ವೀಸಾ ರದ್ದು: ಟ್ರಂಪ್ ಆಡಳಿತದ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿದ ಭಾರತೀಯ ವಿದ್ಯಾರ್ಥಿ ಚಿನ್ಮಯ ದೇವರೆ ಯಾರು?

PC : X
ಹೊಸದಿಲ್ಲಿ : ಅಮೆರಿಕ ಸರಕಾರವು ತಮ್ಮ ವಿದ್ಯಾರ್ಥಿ ವೀಸಾಗಳನ್ನು ‘ಕಾನೂನುಬಾಹಿರ’ವಾಗಿ ರದ್ದುಗೊಳಿಸಿದ ಬಳಿಕ ತಮ್ಮ ಸಂಭಾವ್ಯ ಗಡಿಪಾರು ವಿರುದ್ಧ ಮೊಕದ್ದಮೆಯನ್ನು ದಾಖಲಿಸಿರುವ ಮಿಚಿಗನ್ ಸರಕಾರಿ ವಿವಿಗಳ ನಾಲ್ವರು ವಿದ್ಯಾರ್ಥಿಗಳಲ್ಲಿ ಭಾರತದ ಚಿನ್ಮಯ ದೇವರೆ ಸೇರಿದ್ದಾರೆ.
ದೇವರೆ ಅವರ ಲಿಂಕ್ಡ್‌ಇನ್ ಪ್ರೊಫೈಲ್ ಪ್ರಕಾರ ಅವರು ಮಿಚಿಗನ್‌ನ ವೇಯ್ನ್ ಸ್ಟೇಟ್ ಯುನಿವರ್ಸಿಟಿ ಕಾಲೇಜ್ ಆಫ್ ಇಂಜಿನಿಯರಿಂಗ್‌ನಲ್ಲಿ ಪದವಿಪೂರ್ವ ವಿದ್ಯಾರ್ಥಿಯಾಗಿದ್ದಾರೆ.
ದೇವರೆ, ಚೀನಾದ ಷಿಯಾಂಗ್‌ಯುನ್ ಬು ಮತ್ತು ಕ್ಯುಯಿ ಯಾಂಗ್ ಹಾಗೂ ನೇಪಾಳದ ಯೋಗೇಶ ಜೋಶಿ ಅವರು ಶುಕ್ರವಾರ ಆಂತರಿಕ ಭದ್ರತಾ ಇಲಾಖೆ(ಡಿಎಚ್‌ಎಸ್) ಮತ್ತು ವಲಸೆ ಅಧಿಕಾರಿಗಳ ವಿರುದ್ಧ ಮೊಕದ್ದಮೆಯನ್ನು ದಾಖಲಿಸಿದ್ದಾರೆ. ವಿದ್ಯಾರ್ಥಿ ಮತ್ತು ವಿನಿಮಯ ಸಂದರ್ಶಕರ ಮಾಹಿತಿ ವ್ಯವಸ್ಥೆ( SEVIS)ಯಲ್ಲಿ ‘ಸಾಕಷ್ಟು ಸೂಚನೆ ಮತ್ತು ವಿವರಣೆಯಿಲ್ಲದೆ’ ತಮ್ಮ ವಿದ್ಯಾರ್ಥಿ ವಲಸೆ ಸ್ಥಿತಿಯನ್ನು ಕಾನೂನುಬಾಹಿರವಾಗಿ ಅಂತ್ಯಗೊಳಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ.
(SEVIS) ಅಮೆರಿಕದಲ್ಲಿ ವಲಸೆರಹಿತ ವಿದ್ಯಾರ್ಥಿಗಳು ಮತ್ತು ವಿನಿಮಯ ಸಂದರ್ಶಕರ ಮಾಹಿತಿಯನ್ನು ಪತ್ತೆ ಹಚ್ಚುವ ಡೇಟಾ ಬೇಸ್ ಆಗಿದೆ.
ಟ್ರಂಪ್ ಆಡಳಿತವು ಯಾವುದೇ ಮಾನ್ಯವಾದ ಕಾರಣವಿಲ್ಲದೆ ಹಠಾತ್ತನೆ ತಮ್ಮ ಎಫ್-1 ವಿದ್ಯಾರ್ಥಿ ವೀಸಾಗಳನ್ನು ರದ್ದುಗೊಳಿಸಿದ ಬಳಿಕ ತೊಂದರೆಯಲ್ಲಿ ಸಿಲುಕಿರುವ ವಿದ್ಯಾರ್ಥಿಗಳ ಪರವಾಗಿ ಮೊಕದ್ದಮೆಯನ್ನು ದಾಖಲಿಸಿರುವ ಅಮೆರಿಕನ್ ಸಿವಿಲ್ ಲಿಬರ್ಟೀಸ್ ಯೂನಿಯನ್ (ಎಸಿಎಲ್‌ಯು),ತುರ್ತು ತಡೆಯಾಜ್ಞೆಗಾಗಿ ಕೋರಲಾಗಿದೆ ಎಂದು ತಿಳಿಸಿದೆ.
