ಉತ್ತರ ಪ್ರದೇಶ | ಪ್ರೀತಿಸಿ ಮದುವೆಯಾದ ಮರ್ಚೆಂಟ್ ನೇವಿ ಅಧಿಕಾರಿಯನ್ನೇ ಪ್ರೇಮಿಯ ಜೊತೆಗೂಡಿ ಹತ್ಯೆ ಮಾಡಿದ ಪತ್ನಿ

ಕೊಲೆಯಾದ ಸೌರಭ್ ರಜಪೂತ್, ಆರೋಪಿಗಳಾದ ಮುಸ್ಕಾನ್, ಸಾಹಿಲ್ | Photo : NDTV
ಹೊಸದಿಲ್ಲಿ: ಉತ್ತರ ಪ್ರದೇಶದ ಮೀರತ್ ನ ಮರ್ಚೆಂಟ್ ನೇವಿ ಅಧಿಕಾರಿಯೊಬ್ಬರನ್ನು ಅವರ ಪತ್ನಿಯೇ ಪ್ರಿಯಕರನ ಜೊತೆ ಸೇರಿ ಕೊಲೆ ಮಾಡಿ, ದೇಹವನ್ನು 15 ತುಂಡುಗಳನ್ನು ಮಾಡಿ ಡ್ರಮ್ ನಲ್ಲಿ ಹಾಕಿ ಸಿಮೆಂಟ್ ನಿಂದ ಮುಚ್ಚಿರುವ ಭಯಾನಕ ಘಟನೆ ನಡೆದಿದೆ.
ಕೊಲೆಯಾದ ವ್ಯಕ್ತಿಯನ್ನು ಸೌರಭ್ ರಜಪೂತ್ ಎಂದು ಗುರುತಿಸಲಾಗಿದೆ. ಅವರ ಪತ್ನಿ ಮುಸ್ಕಾನ್ ರಸ್ತೋಗಿ ಮತ್ತು ಆಕೆಯ ಪ್ರೇಮಿ ಸಾಹಿಲ್ ಶುಕ್ಲಾ ಕೊಲೆ ಮಾಡಿರುವ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ.
ಮುಸ್ಕಾನ್ ರಸ್ತೋಗಿ ಮತ್ತು ಆಕೆಯ ಪ್ರೇಮಿ ಸಾಹಿಲ್ ಶುಕ್ಲಾ ನಡುವೆ ವಿವಾಹೇತರ ಸಂಬಂಧವಿತ್ತು ಎನ್ನಲಾಗಿದೆ. ಹಿಂದುಸ್ತಾನ್ ಟೈಮ್ಸ್ ವರದಿ ಪ್ರಕಾರ ಮುಸ್ಕಾನ್ ರಸ್ತೋಗಿ ಗಾಂಜಾ ಸೇದುತ್ತಿದ್ದಳು. ಆಕೆಗೆ ಸಾಹಿಲ್ ಶುಕ್ಲಾ ಗಾಂಜಾ ಪೂರೈಸುತ್ತಿದ್ದ. ಗಾಂಜಾ ಸೇವನೆಯಿಂದ ಆಕೆ ನಶೆಯಲ್ಲಿರುತ್ತಿದ್ದಳು ಎನ್ನಲಾಗಿದೆ.
