ಬಿಹಾರ | ಘರ್ಷಣೆಗೆ ತಿರುಗಿದ BPSC ಉದ್ಯೋಗಾಕಾಂಕ್ಷಿಗಳ ಪ್ರತಿಭಟನೆ : ಪ್ರಶಾಂತ್ ಕಿಶೋರ್ ವಿರುದ್ಧ ಪ್ರಕರಣ ದಾಖಲು
ಹೊಸದಿಲ್ಲಿ: ಬಿಹಾರ ಲೋಕಸೇವಾ ಆಯೋಗದ 70ನೇ ಪೂರ್ವಭಾವಿ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪದ ಹಿನ್ನೆಲೆ ಮರುಪರೀಕ್ಷೆ ನಡೆಸುವಂತೆ ಒತ್ತಾಯಿಸಿ ಸಾವಿರಾರು ಉದ್ಯೋಗಾಕಾಂಕ್ಷಿಗಳು ಪಾಟ್ನಾದ ಗಾಂಧಿ ಮೈದಾನದಲ್ಲಿ ಪ್ರತಿಭಟನೆ ನಡೆಸಿದ್ದು, ಗುಂಪನ್ನು ಚದುರಿಸಲು ಪೊಲೀಸರು ಲಾಠಿ ಚಾರ್ಜ್ ಮತ್ತು ಜಲಫಿರಂಗಿಗಳನ್ನು ಬಳಸಿದ್ದಾರೆ. ಪ್ರತಿಭಟನೆಗೆ ಸಂಬಂಧಿಸಿ ಜನ್ ಸೂರಾಜ್ ಪಕ್ಷದ ನಾಯಕ ಪ್ರಶಾಂತ್ ಕಿಶೋರ್ ಮತ್ತು ಇತರ ಪ್ರತಿಭಟನಾಕಾರರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಅನಧಿಕೃತವಾಗಿ ಜನರನ್ನು ಒಟ್ಟುಗೂಡಿಸಿ ಪ್ರಚೋದಿಸಿದ ಮತ್ತು ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ತಂದ ಆರೋಪದಲ್ಲಿ ಪ್ರಕರಣ ದಾಖಲಾಗಿದೆ. ಹಲವು ಕೋಚಿಂಗ್ ಸೆಂಟರ್ ಮಾಲಕರು, ಜನ್ ಸೂರಾಜ್ ಪಕ್ಷದ ಕಾರ್ಯಕರ್ತರು ಸೇರಿದಂತೆ 700 ಅಪರಿಚಿತ ಪ್ರತಿಭಟನಾಕಾರರ ವಿರುದ್ಧ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
ಜನ್ ಸೂರಾಜ್ ಪಕ್ಷವು ಅನುಮತಿಯಿಲ್ಲದೆ ಪ್ರತಿಭಟನಾ ಮೆರವಣಿಗೆಯನ್ನು ಆಯೋಜಿಸಿದ್ದು, ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ ಕರ್ತವ್ಯದಲ್ಲಿದ್ದ ಮ್ಯಾಜಿಸ್ಟ್ರೇಟ್ ಮತ್ತು ಪೊಲೀಸ್ ಅಧಿಕಾರಿಗಳೊಂದಿಗೆ ಘರ್ಷಣೆಗೆ ಕಾರಣವಾಗಿದೆ. ಜಿಲ್ಲಾಡಳಿತದ ನಿರ್ದೇಶನಗಳ ಹೊರತಾಗಿಯೂ ಪ್ರತಿಭಟನಾಕಾರರು ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಸಾರ್ವಜನಿಕ ಸುವ್ಯವಸ್ಥೆಗೆ ಅಡ್ಡಿಪಡಿಸಿದ್ದಾರೆ ಎಂದು ಪೊಲೀಸರು ಆರೋಪಿಸಿದ್ದಾರೆ.
ಬಿಹಾರ ಲೋಕಸೇವಾ ಆಯೋಗ ನಡೆಸಿರುವ 70ನೇ ಪೂರ್ವಭಾವಿ ಪರೀಕ್ಷೆಯ ಪೇಪರ್ ಸೋರಿಕೆ ಆರೋಪದ ಹಿನ್ನೆಲೆ ಉದ್ಯೋಗಾಕಾಂಕ್ಷಿಗಳು ರವಿವಾರ ಬೃಹತ್ ಪ್ರತಿಭಟನೆಯನ್ನು ನಡೆಸಿದ್ದಾರೆ. ಗಾಂಧಿ ಮೈದಾನದಲ್ಲಿ ಜಮಾಯಿಸಿದ್ದ ಪ್ರತಿಭಟನಾಕಾರರು ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ನಿವಾಸಕ್ಕೆ ತೆರಳಿ ಅವರ ಜೊತೆ ಮಾತುಕತೆಗೆ ಬಯಸಿದ್ದರು. ಪ್ರಶಾಂತ್ ಕಿಶೋರ್ ವಿದ್ಯಾರ್ಥಿಗಳಿಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದರು. ಪ್ರತಿಭಟನಾಕಾರರನ್ನು ನಿಯಂತ್ರಿಸಲು ಪೊಲೀಸರು ಲಾಠಿ ಮತ್ತು ಜಲಫಿರಂಗಿಗಳನ್ನು ಬಳಸಿದ್ದಾರೆ.