರಿಣಾಮವನ್ನು ಬೀರುತ್ತದೆ,ಸಮುದಾಯದಲ್ಲಿ ರೋಗದ ಅಪಾಯವನ್ನು ಹೆಚ್ಚಿಸುತ್ತದೆ ಮತ್ತು ತನ್ಮೂಲಕ ಸರಕಾರದ ಟಿಬಿ ಕಾರ್ಯಕ್ರಮದ ಮೇಲೆ ಹೆಚ್ಚುವರಿ ಹೊರೆಯನ್ನುಂಟು ಮಾಡುತ್ತದೆ ಎಂದು ಪತ್ರವು ಎಚ್ಚರಿಸಿದೆ.

ಚಿಕಿತ್ಸೆಗೆ ಅಗತ್ಯವಿರುವ ಔಷಧಿಗಳ ಅಲಭ್ಯತೆಯು ಜನರು ತಮ್ಮ ಕೆಲಸಕಾರ್ಯಗಳನ್ನು ಬಿಟ್ಟು ಕ್ಷಯರೋಗ ಕೇಂದ್ರಗಳಿಗೆ ಹಲವಾರು ಬಾರಿ ಭೇಟಿ ನೀಡುವುದನ್ನು ಅನಿವಾರ್ಯವಾಗಿಸಿದೆ. ಇದು ಅವರ ಜೀವನೋಪಾಯಕ್ಕೂ ಹೊಡೆತವಾಗಿದೆ. ಜೀವನೋಪಾಯ ಅಥವಾ ಚಿಕಿತ್ಸೆ ನಡುವೆ ಒಂದನ್ನು ಅವರು ಆಯ್ಕೆ ಮಾಡಿಕೊಳ್ಳುವಂತಹ ಸ್ಥಿತಿಯಿದೆ ಎಂದು ಪತ್ರದಲ್ಲಿ ಹೇಳಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News