ಸೌರಭ್ ರಜಪೂತ್ ಮತ್ತು ಮುಸ್ಕಾನ್ ರಸ್ತೋಗಿ 2016 ರಲ್ಲಿ ಮದುವೆಯಾದರು. ಇದು ಪ್ರೇಮ ವಿವಾಹವಾಗಿತ್ತು. ಪತ್ನಿಯೊಂದಿಗೆ ಹೆಚ್ಚು ಸಮಯ ಕಳೆಯಲು ಉತ್ಸುಕನಾಗಿದ್ದ ಸೌರಭ್ ತನ್ನ ಮರ್ಚೆಂಟ್ ನೇವಿ ಕೆಲಸವನ್ನು ತೊರೆದರು. ಪ್ರೇಮ ವಿವಾಹ ಮತ್ತು ಅದರೊಂದಿಗೆ ಕೆಲಸ ಬಿಡುವ ಅವರ ಹಠಾತ್ ನಿರ್ಧಾರವು ಅವರ ಕುಟುಂಬಕ್ಕೆ ಇಷ್ಟವಾಗಲಿಲ್ಲ. ಇದು ಮನೆಯಲ್ಲಿ ಘರ್ಷಣೆಗೆ ಕಾರಣವಾಯಿತು. ಕೊನೆಗೆ ಸೌರಭ್ ಮನೆಯಿಂದ ಹೊರ ಹೋಗಲು ನಿರ್ಧರಿಸಿದರು. ಸೌರಭ್ ಪತ್ನಿ ಮುಸ್ಕಾನ್ ರಸ್ತೋಗಿ ಜೊತೆ ಶೀಘ್ರದಲ್ಲೇ ಬಾಡಿಗೆ ಮನೆಗೆ ತೆರಳಿದರು. 2019 ರಲ್ಲಿ, ಮುಸ್ಕಾನ್ ರಸ್ತೋಗಿ ಮತ್ತು ಸೌರಭ್ ಗೆ ಒಂದು ಹೆಣ್ಣು ಮಗು ಜನಿಸಿತು. ಆದರೆ ಆ ಸಂತೋಷ ಅಲ್ಪಕಾಲಿಕವಾಗಿತ್ತು.
ಮುಸ್ಕಾನ್ ರಸ್ತೋಗಿ ತನ್ನ ಸ್ನೇಹಿತ ಸಾಹಿಲ್ ಶುಕ್ಲಾ ಜೊತೆ ಸಂಬಂಧ ಹೊಂದಿದ್ದಾಳೆಂದು ಸೌರಭ್‌ಗೆ ತಿಳಿಯಿತು. ಇದು ದಂಪತಿಗಳ ನಡುವೆ ಜಗಳಕ್ಕೆ ಕಾರಣವಾಯಿತು. ಒಂದು ಹಂತದಲ್ಲಿ ಸೌರಭ್ ವಿಚ್ಛೇದನದ ತೆಗೆದುಕೊಳ್ಳುವ ನಿರ್ಧಾರಕ್ಕೆ ಬಂದರು. ಆದರೆ ತಂದೆಯ ಸ್ಥಾನದಲ್ಲಿ ನಿಂತ ಸೌರಭ್ ತನ್ನ ಮಗಳ ಭವಿಷ್ಯದ ಬಗ್ಗೆ ಯೋಚಿಸಿ, ಆ ನಿರ್ಧಾರದಿಂದ ಹಿಂದೆ ಸರಿದರು. ಮತ್ತೆ ಮರ್ಚೆಂಟ್ ನೇವಿ ಕೆಲಸ ಹುಡುಕುವ ನಿರ್ಧಾರಕ್ಕೆ ಬಂದ ಸೌರಭ್, 2023 ರಲ್ಲಿ ಮರ್ಚೆಂಟ್ ನೇವಿ ಉದ್ಯೋಗಕ್ಕಾಗಿ ದೇಶವನ್ನು ತೊರೆದರು.
