ʼವಿಸ್ತಾರʼದ ರೆಕ್ಕೆಯೇಕೆ ಮುದುಡುತ್ತಿದೆ?

Update: 2024-04-03 17:39 GMT

ವಿಸ್ತಾರ ಯಾನ | Photo: NDTV 

ಹೊಸದಿಲ್ಲಿ: ನೂತನ ಪಾವತಿ ಸ್ವರೂಪ ವಿಸ್ತಾರ ಪೈಲಟ್ ಗಳ ಒಂದು ವರ್ಗವನ್ನು ಕೆರಳಿಸಿದ್ದು, ಕಳೆದ ಕೆಲವು ದಿನಗಳಿಂದ ಹಲವಾರು ಪೈಲಟ್ ಗಳು ಅನಾರೋಗ್ಯದ ಕಾರಣ ನೀಡುತ್ತಿದ್ದಾರೆ ಎಂದು ಹೇಳಲಾಗಿದೆ.

ತನ್ನ ಮಾನದಂಡಗಳು ಹಾಗೂ ಗುಣಮಟ್ಟದ ಸೇವೆಯ ಕಾರಣಕ್ಕೆ ಹೆಮ್ಮೆಯಿಂದ ಬೀಗುತ್ತಿರುವ ವಿಸ್ತಾರ ವಿಮಾನ ಯಾನ ಸಂಸ್ಥೆಯು, ಕಳೆದ ಎರಡು ದಿನಗಳಲ್ಲಿ ಗಂಭೀರ ಸ್ವರೂಪದ ವಿಮಾನಗಳ ವಿಳಂಬವನ್ನು ಅನುಭವಿಸಿದ್ದು, 100ಕ್ಕೂ ಹೆಚ್ಚು ವಿಮಾನಗಳು ರದ್ದುಗೊಂಡಿದ್ದರೆ, ಅದಕ್ಕಿಂತಲೂ ಹೆಚ್ಚು ವಿಮಾನಗಳು ವಿಳಂಬಗೊಂಡಿವೆ.

ಈ ವಿಮಾನ ಹಾರಾಟದ ತೊಡಕಿನ ಹಿಂದಿರುವ ಹಿಂದಿರುವ ಕಾರಣವೇನು? ಇಲ್ಲಿದೆ ವಿವರ.

ವಿಮಾನ ಯಾನ ಜಾಲದಲ್ಲಿನ ತೊಡಕು

ಕಳೆದ ಕೆಲವು ದಿನಗಳಿಂದ ಸ್ಥಿರವಾಗಿ ಏರಿಕೆಯಾಗುತ್ತಿದ್ದ ವಿಳಂಬಗಳು ಹಾಗೂ ರದ್ದತಿಯ ನಂತರ, ಎಪ್ರಿಲ್ 1ರ ಟ್ರ್ಯಾಕಿಂಗ್ ದತ್ತಾಂಶದ ಪ್ರಕಾರ, ಪ್ರತಿ ದಿನದ ನಿಗದಿತ 300 ವಿಮಾನಗಳ ಪೈಕಿ ಸುಮಾರು 80 ವಿಸ್ತಾರ ವಿಮಾನಗಳು ರದ್ದುಗೊಂಡಿರುವ ಹಾಗೂ 190ಕ್ಕೂ ಹೆಚ್ಚು ವಿಮಾನಗಳು ವಿಳಂಬಗೊಂಡಿರುವ ಗಂಭೀರ ಸಂಗತಿ ಬೆಳಕಿಗೆ ಬಂದಿತು. ಮಂಗಳವಾರ ಕೂಡಾ ಹತ್ತಾರು ವಿಮಾನಗಳು ರದ್ದುಗೊಂಡು, ಈ ವಿಮಾನ ಯಾನ ಸಂಸ್ಥೆಯ ಜಾಲದ ಅಸಂಖ್ಯಾತ ವಿಮಾನಗಳು ವಿಳಂಬಗೊಂಡಿದ್ದವು.

