ತೆಲಂಗಾಣ ವಿಧಾನಸಭಾ ಚುನಾವಣೆ: ಬಿರುಸಿನ ಮತದಾನ
ಹೈದರಾಬಾದ್: ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯ ವಿಧಾನಸಭೆಯ 119 ಸ್ಥಾನಗಳಿಗೆ ಮತದಾನ ಗುರುವಾರ ಬೆಳಿಗ್ಗೆ ಆರಂಭವಾಗಿದೆ. ತೆಲಂಗಾಣ ಚುನಾವಣೆ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಮತ್ತು ಆಡಳಿತಾರೂಢ ಭಾರತ ರಾಷ್ಟ್ರೀಯ ಸಮಿತಿಯ ಮುಖ್ಯಸ್ಥ ಹಾಗೂ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ನಡುವಿನ ಸ್ಪರ್ಧೆ ಎಂದೇ ಬಿಂಬಿತವಾಗಿದ್ದು, ಮೂರೂ ಪಕ್ಷಗಳ ಮುಖಂಡರು ಅಬ್ಬರದ ಪ್ರಚಾರ ಕೈಗೊಂಡಿದ್ದರು.
ಈಗಾಗಲೇ ನವೆಂಬರ್ 7ರಿಂದ 25ರವರೆಗೆ ಚುನಾವಣೆ ಮುಕ್ತಾಯಗೊಂಡಿರುವ ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್ಗಢ ಮತ್ತು ಮಿಜೋರಾಂ ಫಲಿತಾಂಶಗಳ ಜತೆಗೆ ತೆಲಂಗಾಣ ಚುನಾವಣೆಯ ಫಲಿತಾಂಶ ಕೂಡಾ ಡಿಸೆಂಬರ್ 3ರಂದು ಪ್ರಕಟವಾಗಲಿದೆ. ಮತದಾನ ನಡೆಯುವ ರಾಜ್ಯಗಳ ಪೈಕಿ ತೆಲಂಗಾಣ ಕೊನೆಯದ್ದು.
ರಾಜ್ಯದ 106 ಕ್ಷೇತ್ರಗಳಲ್ಲಿ ಬೆಳಿಗ್ಗೆ 7ಕ್ಕೆ ಮತದಾನ ಆರಂಭವಾಗಿದ್ದು, ಸಂಜೆ 5ಕ್ಕೆ ಮುಕ್ತಾಯವಾಗಲಿದೆ. ಎಡಪಂಥೀಯ ನಕ್ಸಲ್ ಚಟುವಟಿಕೆ ಇರುವ 13 ಕ್ಷೇತ್ರಗಳಲ್ಲಿ ಬೆಳಿಗ್ಗೆ 7 ರಿಂದ ಸಂಜೆ 4ರವರೆಗೆ ಮತದಾನ ನಡೆಯುತ್ತದೆ. 2.5 ಲಕ್ಷಕ್ಕೂ ಹೆಚ್ಚು ಮಂದಿ ಸಿಬ್ಬಂದಿ ಚುನಾವಣಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಮುಖ್ಯ ಮತದಾನ ಅಧಿಕಾರಿ ವಿಕಾಸ್ ರಾಜ್ ಹೇಳಿದ್ದಾರೆ.
ರಾಜ್ಯದ 3.26 ಕೋಟಿ ಮತದಾರರು 2290 ಮಂದಿಯ ಭವಿಷ್ಯ ನಿರ್ಧರಿಸಲಿದ್ದಾರೆ. ಆಡಳಿತಾರೂಢ ಬಿಆರ್ ಎಸ್ ಎಲ್ಲ 119 ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದ್ದರೆ, ಬಿಜೆಪಿ ಹಾಗೂ ನಟ ಪವನ್ ಕಲ್ಯಾಣ್ ನೇತೃತ್ವದ ಜನ ಸೇನಾ 111 ಹಾಗೂ 8 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿವೆ. ಕಾಂಗ್ರೆಸ್ ಪಕ್ಷ ಒಂದು ಸ್ಥಾನವನ್ನು ಮಿತ್ರಪಕ್ಷವಾದ ಸಿಪಿಐಗೆ ಬಿಟ್ಟುಕೊಟ್ಟಿದ್ದು, 118 ಸ್ಥಾನಗಳಲ್ಲಿ ಹುರಿಯಾಳುಗಳನ್ನು ಕಣಕ್ಕೆ ಇಳಿಸಿದೆ.
ಮುಖ್ಯಮಂತ್ರಿ ಕೆಸಿಆರ್, ಅವರ ಮಗ ಹಾಗೂ ಸಚಿವ ಕೆ.ಟಿ.ರಾಮರಾವ್, ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಆರ್.ರೇವನಾಥ್ ರೆಡ್ಡಿ ಮತ್ತು ಬಿಜೆಪಿ ಶಾಸಕ ಬಂಡಿ ಸಂಜಯಕುಮಾರ್ ಹಾಗೂ ಡಿ.ಅರವಿಂದ್ ಕಣದಲ್ಲಿರುವ ಪ್ರಮುಖರು.