ತನ್ನಲ್ಲಿದ್ದ ಗೋವುಗಳ ನೆನಪಿಗಾಗಿ ಪ್ರತಿಮೆ ರಚಿಸಿದ ಹೈನುಗಾರ!

Update: 2024-06-10 05:24 GMT

ಉಡುಪಿ: ಒಂದು ಕಾಲದಲ್ಲಿ ವಿವಿಧ ತಳಿಗಳ ನೂರಾರು ಜಾನುವಾರುಗಳನ್ನು ಇಟ್ಟು ಹೈನುಗಾರಿಕೆ ಮಾಡುತ್ತಿದ್ದ ಕೃಷಿಕರೊಬ್ಬರು, ಅವಘಡದಿಂದ ಆ ವೃತ್ತಿಯಿಂದಲೇ ದೂರ ಸರಿಯಬೇಕಾಯಿತು. ತನ್ನಲ್ಲಿದ್ದ ಎಲ್ಲ ಗೋವುಗಳನ್ನು ಬೇರೆಯವರಿಗೆ ದಾನವಾಗಿ ನೀಡಿದರು. ಬಳಿಕ ಸದಾ ಕಾಡುತ್ತಿದ್ದ ಗೋವುಗಳ ನೆನಪಿಗಾಗಿ ಅವರು ತಮ್ಮ ತೋಟದಲ್ಲಿ ಪ್ರತಿಮೆಗಳನ್ನು ರಚಿಸಿದರು. ಆ ಮೂಲಕ ಅವರು ತನ್ನ ಹಾಗೂ ಗೋವಿನ ಸಂಬಂಧವನ್ನು ಇಡೀ ಜಗತ್ತಿಗೆ ತೋರಿಸಿಕೊಟ್ಟರು.

ಮಣಿಪಾಲದಿಂದ ಸುಮಾರು ಐದು ಕಿ.ಮೀ. ದೂರದ ಹಿರೇಬೆಟ್ಟು ಎಂಬಲ್ಲಿರುವ ಶ್ರೀಕಾಂತ್ ಭಟ್ ನಂದಳಿಕೆ ಈ ರೀತಿವಿಶಿಷ್ಟವಾಗಿ ಗೋ ಪ್ರೇಮ ಮೆರೆದ ಕೃಷಿಕ. ಇವರ ಕೃಷಿ ತೋಟದಲ್ಲಿ ತಲೆಯೆತ್ತಿ ನಿಂತಿರುವ ಹತ್ತಾರು ಅದ್ಭುತ ಕಲಾಕೃತಿಗಳು ಎಲ್ಲರನ್ನು ಆಕರ್ಷಿಸುತ್ತಿವೆ.

ಸುಮಾರು 10 ವರ್ಷಗಳ ಹಿಂದೆ ಶ್ರೀಕಾಂತ್ ಭಟ್, ಐಶ್ವರ್ಯ ಡೇರಿ ಫಾರ್ಮ್‌ನ್ನು ನಡೆಸಿಕೊಂಡು ಬರುತ್ತಿದ್ದರು. ಆ ಸಮಯದಲ್ಲಿ ಅವರಲ್ಲಿ ವಿವಿಧ ತಳಿಯ ಸುಮಾರು 100 ದನಗಳಿದ್ದವು. ಈ ನಡುವೆ 2010ರಲ್ಲಿ ಶ್ರೀಕಾಂತ್ ಭಟ್ ಅಪಘಾತಕ್ಕೆ ಒಳಗಾಗಿದ್ದರು. ಇದರಿಂದ ಗಾಯಗೊಂಡ ಅವರಿಗೆ ಕೊಟ್ಟಿಗೆಗೆ ಹೋಗಿ ಸಾಕಷ್ಟು ಕಷ್ಟದ ಕೆಲಸಗಳನ್ನು ಮಾಡದಂತೆ ವೈದ್ಯರು ಸಲಹೆ ನೀಡಿದ್ದರು.