ಈ ಸಮಸ್ಯೆಯನ್ನು ದೃಢಪಡಿಸಿರುವ ವಿಸ್ತಾರ ಸಂಸ್ಥೆಯು, ಈ ತೊಡಕಿಗೆ ಸಿಬ್ಬಂದಿಗಳ ಅಲಭ್ಯತೆಯೂ ಒಂದು ಪ್ರಮುಖ ಕಾರಣ ಎಂದು ಹೇಳಿದೆ. “ಸಿಬ್ಬಂದಿಗಳ ಅಲಭ್ಯತೆಯೂ ಸೇರಿದಂತೆ ಹಲವಾರು ಕಾರಣಗಳಿಂದ ಕಳೆದ ಕೆಲವು ದಿನಗಳಿಂದ ಗಮನಾರ್ಹ ಸಂಖ್ಯೆಯ ವಿಮಾನಗಳು ರದ್ದುಗೊಂಡಿವೆ ಹಾಗೂ ವಿಳಂಬಗೊಂಡಿವೆ” ಎಂದು ಸೋಮವಾರ ವಿಸ್ತಾರ ಸಂಸ್ಥೆಯ ವಕ್ತಾರರು ಹೇಳಿದ್ದರು.

ವಿಮಾನಗಳ ಸಂಖ್ಯೆಯನ್ನು ಕಡಿತಗೊಳಿಸುವುದಾಗಿ ಪ್ರಕಟಿಸಿದ್ದ ಈ ವಿಮಾನ ಯಾನ ಸಂಸ್ಥೆಯು, ಬೆರಳೆಣಿಕೆಯ ವಿಮಾನಗಳಲ್ಲಿ ಹೆಚ್ಚು ಪ್ರಯಾಣಿಕರಿಗೆ ಸ್ಥಳಾವಕಾಶ ಒದಗಿಸಲು ಕೆಲವು ನಿರ್ದಿಷ್ಟ ಮಾರ್ಗಗಳಲ್ಲಿ ಬಿ797-9 ಡ್ರೀಮ್ ಲೈನರ್ ಹಾಗೂ ಎ321ನಿಯೊದಂತಹ ದೊಡ್ಡ ವಿಮಾನಗಳನ್ನು ನಿಯೋಜಿಸುವುದಾಗಿಯೂ ತಿಳಿಸಿತ್ತು. ಆದರೆ, ಎಷ್ಟು ವಿಮಾನಗಳನ್ನು ಕಡಿತಗೊಳಿಸಲು ಅದು ಯೋಜಿಸಿದೆ ಹಾಗೂ ಎಷ್ಟು ದಿನಗಳ ಕಾಲ ಈ ಕಡಿತಗೊಂಡ ವೇಳಾಪಟ್ಟಿ ಜಾರಿಯಲ್ಲಿರುತ್ತದೆ ಎಂಬ ಕುರಿತು ವಿಸ್ತಾರ ಸಂಸ್ಥೆ ನಿರ್ದಿಷ್ಟವಾಗಿ ಸ್ಪಷ್ಟಪಡಿಸಿಲ್ಲ.

ಈ ಬಾರಿಯ ಬೇಸಿಗೆ ವೇಳಾಪಟ್ಟಿಯಲ್ಲಿ ವಿಸ್ತಾರ ವಿಮಾನ ಯಾನ ಸಂಸ್ಥೆಯು ಪ್ರತಿ ವಾರ 2,324 ಅಥವಾ ಪ್ರತಿ ದಿನ 332 ದೇಶೀಯ ವಿಮಾನಗಳ ನಿರ್ಗಮನವನ್ನು ಕಾರ್ಯಾಚರಿಸಲು ಯೋಜಿಸಿತ್ತು.

