"ಭಯೋತ್ಪಾದಕರಿಗೆ ಶಿಕ್ಷೆಯಾಗಬೇಕು, ನಮಗಲ್ಲ"; ದೇಶಗಳ ನಡುವಿನ ಉದ್ವಿಗ್ನತೆಯಿಂದ ಕುಟುಂಬಗಳಿಂದ ಬೇರ್ಪಟ್ಟವರ ಕಣ್ಣೀರು

Photo : Indiatoday
ಹೊಸದಿಲ್ಲಿ: ಪಾಕಿಸ್ತಾನದ ನಾಗರಿಕರು ಭಾರತವನ್ನು ತೊರೆಯಲು ನೀಡಿದ್ದ ಗಡುವು ಎಪ್ರಿಲ್ 27 ರಂದು ಮುಗಿದ ಬಳಿಕ ಪಂಜಾಬ್ ನ ವಾಘಾ-ಅಟ್ಟಾರಿ ಗಡಿಯು ಭಾವನಾತ್ಮಕ ಕ್ಷಣಕ್ಕೆ ಸಾಕ್ಷಿಯಾಯಿತು. ದೇಶ ತೊರೆಯಲೇಬೇಕಾದ ಸಂದಿಗ್ಧ ಪರಿಸ್ಥಿತಿಯಲ್ಲಿ ಸಿಲುಕಿದವರ ಪೈಕಿ ಓರ್ವ ಪಾಕಿಸ್ತಾನ ಮಹಿಳೆ ತನ್ನ ಪತಿ ಮತ್ತು ಎಂಟು ವರ್ಷದ ಮಗನನ್ನು ಬಿಟ್ಟು ಗಡಿದಾಟಬೇಕಾದ ಅನಿವಾರ್ಯತೆಗೆ ಒಳಗಾಗಿದ್ದರು. ಈ ರೀತಿಯ ಪರಿಸ್ಥಿತಿ ಎದುರಿಸಿದ ಇನ್ನೊಬ್ಬರು ಆರು ತಿಂಗಳ ಹಿಂದೆ ವಿವಾಹವಾದ ಗರ್ಭಿಣಿ.
ಇತ್ತೀಚಿನ ಮಾಹಿತಿಯ ಪ್ರಕಾರ, 26 ಪ್ರವಾಸಿಗರನ್ನು ಬಲಿತೆಗೆದುಕೊಂಡ ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಭಾರತವು ವೀಸಾಗಳನ್ನು ರದ್ದುಗೊಳಿಸಿದ ನಂತರ 700 ಕ್ಕೂ ಅಧಿಕ ಪಾಕಿಸ್ತಾನದ ನಾಗರೀಕರನ್ನು ಅಟ್ಟಾರಿ ಗಡಿಯಿಂದ ವಾಪಸ್ ಕಳುಹಿಸಲಾಗಿದೆ. ಪಾಕಿಸ್ತಾನದ ಪ್ರಜೆಗಳು ಹಿಂತಿರುಗುವುದನ್ನು ಖಚಿತಪಡಿಸಿಕೊಳ್ಳುವಂತೆ ಗೃಹ ಸಚಿವಾಲಯವು ಎಲ್ಲಾ ರಾಜ್ಯಗಳಿಗೆ ಈಗಾಗಲೇ ನಿರ್ದೇಶನ ನೀಡಿದೆ.
ಅಟ್ಟಾರಿ ಗಡಿಯಲ್ಲಿ, ಹಲವಾರು ಪಾಕಿಸ್ತಾನದ ಪ್ರಜೆಗಳು India today ಜೊತೆ ತಮ್ಮ ಕಳವಳಗಳನ್ನು ಹಂಚಿಕೊಂಡರು. ಸರ್ಕಾರವು ತನ್ನ ನಿರ್ಧಾರವನ್ನು ಮರುಪರಿಶೀಲಿಸುವಂತೆ ಅವರೆಲ್ಲ ಮನವಿ ಮಾಡುತ್ತಿದ್ದ ಹೃದಯವಿದ್ರಾವಕ ದೃಶ್ಯಗಳು ಅಲ್ಲಿ ಕಂಡವು.
ಗಡಿ ದಾಟಲು ಕಾಯುತ್ತಿದ್ದವರ ಪೈಕಿ 10 ವರ್ಷಗಳ ಹಿಂದೆ ಮದುವೆಯಾಗಿ, ತನ್ನ ಭಾರತೀಯ ಪತಿಯೊಂದಿಗೆ ದಿಲ್ಲಿಯಲ್ಲಿ ವಾಸಿಸುತ್ತಿದ್ದ ಕರಾಚಿ ನಿವಾಸಿ ಇರಾಮ್ ಕೂಡ ಇದ್ದರು. ಇರಾಮ್ ದಂಪತಿಗೆ ಎಂಟು ವರ್ಷದ ಮಗನಿದ್ದಾನೆ. ಇದ್ದಕ್ಕಿದ್ದಂತೆ ಪೊಲೀಸರು ಅವರ ಮನೆ ಬಾಗಿಲಿಗೆ ಬಂದು ಅವರನ್ನು ದೇಶ ತೊರೆಯುವಂತೆ ಹೇಳಿದಾಗ ಇರಾಮ್ ಗೆ ದಿಕ್ಕೇ ತೋಚಿದಂತಾಯಿತು.
