ನೇಪಾಳದಲ್ಲಿ ಭೀಕರ ಭೂಕಂಪ: 69 ಮಂದಿ ಮೃತ್ಯು

Update: 2023-11-04 02:51 GMT

Photo: twitter.com/TheUnderLineIN

ಕಠ್ಮಂಡು: ರಿಕ್ಟರ್ ಮಾಪಕದಲ್ಲಿ 6.4ರಷ್ಟು ತೀವ್ರತೆ ಹೊಂದಿದ್ದ ಭೀಕರ ಭೂಕಂಪಕ್ಕೆ ಪುಟ್ಟ ದೇಶವಾದ ನೇಪಾಳ ಕಂಗೆಟ್ಟಿದ್ದು, ಶುಕ್ರವಾರ ರಾತ್ರಿ ಸಂಭವಿಸಿದ ದುರಂತ 69 ಮಂದಿಯನ್ನು ಬಲಿ ಪಡೆದಿದೆ. ದುರಂತದಲ್ಲಿ ನೂರಾರು ಮಂದಿ ಗಾಯಗೊಂಡಿದ್ದಾರೆ. ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚುವ ನಿರೀಕ್ಷೆ ಇದೆ ಎಂದು ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ಭೂಕಂಪಪೀಡಿತ ಪ್ರದೇಶಗಳಲ್ಲಿ ಮನೆಗಳು ಕುಸಿದಿದ್ದು, ದೆಹಲಿ-ಎನ್ಸಿಆರ್ ಪ್ರದೇಶ ಸೇರಿದಂತೆ ಉತ್ತರ ಭಾರತದ ಕೆಲವೆಡೆ ಕೂಡಾ ಲಘು ಕಂಪನದ ಅನುಭವವಾಗಿದೆ.

ಜಾಲರ್ಕೋಟ್ ಭೂಕಂಪದ ಕೇಂದ್ರ ಬಿಂದುವಾಗಿದ್ದು, ಭಾಗದ ಜತೆ ಸಂಪರ್ಕ ಸಾಧಿಸಲು ಸಾಧ್ಯವಾಗುತ್ತಿಲ್ಲ. ಜಿಲ್ಲೆಯಲ್ಲಿ ಕನಿಷ್ಠ 17 ಸಾವುಗಳು ಸಂಭವಿಸಿವೆ ಎಂದು ಸ್ಥಳೀಯ ಅಧಿಕಾರಿ ಹರೀಶ್ ಚಂದ್ರ ಶರ್ಮಾ ಮಾಹಿತಿ ನೀಡಿದ್ದಾರೆ.

ಭೀಕರ ದುರಂತದ ಹಿನ್ನೆಲೆಯಲ್ಲಿ ರಕ್ಷಣಾ ಮತ್ತು ಪರಿಹಾರ ಕಾರ್ಯಗಳಿಗಾಗಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ ಎಂದು ಸರ್ಕಾರ ಪ್ರಕಟಿಸಿದೆ. ಭೂಕಂಪದ ಕೇಂದ್ರ ಬಿಂದುವಿನಿಂದ ಸುಮಾರು 800 ಕಿಲೋಮೀಟರ್ ದೂರದಲ್ಲಿರುವ ಭಾರತದ ರಾಜಧಾನಿ ಹೊಸದಿಲ್ಲಿ ಪ್ರದೇಶದಲ್ಲಿ ಕೂಡಾ ಭೂಕಂಪದ ಅನುಭವ ಆಗಿದೆ. ಆದರೆ ಬಹುತೇಕ ಮಂದಿ ನಿದ್ದೆಯಲ್ಲಿ ಇದ್ದ ಸಂದರ್ಭದಲ್ಲಿ ಇದು ಸಂಭವಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ಶುಕ್ರವಾರ ಮಧ್ಯರಾತ್ರಿಗಿಂತ ಸ್ವಲ್ಪ ಮುಂಚೆ ದುರಂತ ಸಂಭವಿಸಿದ್ದು, ಪರ್ವತಶ್ರೇಣಿಗಳಿಂದ ಕೂಡಿದ ಗ್ರಾಮದಲ್ಲಿ ಪರಿಹಾರ ಕಾರ್ಯಾಚರಣೆ ಸಮರೋಪಾದಿಯಲ್ಲಿ ಸಾಗಿದೆ. 69 ಮಂದಿ ಈಗಾಗಲೇ ಮೃತಪಟ್ಟಿದ್ದು, ಹಲವು ಪ್ರದೇಶಗಳ ಜತೆ ಸಂಪರ್ಕ ವ್ಯವಸ್ಥೆ ಕಡಿದು ಹೋಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚುವ ನಿರೀಕ್ಷೆ ಇದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಸ್ಥಳೀಯ ಕಾಲಮಾನದ ಪ್ರಕಾರ ರಾತ್ರಿ 11.47ಕ್ಕೆ ಜಾಲರ್ಕೋಟ್ ಜಿಲ್ಲೆಯ ರಮೀದಂಡ ಗ್ರಾಮದಲ್ಲಿ ಭೂಕಂಪ ಸಂಭವಿಸಿದೆ ಎಂದು ಅಧಿಕಾರಿಗಳು ಎಕ್ಸ್ ಪೋಸ್ಟ್ನಲ್ಲಿ ಹೇಳಿದ್ದಾರೆ. 2015ರಲ್ಲಿ ಬೆಟ್ಟ ರಾಷ್ಟ್ರದಲ್ಲಿ 7.8 ತೀವ್ರತೆಯ ಭೂಕಂಪ ಸಂಭವಿಸಿ, 9 ಸಾವಿರಕ್ಕೂ ಹೆಚ್ಚು ಮಂದಿ ಮೃತಪಟ್ಟು, 10 ಲಕ್ಷ ಕಟ್ಟಡಗಳು ಹಾನಿಯಾಗಿದ್ದನ್ನು ಇಲ್ಲಿ ಸ್ಮರಿಸಬಹುದು.


Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News