ಉಮರ್ ಅಬ್ದುಲ್ಲಾ ಪ್ರಮಾಣವಚನಕ್ಕೆ ರಾಹುಲ್, ಅಖಿಲೇಶ್

Update: 2024-10-16 03:31 GMT

ಅಖಿಲೇಶ್ ಯಾದವ್ | ಉಮರ್‌ ಅಬ್ದುಲ್ಲಾ | ರಾಹುಲ್‌ ಗಾಂಧಿ PC: X.com

ಶ್ರೀನಗರ: ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದ ಪ್ರಥಮ ಮುಖ್ಯಮಂತ್ರಿಯಾಗಿ ನ್ಯಾಷನಲ್ ಕಾನ್ಫರೆನ್ಸ್ ಉಪಾಧ್ಯಕ್ಷ ಉಮರ್ ಅಬ್ದುಲ್ಲಾ ಬುಧವಾರ ಪ್ರಮಾಣ ವಚನ ಸ್ವೀಕರಿಸುವರು.

ಉಮರ್ ಅಬ್ದುಲ್ಲಾ ಮತ್ತು ಅವರ ಸಂಪುಟ ಸಹೋದ್ಯೋಗಿಗಳ ಪ್ರಮಾಣ ವಚನ ಸ್ವೀಕಾರ ಸಮಾರಂಭ ಶೇರ್-ಇ-ಕಾಶ್ಮೀರ ಅಂತರಾಷ್ಟ್ರೀಯ ಸಮಾವೇಶ ಕೇಂದ್ರದಲ್ಲಿ ಬೆಳಿಗ್ಗೆ 11.30ಕ್ಕೆ ನಡೆಯಲಿದೆ. ಲೆಫ್ಟಿನೆಂಟ್ ಗವರ್ನರ್ ಮನೋಜ್ ಮಿಶ್ರಾ ಪ್ರಮಾಣ ವಚನ ಬೋಧಿಸುವರು.

ಈ ಮೊದಲು ಜಮ್ಮು-ಕಾಶ್ಮೀರ ರಾಜ್ಯವಾಗಿದ್ದ ವೇಳೆ 2009 ಮತ್ತು 2014ರಲ್ಲಿ ನ್ಯಾಷನಲ್ ಕಾನ್ಫರೆನ್ಸ್ ಮತ್ತು ಕಾಂಗ್ರೆಸ್ ಮಿತ್ರಕೂಟ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿ ಉಮರ್ ಕಾರ್ಯ ನಿರ್ವಹಿಸಿದ್ದರು.

ಜಮ್ಮು ಮತ್ತು ಕಾಶ್ಮೀರದಲ್ಲಿ ಸರ್ಕಾರ ರಚಿಸಲು ಉಮರ್ ಅಬ್ದುಲ್ಲಾ ಅಕ್ಟೋಬರ್ 11ರಂದು ಹಕ್ಕು ಮಂಡಿಸಿದ್ದರು. 42 ಮಂದಿ ನ್ಯಾಷನಲ್ ಕಾನ್ಫರೆನ್ಸ್ ಶಾಸಕರು, ನಾಲ್ವರು ಪಕ್ಷೇತರರು, ಕಾಂಗ್ರೆಸ್ ಪಕ್ಷದ ಆರು ಮಂದಿ ಹಾಗೂ ಸಿಪಿಐ(ಎಂ)ನ ಒಬ್ಬ ಶಾಸಕರ ಬೆಂಬಲ ತಮಗಿದೆ ಎಂದು ಅಬ್ದುಲ್ಲಾ ಹೇಳಿದ್ದರು.

ಅ ಬಳಿಕ ರಾಷ್ಟ್ರಪತಿ ದ್ರೌಪದಿ ಮುರ್ಮು, ಈ ಕೇಂದ್ರಾಡಳಿತ ಪ್ರದೇಶದಲ್ಲಿ ರಾಷ್ಟ್ರಪತಿ ಆಡಳಿತವನ್ನು ರದ್ದುಪಡಿಸುವ ಆದೇಶವನ್ನು ಹೊರಡಿಸಿದ್ದರು. ಈ ಹಿನ್ನೆಲೆಯಲ್ಲಿ ಲೆಫ್ಟಿನೆಂಟ್ ಗವರ್ನರ್, ಉಮರ್ ವರಿಗೆ ಸರ್ಕಾರ ರಚಿಸುವಂತೆ ಆಹ್ವಾನ ನೀಡಿದ್ದರು.

ಎಂಟು ಮಂದಿ ಸಂಪುಟ ಸಹೋದ್ಯೋಗಿಗಳು ಕೂಡಾ ಇಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಸಮಾಜವಾದಿ ಪಕ್ಷದ ಮುಖಂಡ ಅಖಿಲೇಶ್ ಯಾದವ್, ಎನ್ಸಿಪಿ (ಎಸ್ಪಿ) ನಾಯಕಿ ಸುಪ್ರಿಯಾ ಸುಳೆ, ಡಿಎಂಪಿ ಸಂಸದೆ ಕಣಿಮೋಳಿ ಕರುಣಾನಿಧಿ, ಸಿಪಿಐನ ಡಿ.ರಾಜಾ ಮತ್ತಿತರ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸುವರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News