ಕೊಟ್ಟಿಗೆಗೆ ಹೋಗದೆ ನಿರೀಕ್ಷೆಯಂತೆ ಹೈನುಗಾರಿಕೆ ಮಾಡಲು ಅವರಿಗೆ ಸಾಧ್ಯವಾಗಲಿಲ್ಲ. ಅದಕ್ಕಾಗಿ ಅವರು ತನ್ನಲ್ಲಿದ್ದ ಎಲ್ಲ 100 ದನಗಳನ್ನು ಹೈನುಗಾರಿಕೆ ಮಾಡುವವರಿಗೆ ಉಚಿತವಾಗಿ ನೀಡಿದರು. ಆದರೆ ತನ್ನಲ್ಲಿದ್ದ ಆ ಎಲ್ಲ ದನಗಳ ನೆನಪು ಸದಾ ಶ್ರೀಕಾಂತ್‌ರನ್ನು ಕಾಡುತ್ತಿತ್ತು. ಅದಕ್ಕಾಗಿ ಈ ಎಲ್ಲ ದನಗಳ ನೆನಪಿಗಾಗಿ ತನ್ನ ತೋಟದಲ್ಲಿ ಉದ್ಯಾನವನ ಹಾಗೂ ಅವುಗಳ ಸ್ಮಾರಕಗಳನ್ನು ನಿರ್ಮಿಸಲು ಅವರು ನಿಶ್ಚಯಿಸಿದರು.

ದನಗಳ ಆಲ್ಬಮ್‌ನಿಂದ ಯೋಚನೆ

ಈ ಹಿಂದೆ ಈ ಜಾನುವಾರುಗಳ ಫೋಟೊ ಅಲ್ಬಮ್‌ನ್ನು ಶ್ರೀಕಾಂತ್ ಭಟ್ ಮಾಡಿ ಇಟ್ಟಿದ್ದರು. ಈ ಆಲ್ಬಮ್ ನೋಡುವಾಗ ಇವರಿಗೆ ತನ್ನಲ್ಲಿದ್ದ ಜಾನುವಾರುಗಳ ಸ್ಮಾರಕ ಹಾಗೂ ಉದ್ಯಾನವನವನ್ನು ನಿರ್ಮಿಸುವ ಯೋಚನೆ ಬಂತು. ಮುಂದೆ ಈ ಯೋಚನೆ ಕಾರ್ಯರೂಪಕ್ಕೆ ಬಂತು. ತನ್ನಲ್ಲಿದ್ದ ದನಗಳದ್ದೇ ಪ್ರತಿರೂಪ ಎಂಬಂತೆ ದನಗಳ ಪ್ರತಿಮೆಗಳನ್ನು ತಯಾರಿಸಲು ಈ ಆಲ್ಬಮ್ ಸಹಕಾರಿಯಾಯಿತು.

‘ಕೊರೋನ ಸಂದರ್ಭ ಸುಮಾರು 2 ವರ್ಷಗಳ ಕಾಲ ಇಡೀ ಜಗತ್ತೇ ಸ್ತಬ್ಧಗೊಂಡಿತ್ತು. ಆಗ ಯಾರಿಗೂ ಎಲ್ಲೂ ಕೆಲಸ ಇರಲಿಲ್ಲ. ಆ ಸಂದರ್ಭದಲ್ಲಿ ನಾನು ಈ ಪ್ರತಿಮೆಗಳ ನಿರ್ಮಾಣದ ಬಗ್ಗೆ ನಿರ್ಧರಿಸಿದೆ. ಅದಕ್ಕಾಗಿ ನಾನು ಶಿವಮೊಗ್ಗದ ಕಲಾವಿದ ಅಜ್ಜಯ್ಯ ಎಂಬವರನ್ನು ಸಂಪರ್ಕಿಸಿದೆ. ಅವರಿಗೆ ಆಲ್ಬಮ್ ತೋರಿಸಿ ದನಗಳ ಪ್ರತಿಮೆ ತಯಾರಿಸಲು ಕೇಳಿಕೊಂಡಿದ್ದೆ. ಅದಕ್ಕೆ ಒಪ್ಪಿದ ಅಜ್ಜಯ್ಯ ಈ ಕಾರ್ಯಕ್ಕೆ ಮುಂದಾದರು’ ಎಂದು ಶ್ರೀಕಾಂತ್ ