ಕೇಂದ್ರ ಸರ್ಕಾರದಿಂದ ತೆರಿಗೆ ಭಯೋತ್ಪಾದನೆ, ಪ್ರಜಾಪ್ರಭುತ್ವದ ಕಗ್ಗೊಲೆ: ಕಾಂಗ್ರೆಸ್

Update: 2024-02-23 02:23 GMT

ಹೊಸದಿಲ್ಲಿ: ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಮೋದಿ ಸರ್ಕಾರ ಪ್ರಮುಖ ವಿರೋಧ ಪಕ್ಷವನ್ನು ಸದೆಬಡಿಯುವ ಉದ್ದೇಶದಿಂದ ಪಕ್ಷದ ಖಾತೆಯಿಂದ ಸುಮಾರು 66 ಕೋಟಿ ರೂಪಾಯಿಗಳನ್ನು ಲೂಟಿ ಮಾಡುವ ಮೂಲಕ 'ತೆರಿಗೆ ಭಯೋತ್ಪಾದನೆ'ಗೆ ಮುಂದಾಗಿದೆ ಎಂದು ಕಾಂಗ್ರೆಸ್ ಪಕ್ಷ ಗಂಭೀರ ಆರೋಪ ಮಾಡಿದೆ. ಇದು ಪ್ರಜಾಪ್ರಭುತ್ವದ ಕಗ್ಗೊಲೆ ಎಂದು ಪಕ್ಷ ಬಣ್ಣಿಸಿದೆ.

ರಾಜಕೀಯ ಎದುರಾಳಿಗಳನ್ನು ಕಂಗೆಡಿಸುವ ಸಲುವಾಗಿ ಖಾತೆಯಿಂದ ಬಲವಂತವಾಗಿ ಹಣ ಪಡೆಯುವಂತೆ ಮಾಡಿರುವುದು ಮತ್ತು 2017ರ ನೋಟು ರದ್ದತಿಯಂತಹ ಕ್ರಮಗಳು ಬಿಜೆಪಿಯ ಹತಾಶ ಪ್ರಯತ್ನಗಳು ಎಂದು ಆಪಾದಿಸಿದೆ.

ಗುರುವಾರ ಈ ಸಂಬಂಧ ಹೇಳಿಕೆ ನೀಡಿರುವ ಕಾಂಗ್ರೆಸ್ ಮುಖಂಡರಾದ ಕೆ.ಸಿ.ವೇಣುಗೋಪಾಲ್ ಮತ್ತು ಅಜಯ್ ಮಾಕೆನ್ ಅವರು , ಕಾಂಗ್ರೆಸ್ ಪಕ್ಷ, ಭಾರತೀಯ ಯುವ ಕಾಂಗ್ರೆಸ್ ಮತ್ತು ಎನ್ಎಸ್ ಯು ಐ ಮೇಲೆ ವಿಧಿಸಿರುವ 210 ಕೋಟಿ ರೂಪಾಯಿ ತೆರಿಗೆ ಬೇಡಿಕೆಯ ಹಿನ್ನೆಲೆಯಲ್ಲಿ ಬ್ಯಾಂಕುಗಳು 66 ಕೋಟಿ ರೂಪಾಯಿಗಳನ್ನು ಬೇಕಾಬಿಟ್ಟಿಯಾಗಿ ವರ್ಗಾಯಿಸುವಂತೆ ಬಲವಂತಪಡಿಸಲಾಗಿದೆ. ಈ ತೆರಿಗೆ ಬೇಡಿಕೆಯ ಬಗ್ಗೆ ಮೇಲ್ಮನವಿ ಪ್ರಾಧಿಕಾರದಲ್ಲಿ ಸಲ್ಲಿಸಿರುವ ಅರ್ಜಿ ಇನ್ನೂ ಬಾಕಿ ಇರುವಾಗಲೇ ಈ ಕ್ರಮ ಕೈಗೊಳ್ಳಲಾಗಿದೆ ಎಂದು ದೂರಿದೆ.

ಕಾಂಗ್ರೆಸ್ ಪಕ್ಷದ ಹಣವನ್ನು ಕಸಿದುಕೊಳ್ಳಲಾಗಿದೆ. ನಾವು ಚುನಾವಣೆ ಪ್ರಚಾರ ಕೈಗೊಳ್ಳುವುದು, ಚುನಾವಣೆಯಲ್ಲಿ ಹೋರಾಡುವುದು ಹೇಗೆ? ಇದು ಕಾಂಗ್ರೆಸ್ ನ ಹತ್ಯೆಯಲ್ಲ. ಇದು ಪ್ರಜಾಪ್ರಭುತ್ವದ ಕಗ್ಗೊಲೆ. ಬಿಜೆಪಿ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವವನ್ನು ನಿರಂಕುಶ ಪ್ರಭುತ್ವದತ್ತ ಒಯ್ಯುತ್ತಿದೆ ಎಂದು ಈ ಮುಖಂಡರು ಆಪಾದಿಸಿದ್ದಾರೆ.

ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದ ದಶಕಗಳಲ್ಲಿ ಬಿಜೆಪಿ ಮೇಲೆ ಯಾವ ಹಂತದಲ್ಲಾದರೂ ತೆರಿಗೆ ಬೇಡಿಕೆಯನ್ನು ಹೇರಲಾಗಿತ್ತೇ ಎಂಬುದನ್ನು ಬಿಜೆಪಿ ಬಹಿರಂಗಪಡಿಸಲಿ ಎಂದು ಮಾಕೆನ್ ಸವಾಲು ಹಾಕಿದರು. ರಾಜಕೀಯ ಪಕ್ಷಗಳಿಗೆ ಆದಾಯ ತೆರಿಗೆಯಿಂದ ವಿನಾಯ್ತಿ ಇದ್ದು, 2019ರಲ್ಲಿ ನಿಗದಿತ ಗಡುವು ಮುಗಿದು ಕೆಲವೇ ದಿನಗಳಲ್ಲಿ ಆದಾಯ ತೆರಿಗೆ ರಿಟನ್ರ್ಸ್ ಸಲ್ಲಿಸಲಾಗಿದ್ದನ್ನೇ ಆಧಾರವಾಗಿಟ್ಟುಕೊಂಡು ಈ ಕ್ರಮ ಕೈಗೊಳ್ಳಲಾಗಿದೆ ಎಂದು ದೂರಿದರು. ಕಾಂಗ್ರೆಸ್ ಪಕ್ಷದ 142 ಕೋಟಿ ರೂಪಾಯಿ ಸಂಗ್ರಹದ ಪೈಕಿ ಕೇವಲ 14.42 ಲಕ್ಷ ರೂಪಾಯಿಗಳನ್ನು ಸಂಸದರು ಹಾಗೂ ಶಾಸಕರಿಂದ ಸಂಗ್ರಹಿಸಲಾಗಿದೆ ಎಂದು ಹೇಳಿದ್ದಾರೆ. ಪಕ್ಷದ ಮತ್ತೊಬ್ಬ ಹಿರಿಯ ಮುಖಂಡ ಜೈರಾಮ್ ರಮೇಶ್ ಅವರು ಕೇಂದ್ರದ ಕ್ರಮವನ್ನು ತೆರಿಗೆ ದರೋಡೆ ಎಂದು ಕರೆದಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News