ಚೆನ್ನೈ ತಲುಪಿದ ಶ್ರೀಲಂಕಾದ ಮಥೀಶ ಪಥಿರನ, ಶೀಘ್ರವೇ ಸಿ ಎಸ್ ಕೆಗೆ ಸೇರ್ಪಡೆ
ಹೊಸದಿಲ್ಲಿ: ಶ್ರೀಲಂಕಾದ ಪ್ರತಿಭಾವಂತ ವೇಗದ ಬೌಲರ್ ಮಥೀಶ ಪಥಿರನ ಚೆನ್ನೈಗೆ ಆಗಮಿಸಿದ್ದು, ಶೀಘ್ರವೇ ಚೆನ್ನೈ ಸೂಪರ್ ಕಿಂಗ್ಸ್(ಸಿಎಸ್ಕೆ)ತಂಡವನ್ನು ಸೇರ್ಪಡೆಯಾಗಲಿದ್ದಾರೆ ಎಂದು ಪಥಿರನ ಅವರ ಮ್ಯಾನೇಜರ್ ಅಮಿಲಾ ಕಲುಗಲಗೆ ತಿಳಿಸಿದ್ದಾರೆ.
ಬಾಂಗ್ಲಾದೇಶ ವಿರುದ್ಧ ಟಿ-20 ಸರಣಿಯ ಎರಡನೇ ಪಂದ್ಯದ ವೇಳೆ ಪಥಿರನ ಮಂಡಿರಜ್ಜು ಗಾಯಕ್ಕೆ ಒಳಗಾಗಿದ್ದರು. ಹೀಗಾಗಿ ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್ಸಿಬಿ) ವಿರುದ್ಧ ಶುಕ್ರವಾರ ನಡೆದಿದ್ದ ಐಪಿಎಲ್ ಆರಂಭಿಕ ಪಂದ್ಯದಿಂದ ವಂಚಿತರಾಗಿದ್ದರು.
ಹಿಂದಿನ ಐಪಿಎಲ್ ಋತುವಿನಲ್ಲಿ ಚೆನ್ನೈ ಪರ 12 ಪಂದ್ಯಗಳಲ್ಲಿ 19 ವಿಕೆಟ್ ಗಳನ್ನು ಪಡೆದು ಉತ್ತಮ ಪ್ರದರ್ಶನ ನೀಡಿರುವ ಹೊರತಾಗಿಯೂ ಪಥಿರನ ಈ ವರ್ಷದ ಐಪಿಎಲ್ ನಲ್ಲಿ ಆಡಲು ಶ್ರೀಲಂಕಾ ಕ್ರಿಕೆಟ್ ಮಂಡಳಿಯಿಂದ ಇನ್ನಷ್ಟೇ ಅನುಮತಿ ಪಡೆಯಬೇಕಾಗಿದೆ.
ಬಾಂಗ್ಲಾದೇಶದ ವೇಗದ ಬೌಲರ್ ಮುಸ್ತಫಿಝುರ್ರಹ್ಮಾನ್(4-29)ಅವರ ಮಾರಕ ಬೌಲಿಂಗ್ ನೆರವಿನಿಂದ ಸಿಎಸ್ಕೆ ತಂಡ ಶುಕ್ರವಾರ ಟೂರ್ನಿಯ ಆರಂಭಿಕ ಪಂದ್ಯದಲ್ಲಿ ಆರ್ಸಿಬಿ ತಂಡವನ್ನು 6 ವಿಕೆಟ್ ಗಳಿಂದ ಸೋಲಿಸಿ ಶುಭಾರಂಭ ಮಾಡಿದೆ.
ಪಥಿರನ ಸೇರ್ಪಡೆಯಿಂದಾಗಿ ನಿರ್ಣಾಯಕ ಡೆತ್ ಓವರ್ಗಳಲ್ಲಿ ಚೆನ್ನೈ ತಂಡದ ಬೌಲಿಂಗ್ ದಾಳಿ ಇನ್ನಷ್ಟು ಬಲಿಷ್ಠವಾಗಲಿದೆ.