ತೆಲಂಗಾಣ ಚುನಾವಣೆ: ಮುಸ್ಲಿಮ್ ಮತ ಒಗ್ಗೂಡಿಸುವಲ್ಲಿ ಯಶಸ್ವಿಯಾದ ಝಮೀರ್ ಅಹ್ಮದ್ ಪ್ರಚಾರ

Update: 2023-12-03 15:08 GMT

ಝಮೀರ್ ಅಹ್ಮದ್  

ಹೈದರಾಬಾದ್: ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪರ ಅಲ್ಪಸಂಖ್ಯಾತ ಸಮುದಾಯದ ಮತಗಳನ್ನು ಒಗ್ಗೂಡಿಸುವಲ್ಲಿ ವಸತಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಝಮೀರ್ ಅಹಮದ್ ಖಾನ್ ಅವರು ನಡೆಸಿರುವ ಪ್ರಚಾರ ಯಶಸ್ವಿಯಾಗಿದೆ.

ಹೈಕಮಾಂಡ್ ಸೂಚನೆ ಮೇರೆಗೆ 25 ದಿನಗಳ ಹಿಂದೆಯೇ ಹೈದರಾಬಾದ್ ನಲ್ಲಿ ವಾಸ್ತವ್ಯ ಹೂಡಿ ಪಕ್ಷದ ನಾಯಕರು, ಮುಸ್ಲಿಮ್ ಸಮುದಾಯದ ಮುಖಂಡರ ಜತೆ ಹಲವಾರು ಸಭೆಗಳನ್ನು ನಡೆಸಿ ಮುಸ್ಲಿಮ್ ಸಮುದಾಯದ ಪ್ರಾಬಲ್ಯ ಇರುವ 49 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪರ ಮತ ಒಗ್ಗೂಡಿಸುವಲ್ಲಿ ಸಫಲರಾಗಿದ್ದಾರೆ.

ಹೈದರಾಬಾದ್‌ಗೆ ತೆರಳು ಮುನ್ನ ಹೊಸದಿಲ್ಲಿಗೆ ತೆರಳಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರ ಜತೆ ಕಾರ್ಯತಂತ್ರಗಳ ಬಗ್ಗೆ ಚರ್ಚಿಸಿ, ನಂತರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಅವರ ಜತೆ ನಿರಂತರ ಸಂಪರ್ಕ ಸಾಧಿಸಿ ಅಲ್ಪಸಂಖ್ಯಾತ ಸಮುದಾಯದ ಮತ ಕಾಂಗ್ರೆಸ್ ನತ್ತ ಒಗ್ಗೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬೋಧಾನ್, ರಾಮಗೊಂಡಮ್, ಪೆದ್ದಪಲ್ಲೆ, ಬಾಲಕೊಂಡ್, ಕೊಂಡಗಲ್ ಕ್ಷೇತ್ರ ಗಳಲ್ಲಿ ಕಾಂಗ್ರೆಸ್ ಗೆಲ್ಲುವುದರ ಜತೆಗೆ, ಕಮ್ಮಮ್, ವಾರಂಗಲ್, ನಲ್ಗೊಂಡ ಭಾಗದಲ್ಲಿ ಅತಿಹೆಚ್ಚು ಸ್ಥಾನ ಗೆಲ್ಲಲು ಮುಸ್ಲಿಂ ಮತ ಒಗ್ಗೂಡಿಸಿದ್ದು ಕಾರಣವಾಗಿದೆ. ಒಟ್ಟು ಗೆದ್ದಿರುವ ಕ್ಷೇತ್ರಗಳಲ್ಲಿ ಅರ್ಧಕ್ಕೂ ಹೆಚ್ಚು ಕ್ಷೇತ್ರಗಳು ಕಮ್ಮಮ್, ನಲ್ಗೊಂಡ, ವಾರಂಗಲ್ ಜಿಲ್ಲೆಗಳಿಗೆ ಸೇರಿದೆ.

ಝಮೀರ್ ಅಹ್ಮದ್ ಖಾನ್ ಅವರು ಇತರ ಮುಸ್ಲಿಮ್ ನಾಯಕರ ಜತೆಗೂಡಿ ರೂಪಿಸಿದ ಕಾರ್ಯತಂತ್ರ ಯಶಸ್ವಿಯಾಗಿದ್ದು, ಗ್ರೇಟರ್ ಹೈದರಾಬಾದ್ ಹೊರತುಪಡಿಸಿ ಉಳಿದೆಲ್ಲ ಜಿಲ್ಲೆಗಳಲ್ಲಿ ಅಲ್ಪಸಂಖ್ಯಾತರು ಕಾಂಗ್ರೆಸ್ ಪರ ಒಲವು ತೋರಿದ್ದಾರೆ.

“ಕಾಂಗ್ರೆಸ್ ಪಕ್ಷಕ್ಕೆ ಬಹುಮತ ನೀಡಿದ ತೆಲಂಗಾಣ ಜನತೆಗೆ ಹೃದಯ ಪೂರ್ವಕ ಕೃತಜ್ಞತೆಗಳು. ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರ ಕೊಟ್ಟ ಮಾತು ಉಳಿಸಿಕೊಂಡಂತೆ ಇಲ್ಲಿಯೂ ಆರು ಗ್ಯಾರಂಟಿ ಜಾರಿ ಮಾಡಲಿದೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಗಾಂಧಿ, ಮಲ್ಲಿಕಾರ್ಜುನ ಖರ್ಗೆ ಸೇರಿ ಕಾಂಗ್ರೆಸ್ ನ ಎಲ್ಲ ನಾಯಕರ ಸಂಘಟಿತ ಹೋರಾಟ, ಜನತೆಯ ಆಶೀರ್ವಾದದಿಂದ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದ್ದು, ’ಬದಲಾವಣೆ ಬೇಕಿದೆ, ಕಾಂಗ್ರೆಸ್ ಬರಬೇಕಿದೆ’ ಎಂಬ ನಮ್ಮ ಪ್ರಯತ್ನಕ್ಕೆ ಜಯ ಸಿಕ್ಕಿದೆ”

- ಝಮೀರ್ ಅಹಮದ್ ಖಾನ್, ವಸತಿ ಸಚಿವ

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News