ಯೆಮನ್‌ನಲ್ಲಿ ಮರಣದಂಡನೆಗೆ ಗುರಿಯಾಗಿರುವ ಕೇರಳದ ನರ್ಸ್ ನಿಮಿಷಾ ಪ್ರಿಯಾ ಯಾರು?

Update: 2024-12-31 13:02 GMT

ನಿಮಿಷಾ ಪ್ರಿಯಾ (Photo credit: NDTV)

ತಿರುವನಂತಪುರಂ : ಯೆಮನ್ ಪ್ರಜೆ ತಲಾಲ್ ಅಬ್ದೋ ಮಹದಿ ಹತ್ಯೆಗೆ ಸಂಬಂಧಿಸಿದ ಪ್ರಕರಣದಲ್ಲಿ ಕೇರಳದ ನರ್ಸ್ ನಿಮಿಷಾ ಪ್ರಿಯಾ ಅವರಿಗೆ ಯೆಮನ್ನಲ್ಲಿ ಮರಣದಂಡನೆ ವಿಧಿಸಲಾಗಿದೆ.

ಕೊಲೆ ಆರೋಪದಲ್ಲಿ 2017 ರಿಂದ ಜೈಲಿನಲ್ಲಿರುವ ಭಾರತೀಯ ನರ್ಸ್ಗೆ ಯೆಮನ್ ಅಧ್ಯಕ್ಷ ರಶಾದ್ ಅಲ್-ಅಲಿಮಿ ಮರಣದಂಡನೆಯನ್ನು ಅನುಮೋದಿಸಿದ್ದಾರೆ. ಈ ಪ್ರಕರಣವು ಭಾರತದಲ್ಲಿ ಎಲ್ಲರ ಗಮನ ಸೆಳೆದಿದೆ. ಕೇಂದ್ರ ಸರಕಾರವು ಆಕೆಗೆ ಸಾಧ್ಯವಿರುವ ಎಲ್ಲ ಸಹಾಯವನ್ನು ಚಾಚಲು ಮುಂದಾಗಿದೆ.

ಯೆಮನ್ ಮಾಧ್ಯಮ ವರದಿಗಳ ಪ್ರಕಾರ, ಮರಣದಂಡನೆಯನ್ನು ಅಧ್ಯಕ್ಷ ರಶಾದ್ ಅಲ್-ಅಲಿಮಿ ಈ ವಾರ ಅನುಮೋದಿಸಿದ್ದಾರೆ. ಮರಣದಂಡನೆ ಶಿಕ್ಷೆ ಒಂದು ತಿಂಗಳಲ್ಲಿ ನಡೆಯಲಿದೆ ಎಂದು ಅಂದಾಜಿಸಲಾಗಿದೆ. ಜುಲೈ 2017 ರಲ್ಲಿ ಮಹದಿಯನ್ನು ಕೊಂದ ಆರೋಪದಲ್ಲಿ ಆಕೆಗೆ ಶಿಕ್ಷೆ ವಿಧಿಸಲಾಗಿದೆ.

ಯಾರು ನಿಮಿಷಾ ಪ್ರಿಯಾ?

ಕೇರಳದ ಪಾಲಕ್ಕಾಡ್ ಜಿಲ್ಲೆಯವರಾದ ಪ್ರಿಯಾ ಅವರು ತಮ್ಮ ನರ್ಸಿಂಗ್ ತರಬೇತಿ ಪೂರ್ಣಗೊಳಿಸಿದ ನಂತರ 2008 ರಲ್ಲಿ ಉದ್ಯೋಗ ಅರಸಿ ಯೆಮನ್ಗೆ ತೆರಳಿದರು. ವರದಿಗಳ ಪ್ರಕಾರ ಕೂಲಿ ಕಾರ್ಮಿಕರಾಗಿದ್ದ ಪೋಷಕರಿಗೆ ನೆರವಾಗಲು ಅವರು ಯೆಮನ್ನ ಹಲವಾರು ಆಸ್ಪತ್ರೆಗಳಲ್ಲಿ ಹಗಲು ರಾತ್ರಿ ಕೆಲಸ ಮಾಡಿದರು. ತನ್ನದೇ ಆದ ಕ್ಲಿನಿಕ್ ತೆರೆಯುವ ಕನಸು ಅವರಲ್ಲಿ ಚಿಗುರೊಡೆಯಿತು.