ಮುಂದುವರಿಯುತ್ತಿರುವ ಬಿಕ್ಕಟ್ಟು ಹಾಗೂ ಅದರ ಪರಿಹಾರಕ್ಕಾಗಿ ತೆಗೆದುಕೊಂಡಿರುವ ಕ್ರಮಗಳ ಕುರಿತು ವಿಸ್ತೃತ ವರದಿ ಸಲ್ಲಿಸುವಂತೆ ವಿಸ್ತಾರ ವಿಮಾನ ಯಾನ ಸಂಸ್ಥೆಗೆ ಮಂಗಳವಾರ ನಾಗರಿಕ ವಿಮಾನ ಯಾನ ಸಚಿವಾಲಯವು ಸೂಚಿಸಿದೆ. ನಾಗರಿಕ ವಿಮಾನ ಯಾನ ವೈಮಾನಿಕ ನಿಯಂತ್ರಣ ಪ್ರಧಾನ ನಿರ್ದೇಶನಾಲಯವೂ ಕೂಡಾ ವಿಮಾನ ರದ್ದತಿಗಳು ಹಾಗೂ ವಿಳಂಬಗಳ ಕುರಿತು ದೈನಂದಿನ ವರದಿಯನ್ನು ಸಲ್ಲಿಸುವಂತೆ ಸೂಚಿಸಿದೆ. ಇದರೊಂದಿಗೆ, ಒಂದು ವೇಳೆ ವಿಮಾಗಳ ರದ್ದತಿ ಅಥವಾ ವಿಳಂಬಗಳಾದರೆ, ಪ್ರಯಾಣಿಕರಿಗೆ ಒದಗಿಸಬೇಕಿರುವ ಸೌಲಭ್ಯಗಳಿಗೆ ಸಂಬಂಧಿಸಿದಂತೆ ಇರುವ ನಿಯಮಾವಳಿಗಳನ್ನು ಪಾಲಿಸುವಂತೆಯೂ ನಿರ್ದೇಶನ ನೀಡಿದೆ.

ಅತೃಪ್ತ ಪೈಲಟ್ ಗಳು

ಆದರೆ, ವಿಮಾನ ಯಾನ ಸೇವೆಗಳಲ್ಲಿನ ತೊಡಕಿನ ಕೇಂದ್ರ ಬಿಂದು ವಿಸ್ತಾರದ ಮಾನವ ಸಂಪನ್ಮೂಲ ಸಮಸ್ಯೆಯಾಗಿರುವಂತೆ ತೋರುತ್ತಿದೆ. ಟಾಟಾ ಸಮೂಹದ ಮಹತ್ವಾಕಾಂಕ್ಷಿ ಏರ್ ಇಂಡಿಯಾದೊಂದಿಗೆ ವಿಸ್ತಾರವನ್ನು ವಿಲೀನಗೊಳಿಸುವುದಕ್ಕೂ ಮುನ್ನ ಸಮನ್ವಯತೆ ಕಸರತ್ತಿನ ಭಾಗವಾಗಿ ರೂಪುಗೊಂಡಿರುವ ನೂತನ ಪರಿಹಾರ ಸ್ವರೂಪದ ಬಗ್ಗೆ ದೊಡ್ಡ ಸಂಖ್ಯೆಯ ವಿಸ್ತಾರ ಪೈಲಟ್ ಗಳಲ್ಲಿ, ಮುಖ್ಯವಾಗಿ ಪ್ರಥಮ ದರ್ಜೆ ಅಧಿಕಾರಿಗಳಲ್ಲಿ ಗಮನಾರ್ಹ ಅಸಮಾಧಾನ ಮನೆ ಮಾಡಿದೆ.

