ನಿಮ್ಮ ಪಕ್ಷದಲ್ಲಿ 261 ರೌಡಿಗಳು ಇದ್ದಾರೆ : ಮೋದಿ ಹೇಳಿಕೆಗೆ ಸ್ಟಾಲಿನ್ ಪ್ರತಿಕ್ರಿಯೆ
ಚೆನ್ನೈ: ತಮಿಳುನಾಡಿನ ಕಾನೂನು ಸುವ್ಯವಸ್ಥೆ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಡಿಎಂಕೆ ಅಧ್ಯಕ್ಷ ಹಾಗೂ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್, ‘‘ನಿಮ್ಮ ಪಕ್ಷದ 261 ಮಂದಿ ನಾಯಕರು ಕ್ರಿಮಿನಲ್ ದಾಖಲೆ ಹೊಂದಿದ್ದಾರೆ’’ ಎಂದಿದ್ದಾರೆ.
ಸೇಲಂನ ಡಿಎಂಕೆ ಅಭ್ಯರ್ಥಿ ಟಿ.ಎಂ. ಸೆಲ್ವಗಣಪತಿ ಹಾಗೂ ಕಲ್ಲಕುರ್ಚಿ ಡಿಎಂಕೆ ಅಭ್ಯರ್ಥಿ ಡಿ. ಮಲೈಯರಸನ್ ಅವರ ಪರವಾಗಿ ಸೇಲಂನಲ್ಲಿ ನಡೆದ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದ ಸಂದರ್ಭ ಅವರು ಈ ಪ್ರತಿಕ್ರಿಯೆ ನೀಡಿದರು.
‘‘ಎಲ್ಲಾ ರೌಡಿಗಳು ನಿಮ್ಮ (ಪ್ರಧಾನಿ ಮೋದಿ) ಪಕ್ಷದಲ್ಲಿರುವಾಗ, ಕಾನೂನು ಹಾಗೂ ಸುವ್ಯವಸ್ಥೆ ಬಗ್ಗೆ ಮಾತನಾಡಲು ನಿಮಗೆ ಯಾವ ಹಕ್ಕಿದೆ?’’ ಎಂದು ಸ್ಟಾಲಿನ್ ಪ್ರಶ್ನಿಸಿದರು.
ಬಿಜೆಪಿಯಲ್ಲಿರುವ ರೌಡಿ ಶೀಟರ್ಗಳ 32 ಪುಟಗಳ ಪಟ್ಟಿಯನ್ನು ಪ್ರದರ್ಶಿಸಿದ ಸ್ಟಾಲಿನ್ ತಮಿಳುನಾಡಿನಲ್ಲಿ ಕಾನೂನು ಹಾಗೂ ಸುವ್ಯವಸ್ಥೆ ಹದಗೆಟ್ಟಿದೆ ಎಂಬ ನಿಮ್ಮ ಹೇಳಿಕೆಗೆ ಸರಿಯಾದ ಸಾಕ್ಷ್ಯ ನೀಡಿ. ಬಿಜೆಪಿ ನಾಯಕರ ವಿರುದ್ಧ ಒಟ್ಟು 1,977 ಪ್ರಕರಣಗಳಿವೆ ಎಂದರು.