ಸೌರಭ್ ಅವರ ಮಗಳಿಗೆ 2025ರ ಫೆಬ್ರವರಿ 28 ಕ್ಕೆ ಆರು ವರ್ಷ ತುಂಬಿತು. ಪ್ರೀತಿಯ ತಂದೆ ಸೌರಭ್ ಫೆಬ್ರವರಿ 24 ರಂದು ಪುಟ್ಟ ಮಗುವಿನೊಂದಿಗೆ ಹುಟ್ಟುಹಬ್ಬ ಆಚರಿಸಲು ಮನೆಗೆ ಮರಳಿದರು. ಈ ಹೊತ್ತಿಗೆ, ಮುಸ್ಕಾನ್ ರಸ್ತೋಗಿ ಮತ್ತು ಸಾಹಿಲ್ ಶುಕ್ಲಾ ಜೊತೆಗೂಡಿ ಸೌರಭ್ ರನ್ನು ಕೊಲೆ ಮಾಡಲು ನಿರ್ಧರಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಮೊದಲೇ ಹಾಕಿಕೊಂಡ ಯೋಜನೆಯಂತೆ ಮಾರ್ಚ್ 4 ರಂದು ಮುಸ್ಕಾನ್ ರಸ್ತೋಗಿ ಸೌರಭ್‌ನ ಆಹಾರದಲ್ಲಿ ನಿದ್ರೆ ಮಾತ್ರೆಗಳನ್ನು ಬೆರೆಸಿದಳು. ಸೌರಭ್ ನಿದ್ರೆಗೆ ಜಾರಿದಾಗ ಮುಸ್ಕಾನ್ ರಸ್ತೋಗಿ ಮತ್ತು ಆಕೆಯ ಪ್ರಿಯಕರ ಸಾಹಿಲ್ ಶುಕ್ಲಾ ಜೊತೆಗೂಡಿ, ಸೌರಭ್ ರನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದರು. ಬಳಿಕ ದೇಹವನ್ನು 15 ತುಂಡುಗಳಾಗಿ ಕತ್ತರಿಸಿ, ತುಂಡುಗಳನ್ನು ಡ್ರಮ್‌ನಲ್ಲಿ ಹಾಕಿ ಅದಕ್ಕೆ ಸಿಮೆಂಟಿ ಹಾಕಿ ಮುಚ್ಚಿದರು. ಸಕಾಲದಲ್ಲಿ ದೇಹವನ್ನು ವಿಲೇವಾರಿ ಮಾಡುವುದು ಅವರ ಯೋಜನೆಯಾಗಿತ್ತು.
ನೆರೆಹೊರೆಯವರು ಸೌರಭ್ ಬಗ್ಗೆ ಕೇಳಿದಾಗ, ಮುಸ್ಕಾನ್ ರಸ್ತೋಗಿ ಅವರು ಗಿರಿಧಾಮಗಳಿಗೆ ಪ್ರವಾಸ ಹೋಗಿದ್ದಾರೆ ಎಂದು ಹೇಳಿದ್ದಳು. ಆ ಬಳಿಕ ಜನರನ್ನು ದಾರಿ ತಪ್ಪಿಸಲು ಮತ್ತು ಯಾವುದೇ ರೀತಿಯ ಅನುಮಾನ ಬರದಂತಿರಲು ಮುಸ್ಕಾನ್ ರಸ್ತೋಗಿ ಮತ್ತು ಸಾಹಿಲ್ ಶುಕ್ಲಾ, ಸೌರಭ್ ಅವರ ಫೋನ್‌ನೊಂದಿಗೆ ಮನಾಲಿಗೆ ಹೋದರು. ಸೌರಭ್ ಅವರ ಸಾಮಾಜಿಕ ಮಾಧ್ಯಮ ಖಾತೆಗಳ ಮೂಲಕ ಫೋಟೋಗಳನ್ನು ಅಪ್‌ಲೋಡ್ ಮಾಡಲು ಪ್ರಾರಂಭಿಸಿದರು. ಆದರೆ ಸೌರಭ್ ಹಲವಾರು ದಿನಗಳವರೆಗೆ ಅವರ ಕುಟುಂಬ ಸದಸ್ಯರಿಂದ ಕರೆಗಳನ್ನು ಸ್ವೀಕರಿಸದಿದ್ದಾಗ, ಅವರು ಪೊಲೀಸರ ಬಳಿ ದೂರು ದಾಖಲಿಸಿದರು.