ಫೆಬ್ರವರಿಯಲ್ಲಿ ಪ್ರಕಟಿಸಲಾಗಿರುವ ನೂತನ ಪಾವತಿ ರಚನೆಯು ಒಂದು ತಿಂಗಳಿಗೆ ಈ ಹಿಂದಿನ 70 ಗಂಟೆಗಳ ಹಾರಾಟದ ಅವಧಿಯ ಬದಲು ಕೇವಲ 40 ಹಾರಾಟದ ಗಂಟೆಗಳಿಗೆ ಮಾತ್ರ ವೇತನ ಪಾವತಿಯನ್ನು ಖಾತ್ರಿಗೊಳಿಸುತ್ತದೆ. ಇದರಿಂದ ತಮ್ಮ ನಿವ್ವಳ ವೇತನದಲ್ಲಿ ಗಮನಾರ್ಹ ಕಡಿತವಾಗಬಹುದು ಎಂಬುದು ಹಲವಾರು ಅಧಿಕಾರಿಗಳ ಆತಂಕವಾಗಿದೆ.

ಹೀಗಾಗಿ ನೂತನ ಪಾವತಿ ಸ್ವರೂಪವನ್ನು ಪ್ರತಿಭಟಿಸಲು ವಿಸ್ತಾರ ಸಂಸ್ಥೆಯ ಹಲವಾರು ಪೈಲಟ್ ಗಳು ಮಾರ್ಚ್ ತಿಂಗಳ ಆರಂಭದಲ್ಲಿ ಅನಾರೋಗ್ಯದ ಕಾರಣ ನೀಡತೊಡಗಿದ್ದಾರೆ. ಈ ಸಂದರ್ಭದಲ್ಲಿ ವಿಮಾನಗಳ ರದ್ದತಿ ಹಾಗೂ ವಿಳಂಬಗಳಿಗೆ ಸಿಬ್ಬಂದಿಗಳ ಕೊರತೆ ಕಾರಣ ಎಂಬುದನ್ನು ವಿಸ್ತಾರ ಸಂಸ್ಥೆಯು ಗಮನಿಸಲಿಲ್ಲ. ಆದರೆ, ಮಾರ್ಚ್ ನಂತರ, ಅಸಮಾಧಾನಗೊಂಡಿರುವ ಪೈಲಟ್ ಗಳಿಗೆ ನೂತನ ಪಾವತಿ ಸ್ವರೂಪವನ್ನು ಅಂಗೀಕರಿಸಿ ಇಲ್ಲವೆ ಅದರೊಂದಿಗೆ ಒಂದೇ ಬಾರಿಗೆ ಬರುವ ಪಾವತಿಯನ್ನು ಕೈಬಿಡಿ ಎಂದು ವಿಸ್ತಾರ ಆಡಳಿತ ಮಂಡಳಿಯು ಸೂಚಿಸಿದೆ ಎಂದು ಹೇಳಲಾಗಿದೆ. ಇದರೊಂದಿಗೆ, ವಿಸ್ತಾರದೊಂದಿಗೆ ವಿಲೀನವಾದ ನಂತರ ಏರ್ ಇಂಡಿಯಾದೊಂದಿಗೆ ಕೆಲಸ ಮಾಡುವ ಅವಕಾಶವನ್ನು ಪಡೆಯಿರಿ ಎಂಬ ಆಯ್ಕೆಯನ್ನೂ ನೀಡಿದೆ ಎನ್ನಲಾಗಿದೆ.

ವಿಸ್ತಾರದ ಈ ಸೂಚನೆಯಿಂದ ಪೈಲಟ್ ಗಳು ಮತ್ತಷ್ಟು ಕೆರಳಿದ್ದು, ಕಳೆದ ವಾರದ ಅಂತ್ಯದಿಂದ ಮತ್ತೊಮ್ಮೆ ಅನಾರೋಗ್ಯದ ಕಾರಣ ನೀಡತೊಡಗಿದ್ದಾರೆ ಎಂದು ವಿಮಾನ ಯಾನ ಉದ್ಯಮವನ್ನು ಬಲ್ಲವರು ಹೇಳುತ್ತಾರೆ.

