ಶ್ರೀನಗರ: ಸ್ಥಳೀಯ ಸಂಸ್ಕೃತಿಯನ್ನು ಗೌರವಿಸುವಂತೆ ಪ್ರವಾಸಿಗಳನ್ನು ಆಗ್ರಹಿಸಿದ್ದ ಸೂಚನಾ ಫಲಕಗಳನ್ನು ತೆಗೆದ ಪೊಲೀಸರು

Update: 2025-02-23 20:49 IST
ಶ್ರೀನಗರ: ಸ್ಥಳೀಯ ಸಂಸ್ಕೃತಿಯನ್ನು ಗೌರವಿಸುವಂತೆ ಪ್ರವಾಸಿಗಳನ್ನು ಆಗ್ರಹಿಸಿದ್ದ ಸೂಚನಾ ಫಲಕಗಳನ್ನು ತೆಗೆದ ಪೊಲೀಸರು

PC :  aga_ruhullah_mehdi \ instagram.com

  • whatsapp icon

ಶ್ರೀನಗರ: ಸ್ಥಳೀಯ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಗೌರವಿಸುವಂತೆ ಹಾಗೂ ಮದ್ಯ ಮತ್ತು ಮಾದಕ ದ್ರವ್ಯಗಳ ಬಳಕೆಯನ್ನು ತಪ್ಪಿಸುವಂತೆ ಪ್ರವಾಸಿಗಳನ್ನು ಆಗ್ರಹಿಸಲು ಇಲ್ಲಿಯ ಲಾಲ್‌ಚೌಕ್‌ನಲ್ಲಿ ಪ್ರದರ್ಶಿಸಲಾಗಿದ್ದ ಸೂಚನಾ ಫಲಕಗಳನ್ನು ಜಮ್ಮುಕಾಶ್ಮೀರ ಪೋಲಿಸರು ಶುಕ್ರವಾರ ಕಿತ್ತು ಹಾಕಿದ್ದಾರೆ.

ಜಮ್ಮುಕಾಶ್ಮೀರದಲ್ಲಿ ಮದ್ಯ ನಿಷೇಧಕ್ಕಾಗಿ ಹೆಚ್ಚುತ್ತಿರುವ ಕರೆಗಳ ನಡುವೆ ಈ ಸೂಚನಾ ಫಲಕಗಳನ್ನು ಸ್ಥಾಪಿಸಲಾಗಿತ್ತು.

ಶನಿವಾರ ಪಿಡಿಪಿ ನಾಯಕಿ ಇಲ್ತಿಜಾ ಮುಫ್ತಿ ಅವರು ಮದ್ಯ ನಿಷೇಧಕ್ಕೆ ಕರೆಯನ್ನು ಪುನರುಚ್ಚರಿಸಿದ್ದರೆ, ಹಲವಾರು ಶಾಸಕರು ಈಗಾಗಲೇ ಮದ್ಯ ನಿಷೇಧಕ್ಕೆ ಕರೆ ನೀಡುವ ಖಾಸಗಿ ಸದಸ್ಯರ ಮಸೂದೆಗಳನ್ನು ವಿಧಾನಸಭೆಯಲ್ಲಿ ಸಲ್ಲಿಸಿದ್ದಾರೆ. ವಿಧಾನಸಭೆಯ ಬಜೆಟ್ ಅಧಿವೇಶನ ಮಾ.3ರಿಂದ ಆರಂಭಗೊಳ್ಳಲಿದೆ.

ಪ್ರಸಿದ್ಧ ಗಡಿಯಾರ ಗೋಪುರವಿರುವ ಲಾಲ್‌ಚೌಕ್ ಶ್ರೀನಗರದಲ್ಲಿ ಜನಪ್ರಿಯ ಪ್ರವಾಸಿ ತಾಣವಾಗಿದ್ದು,ಶುಕ್ರವಾರ ಬೆಳಿಗ್ಗೆ ವ್ಯಾಪಾರಿಗಳ ಗುಂಪೊಂದು ಸೂಚನಾ ಫಲಕಗಳನ್ನು ಸ್ಥಾಪಿಸಿತ್ತು.

ಸೂಚನಾ ಫಲಕಗಳ ಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಶೇರ್ ಆದ ಬಳಿಕ ಶುಕ್ರವಾರ ಸಂಜೆ ಪೋಲಿಸರು ಅವುಗಳನ್ನು ತೆಗೆದಿದ್ದಾರೆ.

