ಪಶ್ಚಿಮ ಬಂಗಾಳ | ಪತ್ರಕರ್ತೆಯಿಂದ ಲೈಂಗಿಕ ಕಿರುಕುಳದ ಆರೋಪ ; ಸಿಪಿಎಂನಿಂದ ಮಾಜಿ ಶಾಸಕ ತನ್ಮಯ್ ಭಟ್ಟಾಚಾರ್ಯ ಅಮಾನತು
ಕೋಲ್ಕತಾ : ಸಿಪಿಐ (ಎಂ) ಮಾಜಿ ಶಾಸಕ ತನ್ಮಯಿ ಭಟ್ಟಾಚಾರ್ಯ ಸಂದರ್ಶನದ ಸಂದರ್ಭ ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಕೋಲ್ಕತ್ತಾದ ಯುವ ಯುಟ್ಯೂಬ್ ಪತ್ರಕರ್ತೆ ರವಿವಾರ ಆರೋಪಿಸಿದ್ದಾರೆ.
ಪತ್ರಕರ್ತೆಯ ವೀಡಿಯೊ ವೈರಲ್ ಆದ ಕೂಡಲೇ, ಸಿಪಿಐ (ಎಂ) ತನ್ಮಯ್ ಭಟ್ಟಾಚಾರ್ಯ ಅವರನ್ನು ಪಕ್ಷದ ಸದಸ್ಯತ್ವದಿಂದ ಅಮಾನತುಗೊಳಿಸಿದೆ. ಪಕ್ಷದ ಪಶ್ಚಿಮಬಂಗಾಳದ ಕಾರ್ಯದರ್ಶಿ ಮುಹಮ್ಮದ್ ಸಲೀಂ ಅವರು ಭಟ್ಟಾಚಾರ್ಯ ಅವರ ನಡವಳಿಕೆಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಫೇಸ್ ಬುಕ್ ನೇರ ಪ್ರಸಾರದಲ್ಲಿ ಈ ಆರೋಪ ಮಾಡಿರುವ ಯುವತಿ, ತನ್ಮಯ್ ಭಟ್ಟಾಚಾರ್ಯ ಅವರ ನಿವಾಸದಲ್ಲಿ ಸಂದರ್ಶನಕ್ಕಿಂತ ಮುನ್ನ ಅವರು ಅನುಮತಿ ಇಲ್ಲದೆ ತನ್ನ ತೊಡೆಯ ಮೇಲೆ ಕುಳಿತುಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.
ತಾನು ಇಂದು ತನ್ಮಯ್ ಭಟ್ಟಾಚಾರ್ಯ ಅವರನ್ನು ಸಂದರ್ಶಿಸಲು ನಿರ್ಧರಿಸಿದ್ದೆ. ಸಂದರ್ಶನದ ಮುನ್ನ ತನ್ನ ಕ್ಯಾಮೆರಾ ಮ್ಯಾನ್ ಫ್ರೇಮ್ ಹೊಂದಿಸಿಕೊಳ್ಳುತ್ತಿದ್ದರು. ಭಟ್ಟಾಚಾರ್ಯ, ‘‘ನಾನು ನಿಮ್ಮ ಮೇಲೆ ಕುಳಿತುಕೊಳ್ಳಲೇ’’ ಎಂದು ಮತ್ತೆ ಮತ್ತೆ ಪ್ರಶ್ನಿಸಿದರು. ಅನಂತರ ಇದ್ದಕ್ಕಿದ್ದಂತೆ ತನ್ನ ಮೇಲೆ ಕುಳಿತುಕೊಂಡರು ಎಂದು ಅವರು ಆರೋಪಿಸಿದ್ದಾರೆ.
ತಾನು ಜೋಕ್ ಇಷ್ಟ ಪಡುವುದಿಲ್ಲ ಎಂದು ಅವರಿಗೆ ಹೇಳಿದೆ ಹಾಗೂ ಮೇಲೇಳುವಂತೆ ಅವರಲ್ಲಿ ವಿನಂತಿಸಿದೆ ಎಂದು ಅವರು ಹೇಳಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ತನ್ಮಯ್ ಭಟ್ಟಾಚಾರ್ಯ, ‘‘ಅವರು ಐದಾರು ಬಾರಿ ನನ್ನ ಸಂದರ್ಶನ ಮಾಡಿದ್ದಾರೆ. ನಾನು ಈ ಹಿಂದೆ ಕೂಡ ಅವರೊಂದಿಗೆ ಜೋಕ್ ಮಾಡಿದ್ದೆ. ಇಂದು ಯಾಕೆ ತಪ್ಪಾಗಿ ಭಾವಿಸಿದರು ಎಂದು ನನಗೆ ಅರ್ಥವಾಗುತ್ತಿಲ್ಲ’’ ಎಂದಿದ್ದಾರೆ.