ಆಸ್ಟ್ರೇಲಿಯಾ ಜಲಪಾತದಲ್ಲಿ ಇಬ್ಬರು ಆಂಧ್ರ ವಿದ್ಯಾರ್ಥಿಗಳು ನೀರುಪಾಲು
ಹೈದರಾಬಾದ್: ಆಸ್ಟ್ರೇಲಿಯಾದಲ್ಲಿ ಉನ್ನತ ವ್ಯಾಸಂಗಕ್ಕೆ ತೆರಳಿದ್ದ ಹೈದರಾಬಾದ್ ನ ಇಬ್ಬರು ವಿದ್ಯಾಥಿಗಳು ಕ್ವೀನ್ಸ್ ಲ್ಯಾಂಡ್ ನ ಮಿಲ್ಲಾ ಮಿಲ್ಲಾ ಜಲಪಾತದಲ್ಲಿ ಆಕಸ್ಮಿಕವಾಗಿ ಮುಳುಗಿ ಮೃತಪಟ್ಟಿದ್ದಾರೆ.
ಮೃತ ವಿದ್ಯಾರ್ಥಿಗಳನ್ನು ಮುಪ್ಪಟ್ಲಾ ಜಿಲ್ಲೆಯ ಚೈತನ್ಯ ಮುಪ್ಪರಾಜು ಮತ್ತು ಪ್ರಕಾಶಂ ಜಿಲ್ಲೆಯ ಸೂರ್ಯತೇಜ ಬೊಬ್ಬಾ ಎಂದು ಗುರುತಿಸಲಾಗಿದೆ. ಈ ವಿದ್ಯಾರ್ಥಿಗಳ ಬಗ್ಗೆ ಹೆಚ್ಚಿನ ವಿವರ ತಿಳಿದು ಬಂದಿಲ್ಲ. ಆದರೆ ಇಬ್ಬರೂ 20 ವರ್ಷ ಆಸುಪಾಸಿನವರು ಎಂದು ಹೇಳಲಾಗಿದೆ.
ಈ ಇಬ್ಬರು ವಿದ್ಯಾರ್ಥಿಗಳ ಅಂತ್ಯಸಂಸ್ಕಾರದ ವೆಚ್ಚವನ್ನು ಭರಿಸುವ ಸಲುವಾಗಿ ಮಾಡಿಕೊಂಡ ಆನ್ಲೈನ್ ಮನವಿಯ ಅನ್ವಯ ಬುಧವಾರ ಮಧ್ಯಾಹ್ನದ ವೇಳೆಗೆ ಅಗತ್ಯ ನೆರವು ದೊರಕಿದೆ ಎಂದು ತಿಳಿದುಬಂದಿದೆ.
ಕ್ವೀನ್ಸ್ ಲ್ಯಾಂಡ್ ಪೊಲೀಸರ ಪ್ರಕಾರ, ಈ ಇಬ್ಬರು ವಿದ್ಯಾರ್ಥಿಗಳಲ್ಲಿ ಒಬ್ಬ ನೀರಿನಲ್ಲಿ ಮುಳುಗುತ್ತಿದ್ದಾಗ ಆತನನ್ನು ರಕ್ಷಿಸಲು ತೆರಳಿದ ಸಂದರ್ಭದಲ್ಲಿ ಮತ್ತೊಬ್ಬ ಕೂಡಾ ನೀರುಪಾಲಾದ" ಎಂದು ಪೊಲೀಸ್ ಇನ್ಸ್ಪೆಕ್ಟರ್ ಜೇಸನ್ ಸ್ಮಿತ್ ಹೇಳಿದ್ದಾರೆ.
ಇಬ್ಬರ ಮೃತದೇಹಕ್ಕಾಗಿ ಮಂಗಳವಾರ ಪೊಲೀಸರು ಶೋಧ ಕಾರ್ಯಾಚರಣೆ ನಡೆಸಿದರು. ಹೆಲಿಕಾಪ್ಟರ್ ಸೇವೆಯನ್ನು ಕೂಡಾ ಶೋಧಕಾರ್ಯಕ್ಕೆ ಬಳಸಲಾಗಿದ್ದು, ವಿದ್ಯಾರ್ಥಿಗಳು ಪತ್ತೆಯಾದಲ್ಲಿ ಅಗತ್ಯ ನೆರವು ನೀಡುವ ಉದ್ದೇಶದಿಂದ ಆ್ಯಂಬುಲೆನ್ಸ್ ಸಿಬ್ಬಂದಿ ಕೂಡಾ ಸಜ್ಜಾಗಿದ್ದರು ಎಂದು ಅಧಿಕೃತ ಮೂಲಗಳು ಹೇಳಿವೆ.