ಕೇಜ್ರಿವಾಲ್ ವಿರುದ್ಧ ಕ್ರಮಕ್ಕೆ ನಿರಾಕರಿಸಿದ ಸುಪ್ರೀಂ ಕೋರ್ಟ್
ಹೊಸದಿಲ್ಲಿ: ಆಪ್‌ಗೆ ಮತಗಳನ್ನು ನೀಡಿದರೆ ತಾನು ಮತ್ತೆ ಜೈಲಿಗೆ ಹೋಗಬೇಕಾಗಿಲ್ಲ ಎಂದು ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ನೀಡಿದ ಹೇಳಿಕೆಗೆ ಸಂಬಂಧಿಸಿದಂತೆ ಅವರ ವಿರುದ್ಧ ಕ್ರಮಕೈಗೊಳ್ಳಲು ಇಂದು ಸುಪ್ರೀಂ ಕೋರ್ಟ್ ನಿರಾಕರಿಸಿದೆ.
ಪಿಎಂಎಲ್‌ಎ ಅಡಿಯಲ್ಲಿ ತಮ್ಮ ಬಂಧನವನ್ನು ಪ್ರಶ್ನಿಸಿ ಕೇಜ್ರಿವಾಲ್ ಸಲ್ಲಿಸಿದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ದೀಪಾಂಕರ್ ದತ್ತಾ ಇಂದು ನಡೆಸುವ ವೇಳೆ ಇಡಿ ಪರ ಹಾಜರಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಕೇಜ್ರಿವಾಲ್ ಅವರ ಹೇಳಿಕೆಯ ಬಗ್ಗೆ ನ್ಯಾಯಾಲಯದ ಗಮನ ಸೆಳೆದರು.
“ನೀವು ಪೊರಕೆಗೆ (ಆಪ್ ಚಿಹ್ನೆ) ಮತ ನೀಡಿದರೆ ನಾನು ಜೂನ್ 2ರಂದು ಜೈಲಿಗೆ ಹೋಗಬೇಕಾಗಿಲ್ಲ ಎಂದು ಅವರು ಹೇಳುತ್ತಿದ್ದಾರೆ. ಅವರು ಹೀಗೆ ಹೇಗೆ ಹೇಳಬಹುದು? ಇದು ವ್ಯವಸ್ಥೆಯ ಮೇಲೆ ಹೊಡೆತ,” ಎಂದು ತುಷಾರ್ ಮೆಹ್ತಾ ಹೇಳಿದರು.
“ಅರ್ಜಿದಾರ ತಾವೊಬ್ಬ ವಿಶೇಷ ವ್ಯಕ್ತಿ ಎಂಬಂತೆ ವರ್ತಿಸುತ್ತಿದ್ದಾರೆ. ಅವರು ಎಲ್ಲರಂತೆ ಎಂದು ನಾವು ಪರಿಗಣಿಸುತ್ತೇವೆ. ಅವರು ಮೊದಲ ದಿನವೇ ಏನು ಹೇಳಿದರು ನೋಡಿ, ಅವರು ಪ್ರಕರಣದ ಬಗ್ಗೆ ಮಾತನಾಡಕೂಡದು ಎಂದು ನ್ಯಾಯಾಲಯ ಹೇಳಿದೆ,” ಎಂದು ಅವರು ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಜಸ್ಟಿಸ್ ಖನ್ನಾ, ”ಇಲ್ಲ, ಪ್ರಕರಣದಲ್ಲಿ ಅವರ ಪಾತ್ರದ ಬಗ್ಗೆ ಚರ್ಚಿಸಬಾರದು ಎಂದು ಹೇಳಿದ್ದೆವು,” ಎಂದರು. ಆಗ ತುಷಾರ್ ಮೆಹ್ತಾ ಮತ್ತೆ ಕೇಜ್ರಿವಾಲ್ ಹೇಳಿಕೆ ಉಲ್ಲೇಖಿಸಿದಾಗ ಉತ್ತರಿಸಿದ ಜಸ್ಟಿಸ್ ಖನ್ನಾ “ಅದು ಅವರ (ಕೇಜ್ರಿವಾಲ್) ಅನಿಸಿಕೆ, ನಮಗೆ ಗೊತ್ತಿಲ್ಲ. ಸರಿ ಎನಿಸಿದ್ದನ್ನು ನಾವು ಹೇಳಿದ್ದೇವೆ. ನಮ್ಮ ಆದೇಶ ಸ್ಪಷ್ಟವಾಗಿತ್ತು. ಅದು ಯಾರಿಗೂ ಹೊರತುಪಟ್ಟಿಲ್ಲ,” ಎಂದರು.
“ದೇಶದ ಅತ್ಯುನ್ನತ ಸಚಿವರು” ಸುಪ್ರೀಂ ಕೋರ್ಟ್ ಕೇಜ್ರಿವಾಲ್‌ಗೆ ನೀಡಿದ ಮಧ್ಯಂತರ ಜಾಮೀನಿನ ಬಗ್ಗೆ ನೀಡಿದ ಹೇಳಿಕೆ ಕುರಿತು ಅಫಿಡವಿಟ್ ಸಲ್ಲಿಸುವುದಾಗಿ ಕೇಜ್ರಿವಾಲ್ ಪರ ವಕೀಲ ಕಪಿಲ್ ಸಿಬಲ್ ಹೇಳಿದರು.
ಆಗ ಪ್ರತಿಕ್ರಿಯಿಸಿದ ಜಸ್ಟಿಸ್ ಖನ್ನಾ, ತೀರ್ಪಿನ ವಿಮರ್ಶೆಗೆ ಸ್ವಾಗತವಿದೆ ಎಂದು ಹೇಳಿದರು.