ಕೊರಿಯ ಓಪನ್ ಬ್ಯಾಡ್ಮಿಂಟನ್ ಪಂದ್ಯಾವಳಿ: 2ನೇ ಸುತ್ತಿನಲ್ಲಿ ಪ್ರಣಯ್ಗೆ ಸೋಲು
ಯೋಸು (ದಕ್ಷಿಣ ಕೊರಿಯ): ಕೊರಿಯ ಓಪನ್ ಸೂಪರ್ 500 ಬ್ಯಾಡ್ಮಿಂಟನ್ ಪಂದ್ಯಾವಳಿಯ ಪುರುಷರ ಸಿಂಗಲ್ಸ್ನ ಎರಡನೇ ಸುತ್ತಿನಲ್ಲಿ ಸೋಲನುಭವಿಸಿರುವ ಭಾರತೀಯ ಆಟಗಾರ ಎಚ್.ಎಸ್. ಪ್ರಣಯ್ ಕೂಟದಿಂದ ಹೊರಬಿದ್ದಿದ್ದಾರೆ.
ದಕ್ಷಿಣ ಕೊರಿಯದ ಯೋಸು ನಗರದಲ್ಲಿ ನಡೆಯುತ್ತಿರುವ ಪಂದ್ಯಾವಳಿಯಲ್ಲಿ, ಗುರುವಾರ ಪ್ರಣಯ್ರನ್ನು ಹಾಂಕಾಂಗ್ನ ಲೀ ಚೋಕ್ ಯಿಯು 21-15, 21-19, 21-18 ಗೇಮ್ಗಳಿಂದ ಸೋಲಿಸಿದರು. ಜಿದ್ದಾಜಿದ್ದಿನ ಹೋರಾಟದಲ್ಲಿ 18ನೇ ವಿಶ್ವ ರ್ಯಾಂಕಿಂಗ್ನ ಲೀ ಚೋಕ್ ಯಿಯು, 10ನೇ ರ್ಯಾಂಕಿಂಗ್ನ ಪ್ರಣಯ್ರನ್ನು ಸೋಲಿಸಲು ಒಂದು ಗಂಟೆ ಆರು ನಿಮಿಷ ತೆಗೆದುಕೊಂಡರು.
ಇನ್ನೊಂದು ಪುರುಷರ ಸಿಂಗಲ್ಸ್ ಪಂದ್ಯದಲ್ಲಿ, ಭಾರತದ ಪ್ರಿಯಾಂಶು ರಜಾವತ್ ವಿಶ್ವದ ನಂಬರ್ ನಾಲ್ಕನೇ ಆಟಗಾರ ಜಪಾನ್ನ ಕೊಡೈ ನರವೊಕರಿಗೆ ತೀವ್ರ ಪ್ರತಿರೋಧ ತೋರಿದರಾದರೂ, ಅಂತಿಮವಾಗಿ 14-21, 21-18, 17-21 ಗೇಮ್ಗಳಿಂದ ಪರಾಭವಗೊಂಡರು.
ಮಹಿಳೆಯರ ಡಬಲ್ಸ್ನ ಎರಡನೇ ಸುತ್ತಿನಲ್ಲಿ ಭಾರತದ ತ್ರೀಸಾ ಜೋಲಿ ಮತ್ತು ಗಾಯತ್ರಿ ಗೋಪಿಚಂದ್ ಎರಡನೇ ಶ್ರೇಯಾಂಕದ ದಕ್ಷಿಣ ಕೊರಿಯದ ನಾ ಹಾ ಬಯೇಕ್ ಮತ್ತು ಹೀ ಸೊ ಲೀ ಅವರಿಗೆ ಸರಿಸಾಟಿಯಾಗಲಿಲ್ಲ. ಅವರು 33 ನಿಮಿಷಗಳಲ್ಲಿ 11-21, 4-21 ಗೇಮ್ಗಳಿಂದ ಸೋಲನುಭವಿಸಿದರು.
ಮಿಶ್ರ ಡಬಲ್ಸ್ನಲ್ಲೂ ಭಾರತ ಹಿನ್ನಡೆ ಅನುಭವಿಸಿತು. ಭಾರತದ ರೋಹನ್ ಕಪೂರ್ ಮತ್ತು ಸಿಕ್ಕಿ ರೆಡ್ಡಿ, ಚೀನಾದ ಝೆ ಯಾನ್ ಫೆಂಗ್ ಮತ್ತು ಪಿಂಗ್ ಡೊಂಗ್ ಹುವಾಂಗ್ ಜೋಡಿಯ ವಿರುದ್ಧ 15-21, 12-21 ಗೇಮ್ಗಳಿಂದ ಸೋಲನುಭವಿಸಿದರು.
ಭಾರತದ ಒಲಿಂಪಿಕ್ ಪದಕ ವಿಜೇತ ಆಟಗಾರರಾದ ಪಿ.ವಿ. ಸಿಂಧು ಮತ್ತು ಕಿಡಂಬಿ ಶ್ರೀಕಾಂತ್ ಕ್ರಮವಾಗಿ ಮಹಿಳೆಯರ ಮತ್ತು ಪುರುಷರ ಸಿಂಗಲ್ಸ್ಗಳಲ್ಲಿ ಈಗಾಗಲೇ ಮೊದಲ ಸುತ್ತಿನಲ್ಲೇ ಪರಾಭವಗೊಂಡಿದ್ದಾರೆ.