ಆದರೆ, ವೇತನದ ಬಗ್ಗೆಯಷ್ಟೇ ವಿಸ್ತಾರ ಪೈಲಟ್ ಗಳು ಅಸಮಾಧಾನಗೊಂಡಿರುವುದಲ್ಲ. ಬಹುಶಃ ಮುಂದಿನ ವರ್ಷ ಸಂಪೂರ್ಣಗೊಳ್ಳಲಿರುವ ಏರ್ ಇಂಡಿಯಾದೊಂದಿಗಿನ ವಿಲೀನ ಪ್ರಕ್ರಿಯೆಯ ನಂತರ ತಮ್ಮ ವೃತ್ತಿ ಪ್ರಗತಿ ಅವಕಾಶಗಳು, ತಮ್ಮ ಹಿರಿತನದ ಹುದ್ದೆಗಳ ಬಗ್ಗೆ ಹಲವಾರು ಪೈಲಟ್ ಗಳು ಆತಂಕಗೊಂಡಿದ್ದಾರೆ ಎಂದು ಹೇಳಲಾಗಿದೆ. ತಮ್ಮ ವೃತ್ತಿ ಜೀವನದ ಸಮತೋಲನದ ಮೇಲೆ ಗಂಭೀರ ಪರಿಣಾಮವನ್ನುಂಟು ಮಾಡುತ್ತಿರುವ ವಿಸ್ತಾರದ ಅಡ್ಡಾದಿಡ್ಡಿ ಹಾಗೂ ನೋಟಿಸ್ ರಹಿತ ಪಾಳಿ ಅಭ್ಯಾಸದಿಂದ ಒಂದು ವರ್ಗದ ಪೈಲಟ್ ಗಳು ಮಂಕಾಗಿದ್ದಾರೆ ಎನ್ನಲಾಗಿದೆ.

ಗಮನಾರ್ಹ ಸಂಗತಿಯೆಂದರೆ, ಪ್ರಾಥಮಿಕವಾಗಿ ಏರ್ ಇಂಡಿಯಾದೊಂದಿಗೆ ವಿಲೀನವಾಗುವುದಕ್ಕೂ ಮುನ್ನ ವಿಸ್ತಾರ ಸಂಸ್ಥೆಯು ದೊಡ್ಡ ಸಂಖ್ಯೆಯ ನೇಮಕಾತಿಗಳನ್ನು ಮಾಡಿಕೊಳ್ಳದೆ ಇರುವುದರಿಂದ ಅದರ ಗಮನಾರ್ಹ ಸಂಖ್ಯೆಯ ಬದಲಿ ಪೈಲಟ್ ಗಳಿಲ್ಲ. ಇದರಿಂದ ವೈಮಾನಿಕ ವಲಯದ ಮುಷ್ಕರದ ಆವೃತ್ತಿಯಾದ ಸಾಮೂಹಿಕ ಅನಾರೋಗ್ಯ ರಜೆಗಳ ಪರಿಸ್ಥಿತಿಯನ್ನು ನಿಭಾಯಿಸುವುದು ಈ ವಿಮಾನ ಯಾನ ಸಂಸ್ಥೆಗೆ ಕ್ಲಿಷ್ಟಕರವಾಗಿ ಪರಿಣಮಿಸಿತು.

