ಸೇನಾ ಮುಖ್ಯಸ್ಥರ ಕಚೇರಿಯಲ್ಲಿದ್ದ 1971ರ ಶರಣಾಗತಿ ಚಿತ್ರದ ಬದಲು ಈಗ ಮಹಾಭಾರತ ಪ್ರೇರಿತ ಕಲಾಕೃತಿ ಅಳವಡಿಕೆ

Update: 2024-12-16 12:49 GMT

PC: scroll.in \ (X / adgpi, kayjay)

ಹೊಸದಿಲ್ಲಿ: ಭಾರತೀಯ ಸೇನಾ ಮುಖ್ಯಸ್ಥರ ಕಚೇರಿಯಲ್ಲಿದ್ದ 1971ರ ಯುದ್ಧದಲ್ಲಿ ಪಾಕಿಸ್ತಾನಿ ಸೇನೆಯು ಶರಣಾಗತಿ ಪತ್ರಕ್ಕೆ ಸಹಿ ಹಾಕುತ್ತಿರುವ ಮಹತ್ವದ ಚಿತ್ರವನ್ನು ತೆಗೆದು ಅದರ ಬದಲಿಗೆ ಟ್ಯಾಂಕ್‌ಗಳು, ಹೆಲಿಕಾಪ್ಟರ್‌ಗಳು, ಜಲಾಂತರ್ಗಾಮಿ ನೌಕೆಗಳು ಮತ್ತು ಯೋಧರೊಂದಿಗೆ ಮಹಾಭಾರತದ ಚಿತ್ರಣ ಮತ್ತು ಪ್ರಾಚೀನ ದಾರ್ಶನಿಕ ಚಾಣಕ್ಯನ ಚಿತ್ರಣವನ್ನೊಳಗೊಂಡ ವರ್ಣಚಿತ್ರವನ್ನು ಅಳವಡಿಸಲಾಗಿದೆ.

ಸೇನಾ ಮುಖ್ಯಸ್ಥರ ಕಚೇರಿಯಲ್ಲಿನ ಚಿತ್ರವನ್ನು ಬದಲಿಸುವ ನಿರ್ಧಾರವನ್ನು ನಿವೃತ್ತ ಯೋಧರು ಸೇರಿದಂತೆ ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಪ್ರಶ್ನಿಸಿದ್ದಾರೆ.

ಸೇನಾ ಮುಖ್ಯಸ್ಥರ ಕಚೇರಿಯಲ್ಲಿದ್ದ 1971ರ ಯುದ್ಧದ ಅಂತ್ಯದಲ್ಲಿ ಪಾಕಿಸ್ತಾನದ ಶರಣಾಗತಿಯನ್ನು ತೋರಿಸುವ ಚಿತ್ರವನ್ನು ದಿಲ್ಲಿಯ ಮಾಣೆಕ್ ಶಾ ಸೆಂಟರ್‌ನಲ್ಲಿ ಇರಿಸಲಾಗಿದೆ ಎಂದು ಸೇನೆಯು ಸೋಮವಾರ ತಿಳಿಸಿದೆ. ಶಾ 1971ರ ಯುದ್ಧದ ಸಂದರ್ಭದಲ್ಲಿ ಭಾರತೀಯ ಸೇನೆಯ ಮುಖ್ಯಸ್ಥರಾಗಿದ್ದರು.

1971,ಡಿ.16ರಂದು ಪಾಕಿಸ್ತಾನದ ವಿರುದ್ಧ ಭಾರತದ ಗೆಲುವಿನ ಸ್ಮರಣಾರ್ಥ ಆಚರಿಸಲಾಗುವ ವಿಜಯ ದಿವಸ್‌ನ ಮುನ್ನಾದಿನ ಈ ಬೆಳವಣಿಗೆ ನಡೆದಿದೆ.

1971ರ ಯುದ್ಧದ ಛಾಯಾಚಿತ್ರವು ಪಾಕಿಸ್ತಾನದ ಲೆ.ಜ.ಅಮೀರ್ ಅಬ್ದುಲ್ಲಾ ಖಾನ್ ನಿಯಾಜಿ ಅವರು ಈಸ್ಟರ್ನ್ ಥಿಯೇಟರ್‌ನಲ್ಲಿಯ ಭಾರತೀಯ ಮತ್ತು ಬಾಂಗ್ಲಾದೇಶಿ ಪಡೆಗಳ ಕಮಾಂಡರ್ ಲೆ.ಜ.ಜಗಜಿತ್ ಸಿಂಗ್ ಅರೋರಾ ಅವರ ಮುಂದೆ ಶರಣಾಗತಿ ಪತ್ರಕ್ಕೆ ಸಹಿ ಹಾಕುತ್ತಿರುವುದನ್ನು ತೋರಿಸುತ್ತಿದೆ.

