ನಾವು ಹೆಮ್ಮೆಯ ಭಾರತೀಯರು, ನಮ್ಮನ್ನು ಚೀನೀಯರು ಎಂದಾಗ ಬೇಸರವಾಗುತ್ತದೆ : ಅರುಣಾಚಲ ಗ್ರಾಮದ ನಿವಾಸಿಗಳ ಹೇಳಿಕೆ

Update: 2024-11-28 17:40 GMT

PTI File Photo

ಆಲೊ (ಅರುಣಾಚಲ ಪ್ರದೇಶ): “ನಾವು ಭಾರತೀಯರಾಗಿದ್ದು, ಭಾರತೀಯರಾಗಿರುವುದಕ್ಕೆ ಹೆಮ್ಮೆ ಪಡುತ್ತೇವೆ. ದೇಶದ ಕೆಲ ಭಾಗಗಳಲ್ಲಿನ ಜನರು ನಮ್ಮನ್ನು ಚೀನೀಯರು ಎಂದಾಗ ಬೇಸರವಾಗುತ್ತದೆ. ಒಂದು ವೇಳೆ ಚೀನಾವೇನಾದರೂ ಭಾರತದೊಳಗೆ ಪ್ರವೇಶಿಸಿದರೆ, ಮೊದಲು ನಾವು ಅವರ ವಿರುದ್ಧ ಹೋರಾಡುತ್ತೇವೆ” ಎಂದು ಅರುಣಾಚಲ ಪ್ರದೇಶದ ಡಾರ್ಕಾ ಗ್ರಾಮದ ನಿವಾಸಿ ಮೇಡಂ ಎಟೆ ಹೇಳುತ್ತಾರೆ.

ತಮ್ಮ ಪರಂಪರೆಯ ಬಗ್ಗೆ ಹೆಮ್ಮೆಯಿಂದ ಹೇಳಿಕೊಳ್ಳುವ ಪ್ರಾಕೃತಿಕ ಸೊಬಗಿನ ಅರುಣಾಚಲ ಪ್ರದೇಶದ 62 ವರ್ಷದ ನಿವಾಸಿ ಮೇಡಂ ಎಟೆ, ತ್ರಿವರ್ಣ ಧ್ವಜದ ಬಗ್ಗೆ ತಮ್ಮ ಅಚಲ ಪ್ರೀತಿ ವ್ಯಕ್ತಪಡಿಸುತ್ತಾರೆ.

ಆದರೆ, ದೇಶದ ಇನ್ನಿತರ ಭಾಗದ ಯಾರಾದರೂ ತಿಳಿಯದೆ ಅಥವಾ ಉಡಾಫೆಯಿಂದ ತಮ್ಮನ್ನು ಚೀನಾ ಗ್ರಾಮದ ನಿವಾಸಿಗಳು ಎಂದು ಕರೆದಾಗ ಅವರು ಪ್ರತಿ ಬಾರಿಯೂ ನೋವನುಭವಿಸಿದ್ದಾರೆ.

ಮೇಡಂ ಎಟೆ, ‘ಸೂರ್ಯೋದಯದ ನೆಲ’ ಎಂದೇ ಹೆಸರಾಗಿರುವ ಅರುಣಾಚಲ ಪ್ರದೇಶದ ಪಶ್ಚಿಮ ಸಿಯಾಂಗ್ ಜಿಲ್ಲೆಯಲ್ಲಿರುವ ಆಲೊ ಪಟ್ಟಣದಿಂದ ತುಂಬಾ ದೂರವಿರುವ, ಸುಮಾರು 3,000 ಜನಸಂಖ್ಯೆಯುಳ್ಳ ಡಾರ್ಕಾ ಗ್ರಾಮದ ಮುಖ್ಯಸ್ಥರಾಗಿದ್ದಾರೆ.