ಟಾಟಾದ ಎಚ್ಚರಿಕೆ

ಸಾಮೂಹಿಕ ತೊಡಕು ತಲೆದೋರಿದ್ದರೂ, ಪೈಲಟ್ ಗಳಾಗಲಿ ಅಥವಾ ಆಡಳಿತ ಮಂಡಳಿಯಾಗಲಿ ಈ ಪರಿಸ್ಥಿತಿಯಿಂದ ಜಗ್ಗಲು ಈಗಲೂ ತಯಾರಿಲ್ಲ ಎಂದು ವಿಮಾನ ಯಾನ ಸಂಸ್ಥೆಯ ಮೂಲಗಳು ಹೇಳುತ್ತವೆ. ಎರಡೂ ಕಡೆಯವರೂ ಕೊಂಚ ಮೃದುವಾಗುವ ಮೂಲಕ ಈ ಸಮಸ್ಯೆಗೆ ಶೀಘ್ರದಲ್ಲೇ ಅತ್ಯುತ್ತಮ ಪರಿಹಾರವನ್ನು ಸಾಧಿಸಲು ವಿಮಾನ ಯಾನ ಸಂಸ್ಥೆ ಹಾಗೂ ಪೈಲಟ್ ಗಳಿಬ್ಬರೂ ಉತ್ಸುಕರಾಗಿದ್ದಾರೆ ಎಂದು ವೈಮಾನಿಕ ವಲಯದ ತಜ್ಞರು ಅಭಿಪ್ರಾಯ ಪಡುತ್ತಾರೆ.

ಟಾಟಾ ಸಮೂಹವು ತನ್ನ ವಿಮಾನ ಯಾನ ವ್ಯವಹಾರವನ್ನು ಸ್ಥಿರಗೊಳಿಸಲು ಪ್ರಯತ್ನಿಸುತ್ತಿರುವುದರಿಂದ ಮುಂದುವರಿಯುತ್ತಿರುವ ಈಗಿನ ಪರಿಸ್ಥಿತಿಯು ಭವಿಷ್ಯದಲ್ಲಿ ಸಮಸ್ಯೆಯನ್ನು ಸೃಷ್ಟಿಸಬಹುದು ಎಂಬುದನ್ನು ಒತ್ತಿ ಹೇಳುತ್ತಿದೆ.

ಏರ್ ಇಂಡಿಯಾ ಹಾಗೂ ವಿಸ್ತಾರದ ವಿಲೀನವಲ್ಲದೆ ಅಗ್ಗದ ದರದ ವಿಮಾನ ಯಾನ ಸಂಸ್ಥೆಗಳಾದ ಏರ್ ಇಂಡಿಯಾ ಎಕ್ಸ್ ಪ್ರೆಸ್ ಹಾಗೂ ಎಐಎಕ್ ಕನೆಕ್ಟ್ (ಈ ಹಿಂದೆ ಏರ್ ಏಶಿಯಾ ಇಂಡಿಯಾ) ಸಂಸ್ಥೆಗಳನ್ನು ವಿಲೀನಗೊಳಿಸುವ ಪ್ರಕ್ರಿಯೆಗೂ ಈ ದೈತ್ಯ ಸಮೂಹ ಸಂಸ್ಥೆ ಚಾಲನೆ ನೀಡಿದೆ. ಒಮ್ಮೆ ಈ ಎರಡೂ ವಿಲೀನಗಳು ಪೂರ್ಣಗೊಂಡ ನಂತರ ಏರ್ ಇಂಡಿಯಾ ಸಮೂಹದ ಬಳಿ ಸಂಪೂರ್ಣ ಸೇವೆಯ ಏರ್ ಇಂಡಿಯಾ ಹಾಗೂ ಅಗ್ಗದ ದರದ ವಿಮಾನ ಯಾನ ಸಂಸ್ಥೆ ಏರ್ ಇಂಡಿಯಾ ಎಕ್ಸ್ ಪ್ರೆಸ್ ಗಳೆರಡೂ ಇರಲಿವೆ. ಇದೀಗ ವಿಸ್ತಾರದಲ್ಲಿ ಶೇ. 49ರಷ್ಟು ಷೇರುಗಳನ್ನು ಹೊಂದಿರುವ ಸಿಂಗಪೂರ್ ಏರ್ ಲೈನ್ಸ್, ಏರ್ ಇಂಡಿಯಾ ವಿಲೀನದ ನಂತರ ಕೇವಲ ಶೇ. 25.1ರಷ್ಟು ಮಾಲಕತ್ವವನ್ನು ಮಾತ್ರ ಹೊಂದಿರಲಿದೆ.

