ವಿವಿ ಆವರಣದಲ್ಲಿ ರ‍್ಯಾಗಿಂಗ್ ತಡೆಯಲು ತಂತ್ರಜ್ಞಾನ ಒದಗಿಸುವಂತೆ ಇಸ್ರೋಗೆ ಮನವಿ ಮಾಡಿದ ಪಶ‍್ಚಿಮ ಬಂಗಾಳ ರಾಜ್ಯಪಾಲ
ಕೋಲ್ಕತ್ತಾ: ಕಾಲೇಜುಗಳು ಹಾಗೂ ವಿಶ‍್ವವಿದ್ಯಾಲಯಗಳ ಆವರಣಗಳಲ್ಲಿ ರ್ಯಾಗಿಂಗ್ ಉಪಟಳವನ್ನು ತಡೆಯಲು ಸೂಕ್ತ ತಂತ್ರಜ್ಞಾನ ಪರಿಹಾರ ಪತ್ತೆ ಹಚ್ಚುವಂತೆ ಪಶ್ಚಿಮ ಬಂಗಾಳದ ರಾಜ್ಯಪಾಲರಾದ ಸಿ.ವಿ.ಆನಂದ್ ಬೋಸ್ ಅವರು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ISRO)ಗೆ ಮನವಿ ಮಾಡಿದ್ದಾರೆ ಎಂದು ರಾಜಭವನ ಪ್ರಕಟಣೆಯಲ್ಲಿ ಹೇಳಲಾಗಿದೆ.
ಇದಕ್ಕೂ ಮುನ್ನ, ಈ ತಿಂಗಳ ಆರಂಭದಲ್ಲಿ ಜಾಧವ್ ಪುರ್ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಲಯದಲ್ಲಿ ಮೊದಲ ವರ್ಷದ ಪದವಿಪೂರ್ವ ವಿದ್ಯಾರ್ಥಿಯೊಬ್ಬನನ್ನು ರ‍್ಯಾಗಿಂಗ್ ಮಾಡಿ, ಆತನಿಗೆ ಲೈಂಗಿಕ ಕಿರುಕುಳ ನೀಡಿದ್ದರಿಂದ ಆತ ಆತ್ಮಹತ್ಯೆ ಮಾಡಿಕೊಂಡಿದ್ದ. ಈ ಘಟನೆಯ ವಿರುದ್ಧ ಪಶ‍್ಚಿಮ ಬಂಗಾಳದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.
“ವಿಶ‍್ವವಿದ್ಯಾಲಯಗಳ ಆವರಣದಲ್ಲಿ ರ‍್ಯಾಗಿಂಗ್ ಉಪಟಳವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಿ, ಅದನ್ನು ನಿರ್ಮೂಲನೆ ಮಾಡಲು ಸೂಕ್ತ ತಂತ್ರಜ್ಞಾನವನ್ನು ಪತ್ತೆ ಹಚ್ಚುವಂತೆ ಪಶ್ಚಿಮ ಬಂಗಾಳದ ಗೌರವಾನ್ವಿತ ರಾಜ್ಯಪಾಲ ಹಾಗೂ ವಿಶ್ವವಿದ್ಯಾಲಯಗಳ ಕುಲಪತಿಗಳಾದ ಸಿ.ವಿ.ಆನಂದ ಬೋಸ್ ಅವರು ಇಸ್ರೊ ಅಧ್ಯಕ್ಷರಿಗೆ ಮನವಿ ಮಾಡಿದ್ದಾರೆ” ಎಂದು ಗುರುವಾರ ಬಿಡುಗಡೆ ಮಾಡಲಾಗಿರುವ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಈ ಸಮಸ್ಯೆಯ ಕುರಿತು ಹೈದರಾಬಾದ್ ಮೂಲದ ಸಂಸ್ಥೆಯೊಂದರೊಂದಿಗೂ ಬೋಸ್ ಅವರು ಚರ್ಚೆ ನಡೆಸಿದ್ದಾರೆ.
“ಅವರು ವಿಡಿಯೊ ವಿಶ್ಲೇಷಕಗಳು, ಸ್ವಯಂಚಾಲಿತವಾಗಿ ಗುರಿಯನ್ನು ಪತ್ತೆ ಮಾಡಬಲ್ಲ ಚಿತ್ರ ಹೊಂದಾಣಿಕೆ ತಂತ್ರಜ್ಞಾನ ಹಾಗೂ ದೂರ ಸಂವೇದನೆಯಂಥ ಬಹುಮೂಲಗಳನ್ನು ಬಳಸಿಕೊಂಡು ಸೂಕ್ತ ತಂತ್ರಜ್ಞಾನ ಪರಿಹಾರವನ್ನು ಅಭಿವೃದ್ಧಿಪಡಿಸಲು ಪ್ರಯತ್ನಿಸುತ್ತಿದ್ದಾರೆ” ಎಂದು ತಮ್ಮ ಹೇಳಿಕೆಯಲ್ಲಿ ರಾಜ್ಯಪಾಲ ಬೋಸ್ ತಿಳಿಸಿದ್ದಾರೆ.
ಜಾಧವ್ ಪುರ್ ವಿಶ್ವವಿದ್ಯಾಲಯದಲ್ಲಿನ ಪದವಿಪೂರ್ವ ವಿದ್ಯಾರ್ಥಿಯ ಮರಣದ ಸಂಬಂಧ ಹಾಲಿ ಮತ್ತು ಮಾಜಿ ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 13 ಮಂದಿಯನ್ನು ಬಂಧಿಸಲಾಗಿದೆ.