ಜಮ್ಮುಕಾಶ್ಮೀರ | ಭಯೋತ್ಪಾದಕರ ಜೊತೆ ಗುಂಡಿನ ಚಕಮಕಿ; ಓರ್ವ ಯೋಧ ಹುತಾತ್ಮ

ಜಂಟು ಅಲಿ ಶೇಖ್ (Photo: X/White Knight Corps, Indian Army)
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಉಧಂಪುರ್ ಜಿಲ್ಲೆಯಲ್ಲಿ ಭಯೋತ್ಪಾದಕರು ಬಚ್ಚಿಟ್ಟುಕೊಂಡಿದ್ದ ಅಡಗುತಾಣಗಳನ್ನು ಪತ್ತೆ ಹಚ್ಚಿದ ನಂತರ, ಭದ್ರತಾ ಪಡೆಗಳು ಹಾಗೂ ಭಯೋತ್ಪಾದಕರ ನಡುವೆ ನಡೆದ ಗುಂಡಿನ ಕಾಳಗದಲ್ಲಿ ಗುರುವಾರ ಓರ್ವ ಯೋಧ ಹುತಾತ್ಮರಾಗಿದ್ದಾರೆ ಎಂದು ಭಾರತೀಯ ಸೇನೆ ಪ್ರಕಟಿಸಿದೆ.
ಸೇನೆಯ ವೈಟ್ ನೈಟ್ ಕಾರ್ಪ್ಸ್ ಪ್ರಕಾರ, ಗುಂಡಿನ ಕಾಳಗದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಯೋಧ ಜಂಟು ಅಲಿ ಶೇಖ್ ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದರು ಎಂದು ಹೇಳಲಾಗಿದೆ.
ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಭಾರತೀಯ ಸೇನೆಯ ವೈಟ್ ನೈಟ್ ಕಾರ್ಪ್ಸ್, “ಗುಪ್ತಚರ ವಿಭಾಗದ ನಿರ್ದಿಷ್ಟ ಸುಳಿವನ್ನಾಧರಿಸಿ ಇಂದು ಬಸಂತ್ ಗಢ ಹಾಗೂ ಉಧಂ ಪುರ್ ನಲ್ಲಿ ಜಮ್ಮು ಮತ್ತು ಕಾಶ್ಮೀರ ಪೊಲೀಸರೊಂದಿಗೆ ಜಂಟಿ ಕಾರ್ಯಾಚರಣೆ ನಡೆಸಲಾಯಿತು. ಈ ವೇಳೆ, ಭಯೋತ್ಪಾದಕರು ಬಚ್ಚಿಟ್ಟುಕೊಂಡಿದ್ದ ಅಡಗುತಾಣ ಪತ್ತೆಯಾದ ಬೆನ್ನಿಗೇ, ಭದ್ರತಾ ಪಡೆಗಳು ಹಾಗೂ ಭಯೋತ್ಪಾದಕ ನಡುವೆ ತೀವ್ರ ಗುಂಡಿನ ಕಾಳಗ ನಡೆಯಿತು. ಈ ಆರಂಭಿಕ ಗುಂಡಿನ ಕಾಳಗದಲ್ಲಿ ನಮ್ಮ ವೀರ ಯೋಧರೊಬ್ಬರು ಗಂಭೀರವಾಗಿ ಗಾಯಗೊಂಡರು. ಗಾಯಗೊಂಡಿದ್ದ ಅವರನ್ನು ರಕ್ಷಿಸಲು ಎಲ್ಲ ಬಗೆಯ ವೈದ್ಯಕೀಯ ನೆರವು ಒದಗಿಸಿದರೂ, ಚಿಕಿತ್ಸೆಗೆ ಸ್ಪಂದಿಸದೆ ಅವರು ಕೊನೆಯುಸಿರೆಳೆದರು. ಈ ನಡುವೆ, ಭಯೋತ್ಪಾದಕರ ನಿಗ್ರಹ ಕಾರ್ಯಾಚರಣೆ ಪ್ರಗತಿಯಲ್ಲಿದೆ” ಎಂದು ತಿಳಿಸಿದೆ.
ಇದಕ್ಕೂ ಮುನ್ನ, ಮಂಗಳವಾರ ನಡೆದಿದ್ದ ಪಹಲ್ಗಾಮ್ ಭಯೋತ್ಪಾದಕ ದಾಳಿಯ ಹಿಂದಿದ್ದ ಆಸಿಫ್ ಫುಜಿ, ಸುಲೇಮಾನ್ ಶಾ ಹಾಗೂ ಅಬು ತಲ್ಹಾ ಎಂಬ ಶಂಕಿತ ಭಯೋತ್ಪಾದಕರ ಭಾವ ಚಿತ್ರಗಳು ಹಾಗೂ ರೇಖಾ ಚಿತ್ರಗಳನ್ನು ಬುಧವಾರ ಭಾರತೀಯ ಭದ್ರತಾ ಪಡೆಗಳು ಬಿಡುಗಡೆಗೊಳಿಸಿದ್ದವು.
ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಓರ್ವ ವಿದೇಶಿ ಪ್ರವಾಸಿ ಸೇರಿದಂತೆ ಒಟ್ಟು 26 ಮಂದಿ ಮೃತಪಟ್ಟು, ಹಲವು ಮಂದಿ ಗಂಭೀರವಾಗಿ ಗಾಯಗೊಂಡಿದ್ದರು.