ಪಹಲ್ಗಾಮ್ ನಲ್ಲಿ ಉಗ್ರರ ದಾಳಿ: ಇಂದು ಜಮ್ಮು- ಕಾಶ್ಮೀರ ಬಂದ್ ಗೆ ಮೆಹಬೂಬಾ, ಮಿರ್ವೈಝ್ ಕರೆ

PC: x.com/TheKashmiriyat
ಶ್ರೀನಗರ: ಪಹಲ್ಗಾಮ್ ನಲ್ಲಿ ನಡೆದ ಉಗ್ರರ ದಾಳಿಯ ಹಿನ್ನೆಲೆಯಲ್ಲಿ ಬುಧವಾರ ಜಮ್ಮು ಕಾಶ್ಮೀರದಲ್ಲಿ ಬಂದ್ ಆಚರಿಸುವಂತೆ ಪಿಡಿಪಿ ಮುಖ್ಯಸ್ಥೆ ಮತ್ತು ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಮತ್ತು ಹುರಿಯತ್ ಮುಖಂಡ ಮಿರ್ವೈಝ್ ಉಮರ್ ಫಾರೂಕ್ ಅವರು ಪ್ರತ್ಯೇಕ ಕರೆ ನೀಡಿದ್ದಾರೆ.
ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿ ಬಂದ್ ಆಚರಿಸುವಂತೆ ಮೆಹಬೂಬಾ ಮುಫ್ತಿ ಹಾಗೂ ಮಿರ್ವೈಝ್ ಕರೆ ನೀಡಿರುವುದು ಇದೇ ಮೊದಲು.
"ಇದು ಕೇವಲ ಆಯ್ದ ಕೆಲವರ ವಿರುದ್ಧ ನಡೆದ ದಾಳಿಯಲ್ಲ. ಇದು ನಮ್ಮ ಮೇಲೆ ನಡೆದ ದಾಳಿಯೂ ಹೌದು. ಈ ಶೋಕ ಮತ್ತು ಸಂಕಷ್ಟದ ಸಂದರ್ಭದಲ್ಲಿ ನಾವು ಜೊತೆಗಿರುತ್ತೇವೆ" ಎಂದು ಮೆಹಬೂಬಾ ಹೇಳಿದ್ದಾರೆ. ಜಮ್ಮು ಚೇಂಬರ್ ಅಂಡ್ ಬಾರ್ ಅಸೋಸಿಯೇಶನ್ ನೀಡಿರುವ ಬಂದ್ ಕರೆಯ ಬೆನ್ನಲ್ಲೇ ಮೆಹಬೂಬಾ ಕೂಡಾ ಬಂದ್ ಗೆ ಕರೆ ನೀಡಿದ್ದಾರೆ.
"ಪಹಲ್ಗಾಮ್ ನಲ್ಲಿ ಅಮಾಯಕರ ಮೇಲೆ ನಡೆದ ಘೋರ ಘಟನೆಯಲ್ಲಿ ಜೀವ ಕಳೆದುಕೊಂಡ ಅಮಾಯಕರ ಗೌರವಾರ್ಥವಾಗಿ ಬಂದ್ ಆಚರಿಸುವಂತೆ ನೀಡಿರುವ ಬಂದ್ ಕರೆಗೆ ಇಡೀ ಕಾಶ್ಮೀರ ಜನತೆ ಒಗ್ಗಟ್ಟಾಗಿ ಸ್ಪಂದಿಸಬೇಕು" ಎಂದು ಅವರು ಹೇಳಿದ್ದಾರೆ.
ಈ ಪೈಶಾಚಿಕ ಕೃತ್ಯದ ವಿರುದ್ಧ ನಾವು ಒಗ್ಗಟ್ಟಾಗಿ ಇದ್ದೇವೆ ಮತ್ತು ನಮ್ಮ ಮೌನವನ್ನು ನಾವು ಭಯೋತ್ಪಾದನೆ ಒಪ್ಪಿಕೊಂಡಿದ್ದೇವೆ ಎಂದು ತಪ್ಪಾಗಿ ಭಾವಿಸಬಾರದು ಎಂಬ ಸ್ಪಷ್ಟ ಸಂದೇಶವನ್ನು ನಾವು ರವಾನಿಸಬೇಕಿದೆ ಎಂದು ಪಕ್ಷದ ಮುಖ್ಯಸ್ಥ ಯಾಸಿರ್ ರಿಷಿ ಹೇಳಿಕೆ ನೀಡಿದ್ದಾರೆ.
ಮಿರ್ವೈಝ್ ಪ್ರತ್ಯೇಕ ಹೇಳಿಕೆ ನೀಡಿ, ಅಮಾಯಕ ಆತ್ಮವನ್ನು ಯಾರೇ ಕೊಲ್ಲಲಿ. ಅದು ಇಡೀ ಮಾನವತೆಯನ್ನು ಹತ್ಯೆ ಮಾಡಿದಂತೆ. ಜಮ್ಮು ಮತ್ತು ಕಾಶ್ಮೀರದ ಇಡೀ ಜನತೆ ಮುತ್ತಹಿದಾ ಮಜ್ಲಿಸೆ ಉಲಮಾ ಮೂಲಕ ಹತ್ಯೆಗೀಡಾದ ಕುಟುಂಬಗಳ ಪರವಾಗಿ ನಿಲ್ಲುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ. ಈ ಹೇಯ ಕೃತ್ಯವನ್ನು ಬಂದ್ ಆಚರಿಸುವ ಮೂಲಕ ಪ್ರತಿಭಟಿಸಬೇಕು ಎಂದು ಅವರು ಕರೆ ನೀಡಿದ್ದಾರೆ.