ತಮ್ಮ ಪತ್ನಿಯ ಕ್ಯಾನ್ಸರ್ ಗುಣಪಡಿಸಲು ಕ್ರಿಕೆಟಿಗ ಸಿಧು ಅನುಸರಿಸಿದ್ದರೆನ್ನಲಾದ ಚಿಕಿತ್ಸಾ ಕ್ರಮ ಅವೈಜ್ಞಾನಿಕ : ಟಾಟಾ ಆಸ್ಪತ್ರೆ
ಹೊಸದಿಲ್ಲಿ: ಕ್ಯಾನ್ಸರ್ ರೋಗಿಗಳು ಸಾಬೀತಾಗದ ಚಿಕಿತ್ಸೆಗಳನ್ನು ಪಾಲಿಸಿ, ತಮ್ಮ ಚಿಕಿತ್ಸೆಯನ್ನು ವಿಳಂಬಗೊಳಿಸಬಾರದು ಅಥವಾ ಸ್ಥಗಿತಗೊಳಿಸಬಾರದು ಟಾಟಾ ಸ್ಮಾರಕ ಆಸ್ಪತ್ರೆಯ ಕ್ಯಾನ್ಸರ್ ತಜ್ಞರು ಎಚ್ಚರಿಸಿದ್ದಾರೆ. ತಮ್ಮ ಪತ್ನಿ ನವಜೋತ್ ಕೌರ್ ಅವರ ನಾಲ್ಕನೆ ಹಂತದ ಕ್ಯಾನ್ಸರ್ ಆಹಾರ ಪದ್ಧತಿ ಮತ್ತು ಜೀವನ ಶೈಲಿಯ ಬದಲಾವಣೆಯಿಂದ ಗುಣವಾಯಿತು ಎಂದು ಪತ್ರಿಕಾಗೋಷ್ಠಿಯಲ್ಲಿ ಭಾರತದ ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿಧು ನೀಡಿದ್ದ ಹೇಳಿಕೆ ಹಿನ್ನೆಲೆಯಲ್ಲಿ ಕ್ಯಾನ್ಸರ್ ತಜ್ಞರು ಈ ಎಚ್ಚರಿಕೆ ನೀಡಿದ್ದಾರೆ.
ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಟಾಟಾ ಸ್ಮಾರಕ ಆಸ್ಪತ್ರೆಯ ನಿರ್ದೇಶಕ ಡಾ. ಸಿ.ಎಸ್.ಪ್ರಮೇಶ್, “ಹೈನೋತ್ಪನ್ನಗಳು ಹಾಗೂ ಸಕ್ಕರೆಯನ್ನು ಸೇವಿಸದೆ ಹಾಗೂ ಅರಿಶಿನ ಮತ್ತು ಬೇವನ್ನು ಸೇವಿಸುವುದೊಂದಿಗೆ ಗುಣಪಡಿಸಲು ಸಾಧ್ಯವಿಲ್ಲದಿದ್ದ ಕ್ಯಾನ್ಸರ್ ಅನ್ನು ಗುಣಪಡಿಸಲಾಯಿತು ಎಂದು ವಿಡಿಯೊದ ಕೆಲವು ಭಾಗಗಳು ಪ್ರತಿಪಾದಿಸುತ್ತವೆ” ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ.
ಆದರೆ, ಆ ಹೇಳಿಕೆಯನ್ನು ಸಮರ್ಥಿಸುವಂಥ ಯಾವುದೇ ಉನ್ನತ ದರ್ಜೆಯ ಸಾಕ್ಷ್ಯಗಳು ಈ ಹಿಂದೆಯಾಗಲಿ ಅಥವಾ ಮುಂದೆಯಾಗಲಿ ಲಭ್ಯವಿಲ್ಲ ಎಂದು ಟಾಟಾ ಸ್ಮಾರಕ ಆಸ್ಪತ್ರೆಯ 262 ಕ್ಯಾನ್ಸರ್ ತಜ್ಞರು ಸಹಿ ಮಾಡಿರುವ ಪ್ರಕಟಣೆಯಲ್ಲಿ ಹೇಳಲಾಗಿದೆ.
