ರಾಜಕೀಯದಲ್ಲೂ ಬದಲಾವಣೆ ಬೇಕಿದೆ : ನಟ ವಿಜಯ್

Update: 2024-10-27 17:33 GMT

 Screengrab | Tamilaga Vettri Kazhagam ( youtube)

ಚೆನ್ನೈ : ತಮಿಳಿನ ಖ್ಯಾತ ನಟ ವಿಜಯ್ ನೇತೃತ್ವದ ನೂತನ ರಾಜಕೀಯ ಪಕ್ಷ ‘ತಮಿಳಗ ವೆಟ್ರಿ ಕಳಗಂ’(ಟಿವಿಕೆ)ನ ಚೊಚ್ಚಲ ರಾಜ್ಯ ಸಮಾವೇಶವು ರವಿವಾರ ವಿಲ್ಲುಪುರಂ ಜಿಲ್ಲೆಯ ವಿಕ್ರವಂಡಿಯಲ್ಲಿ ನಡೆಯಿತು. 3 ಲಕ್ಷಕ್ಕೂ ಅಧಿಕ ಜನಸ್ತೋಮವನ್ನುದ್ದೇಶಿಸಿ ಮಾತನಾಡಿದ ಅವರು ತನ್ನ ಪಕ್ಷದ ಸಿದ್ದಾಂತ ಹಾಗೂ ಆದರ್ಶಗಳನ್ನು ವಿವರಿಸಿದರು. ರಾಜಕೀಯ ರಂಗಕ್ಕೆ ತನ್ನ ಪ್ರವೇಶವನ್ನು ವಿಜಯ್ ಅವರು ಹಾವಿನೊಂದಿಗೆ ಆಟವಾಡುವ ಮಗುವಿಗೆ ಹೋಲಿಸಿದರು.

‘‘ರಾಜಕೀಯಕ್ಕೆ ನಾವು ಹಸುಗೂಸುಗಳೆಂದು ಕೆಲವರು ಹೇಳುತ್ತಾರೆ. ಆದರೆ ನಾವು ರಾಜಕೀಯವೆಂಬ ಹಾವಿನೊಂದಿಗೆ ಆತ್ಮವಿಶ್ವಾಸದೊಂದಿಗೆ ಆಡುತ್ತಿರುವ ಮಕ್ಕಳು ನಾವು. ರಾಜಕೀಯವೆಂಬ ಹಾವನ್ನು ನಾವು ನಿರ್ಭೀತಿಯಿಂದ ಆದರೆ ಅಷ್ಟೇ ಗಂಭೀರತೆ ಹಾಗೂ ಮುಗುಳ್ನಗೆಯೊಂದಿಗೆ ನಿಭಾಯಿಸಲಿದ್ದೇವೆ. ಪ್ರಸಕ್ತ ಪ್ರಚಲಿತದಲ್ಲಿರುವ ರಾಜಕಾರಣಿಗಳ ಭಾಷಣದ ಶೈಲಿಯನ್ನು ಟೀಕಿಸಿದ ಅವರು, ವಿನಾಕಾರಣ ದೂಷಿಸುವುದನ್ನು ಬಿಟ್ಟು ನೇರವಾಗಿ ವಿಷಯಕ್ಕೆ ಬರುವುದೇ ನಮ್ಮ ಪಕ್ಷದ ನಿಲುವಾಗಿದೆ ಎಂದರು.

‘‘ ಪ್ರತಿಯೊಂದು ಸಂಗತಿಯೂ ಬದಲಾಗುತ್ತಲೇ ಇರುವಾಗ ರಾಜಕಾರಣವೂ ಬದಲಾಗಬೇಕಾಗುತ್ತದೆ. ವಿಜ್ಞಾನ ಹಾಗೂ ತಂತ್ರಜ್ಞಾನ ಮಾತ್ರವೇ ಪ್ರಗತಿ ಹೊಂದಿದರೇ ಸಾಕೇ? ರಾಜಕೀಯವು ಕೂಡಾ ಬದಲಾವಣೆ ಹಾಗೂ ಸುಧಾರಣೆೆಯನ್ನು ಕಾಣುವುದು ಬೇಡವೇ?’’ ಎಂದು ಪ್ರಶ್ನಿಸಿದರು. ಇತರ ರಾಜಕಾರಣಿಗಳನ್ನು ದೂಷಿಸುತ್ತಾ ಕಾಲಹರಣ ಮಾಡಲು ತಾನು ರಾಜಕೀಯಕ್ಕೆ ಬಂದಿಲ್ಲ. ಆದರೆ ಅವರ ನಡವಳಿಕೆಗಳ ಬಗ್ಗೆ ಕುರುಡಾಗಿಯೂ ವರ್ತಿಸಲಾರೆ ಎಂದರು.