ಇದೇ ವೇಳೆ 2014 ರಲ್ಲಿ ನಿಮಿಷಾಗೆ ತಲಾಲ್ ಅಬ್ದೋ ಮಹದಿಯ ಸಂಪರ್ಕವಾಯಿತು. ತಲಾಲ್ ನಿಮಿಷಾಗೆ ಯೆಮನ್ನಲ್ಲಿ ಕ್ಲಿನಿಕ್ ಅನ್ನು ಪ್ರಾರಂಭಿಸಲು ಸಹಾಯ ಮಾಡುವ ಭರವಸೆ ನೀಡಿದರು. ಇದು ಆಕೆಯ ಬಹುಕಾಲದ ಬಯಕೆಯೂ ಆಗಿತ್ತು.

ಯೆಮನ್ ಕಾನೂನಿನ ಪ್ರಕಾರ, ಮಧ್ಯಪ್ರಾಚ್ಯ ದೇಶದಲ್ಲಿ ವ್ಯಾಪಾರವನ್ನು ಪ್ರಾರಂಭಿಸಲು ವಿದೇಶಿಗರು ಸ್ಥಳೀಯರೊಂದಿಗೆ ಪಾಲುದಾರರಾಗಬೇಕಾಗುತ್ತದೆ. ಕಾನೂನಿನ ಪ್ರಕಾರ ಕ್ಲಿನಿಕ್ ತೆರೆಯಲು ಅವರು ಪಾಲುದಾರಿಕೆ ಮತ್ತು ಷರತ್ತುಗಳನ್ನು ಒಪ್ಪಿಕೊಂಡರು.

2015ರಲ್ಲಿ ನಿಮಿಷಾ, ಮಹದಿಯೊಂದಿಗೆ ತನ್ನ ಕ್ಲಿನಿಕ್ ಅನ್ನು ಪ್ರಾರಂಭಿಸಿದರು. ಆದರೆ ಶೀಘ್ರದಲ್ಲೇ ಅವರ ನಡುವೆ ಭಿನ್ನಾಭಿಪ್ರಾಯಗಳು ಬೆಳೆದವು. ನಿಮಿಷಾ, ಮಹದಿಯ ವಿರುದ್ಧ ನಿಂದನೆ ಮತ್ತು ಚಿತ್ರಹಿಂಸೆಯ ಆರೋಪ ಹೊರಿಸಿದ್ದರು. ಅದಕ್ಕೆ ಪ್ರತಿಯಾಗಿ ನಿಮಿಷಾ ಯೆಮನ್ನಿಂದ ಹೊರಹೋಗದಂತೆ ತಡೆಯಲು ಮಹದಿಯು ನಿಮಿಷಾರ ಪಾಸ್ಪೋರ್ಟ್ ಅನ್ನು ತನ್ನ ವಶದಲ್ಲಿಟ್ಟುಕೊಂಡಿದ್ದರು ಎನ್ನಲಾಗಿದೆ.

ಕಿರುಕುಳ ತಡೆಯಲಾಗದೇ ಮಹದಿಯ ವಿರುದ್ಧ ನಿಮಿಷಾ ಪೊಲೀಸ್ಗೆ ದೂರು ದಾಖಲಿಸಿದರು. ಅದರಂತೆ 2016 ರಲ್ಲಿ ಮಹದಿಯನ್ನು ಬಂಧಿಸಲಾಯಿತು. ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ ಮಹದಿಯನ್ನು ಸ್ವಲ್ಪ ಸಮಯದ ನಂತರ ಬಿಡುಗಡೆ ಮಾಡಲಾಯಿತು.