ದೇಶದ ಇತರೆ ಯಾವುದೇ ಪ್ರಜೆಯಂತೆ ಮೇಡಂ ಎಟೆ ಕೂಡಾ ಪ್ರತಿಯೊಬ್ಬರಿಗೂ ಉತ್ತಮ ರಸ್ತೆಗಳು, ಆರೋಗ್ಯ ಸೇವೆಗಳು ಹಾಗೂ ಶಿಕ್ಷಣ ಬೇಕಿದೆ ಎಂದು ಹೇಳುತ್ತಾರೆ.

“ಅಭಿವೃದ್ಧಿ ಯಾರಿಗೆ ಬೇಡ? ನಾವು ಅಭಿವೃದ್ಧಿಯಾದರೆ ಮಾತ್ರ ದೇಶವೂ ಅಭಿವೃದ್ಧಿಯಾಗುತ್ತದೆ. ನಿಧಾನವಾಗಿ ಹಾಗೂ ಮುಂದುವರಿದಂತೆ ಸರಕಾರದ ಯೋಜನೆಗಳು ನಮ್ಮನ್ನು ತಲುಪುತ್ತಿವೆ” ಎಂದು ಅವರು ಹೇಳುತ್ತಾರೆ.

ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ, ಸರಕಾರದ ಕಾರ್ಯವೈಖರಿಯೂ ಬದಲಾಗಿದೆ ಎಂದೂ ಅವರು ಹೇಳುತ್ತಾರೆ. ನಾವೀಗ ಸರಕಾರದಿಂದ ಹೆಚ್ಚು ಅನುದಾನಗಳನ್ನು (ಅಭಿವೃದ್ಧಿ ಯೋಜನೆಗಳಿಗೆ) ಪಡೆಯುತ್ತಿದ್ದೇವೆ” ಎನ್ನುತ್ತಾರವರು.

ಕೇಂದ್ರ ಸರಕಾರ ಹಾಗೂ ಭಾರತೀಯ ಸೇನೆಯ ನೆರವಿನಿಂದ ನಮ್ಮ ಗ್ರಾಮದಲ್ಲಿ ಹಲವಾರು ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ ಎಂದು ಡಾರ್ಕಾ ಗ್ರಾಮದ ಸರಪಂಚ ಕೇಂಬಾ ಎಟೆ ಹೇಳುತ್ತಾರೆ.

“ನಾವು ನರೇಗಾ ಯೋಜನೆಯಿಂದ ಹಲವಾರು ಕೆಲಸಗಳಿಗೆ ಅನುದಾನ ಪಡೆಯುತ್ತಿದ್ದೇವೆ. ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯಡಿ ಜನರು ಉಚಿತ ಪಡಿತರ ಪಡೆಯುತ್ತಿದ್ದಾರೆ. ಗ್ರಾಮಗಳಲ್ಲಿ ರಸ್ತೆಗಳನ್ನು ನಿರ್ಮಿಸಲಾಗಿದೆ” ಎಂದು ಅವರು ಹೇಳುತ್ತಾರೆ.

ಸೇನೆಯು ಗ್ರಾಮಸ್ಥರೊಂದಿಗೆ ಸ್ನೇಹಪರ ಸಂಬಂಧವನ್ನು ಹೊಂದಿದೆ ಎಂದೂ ಅವರು ಹೇಳುತ್ತಾರೆ.

“ನಮ್ಮ ಕಠಿಣ ಸಂದರ್ಭಗಳಲ್ಲಿ ಅವರೆಂದಿಗೂ ನಮ್ಮ ಬೆನ್ನಿಗೆ ನಿಂತಿದ್ದಾರೆ. ಅದು ಶಾಲೆಗಳ ನವೀಕರಣವಾಗಿರಲಿ ಅಥವಾ ಸಮುದಾಯ ಭವನಗಳ ನಿರ್ಮಾಣವಾಗಿರಲಿ, ಅವರು ಹಲವಾರು ಅಭಿವೃದ್ಧಿ ಕೆಲಸಗಳಿಗೆ ಗಮನಾರ್ಹ ಕೊಡುಗೆ ನೀಡಿದ್ದಾರೆ” ಎಂದೂ ಅವರು ಹೇಳುತ್ತಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News