‘‘ಸಣ್ಣ ತೊರೆ ನದಿಯಾಗಿ ಪರಿವರ್ತನೆಗೊಂಡು ಮನೆ ಬಾಗಿಲಿಗೆ ನುಗ್ಗಿತು’’ : ವಯನಾಡ್ ದುರಂತದಲ್ಲಿ ಬದುಕುಳಿದ ರೈತ
ವಯನಾಡ್: ‘‘ಮಂಗಳವಾರ ಮುಂಜಾನೆ 2 ಗಂಟೆಗೆ ನಾವು ಕಿವಿಗಡಚಿಕ್ಕುವ ಸದ್ದು ಕೇಳಿದೆವು. ಇದು ನಾವು ಕ್ವಾರೆಗಳಲ್ಲಿ ಕೇಳುವ ಸ್ಫೋಟದ ಸದ್ದಿಗಿಂತ ಹಲವು ಪಟ್ಟು ಹೆಚ್ಚಾಗಿತ್ತು’’ ಎಂದು ಈ ದುರಂತದಲ್ಲಿ ಬದುಕುಳಿದವರಲ್ಲಿ ಒಬ್ಬರಾಗಿರುವ ರೈತ ಸಿಜು ತಿಳಿಸಿದ್ದಾರೆ.
ಚೂರಲ್‌ಮಲವನ್ನು ಧ್ವಂಸಗೊಳಿಸಿದ ಭೂಕುಸಿತದ ಆಘಾತದಿಂದ ಚೂರಲ್‌ಮಲದ ರೈತ ಸಿಜು ಅಡಿಮರಿಲ್ ಹಾಗೂ ಅವರ ಕುಟುಂಬ ಇನ್ನು ಕೂಡ ಚೇತರಿಸಿಕೊಂಡಿಲ್ಲ. ಅವರು ಈಗ ಮೆಪ್ಪಾಡಿ ಪರಿಹಾರ ಕೇಂದ್ರದಲ್ಲಿ ತಂಗಿದ್ದಾರೆ. ದುರಂತದಲ್ಲಿ ಅವರ ಪುತ್ರನಿಗೆ ತೀವ್ರ ಗಾಯಗಳಾಗಿವೆ. ಆತ ವೆಲ್ಲಾರ್‌ಮಲದ ಸರಕಾರಿ ವೊಕೇಶನಲ್ ಎಚ್‌ಎಸ್‌ಎಸ್‌ನ ವಿದ್ಯಾರ್ಥಿ.
‘‘ಸದ್ದು ಕೇಳುತ್ತಿದ್ದಂತೆ ನಾನು ನನ್ನ ಪತ್ನಿ ಹಾಗೂ 10 ವರ್ಷದ ಪುತ್ರನೊಂದಿಗೆ ಮನೆಯಿಂದ ಹೊರಗೋಡಿದೆ. ನನ್ನ ಪತ್ನಿಗೆ ಶಸ್ತ್ರಚಿಕಿತ್ಸೆ ಆಗಿದೆ. ನಾವು ಕತ್ತಲಲ್ಲಿ ಕೆಸರಲ್ಲಿ ನಡೆದುಕೊಂಡು ಹೋದೆವು. ನಾವು ಸುರಕ್ಷಿತ ಪ್ರದೇಶವನ್ನು ಹೇಗೆ ತಲುಪುವುದು ಎಂದು ಕೂಡ ಗೊತ್ತಿರಲಿಲ್ಲ’’ ಎಂದು ಅವರು ಹೇಳಿದ್ದಾರೆ.
‘‘ಇಲ್ಲಿನ ಸಣ್ಣ ತೊರೆ ದೊಡ್ಡ ನದಿಯಾಗಿ ಪರಿವರ್ತನೆ ಹೊಂದಿತು ಹಾಗೂ ಅದು ನಮ್ಮ ಮನೆ ಬಾಗಿಲಿಗೆ ತಲುಪಿತು. ಅರಣ್ಯದ ನಡುವೆ ಈ ಭೂಕುಸಿತದ ಮೂಲ ಇರುವ ಸಾಧ್ಯತೆ ಇದೆ. ನನ್ನ ಮನೆ ಮೆಟ್ಟಿಲಲ್ಲ ದೊಡ್ಡ ಜಿಂಕೆಯೊಂದರ ಕಳೇಬರ ನೋಡಿದೆ. ನೀರಿನಲ್ಲಿ ಅದು ಕೊಚ್ಚಿಕೊಂಡು ಬಂದಿರಬೇಕು’’ ಎಂದು ಸಿಜು ಹೇಳಿದ್ದಾರೆ.
‘‘ಅಲ್ಲಿ ದಂಪತಿಗಳಿಬ್ಬರು ವಾಸಿಸುತ್ತಿದ್ದರು. ಅವರ ಮಕ್ಕಳು ಬೇರೆಡೆ ಶಿಕ್ಷಣ ಪಡೆಯುತ್ತಿದ್ದರು. ಆ ದಂಪತಿ ಈಗ ಎಲ್ಲಿದ್ದಾರೆ ಎಂದು ನನಗೆ ಗೊತ್ತಿಲ್ಲ. ಆ ಪ್ರದೇಶದಲ್ಲಿ ಸುಮಾರು 250 ಜನರು ವಾಸಿಸುತ್ತಿದ್ದರು. ನನಗೆ ಅವರೆಲ್ಲರ ಪರಿಚಯ ಇದೆ’’ ಎಂದು ಅವರು ತಿಳಿಸಿದ್ದಾರೆ.
ಸಿಜು ಮೇಪ್ಪಾಡಿಯಲ್ಲಿ ಹೊಸ ಮನೆಯನ್ನು ಕಟ್ಟಿಸಿದ್ದಾರೆ. ಆದರೆ, ತಾತ್ಕಾಲಿಕವಾಗಿ ಚೂರಲ್‌ಮಲದಲ್ಲಿರುವ ಹಳೆಯ ಮನೆಯಲ್ಲಿ ವಾಸಿಸುತ್ತಿದ್ದರು. ‘‘ಇದು ನಮಗೆ ದುಃಸ್ವಪ್ನದಂತೆ ಕಾಣುತ್ತದೆ. ಇಂತಹ ದುರಂತ ಸಂಭವಿಸುತ್ತದೆ ಎಂಬ ಕಲ್ಪನೆಯೇ ನಮಗೆ ಇರಲಿಲ್ಲ’’ ಸಿಜು ಹೇಳಿದ್ದಾರೆ