"ನಮ್ಮ ಮನಸ್ಸು ಒಡೆದು ಹೋಯಿತು. ಗಡಿಪಾರು ಮಾಡುವ ಕ್ರಮವು ಮಾನವ ಹಕ್ಕುಗಳಿಗೆ ವಿರುದ್ಧವಾಗಿದೆ. ನಮ್ಮನ್ನು ಭಾರತದಿಂದ ಬಲವಂತವಾಗಿ ಹೊರಹಾಕಲಾಗುತ್ತಿದೆ. ನನ್ನ ಪತಿ ಮತ್ತು ನನ್ನ ಮಗ ಇಲ್ಲದೆ ನಾನು ಪಾಕಿಸ್ತಾನದಲ್ಲಿ ಹೇಗೆ ವಾಸಿಸುವುದು ಎಂದು ಊಹಿಸಲೂ ಸಾಧ್ಯವಿಲ್ಲ" ಎಂದು ಇರಾಮ್ ಅವರು ತಮ್ಮ ಕಳವಳ ಹಂಚಿಕೊಂಡರು.
ಸಾಂಕ್ರಾಮಿಕ ಮಾರಿ ಕೋವಿಡ್ -19ರ ಸಮಯದಲ್ಲಿ ತನ್ನ ದೀರ್ಘಾವಧಿಯ ವೀಸಾ (ಎಲ್‌ಟಿವಿ) ಅರ್ಜಿಯನ್ನು ರದ್ದುಗೊಳಿಸಲಾಯಿತು. ಪಾಸ್‌ಪೋರ್ಟ್ ಅರ್ಜಿಯನ್ನು ಎರಡು ಬಾರಿ ತಿರಸ್ಕರಿಸಲಾಯಿತು. ಭಾರತೀಯ ಪೌರತ್ವ ಪಡೆಯುವುದು ಸುಲಭವಲ್ಲ. ಸರ್ಕಾರ ಈ ಕುರಿತ ತನ್ನ ನಿರ್ಧಾರವನ್ನು ಪುನರ್ವಿಮರ್ಶಿಸಬೇಕು", ಎಂದು ಎಂದು ಇರಾಂ ವಿಷಾದಿಸಿದರು.
ಪಹಲ್ಗಾಮ್ ದಾಳಿಯನ್ನು ಖಂಡಿಸಿದ ಇರಾಮ್, ದಾಳಿಕೋರರನ್ನು ಶಿಕ್ಷಿಸಬೇಕೇ ಹೊರತು ಸಾಮಾನ್ಯ ಜನರನ್ನಲ್ಲ ಎಂದು ಹೇಳಿದರು.
"ಪಹಲ್ಗಾಮ್‌ನಲ್ಲಿ ಬಲಿಯಾದವರ ಬಗ್ಗೆ ನನಗೆ ತುಂಬಾ ವಿಷಾದವಿದೆ. ಆದರೆ ಅನೇಕ ಕುಟುಂಬಗಳನ್ನೂ ಈ ರೀತಿ ದಿಕ್ಕಿಲ್ಲದಂತೆ ಮಾಡಲಾಗುತ್ತದೆ. ಇದರಿಂದ ಮಹಿಳೆಯರು ಮತ್ತು ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ನೀವು ದಾಳಿಕೋರರನ್ನು ಶಿಕ್ಷಿಸಬೇಕು, ನಮ್ಮನ್ನಲ್ಲ", ಎಂದು ಅವರು ಹೇಳಿದರು.
ಇರಾಮ್ ಅವರ ಪತಿ ಶಹಬಾಝ್ ಸರ್ಕಾರಕ್ಕೆ ತಮ್ಮ ನೋವು ಅರ್ಥಮಾಡಿಕೊಳ್ಳುವಂತೆ ಮನವಿ ಮಾಡಿದರು. "ತಾಯಿ ಇಲ್ಲದೆ ಮಗು ಹೇಗೆ ಇರಲು ಸಾಧ್ಯ? ನಾನು ಕೆಲಸಕ್ಕೆ ಹೋಗಬೇಕೇ ಅಥವಾ ಮಗುವನ್ನು ನೋಡಿಕೊಳ್ಳಬೇಕೇ? ಆ ಮಗು ಏನು ತಪ್ಪು ಮಾಡಿದೆ. ಯಾವ ಕಾರಣಕ್ಕೆ ಅದು ತಾಯಿಯಿಂದ ಬೇರ್ಪಡಬೇಕು?", ಎಂದು ಅವರು ಪ್ರಶ್ನಿಸಿದರು.