ಸೌರಭ್ ಅವರ ಕುಟುಂಬ ದೂರು ನೀಡಿದ ನಂತರ, ಪೊಲೀಸರು ಮುಸ್ಕಾನ್ ರಸ್ತೋಗಿ ಮತ್ತು ಸಾಹಿಲ್ ಶುಕ್ಲಾ ಅವರನ್ನು ವಶಕ್ಕೆ ಪಡೆದರು. ಅವರನ್ನು ವಿಚಾರಣೆಗೆ ಒಳಪಡಿಸಿದಾಗ, ಭೀಕರ ಕೊಲೆಯ ಮಾಹಿತಿ ಹೊರಬಂತು. ಶವ ಎಲ್ಲಿದೆ ಎಂದು ಕೇಳಿದಾಗ ಸಿಮೆಂಟ್ ಹಾಕಿ ಸೀಲ್ ಮಾಡಿರುವ ಡ್ರಮ್ ಮಾಹಿತಿ ಹೊರಬಿತ್ತು.
ಪೊಲೀಸರು ಡ್ರಮ್ ಅನ್ನು ವಶಪಡಿಸಿಕೊಂಡು ಸುತ್ತಿಗೆ ಮತ್ತು ಉಳಿ ಬಳಸಿ ಗಟ್ಟಿಯಾದ ಸಿಮೆಂಟ್ ಅನ್ನು ಒಡೆಯುವ ಪ್ರಯತ್ನಗಳು ವಿಫಲವಾದವು. ಸೌರಭ್ ಅವರ ದೇಹದ ತುಂಡುಗಳನ್ನು ಹೊಂದಿರುವ ಡ್ರಮ್ ಅನ್ನು ನಂತರ ಶವಾಗಾರಕ್ಕೆ ಸಾಗಿಸಲಾಯಿತು. ಕೊಲೆಯಾದ 14 ದಿನಗಳ ನಂತರ ಅವರ ಮೃತದೇಹದ ಅವಶೇಷಗಳನ್ನು ಮರುಪಡೆಯಲು ಡ್ರಿಲ್ ಯಂತ್ರವನ್ನು ಬಳಸಲಾಯಿತು.
ಪ್ರಕರಣದ ಕುರಿತು ಮಾತನಾಡಿರುವ ಮೀರತ್ ನಗರ ಪೊಲೀಸ್ ಮುಖ್ಯಸ್ಥ ಆಯುಷ್ ವಿಕ್ರಮ್ ಸಿಂಗ್, ಸೌರಭ್ ರಜಪೂತ್ ಅವರು ಹಲವು ದಿನಗಳಿಂದ ಕಾಣದಿದ್ದಾಗ ಅವರ ಕುಟುಂಬ ದೂರು ದಾಖಲಿಸಿದೆ. "ಅನುಮಾನದ ಮೇಲೆ ನಾವು ಅವರ ಪತ್ನಿ ಮುಸ್ಕಾನ್ ರಸ್ತೋಗಿ ಮತ್ತು ಆಕೆಯ ಪ್ರಿಯಕರ ಸಾಹಿಲ್ ಶುಕ್ಲಾ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದೆವು. ಮಾರ್ಚ್ 4 ರಂದು ಅವರು ಸೌರಭ್ ಅವರನ್ನು ಚಾಕುವಿನಿಂದ ಇರಿದು ಕೊಂದಿದ್ದಾರೆ ಎಂದು ಆರೋಪಿಗಳು ಹೇಳಿದ್ದಾರೆ. ಬಳಿಕ ಶವವನ್ನು ಕತ್ತರಿಸಿ, ಡ್ರಮ್‌ನಲ್ಲಿ ಹಾಕಿ ಸಿಮೆಂಟ್‌ನಿಂದ ಮುಚ್ಚಿದ್ದಾರೆ. ಪೊಲೀಸರು ಶವವನ್ನು ವಶಪಡಿಸಿಕೊಂಡು ಶವಪರೀಕ್ಷೆಗೆ ಕಳುಹಿಸಿದ್ದಾರೆ. ನಾವು ಇಬ್ಬರನ್ನು ವಶಕ್ಕೆ ಪಡೆದಿದ್ದೇವೆ. ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು" ಎಂದು ಅವರು ಹೇಳಿದ್ದಾರೆ.