ಪ್ರಿಯಾಂಕಾ ಗಾಂಧಿಯವರ ಚೊಚ್ಚಲ ಚುನಾವಣೆ | ವಯನಾಡ್ ಕ್ಷೇತ್ರ ರಚನೆಯಾದ ನಂತರ ಅತ್ಯಂತ ಕಡಿಮೆ ಮತ ಚಲಾವಣೆ
ವಯನಾಡ್ : ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರು ಸ್ಪರ್ಧಿಸಿರುವ ವಯನಾಡ್ ಲೋಕಸಭಾ ಕ್ಷೇತ್ರಕ್ಕೆ ಬುಧವಾರ ನಡೆದ ಉಪಚುನಾವಣೆಯಲ್ಲಿ 64.72 ರಷ್ಟು ಮತದಾನವಾಗಿದೆ. 2009ರಲ್ಲಿ ಲೋಕಸಭಾ ಕ್ಷೇತ್ರ ರಚನೆಯಾದ ನಂತರ, ಇದು ಕ್ಷೇತ್ರದಲ್ಲಿ ದಾಖಲಾದ ಅತ್ಯಂತ ಕಡಿಮೆ ಮತದಾನವಾಗಿದೆ.
ವಿರೋಧ ಪಕ್ಷದ ನಾಯಕ ಮತ್ತು ಪ್ರಿಯಾಂಕಾ ಅವರ ಸಹೋದರ ರಾಹುಲ್ ಗಾಂಧಿ ಅವರು ಕೇರಳದ ವಯನಾಡ್ ಅನ್ನು ತೊರೆದು ಉತ್ತರ ಪ್ರದೇಶದ ರಾಯ್ ಬರೇಲಿ ಸ್ಥಾನವನ್ನು ಉಳಿಸಿಕೊಂಡ ನಂತರ ಉಪಚುನಾವಣೆ ಘೋಷಣೆಯಾಗಿತ್ತು. ಇದು ಪ್ರಿಯಾಂಕಾ ಗಾಂಧಿ ಅವರಿಗೆ ಚೊಚ್ಚಲ ಚುನಾವಣೆಯಾಗಿತ್ತು. ಇದರೊಂದಿಗೆ ತ್ರಿಶೂರ್‌ನ ಚೇಲಕ್ಕರ ವಿಧಾನಸಭಾ ಕ್ಷೇತ್ರಕ್ಕೂ ಉಪಚುನಾವಣೆ ನಡೆದಿದ್ದು, ಶೇ.72.54ರಷ್ಟು ಮತದಾನವಾಗಿದೆ.
ಈ ವರ್ಷದ ಆರಂಭದಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ವಯನಾಡ್ 72.92 ರಷ್ಟು ಮತದಾನವನ್ನು ದಾಖಲಿಸಿತ್ತು. 2019 ರಲ್ಲಿ 80.33 ರಷ್ಟು ಮತದಾನವಾಗಿತ್ತು. ಆ ವರ್ಷ ರಾಹುಲ್ ಗಾಂಧಿ ಅವರು ಮೊದಲ ಬಾರಿಗೆ ವಯನಾಡ್ ನಿಂದ ಸ್ಪರ್ಧಿಸಿದ್ದರು.
ಈ ಬಾರಿ ರಾಹುಲ್ ಗಾಂಧಿ ಸಹೋದರಿ ಪ್ರಿಯಾಂಕಾ ಅವರು ಹಿರಿಯ ಸಿಪಿಐಯ ಸತ್ಯನ್ ಮೊಕೇರಿ ಮತ್ತು ಬಿಜೆಪಿಯ ನವ್ಯಾ ಹರಿದಾಸ್ ವಿರುದ್ಧ ಕಣಕ್ಕಿಳಿದಿದ್ದಾರೆ. ಮತದಾನದ ಫಲಿತಾಂಶದ ಬಗ್ಗೆ ಯಾವುದೇ ಚಿಂತೆಯಿಲ್ಲ ಎಂದು ಕಾಂಗ್ರೆಸ್ ಹೇಳುತ್ತಿದ್ದರೂ ಮತದಾನದ ಶೇಕಡಾವಾರು ಪ್ರಮಾಣದಲ್ಲಿ ಹೆಚ್ಚಿನ ಕುಸಿತ ಕಂಡಿದೆ.
ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆಸಿ ವೇಣುಗೋಪಾಲ್ ಮತ್ತು ದೀಪಾ ದಾಸ್ಮುನ್ಸಿ ಕ್ಷೇತ್ರದಲ್ಲಿ ಮೊಕ್ಕಾಂ ಹೂಡಿದ್ದರು. ಪ್ರಿಯಾಂಕಾ ಅವರು ನಡೆಸುತ್ತಿದ್ದ ಸಭೆಯಲ್ಲಿ ಅವರೊಂದಿಗೆ ಜೊತೆಯಾಗುತ್ತಿದ್ದರು. ವಯನಾಡ್ ಲೋಕಸಭಾ ವ್ಯಾಪ್ತಿಯಲ್ಲಿ ಬರುವ ಪಕ್ಷದ ಶಾಸಕರಿಗೆ ವಿಧಾನಸಭೆ ಕ್ಷೇತ್ರಗಳನ್ನು ಪಕ್ಷವು ವಹಿಸಿಕೊಟ್ಟಿತ್ತು.
ಅಲ್ಲದೆ, ಕೆಪಿಸಿಸಿ ಪದಾಧಿಕಾರಿಗಳು ಪಂಚಾಯಿತಿ ಮಟ್ಟದ ಪ್ರಚಾರದ ಮೇಲುಸ್ತುವಾರಿ ವಹಿಸಿದ್ದರು. ತಳಮಟ್ಟದ ಪ್ರಚಾರಕ್ಕೆ ಬಲ ನೀಡಲು ಪ್ರಿಯಾಂಕಾ ಗಾಂಧಿ ಎಲ್ಲಾ ಪಂಚಾಯತ್‌ಗಳಿಗೆ ಪ್ರವಾಸ ಮಾಡಿದ್ದರು.
ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ಕರ್ನಾಟಕದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಪ್ರಿಯಾಂಕಾ ಪ್ರಚಾರದ ನೇತೃತ್ವ ವಹಿಸಿದ್ದರು. ಅಲ್ಲದೆ, ಪ್ರಿಯಾಂಕಾ ಅವರ ತಾಯಿ ಸೋನಿಯಾ ಗಾಂಧಿ, ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ತೆಲಂಗಾಣ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಅವರೂ ಪ್ರಚಾರಕ್ಕೆ ಬಂದರು. ಮತ್ತೊಂದೆಡೆ, ಬಿಜೆಪಿಯು ಕೇರಳ ಉಸ್ತುವಾರಿ ಪ್ರಕಾಶ್ ಜಾವಡೇಕರ್ ಹೊರತುಪಡಿಸಿ ಯಾವುದೇ ರಾಷ್ಟ್ರೀಯ ನಾಯಕರನ್ನು ಬಿಜೆಪಿ ವಯನಾಡಿನಲ್ಲಿ ಪ್ರಚಾರಕ್ಕೆ ಕರೆತಂದಿಲ್ಲ.
ವಯನಾಡ್ ಭೂಕುಸಿತಕ್ಕೆ ಸಾಕ್ಷಿಯಾದ ತಿಂಗಳುಗಳ ನಂತರ ಮತದಾನ ನಡೆಯಿತು. ಭೂ ಕುಸಿತ ದುರಂತದಲ್ಲಿ 231 ಜನರು ಬಲಿಯಾದರು. 47 ಜನರು ಇನ್ನೂ ನಾಪತ್ತೆಯಾಗಿದ್ದಾರೆ. ಮುಂಡಕ್ಕೈ, ಚೂರಲ್ಮಲಾ ಮತ್ತು ಅಟ್ಟಮಾಳ ಗ್ರಾಮಗಳ ಸಂತ್ರಸ್ತರಿಗೆ ಮೆಪ್ಪಾಡಿಯಲ್ಲಿ ಮತಗಟ್ಟೆಗಳನ್ನು ಮಾಡಲಾಗಿತ್ತು.