ಮದ್ಯವು ಜಮ್ಮು ಕಾಶ್ಮೀರದಲ್ಲಿ ಬದುಕುಗಳನ್ನು ಮತ್ತು ಕುಟುಂಬಗಳನ್ನು ಸರ್ವನಾಶಗೊಳಿಸುತ್ತಿದೆ ಎಂದು ಎಕ್ಸ್ ಪೋಸ್ಟ್‌ನಲ್ಲಿ ಬರೆದಿರುವ ಮುಫ್ತಿ,‘ತುಂಬ ತಡವಾಗುವ ಮುನ್ನವೇ ಅದಕ್ಕೆ ಅಂತ್ಯ ಹಾಡಲು ನಾವು ಒಂದಾಗಬೇಕು’ ಎಂದು ಹೇಳಿದ್ದಾರೆ.

Full View

ಪೋಲಿಸ್ ಕ್ರಮವು ಸಂಪೂರ್ಣ ಅನಗತ್ಯವಾಗಿತ್ತು ಎಂದು ಹೇಳಿರುವ ಅವರು, ಮದ್ಯದ ಅಮಲಿನಲ್ಲಿರುವ ಪ್ರವಾಸಿಗಳ, ಕೆಲವರು ದಾಲ್ ಸರೋವರದಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿರುವ, ಹಲವಾರು ವೀಡಿಯೊಗಳಿವೆ. ನಮ್ಮ ಪ್ರತಿರೋಧ ಕೇವಲ ಮದ್ಯದ ಕುರಿತು ಅಲ್ಲ, ಮೂಲಭೂತ ಸಾಮಾಜಿಕ ರೂಢಿಗಳು ಮತ್ತು ಶಿಷ್ಟಾಚಾರಗಳನ್ನು ಗೌರವಿಸುವ ಕುರಿತೂ ಆಗಿದೆ. ಗುಜರಾತನ್ನು ಪಾನನಿಷೇಧ ರಾಜ್ಯವೆಂದು ಘೋಷಿಸಬಹುದಾದರೆ ಜಮ್ಮುಕಾಶ್ಮೀರದಂತಹ ಮುಸ್ಲಿಮ್ ಬಹುಸಂಖ್ಯಾತ ಕೇಂದ್ರಾಡಳಿತ ಪ್ರದೇಶಕ್ಕೆ ಇದು ಹೆಚ್ಚು ತರ್ಕಬದ್ಧವಾಗಿದೆ ಎಂದು ಹೇಳಿದ್ದಾರೆ.

ಪೋಲಿಸ್ ಕ್ರಮವನ್ನು ರಾಜಕೀಯ ನಾಯಕರು ಪಕ್ಷಭೇದವನ್ನು ಮರೆತು ಟೀಕಿಸಿದ್ದಾರೆ.

ಕಾಶ್ಮೀರದ ಜನರು ತಮ್ಮ ಸಂಸ್ಕೃತಿ ಮತ್ತು ಧರ್ಮವನ್ನು ಸಂರಕ್ಷಿಸುವ ಹಕ್ಕನ್ನು ಹೊಂದಿದ್ದಾರೆ ಎಂದು ಎಕ್ಸ್ ಪೋಸ್ಟ್‌ನಲ್ಲಿ ಬರೆದಿರುವ ನ್ಯಾಷನಲ್ ಕಾನ್ಫರೆನ್ಸ್ ನಾಯಕ ಹಾಗೂ ಶ್ರೀನಗರ ಸಂಸದ ಆಗಾ ಸೈಯದ್ ರೂಹುಲ್ಲಾ ಮೆಹ್ದಿ ಅವರು, ವಸಾಹತುಶಾಹಿ ಎಲ್‌ಜಿ(ಲೆಫ್ಟಿನಂಟ್ ಗವರ್ನರ್) ಆಡಳಿತವು ಭದ್ರತಾ ಪಡೆಗಳೊಂದಿಗೆ ಶಾಮೀಲಾಗಿ ಕಾಶ್ಮೀರವನ್ನು ಜನರು ಪ್ರತಿಭಟಿಸಲು,ತಮ್ಮ ಗುರುತನ್ನು ಕಾಪಾಡಿಕೊಳ್ಳಲು ಮತ್ತು ತಮ್ಮ ಸಂಸ್ಕೃತಿಯ ಬಗ್ಗೆ ಮಾತನಾಡಲು ಸಹ ಸಾಧ್ಯವಿಲ್ಲದ ‘ಆರ್ವೆಲಿಯನ್ ದುಃಸ್ವಪ್ನ’ವನ್ನಾಗಿ ಪರಿವರ್ತಿಸಿದೆ ಎಂದು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News