►'ಭಾರತದ ನಡೆ ಸರಿಯಿಲ್ಲ':
ಇನ್ನೊಬ್ಬ ಮಹಿಳೆ ಸಮ್ರೀನ್ ತನ್ನ ಕಷ್ಟವನ್ನು ವಿವರಿಸುತ್ತ ಕಣ್ಣೀರಾದರು. ಕಳೆದ ವರ್ಷ ಅಕ್ಟೋಬರ್‌ನಲ್ಲಿ ವಿವಾಹದ ಅವರೀಗ ಗರ್ಭಿಣಿ. ಕರಾಚಿಯವರಾದ ಸಮ್ರೀನ್, ಎಲ್ಲಾ ಪಾಕಿಸ್ತಾನದ ಪ್ರಜೆಗಳನ್ನು ವಾಪಸ್ ಕಳುಹಿಸುವ ಭಾರತದ ನಡೆ ಸರಿಯಲ್ಲ ಎಂದರು.
"ನನ್ನ ಗಂಡನಿಂದ ಬೇರ್ಪಟ್ಟು ಜೀವಿಸುವುದು ನನಗೆ ತುಂಬಾ ಕಷ್ಟ. ಈ ರೀತಿ ನಡೆಯಬಾರದಿತ್ತು. ದಾಳಿಯಲ್ಲಿ ಪಾಕಿಸ್ತಾನದ ಕೈವಾಡವಿದೆ ಎಂದು ಭಾವಿಸಿದರೆ, ಸರ್ಕಾರವು ಕಾಶ್ಮೀರದಲ್ಲಿ ಪಾಕಿಸ್ತಾನದ ಯಾರಿಗೂ ಅವಕಾಶ ನೀಡಬಾರದು. ಇತರ ರಾಜ್ಯಗಳೂ ಅದನ್ನು ಪಾಲಿಸಬೇಕು," ಎಂದು ಸಮ್ರೀನ್ ಗದ್ಗದಿತರಾದರು.
ಭಾರತೀಯರಾದ ಅವರ ಪತಿ ರಿಝ್ವಾನ್, ತಾವು ಹೆಂಡತಿಯಿಂದ ಬೇರ್ಪಟ್ಟಿದ್ದಕ್ಕೆ ಭಯೋತ್ಪಾದಕರು ಕಾರಣ ಎಂದರು. "ಭಯೋತ್ಪಾದಕರಿಗೆ ಸಾಧ್ಯವಾದಷ್ಟು ಬೇಗ ಕಠಿಣ ಶಿಕ್ಷೆಯಾಗಬೇಕೆಂದು ನಾನು ಬಯಸುತ್ತೇನೆ. ಅವರನ್ನು ಗಲ್ಲಿಗೇರಿಸಬಾರದು, ಬದಲಿಗೆ ಗುಂಡಿಕ್ಕಿ ಕೊಲ್ಲಬೇಕು. ಅವರಿಗೆ ಯಾವುದೇ ಧರ್ಮವಿಲ್ಲ", ಎಂದು ರಿಝ್ವಾನ್ ಆಕ್ರೋಶ ವ್ಯಕ್ತಪಡಿಸಿದರು.
ಭಾರತ ಪಾಕಿಸ್ತಾನದ ನಡುವಿನ ಉದ್ವಿಗ್ನತೆ ಪಹಲ್ಗಾಮ್ ದಾಳಿಯ ಬಳಿಕ ಹೆಚ್ಚಿದೆ. ಆ ಬಳಿಕ ಭಾರತ ಪಾಕಿಸ್ತಾನದ ಪ್ರಜೆಗಳು ದೇಶ ಬಿಟ್ಟು ತೆರೆಳಬೇಕು ಎಂದು ಆದೇಶ ಹೊರಡಿಸಿದೆ. ಅದರಂತೆ ನಿಯಮಿತ ವೀಸಾದಲ್ಲಿರುವವರು ಎಪ್ರಿಲ್ 27 ರೊಳಗೆ ದೇಶ ತೊರೆಯುವಂತೆ ತಿಳಿಸಲಾಗಿದೆ. ವೈದ್ಯಕೀಯ ವೀಸಾದಲ್ಲಿರುವವರು ಪಾಕಿಸ್ತಾನಕ್ಕೆ ಮರಳಲು ಏಪ್ರಿಲ್ 30ರ ವರೆಗೆ ಸಮಯವಿದೆ. ವಲಸೆ ಮತ್ತು ವಿದೇಶಿಯರ ಕಾಯ್ದೆ 2025 ರ ಪ್ರಕಾರ, ದೇಶ ತೊರೆಯಲು ನಿರಾಕರಿಸಿದವರಿಗೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಅಥವಾ ಗರಿಷ್ಠ 3 ಲಕ್ಷ ರೂ. ದಂಡ ಅಥವಾ ಎರಡನ್ನೂ ವಿಧಿಸುವ ಅವಕಾಶವಿದೆ.