ಆದರೆ, ವಿಲೀನದ ಸಂದರ್ಭಗಳಲ್ಲಿ ಜನರನ್ನು ಏಕೀಕರಿಸುವುದು ಪದೇ ಪದೇ ಅತ್ಯಂತ ಸಂಕೀರ್ಣ ಭಾಗವಾಗಿದೆ. ಪಾವತಿಯಲ್ಲಿ ಸಮಾನತೆ ತರುವುದಲ್ಲದೆ, ವಿಭಿನ್ನ ಸಾಂಸ್ಥಿಕ ಸಂಸ್ಕೃತಿ ಹಿನ್ನೆಲೆ ಹೊಂದಿರುವ ಉದ್ಯೋಗಿಗಳಲ್ಲಿ ಸಮನ್ವಯತೆ ಮೂಡಿಸುವುದು ಅತ್ಯಂತ ಸವಾಲಿನ ಕೆಲಸ. ಹೀಗಾಗಿ, ವಿಲೀನಗಳು ವಿಭಿನ್ನ ಸಂಸ್ಥೆಗಳಿಂದ ಬಂದಿರುವ ಉದ್ಯೋಗಿಗಳ ನಡುವೆ ಹಿರಿತನ, ಆಜ್ಞಾಪನೆಯ ಸರಪಳಿ, ವೃತ್ತಿ ಪ್ರಗತಿ ಕುರಿತ ಆತಂಕ, ಇತ್ಯಾದಿಗಳು ಘರ್ಷಣೆಗೆ ಕಾರಣವಾಗುತ್ತವೆ.

ಉದಾಹರಣೆಗೆ, ಸರಕಾರದ ನಿಯಂತ್ರಣದಲ್ಲಿದ್ದಾಗಲೇ ನಡೆದಿದ್ದ ಏರ್ ಇಂಡಿಯಾ ಮತ್ತು ಇಂಡಿಯನ್ ಏರ್ ಲೈನ್ಸ್ ವಿಲೀನ ಪ್ರಕ್ರಿಯೆ. ಇದರಿಂದ ಉದ್ಭವವಾದ ಮಾನವ ಸಂಪನ್ಮೂಲ ಬಿಕ್ಕಟ್ಟು ಹಲವಾರು ವರ್ಷಗಳ ಕಾಲ ನ್ಯಾಯಾಲಯದಲ್ಲಿನ ಪ್ರಕರಣಗಳು ಹಾಗೂ ಸರಕಾರ ನೇಮಿಸಿದ ಸಮಿತಿಗಳ ಮೂಲಕ ಪರಿಹಾರ ಕಂಡಿತ್ತು. ಈ ಬಿಕ್ಕಟ್ಟು ಸಂಪೂರ್ಣವಾಗಿ ಬಗೆಹರಿಯಲಿಲ್ಲ ಎಂದು ವಾದಿಸುವ ಉದ್ಯಮದ ಒಳಗನ್ನು ಬಲ್ಲವರು, ಯಾವುದಾದರೂ ಒಂದು ಬಣದವರು ನಮಗೆ ಉತ್ತಮ ಪರಿಹಾರ ದೊರೆಯಲಿಲ್ಲ ಎಂದು ವಾದಿಸುವ ಮೂಲಕ, ಈ ಹಿಂದಿನ ಎರಡೂ ವಿಮಾನ ಯಾನ ಸಂಸ್ಥೆಗಳ ಉದ್ಯೋಗಿಗಳಲ್ಲಿ ನಿರಂತರವಾಗಿ ಅತೃಪ್ತಿ ಹೊಗೆಯಾಡಿತು ಎನ್ನುತ್ತಾರೆ.

ಸೌಜನ್ಯ: indianexpress.com

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News