ಎಸಿಎಲ್‌ಯು ವೆಬ್‌ಸೈಟ್ ಪ್ರಕಾರ ದೇವರೆ(21) ಆಗಸ್ಟ್ 2021ರಿಂದ ಕಂಪ್ಯೂಟರ್ ಸೈನ್ಸ್ ಅಧ್ಯಯನ ಮಾಡುತ್ತಿದ್ದು, ಭಾರತೀಯ ಪ್ರಜೆಯಾಗಿದ್ದಾರೆ. ಅವರು 2004ರಲ್ಲಿ ತನ್ನ ಕುಟುಂಬದೊಂದಿಗೆ ಎಚ್-4 ಅವಲಂಬಿತ ವೀಸಾದಲ್ಲಿ ಮೊದಲ ಬಾರಿಗೆ ಅಮೆರಿಕವನ್ನು ಪ್ರವೇಶಿಸಿದ್ದರು. ದೇವರೆ ಮತ್ತು ಅವರ ಕುಟುಂಬ 2008ರಲ್ಲಿ ಅಮೆರಿಕವನ್ನು ತೊರೆದಿದ್ದರು. ಬಳಿಕ 2014ರಲ್ಲಿ ಮತ್ತೆ ಎಚ್-4 ಅವಲಂಬಿತ ವೀಸಾದಲ್ಲಿ ತನ್ನ ಕುಟುಂಬದೊಂದಿಗೆ ಅಮೆರಿಕಕ್ಕೆ ಮರಳಿದ್ದರು.
ಮಿಚಿಗನ್‌ನಲ್ಲಿ ಪ್ರೌಢಶಾಲಾ ಶಿಕ್ಷಣವನ್ನು ಮುಗಿಸಿದ ಬಳಿಕ ದೇವರೆ ವೇಯ್ನ್ ಸ್ಟೇಟ್ ವಿವಿಯಲ್ಲಿ ಪ್ರವೇಶ ಪಡೆದಿದ್ದರು. ಮೇ 2022ರಲ್ಲಿ ಎಚ್-4 ವೀಸಾದಲ್ಲಿ ನಿಗದಿತ ವಯೋಮಿತಿಯನ್ನು ಮೀರುತ್ತಿದ್ದಾಗ ಕಾನೂನುಬದ್ಧವಾಗಿ ಅರ್ಜಿ ಸಲ್ಲಿಸಿ ಅದನ್ನು ಎಫ್-1 ವಿದ್ಯಾರ್ಥಿ ವೀಸಾ ಆಗಿ ಪರಿವರ್ತಿಸಿಕೊಂಡಿದ್ದರು. ಅವರು ಮೇ 2025ರಲ್ಲಿ ತನ್ನ ವ್ಯಾಸಂಗವನ್ನು ಪೂರ್ಣಗೊಳಿಸಿ ಪದವಿ ಪಡೆಯುವ ನಿರೀಕ್ಷೆಯಲ್ಲಿದ್ದಾರೆ. ಪ್ರಸಕ್ತ ಅವರು ತನ್ನ ಕುಟುಂಬದೊಂದಿಗೆ ಕ್ಯಾಂಟನ್‌ನಲ್ಲಿ ವಾಸವಾಗಿದ್ದಾರೆ.
ಅಮೆರಿಕದಲ್ಲಿ ದೇವರೆ ವಿರುದ್ಧ ಎಂದಿಗೂ ಯಾವುದೇ ಆರೋಪವನ್ನು ಹೊರಿಸಲಾಗಿಲ್ಲ ಅಥವಾ ಯಾವುದೇ ಅಪರಾಧಕ್ಕಾಗಿ ಶಿಕ್ಷೆಯನ್ನು ಅನುಭವಿಸಿಲ್ಲ. ಅತಿವೇಗದ ವಾಹನ ಚಾಲನೆ ಮತ್ತು ತಪ್ಪು ಪಾರ್ಕಿಂಗ್‌ಗಾಗಿ ದಂಡ ಪಾವತಿಸಿದ್ದು ಬಿಟ್ಟರೆ ಅವರ ವಿರುದ್ಧ ಯಾವುದೇ ಆರೋಪಗಳಿಲ್ಲ.ಯಾವುದೇ ರಾಜಕೀಯ ಕಾರಣಕ್ಕೆ ಸಂಬಂಧಿಸಿದಂತೆ ಕ್ಯಾಂಪಸ್ ಪ್ರತಿಭಟನೆಗಳಲ್ಲೂ ಅವರು ಭಾಗಿಯಾಗಿರಲಿಲ್ಲ ಎಂದು ವರದಿಯಾಗಿದೆ.