‘‘ನಾನು ಇತಿಹಾಸವನ್ನು ನೆನಪಿಸುತ್ತಾ ಅಥವಾ ಅಂಕಿಅಂಶಗಳನ್ನು ನೀಡುತ್ತಾ ಗಂಟೆಗಟ್ಟಲೆ ಮಾತನಾಡುವುದಿಲ್ಲ. ಚಿಕ್ಕದಾಗಿ ಹಾಗೂ ಚೊಕ್ಕದಾಗಿ ಮಾತನಾಡುವುದು ಇಲ್ಲಿ ಮುಖ್ಯವಾದುದು. ಸಮಸ್ಯೆಯೇನು ಮತ್ತು ಅದಕ್ಕೆ ಪರಿಹಾರವೇನು ಎಂಬುದನ್ನು ನಮಗೆ ವಿವರಿಸಲು ಸಾಧ್ಯವಾದರೆ, ಜನತೆಗೆ ಅದು ಧಾರಾಳವಾಗಿ ಸಾಕಾಗುತ್ತದೆ ಎಂದು ತಮಿಳು ಚಿತ್ರರಂಗದಲ್ಲಿ ‘ದಳಪತಿ’ ಎಂದೇ ಖ್ಯಾತರಾದ ವಿಜಯ್ ಹೇಳಿದು.

ಪೆರಿಯಾರ್ ಅವರು ನಮ್ಮ ಪಕ್ಷದ ಸೈದ್ದಾಂತಿಕ ನಾಯಕ. ಆದರೆ ಅವರ ನಾಸ್ತಿಕ ಧೋರಣೆಯನ್ನು ತಾವು ಅಪ್ಪಿಕೊಳ್ಳುವುದಿಲ್ಲ ಮತ್ತು ಒಪ್ಪಿಕೊಳ್ಳುವುದಿಲ್ಲ. ದ್ರಾವಿಡ ಚಳವಳಿಯ ಇನ್ನೋರ್ವ ನಾಯಕ ಅಣ್ಣಾ ದೊರೈ ಅವರ ‘ಒಂದೇ ಕುಲ, ಒಂದೇ ದೇವರು’ ಟಿವಿಕೆ ಪಕ್ಷದ ನಿಲುವಾಗಿದೆ. ಮಹಿಳೆಯರ ಶಿಕ್ಷಣ, ಸಮಾನತೆ ಹಾಗೂ ಸಾಮಾಜಿಕ ನ್ಯಾಯದ ಬಗ್ಗೆ ಪೆರಿಯಾರ್ ಅವರ ಸಿದ್ದಾಂತಗಳನ್ನು ತನ್ನ ಪಕ್ಷವು ಅಳವಡಿಸಿಕೊಳ್ಳಲಿದೆ. ಕೆ.ಕಾಮರಾಜ್ ಹಾಗೂ ಬಿ.ಆರ್.ಅಂಬೇಡ್ಕರ್ ಅವರ ಸಿದ್ಧಾಂತಗಳು ತನ್ನ ಪಕ್ಷದ ಮಾರ್ಗದರ್ಶಕ ಶಕ್ತಿಗಳಾಗಲಿವೆ ಎಂದವರು ಹೇಳಿದರು.

 ► ಪೆರಿಯಾರ್ ಹೆಸರು ಹೇಳಿ ಒಂದು ಕುಟುಂಬದಿಂದ ತಮಿಳುನಾಡಿನ ಶೋಷಣೆ: ಡಿಎಂಕೆ ವಿರುದ್ಧ ವಿಜಯ್ ವಾಗ್ದಾಳಿ

ವಿಜಯ್ ಭಾಷಣದ ಹೈಲೈಟ್ಸ್‌. ಡಿಎಂಕೆ ಪಕ್ಷದ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ ವಿಜಯ್ ವಿಭಜನವಾದಿ ಶಕ್ತಿಗಳನ್ನು ಗುರುತಿಸುವುದು ಸುಲಭ, ಆದರೆ ಸಿದ್ದಾಂತ ಹಾಗೂ ತತ್ವಗಳ ಮುಖವಾಡದ ಹಿಂದೆ ಅವಿತುಕೊಂಡಿರುವ ಭ್ರಷ್ಟಾಚಾರಿ ಶಕ್ತಿಗಳನ್ನು ಗುರುತಿಸುವುದು ಕಷ್ಟವೆಂದು ಹೇಳಿದರು.

ಮಾದರಿ ದ್ರಾವಿಡ ಸರಕಾರದ ಹೆಸರಿನಲ್ಲಿ , ಪೆರಿಯಾರ್ ಅವರ ಹೆಸರಿನಲ್ಲಿ ಒಂದು ಕುಟುಂಬವು ರಾಜ್ಯವನ್ನು ಶೋಷಿಸುತ್ತಿದೆ ಎಂದು ಅವರು ಹೇಳಿದರು. ಕೇಂದ್ರದಲ್ಲಿರುವ ಬಿಜೆಪಿ ಸರಕಾರವನ್ನು ಫ್ಯಾಶಿಸ್ಟ್ ಎಂದು ಟೀಕಿಸುತ್ತಿರುವ ಡಿಎಂಕೆ ಕೂಡಾ ಫ್ಯಾಶಿಸ್ಟ್‌ ವಾದಿಯಾಗಿದೆ ಎಂದು ಅವರು ಆರೋಪಿಸಿದರು.

