ಆಧಾರ್, ನೆಟ್‌ಬ್ಯಾಂಕಿಂಗ್ ಒಟಿಪಿಗಳು ವಿಳಂಬವಾಗಲಿವೆಯೇ?: ಟ್ರಾಯ್ ಉತ್ತರ ಇಲ್ಲಿದೆ

Update: 2024-11-29 11:01 GMT

ಸಾಂದರ್ಭಿಕ ಚಿತ್ರ |PC : freepik.com

ಹೊಸದಿಲ್ಲಿ: ನಿನ್ನೆಯಷ್ಟೇ ಹಲವು ಸುದ್ದಿಸಂಸ್ಥೆಗಳು ಮತ್ತು ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳು ಬಳಕೆದಾರರು 2024,ಡಿ.1ರಿಂದ ಆಧಾರ್,ನೆಟ್‌ಬ್ಯಾಂಕಿಂಗ್ ಮತ್ತು ಇತರ ಸೇವೆಗಳಿಗೆ ಒಟಿಪಿಗಳನ್ನು ವಿಳಂಬವಾಗಿ ಸ್ವೀಕರಿಸಲಿದ್ದಾರೆ ಎಂದು ಹೇಳಿದ್ದವು. ದೇಶಾದ್ಯಂತ ಕಳುಹಿಸಲಾಗುವ ಎಲ್ಲ ಸಂದೇಶಗಳ ಜಾಡು ಪತ್ತೆ ಹಚ್ಚುವುದನ್ನು ಟೆಲಿಕಾಮ್ ಕಂಪನಿಗಳಿಗೆ ಕಡ್ಡಾಯಗೊಳಿಸಿರುವ ಟ್ರಾಯ್‌ನ ನೂತನ ನಿಯಮಗಳು ವಿಳಂಬಕ್ಕೆ ಕಾರಣ ಎಂದು ಈ ವರದಿಗಳು ಹೇಳಿದ್ದವು. ಬಳಕೆದಾರರು ಪ್ರಮುಖ ವಹಿವಾಟುಗಳಲ್ಲಿ ಅಡೆತಡೆಗಳನ್ನು ಅನುಭವಿಸಬಹುದು ಮತ್ತು ಇದು ವ್ಯಾಪಕ ಕಳವಳಕ್ಕೆ ಕಾರಣವಾಗಲಿದೆ ಎಂದೂ ಈ ವರದಿಗಳು ಬೆಟ್ಟು ಮಾಡಿದ್ದವು. ಈ ಕುರಿತು ಟ್ರಾಯ್ ಸ್ಪಷ್ಟನೆ ನೀಡಿದೆ.

ಒಟಿಪಿ ವಿಳಂಬವನ್ನು ತಳ್ಳಿಹಾಕಿರುವ ಟ್ರಾಯ್, ಇದು ಅಪ್ಪಟ ಸುಳ್ಳು ಮಾಹಿತಿ ಎಂದು ಎಕ್ಸ್ ಪೋಸ್ಟ್‌ನಲ್ಲಿ ಹೇಳಿದೆ. ತನ್ನ ಹೊಸ ಸಂದೇಶ ಪತ್ತೆ ಹಚ್ಚುವಿಕೆ ಮಾರ್ಗಸೂಚಿಗಳು ಒಟಿಪಿ ವಿತರಣೆಯಲ್ಲಿ ಯಾವುದೇ ವಿಳಂಬವನ್ನುಂಟು ಮಾಡುವುದಿಲ್ಲ ಎಂದು ಸಾರ್ವಜನಿಕರಿಗೆ ಭರವಸೆ ನೀಡಿರುವ ಟ್ರಾಯ್, ಟೆಲಿಕಾಮ್ ಕಂಪನಿಗಳು ಸಂದೇಶ ರವಾನೆ ವ್ಯವಸ್ಥೆಗಳ ಸುರಕ್ಷತೆಯನ್ನು ಹೆಚ್ಚಿಸಲಿವೆ ಮತ್ತು ಒಟಿಪಿಯಂತಹ ಅಗತ್ಯ ವಹಿವಾಟುಗಳಿಗಾಗಿ ಅಡೆತಡೆಯಿಲ್ಲದ ಸೇವೆಯನ್ನು ಮುಂದುವರಿಸಲಿವೆ ಎಂದು ಒತ್ತಿ ಹೇಳಿದೆ.