ಆದರೂ ಇಬ್ಬರ ನಡುವಿನ ವಿವಾದ ಮುಗಿಯಲಿಲ್ಲ. ಹತಾಶರಾದ ನಿಮಿಷಾ 2017ರಲ್ಲಿ ಭಾರತಕ್ಕೆ ಮರಳುವ ಯೋಜನೆ ಹಾಕಿಕೊಂಡರು. ಅದಕ್ಕೆ ಅವರು ಸ್ಥಳೀಯ ಜೈಲು ವಾರ್ಡನ್ನ ಸಹಾಯವನ್ನು ಕೋರಿದರು. ಮಹದಿಗೆ ನಿದ್ದೆ ಬರಿಸುವ ಔಷಧಿ ನೀಡಿ ಆತನನ್ನು ಪ್ರಜ್ಞೆ ತಪ್ಪುವಂತೆ ಮಾಡಿ, ತನ್ನ ಪಾಸ್ಪೋರ್ಟ್ ಪಡೆದುಕೊಳ್ಳುವಂತೆ ಜೈಲು ವಾರ್ಡನ್ ಸಲಹೆ ನೀಡಿದರು.

ಆದರೆ, ಸಲಹೆ ಪಾಲಿಸಲು ಹೋದ ನಿಮಿಷಾ ವಿವಾದವನ್ನು ದುರಂತ ಅಂತ್ಯಕ್ಕೆ ತೆಗೆದೊಯ್ದರು. ಮೆಹದಿಯ ವಶದಿಂದ ತನ್ನ ಪಾಸ್ಪೋರ್ಟ್ ಅನ್ನು ಹಿಂಪಡೆಯುವ ಪ್ರಯತ್ನದಲ್ಲಿ ನಿಮಿಷಾ, ಮಹದಿಗೆ ನಿದ್ದೆ ಬರಿಸುವ ಚುಚ್ಚುಮದ್ದು ಚುಚ್ಚಿದರು. ಆದರೆ ದುರದೃಷ್ಟಾವಶಾತ್ ಚುಚ್ಚುಮದ್ದಿನ ಡೋಸ್ ಹೆಚ್ಚಾದ್ದರಿಂದ ತಲಾಲ್ ಅಬ್ದೋ ಮಹದಿ ಮೃತಪಟ್ಟರು. ಪರಿಣಾಮವಾಗಿ ನಿಮಿಷಾ ಪ್ರಿಯಾ ಬಂಧನವಾಯಿತು. ಪ್ರಕರಣದಲ್ಲಿ ಆಕೆಗೆ ಮರಣದಂಡನೆ ಶಿಕ್ಷೆ ವಿಧಿಸಲಾಯಿತು.

ನಿಮಿಷಾ ಅವರ ತಾಯಿ, 57 ವರ್ಷದ ಪ್ರೇಮಾ ಕುಮಾರಿ, ಈ ವರ್ಷದ ಆರಂಭದಲ್ಲಿ ಯೆಮನ್ನ ರಾಜಧಾನಿ ಸನಾಗೆ ತಲುಪಿದ್ದಾರೆ. ನಿಮಿಷಾಗೆ ವಿಧಿಸಲಾಗಿರುವ ಮರಣದಂಡನೆಯನ್ನು ಮನ್ನಾ ಮಾಡಲು ಮಹದಿಯ ಕುಟುಂಬದೊಂದಿಗೆ ಸಂಧಾನ ಮಾಡಲು ಅವರು ಅಲ್ಲಿಯೇ ಉಳಿದುಕೊಂಡಿದ್ದಾರೆ ಎಂದು ʼದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ʼ ವರದಿ ಮಾಡಿದೆ.

ಆಕೆಯ ತಾಯಿ ಪ್ರೇಮಾ ಕುಮಾರಿ ಮರಣದಂಡನೆಯ ವಿರುದ್ಧ ಯೆಮನ್ ಸುಪ್ರೀಂ ಕೋರ್ಟ್ಗೆ ಮೊರೆ ಹೋಗಿದ್ದರು. ಆದರೆ ಈ ಮೇಲ್ಮನವಿಯನ್ನು 2023 ರಲ್ಲಿಯೇ ತಿರಸ್ಕರಿಸಲಾಗಿದೆ.

2018 ರಲ್ಲಿ ಯೆಮನ್ ವಿಚಾರಣಾಧೀನ ನ್ಯಾಯಾಲಯವು ನಿಮಿಷಾ ಪ್ರಿಯಾಗೆ ಮರಣದಂಡನೆ ವಿಧಿಸಿತು. 2023 ರಲ್ಲಿ ಯೆಮನ್ ಸುಪ್ರೀಂ ಕೋರ್ಟ್ ತೀರ್ಪು ಎತ್ತಿಹಿಡಿದಿದೆ. ಇತ್ತೀಚೆಗೆ, ಅಧ್ಯಕ್ಷ ರಶಾದ್ ಅಲ್-ಅಲಿಮಿ ಮರಣದಂಡನೆಗೆ ಅನುಮೋದನೆ ನೀಡಿರುವುದು ಪರಿಸ್ಥಿತಿಯ ತುರ್ತುಸ್ಥಿತಿಯನ್ನು ತೀವ್ರಗೊಳಿಸಿದೆ.

ಮುಂದೇನಾಗಬಹುದು?

ಕೇರಳದ ನರ್ಸ್ ನಿಮಿಷಾ ಪ್ರಿಯಾ ಬಿಡುಗಡೆಯು, ಮೃತ ತಲಾಲ್ ಅಬ್ದೋ ಮೆಹದಿಯ ಕುಟುಂಬ ಮತ್ತು ಅವರ ಬುಡಕಟ್ಟು ನಾಯಕ ಕ್ಷಮೆ ನೀಡುವುದರ ಮೇಲೆ ಅವಲಂಬಿತವಾಗಿದೆ. ಮೃತ ವ್ಯಕ್ತಿಯ ಕುಟುಂಬವು ನಿಮಿಷಾ ಅವರನ್ನು ಕ್ಷಮಿಸಿ, ಪರಿಹಾರ ಹಣವನ್ನು ಸ್ವೀಕರಿಸಿದರೆ ಆಕೆಯ ಮರಣದಂಡನೆಯನ್ನು ಮನ್ನಾ ಮಾಡುವ ಅವಕಾಶ ಸಿಗಲಿದೆ.

ಈ ಕುರಿತು ಈಗಾಗಲೇ ಚೌಕಾಶಿ ನಡೆಯುತ್ತಿದೆ. ಒಂದು ವೇಳೆ ಬೃಹತ್ ಮೊತ್ತವನ್ನು ಪರಿಹಾರವಾಗಿ ಕೇಳಿದಲ್ಲಿ ಎಲ್ಲರ ಸಹಕಾರ ಬೇಕಾಗಬಹುದು. ಸೌದಿ ಅರೇಬಿಯಾದ ಜೈಲಿನಲ್ಲಿ ದಿನದೂಡುತ್ತಿರುವ ಅಬ್ದುಲ್ ರಹೀಂ ಅವರ ಮರಣದಂಡನೆ ತಪ್ಪಿಸಲು ಮಾಡಿದ ರೀತಿಯಲ್ಲೇ ಇನ್ನೊಂದು ಕ್ರೌಡ್‌ ಫಂಡಿಂಗ್ ಮಾಡಬೇಕಾಗಬಹುದು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ಇರ್ಷಾದ್ ಎಂ. ವೇಣೂರು

contributor

Similar News