ಟಿವಿಕೆಗೆ ಬಹುಮತವನ್ನು ನೀಡುವ ಮೂಲಕ ಪಕ್ಷವನ್ನು ತಮಿಳುನಾಡಿನ ಜನತೆ ಅಧಿಕಾರಕ್ಕೇರಿಸಲಿದ್ದಾರೆ ಎಂದು ಭರವಸೆ ವ್ಯಕ್ತಪಡಿಸುತ್ತಾ ವಿಜಯ್ ತನ್ನ ಭಾಷಣವನ್ನು ಕೊನೆಗೊಳಿಸಿದರು. ರಾಜಕೀಯ ಸನ್ನಿವೇಶ ಒದಗಿಬಂದಲ್ಲಿ ಇತರ ಪಕ್ಷಗಳ ಜೊತೆ ಹೊಂದಾಣಿಕೆಯ ಸುಳಿವನ್ನೂ ಅವರು ನೀಡಿದ್ದಾರೆ.

► ಸಮಾವೇಶಕ್ಕೆ ಹರಿದು ಬಂದ ಜನಸಾಗರ

ಭಾರೀ ಸಂಖ್ಯೆಯ ಜನ ಸೇರುವ ನಿರೀಕ್ಷೆಯಿದ್ದುದರಿಂದ ಭದ್ರತಾ ಕರ್ತವ್ಯಕ್ಕಾಗಿ ಸ್ಥಳದಲ್ಲಿ 600ಕ್ಕೂ ಅಧಿಕ ಪೊಲೀಸ್‌ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಪಕ್ಷದ ಸಮಾವೇಶ ಸ್ಥಳದ ಪ್ರವೇಶದ್ವಾರವನ್ನು ಐತಿಹಾಸಿಕ ಸೈಂಟ್ ಜಾರ್ಜ್ ಕೋಟೆಯ ಮಾದರಿಯಲ್ಲಿ ನಿರ್ಮಿಸಲಾಗಿತ್ತು. 250 ಎಕರೆ ಹೆಚ್ಚುವರಿ ಜಮೀನಿನಲ್ಲಿ ವಾಹನಗಳ ಪಾರ್ಕಿಂಗ್‌ಗೆ ವ್ಯವಸ್ಥೆ ಮಾಡಲಾಗಿತ್ತು.

ಟಿವಿಕೆ ಪಕ್ಷದ 3 ಲಕ್ಷಕ್ಕೂ ಅಧಿಕ ಬೆಂಬಲಿಗರಲ್ಲದೆ, ನೆರೆಯ ಕೇರಳ,ಕರ್ನಾಟಕ, ಆಂಧ್ರಪ್ರದೇಶಗಳಿಂದಲೂ ವಿಜಯ್ ಅಭಿಮಾನಿಗಳು ಆಗಮಿಸಿ ಕಾರ್ಯಕ್ರಮಕ್ಕೆ ಮೆರುಗು ನೀಡಿದರು.

►ವಾಹನ ಅವಘಡದಲ್ಲಿ ಟಿವಿಕೆ ಬೆಂಬಲಿಗ ಮೃತ್ಯು

ವಿಲ್ಲುಪುರಂನಲ್ಲಿ ರವಿವಾರ ನಡೆದ ಟಿವಿಕೆ ಪಕ್ಷದ ಚೊಚ್ಚಲ ಸಮಾವೇಶದಲ್ಲಿ ಪಾಲ್ಗೊಳ್ಳಲು ವಿಲ್ಲುಪುರಂ ಜಿಲ್ಲೆಯ ವಿಕ್ರವಂಡಿಗೆ ಮೋಟಾರ್ ಸೈಕಲ್‌ ನಲ್ಲಿ ತೆರಳುತ್ತಿದ್ದ ಟಿಎಂಕೆ ಪಕ್ಷದ ಬೆಂಬಲಿಗನ ಮೇಲೆ ಟ್ರಕ್ ಹರಿದು ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಆತನ ಜೊತೆಗೆ ಪ್ರಯಾಣಿಸುತ್ತಿದ್ದ ಪಕ್ಷದ ಇನ್ನೋರ್ವ ಕಾರ್ಯಕರ್ತನಿಗೆ ಗಂಭೀರ ಗಾಯಗಳಾಗಿವೆ.

ಸಮಾವೇಶಕ್ಕೆ ದ್ವಿಚಕ್ರ ವಾಹನಗಳಲ್ಲಿ ಆಗಮಿಸದಂತೆ ವಿಜಯ್ ಪಕ್ಷದ ಬೆಂಬಲಿಗರಿಗೆ ಸಲಹೆ ನೀಡಿದ್ದರು. ಆದಾಗ್ಯೂ ಸಾವಿರಾರು ಟಿವಿಕೆ ಬೆಂಬಲಿಗರು ಮೋಟಾರ್ ಸೈಕಲ್‌ ಗಳಲ್ಲಿ ವಿಕ್ರವಂಡಿಗೆ ಆಗಮಿಸಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News