ಚೀನಾದ ವಿದೇಶಾಂಗ ಸಚಿವ ಮೂರು ವಾರದಿಂದ ಗೈರುಹಾಜರಿ: ಅನುಮಾನಕ್ಕೆ ಕಾರಣ

Update: 2023-07-18 17:23 GMT

Photo: twitter/ambqingang

ಬೀಜಿಂಗ್: ಚೀನಾದ ರಾಜಕೀಯ ಕ್ಷೇತ್ರದ ಉದಯೋನ್ಮುಖ ತಾರೆ ಎಂದು ಪರಿಗಣಿಸಲಾದ ವಿದೇಶಾಂಗ ಸಚಿವ ಕ್ವಿನ್ ಗಾಂಗ್ ಕಳೆದ ಮೂರು ವಾರಗಳಿಂದ ಬಹಿರಂಗವಾಗಿ ಕಾಣಿಸಿಕೊಳ್ಳದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

2 ವರ್ಷ ಅಮೆರಿಕದಲ್ಲಿ ಚೀನಾದ ರಾಯಭಾರಿಯಾಗಿದ್ದ ಕ್ವಿನ್ ಗಾಂಗ್ ಚೀನಾದ ರಾಜಕೀಯ ವಲಯದಲ್ಲಿ ಕ್ಷಿಪ್ರವಾಗಿ ಪ್ರವರ್ಧಮಾನಕ್ಕೆ ಬಂದಿದ್ದು ಕಳೆದ ಡಿಸೆಂಬರ್‍ನಲ್ಲಿ ವಿದೇಶಾಂಗ ಸಚಿವರಾಗಿ ಭಡ್ತಿ ಪಡೆದಿದ್ದರು. ‌

ಜೂನ್ 25ರಂದು ಬೀಜಿಂಗ್‍ನಲ್ಲಿ ಶ್ರೀಲಂಕಾ, ರಶ್ಯ ಮತ್ತು ವಿಯೆಟ್ನಾಮ್‍ನ ನಿಯೋಗದ ಜತೆ ಸಭೆ ನಡೆಸಿದ ಬಳಿಕ ಅವರು ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ. ಕಳೆದ ವಾರ ಇಂಡೊನೇಶ್ಯಾದಲ್ಲಿ ನಡೆದಿದ್ದ ಆಸಿಯಾನ್ ವಿದೇಶಾಂಗ ಸಚಿವರ ಅಂತರಾಷ್ಟ್ರೀಯ ಸಮ್ಮೇಳನದಲ್ಲೂ ಅವರು ಗೈರುಹಾಜರಾಗಿದ್ದರು. ಸೋಮವಾರ ಬೀಜಿಂಗ್‍ಗೆ ಭೇಟಿ ನೀಡಿದ್ದ ಪಿಲಿಪ್ಪೀನ್ಸ್‍ನ ಮಾಜಿ ಅಧ್ಯಕ್ಷ ರೊಡ್ರಿಗೊ ಡ್ಯುಟೆರ್ಟ್ ಜತೆಗಿನ ಸಭೆಯಲ್ಲಿ ಚೀನಾ ಅಧ್ಯಕ್ಷ ಜಿಂಪಿಂಗ್, ಸಹಾಯಕ ವಿದೇಶಾಂಗ ಸಚಿವ ಮಾ ಝವೋಕ್ಸು ಹಾಗೂ ಮಾಜಿ ವಿದೇಶಾಂಗ ಸಚಿವ ವಾಂಗ್ ಯಿ ಪಾಲ್ಗೊಂಡಿದ್ದರು.

ಮಂಗಳವಾರ ಬೀಜಿಂಗ್‍ನಲ್ಲಿ ಅಮೆರಿಕದ ಹವಾಮಾನ ರಾಯಭಾರಿ ಜಾನ್ ಕೆರಿ ಜತೆಗಿನ ಸಭೆಯಲ್ಲಿಯೂ ವಾಂಗ್ ಯಿ ಚೀನಾ ನಿಯೋಗದ ನೇತೃತ್ವ ವಹಿಸಿದ್ದರು. ಸ್ಥಳೀಯ ಮಾಧ್ಯಮಗಳ ವರದಿ ಪ್ರಕಾರ ಈ ವಾರ ಕ್ವಿನ್ ಯುರೋಪಿಯನ್ ಯೂನಿಯನ್‍ನ ಉನ್ನತ ಅಧಿಕಾರಿ ಜೋಸೆಫ್ ಬೊರೆಲ್‍ರನ್ನು ಭೇಟಿಯಾಗಬೇಕಿತ್ತು. ಆದರೆ ಈ ಸಭೆಯನ್ನು ಯಾವುದೇ ನಿಖರ ಕಾರಣ ನೀಡದೆ ಮುಂದೂಡಲಾಗಿದೆ. ಕ್ವಿನ್ ಗಾಂಗ್ ಮಹಿಳೆಯೊಬ್ಬರ ಜತೆ ವಿವಾಹೇತರ ಸಂಬಂಧ ಹೊಂದಿರುವ ವದಂತಿಯ ನಡುವೆಯೇ ಕ್ವಿನ್ ನಿಗೂಢ ಅನುಪಸ್ಥಿತಿ ಬೆಳಕಿಗೆ ಬಂದಿದೆ ಎಂದು ಕ್ಯೊಡೊ ಸುದ್ಧಿಸಂಸ್ಥೆ ವರದಿ ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News