ಈ ಕೆಲವು ಉತ್ಪನ್ನಗಳ ಕುರಿತು ಸಂಶೋಧನೆ ಮುಂದುವರಿದಿದ್ದು, ಸದ್ಯ ಅವನ್ನು ಕ್ಯಾನ್ಸರ್ ನಿರೋಧಕ ಔಷಧವನ್ನಾಗಿ ಶಿಫಾರಸು ಮಾಡಲು ಯಾವುದೇ ರೋಗ ನಿರ್ಣಯ ದತ್ತಾಂಶ ಲಭ್ಯವಿಲ್ಲ ಎಂದೂ ಪ್ರಕಟಣೆಯಲ್ಲಿ ಹೇಳಲಾಗಿದೆ.
“ಸಾಬೀತಾಗದ ಚಿಕಿತ್ಸೆಗಳನ್ನು ಪಾಲಿಸುವ ಮೂಲಕ ತಮ್ಮ ಚಿಕಿತ್ಸೆಯನ್ನು ವಿಳಂಬಗೊಳಿಸಬಾರದು ಎಂದು ನಾವು ಸಾರ್ವಜನಿಕರಲ್ಲಿ ಮನವಿ ಮಾಡುತ್ತೇವೆ. ಒಂದು ವೇಳೆ ಅವರಲ್ಲಿ ಕ್ಯಾನ್ಸರ್ ಲಕ್ಷಣಗಳೇನಾದರೂ ಕಂಡು ಬಂದರೆ, ವೈದ್ಯರು, ನಿರ್ದಿಷ್ಟವಾಗಿ ಕ್ಯಾನ್ಸರ್ ತಜ್ಞರನ್ನು ಸಂಪರ್ಕಿಸಬೇಕೆಂದು ಕೋರುತ್ತೇವೆ. ಕ್ಯಾನ್ಸರ್ ಅನ್ನು ಆರಂಭದಲ್ಲೇ ಗುರುತಿಸಿದರೆ, ಅದನ್ನು ಗುಣಪಡಿಸಬಹುದಾಗಿದ್ದು, ಈ ಚಿಕಿತ್ಸೆಯಲ್ಲಿ ಶಸ್ತ್ರಚಿಕಿತ್ಸೆ, ವಿಕಿರಣ ಚಿಕಿತ್ಸೆ ಹಾಗೂ ಕೀಮೊಥೆರಪಿ ಸೇರಿವೆ” ಎಂದು ಸಾರ್ವಜನಿಕ ಹಿತಾಸಕ್ತಿಯಿಂದ ಬಿಡುಗಡೆ ಮಾಡಲಾಗಿರುವ ಪ್ರಕಟಣೆಯಲ್ಲಿ ಹೇಳಲಾಗಿದೆ.
ನವಜೋತ್ ಸಿಧು ಅವರ ಪತ್ರಿಕಾಗೋಷ್ಠಿಯ ತುಣುಕೊಂದನ್ನು ಪೋಸ್ಟ್ ಮಾಡಿರುವ ಡಾ. ಪ್ರಮೇಶ್, “ಯಾರು ಇಂತಹ ಹೇಳಿಕೆ ನೀಡಿದ್ದಾರೆ ಎಂಬುದನ್ನು ನೋಡದೆ, ದಯವಿಟ್ಟು ಇಂಥದ್ದನ್ನು ನಂಬಬೇಡಿ ಹಾಗೂ ಮೂರ್ಖರಾಗಬೇಡಿ. ಇವೆಲ್ಲ ಅವೈಜ್ಞಾನಿಕ ಮತ್ತು ಆಧಾರರಹಿತ ಶಿಫಾರಸುಗಳಾಗಿವೆ. ಆಕೆ ಶಸ್ತ್ರಚಿಕಿತ್ಸೆ ಮತ್ತು ಕೀಮೊಥೆರಪಿಗೆ ಒಳಗಾಗಿದ್ದು, ಆಕೆ ಕ್ಯಾನ್ಸರ್ ಮುಕ್ತವಾಗಿರುವುದಕ್ಕೆ ಇದೇ ಸಾಕ್ಷ್ಯಾಧಾರವಾಗಿದೆ. ಅರಿಶಿಣ, ಬೇವು, ಇತ್ಯಾದಿಯಿಂದಲ್ಲ” ಎಂದು ಮನವಿ ಮಾಡಿದ್ದಾರೆ.