ನೂತನ ನಿಯಮಗಳಡಿ ಬಳಕೆದಾರರು ಒಟಿಪಿ ವಿಳಂಬಗಳನ್ನು ಎದುರಿಸಬಹುದು ಎಂದು ಆರೋಪಿಸಿರುವ ಸುದ್ದಿಸಂಸ್ಥೆಯೊಂದರ ಲೇಖನವನ್ನು ತನ್ನ ಸ್ಪಷ್ಟೀಕರಣದಲ್ಲಿ ನೇರವಾಗಿ ಉಲ್ಲೇಖಿಸಿರುವ ಟ್ರಾಯ್, ಇದು ಸಂಪೂರ್ಣ ತಪ್ಪು ಮಾಹಿತಿಯಾಗಿದೆ. ಟೆಲಿಕಾಮ್ ಕಂಪನಿಗಳು ಸಂದೇಶದ ಮೂಲದ ಪತ್ತೆ ಹಚ್ಚುವಿಕೆಯನ್ನು ಖಚಿತಪಡಿಸಿಕೊಳ್ಳುವುದನ್ನು ಕಡ್ಡಾಯಗೊಳಿಸಲಾಗಿದೆ,ಇದು ಯಾವುದೇ ಸಂದೇಶದ ವಿತರಣೆಯನ್ನು ವಿಳಂಬಿಸುವುದಿಲ್ಲ ಎಂದು ಹೇಳಿದೆ.

ಸಗಟು ಸಂದೇಶಗಳ ಮೂಲಗಳನ್ನು ಪತ್ತೆ ಹಚ್ಚಲು ವ್ಯವಸ್ಥೆಗಳನ್ನು ಸಕ್ರಿಯಗೊಳಿಸುವಂತೆ ಟೆಲಿಕಾಮ್ ಕಂಪನಿಗಳಿಗೆ ಟ್ರಾಯ್ ನ ಆದೇಶವು ಒಟಿಪಿ ವಿಳಂಬಗಳ ಕುರಿತು ಕಳವಳಕ್ಕೆ ಕಾರಣವಾಗಿವೆ. ನೂತನ ನಿಯಮಗಳ ಮೂಲಕ ಅನುಮಾನಾಸ್ಪದ ಮತ್ತು ಮೋಸದ ಸಂದೇಶಗಳನ್ನು ನಿಗ್ರಹಿಸಲು ಟ್ರಾಯ್ ಉದ್ದೇಶಿಸಿದೆ.

ಬಳಕೆದಾರರು ರವಾನಿಸುವ ಸಂದೇಶದ ಮೂಲವನ್ನು ಪತ್ತೆ ಹಚ್ಚುವ ವ್ಯವಸ್ಥೆಯನ್ನು ಟೆಲಿಕಾಮ್ ಆಪರೇಟರ್‌ಗಳು ಅಳವಡಿಸಿಕೊಳ್ಳಬೇಕಿದೆ. 2024 ನ.1ರಿಂದಲೇ ನಿಯಮಗಳು ಜಾರಿಗೊಳ್ಳಬೇಕಿದ್ದರೂ ಟೆಲಿಕಾಮ್ ಕಂಪನಿಗಳು ತಂತ್ರಜ್ಞಾನವನ್ನು ಉನ್ನತೀಕರಿಸಲು ಸಮಯಾವಕಾಶ ಕೋರಿದ್ದರಿಂದ ಗಡುವನ್ನು ನ.30ರವರೆಗೆ ವಿಸ್ತರಿಸಲಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News