ನೇಪಾಳ: ನದಿಗೆ ಬಸ್ ಉರುಳಿ 8 ಮಂದಿ ಮೃತ್ಯು
Update: 2023-08-23 17:48 GMT
ಕಠ್ಮಂಡು: ನೇಪಾಳದ ಬಾಗ್ಮತಿ ಪ್ರಾಂತದಲ್ಲಿ ಬುಧವಾರ ಬಸ್ಸೊಂದು ನದಿಗೆ ಉರುಳಿ ಬಿದ್ದಿದ್ದು ಕನಿಷ್ಟ 8 ಮಂದಿ ಮೃತರಾಗಿದ್ದಾರೆ. ಇತರ 15 ಮಂದಿ ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಸುದ್ಧಿಸಂಸ್ಥೆ ವರದಿ ಮಾಡಿದೆ.
ಕಠ್ಮಂಡುವಿನಿಂದ ಪೊಖಾರ ನಗರಕ್ಕೆ ತೆರಳುತ್ತಿದ್ದ ಬಸ್ಸು ಬಾಗ್ಮತಿ ಪ್ರಾಂತದ ಧಾಡಿಂಗ್ ಜಿಲ್ಲೆಯ ಬಳಿ ಹೆದ್ದಾರಿಯ ಪಕ್ಕದಲ್ಲಿರುವ ತ್ರಿಶೂಲಿ ನದಿಗೆ ಉರುಳಿದ್ದು ಕನಿಷ್ಟ 8 ಮಂದಿ ಮೃತಪಟ್ಟು ಇತರ 15 ಮಂದಿ ಗಾಯಗೊಂಡಿದ್ದಾರೆ. ಕೆಲವರ ಸ್ಥಿತಿ ಗಂಭೀರವಾಗಿದ್ದು ಮೃತರ ಸಂಖ್ಯೆ ಹೆಚ್ಚುವ ಸಾಧ್ಯತೆಯಿದೆ ಎಂದು ಡಿವೈಎಸ್ಪಿ ಸಂತೂಲಾಲ್ ಪ್ರಸಾದ್ ಜೈಸ್ವರ್‍ರನ್ನು ಉಲ್ಲೇಖಿಸಿದ ಮಾಧ್ಯಮ ವರದಿ ಹೇಳಿದೆ.
ಕಳೆದ ಕೆಲ ದಿನಗಳಿಂದ ಸುರಿದ ನಿರಂತರ ಮಳೆಯಿಂದಾಗಿ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಿತ್ತು. ತಕ್ಷಣ ರಕ್ಷಣಾ ತಂಡ ಸ್ಥಳಕ್ಕೆ ಧಾವಿಸಿದ್ದು ನೀರಿನಲ್ಲಿ ಅರ್ಧ ಮುಳುಗಿದ್ದ ಬಸ್ಸಿನಲ್ಲಿದ್ದ ಹಲವು ಪ್ರಯಾಣಿಕರನ್ನು ರಕ್ಷಿಸಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.