ಈಗ ಇದರ ಬದಲಾಗಿ ಅಳವಡಿಸಲಾಗಿರುವ ವರ್ಣ ಕಲಾಕೃತಿಯು ಮಹಾಭಾರತದ ಬೋಧನೆಗಳಿಂದ ಪ್ರೇರಿತವಾಗಿದೆ ಎಂದು ಅನಾಮಧೇಯ ಮಿಲಿಟರಿ ಮೂಲಗಳನ್ನು ಉಲ್ಲೇಖಿಸಿ ಸುದ್ದಿಸಂಸ್ಥೆಯು ವರದಿ ಮಾಡಿದೆ. ಲೆ.ಕ.ಥಾಮಸ್ ಜಾಕೋಬ್ ಅವರು ರಚಿಸಿರುವ ಈ ವರ್ಣಚಿತ್ರವು ಸೇನೆಯನ್ನು ಧರ್ಮ ಅಥವಾ ಸದಾಚಾರದ ರಕ್ಷಕನನ್ನಾಗಿ ಬಿಂಬಿಸಿದೆ ಎಂದು ರಕ್ಷಣಾ ಸಚಿವಾಲಯದ ಹಿರಿಯ ಅಧಿಕಾರಿಯೋರ್ವರನ್ನು The Telegraph ಸುದ್ದಿಸಂಸ್ಥೆಯು ಉಲ್ಲೇಖಿಸಿದೆ.

‘ಸಾವಿರ ವರ್ಷಗಳಲ್ಲಿಯ ಭಾರತದ ಮೊದಲ ಪ್ರಮುಖ ಮಿಲಿಟರಿ ವಿಜಯವನ್ನು ಸಂಕೇತಿಸುವ ಚಿತ್ರವನ್ನು ಪುರಾಣ,ಧರ್ಮ ಮತ್ತು ಊಳಿಗಮಾನ್ಯ‌ ಪದ್ಧತಿಯ ಭೂತಕಾಲವು ಭವಿಷ್ಯದ ವಿಜಯಗಳನ್ನು ಪ್ರೇರೇಪಿಸುತ್ತದೆ ಎಂದು ನಂಬಿರುವ ಶ್ರೇಣಿ ವ್ಯವಸ್ಥೆಯು ತೆಗೆದುಹಾಕಿದೆ’ ಎಂದು ಲೆ.ಜ.(ನಿವೃತ್ತ) ಎಚ್.ಎಸ್.ಪನಾಗ್ ಅವರು ಎಕ್ಸ್ ಪೋಸ್ಟ್‌ನಲ್ಲಿ ಹೇಳಿದ್ದಾರೆ.

ಸೇನಾ ಮುಖ್ಯಸ್ಥರ ಕಚೇರಿಯಲ್ಲಿದ್ದ ಚಿತ್ರವನ್ನು ಬದಲಿಸುವ ನಿರ್ಧಾರದ ಹಿಂದಿನ ಉದ್ದೇಶವನ್ನು ಪ್ರಶ್ನಿಸಿರುವ ಮಾಜಿ ಏರ್ ವೈಸ್-ಮಾರ್ಷಲ್ ಮನಮೋಹನ್ ಬಹಾದುರ್ ಅವರು,‘ಇತರ ದೇಶಗಳ ಗಣ್ಯರು ಮತ್ತು ಮಿಲಿಟರಿ ಮುಖ್ಯಸ್ಥರು ಇಲ್ಲಿ ಸೇನಾ ಮುಖ್ಯಸ್ಥರನ್ನು ಭೇಟಿಯಾಗುತ್ತಾರೆ ಹಾಗೂ ಭಾರತದ ಮತ್ತು ಭಾರತೀಯ ಸೇನೆಯ ಇತಿಹಾಸದಲ್ಲಿಯ ಮಹಾನ್ ಘಟನೆಯ ಸಂಕೇತವನ್ನು ನೋಡುತ್ತಾರೆ. ಈಗ ಇದೆಂತಹ ಅಸಂಬದ್ಧ ಪ್ರಯತ್ನ?’ ಎಂದು ಪ್ರಶ್ನಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News