2022ರಲ್ಲಿ ಭಾರತದಲ್ಲಿ ಯುವಜನರ ನಿರುದ್ಯೋಗ ದರ ನೆರೆದೇಶಗಳಿಗಿಂತ ಹೆಚ್ಚಿತ್ತು: ವಿಶ್ವಬ್ಯಾಂಕ್ ವರದಿ
ಹೊಸದಿಲ್ಲಿ: ಕಳೆದ ವರ್ಷ ಭಾರತದಲ್ಲಿ ಯುವಜನರ ನಿರುದ್ಯೋಗ ದರವು ಶೇ.23.22ರಷ್ಟಿದ್ದು,ಇದು ನೆರೆದೇಶಗಳಾದ ಪಾಕಿಸ್ತಾನ (ಶೇ.11.3),ಬಾಂಗ್ಲಾದೇಶ (ಶೇ.12.9) ಮತ್ತು ಭೂತಾನ (ಶೇ.14.4)ಗಿಂತ ಅಧಿಕವಾಗಿತ್ತು ಎಂದು ವಿಶ್ವಬ್ಯಾಂಕ್ ತನ್ನ ವರದಿಯಲ್ಲಿ ತಿಳಿಸಿದೆ.
ವರದಿಯ ಪ್ರಕಾರ 2022ರಲ್ಲಿ ನಿರುದ್ಯೋಗ ದರವು ಚೀನಾದಲ್ಲಿ ಶೇ.13.2,ಸಿರಿಯಾದಲ್ಲಿ ಶೇ.22.1,ಇಂಡೋನೇಶ್ಯಾದಲ್ಲಿ ಶೇ.13,ಮಲೇಶ್ಯಾದಲ್ಲಿ ಶೇ.11.7,ವಿಯೆಟ್ನಾಮ್ನಲ್ಲಿ ಶೇ.7.4,ದಕ್ಷಿಣ ಕೊರಿಯಾದಲ್ಲಿ ಶೇ.6.9 ಮತ್ತು ಸಿಂಗಪುರದಲ್ಲಿ ಶೇ.6.1ರಷ್ಟಿತ್ತು.
ವರದಿಯು ಅಂತರರಾಷ್ಟ್ರೀಯ ಕಾರ್ಮಿಕ ಸಂಸ್ಥೆಯಿಂದ ದತ್ತಾಂಶಗಳನ್ನು ಪಡೆದುಕೊಂಡಿದೆ.
ಯುವಜನರ ನಿರುದ್ಯೋಗ ದರವು 15ರಿಂದ 24 ವರ್ಷ ವಯೋಮಾನದ, ಉದ್ಯೋಗವಿಲ್ಲದ ಆದರೆ ಉದ್ಯೋಗಕ್ಕಾಗಿ ಸಕ್ರಿಯ ಹುಡುಕಾಟದಲ್ಲಿರುವವರನ್ನು ಸೂಚಿಸುತ್ತದೆ.
15ರಿಂದ 34 ವರ್ಷ ವಯೋಮಾನದ ಸುಮಾರು ಶೇ.36ರಷ್ಟು ಭಾರತೀಯರು ದೇಶದಲ್ಲಿ ಯುವ ನಿರುದ್ಯೋಗವು ಅತ್ಯಂತ ದೊಡ್ಡ ಸಮಸ್ಯೆಯಾಗಿದೆ ಎಂದು ನಂಬಿದ್ದಾರೆ ಎಂದು ಲೋಕನೀತಿ-ಸಿಡಿಎಸ್ ಸಮೀಕ್ಷೆಯು ಬಹಿರಂಗೊಳಿಸಿದೆ. ಯುವ ಭಾರತೀಯರ ವೃತ್ತಿ ಆಕಾಂಕ್ಷೆಗಳು,ಉದ್ಯೋಗ ಆದ್ಯತೆಗಳು ಮತ್ತು ನಿರೀಕ್ಷೆಗಳನ್ನು ವಿಶ್ಲೇಷಿಸಲು ಈ ಸಮೀಕ್ಷೆಯನ್ನು ನಡೆಸಲಾಗಿತ್ತು.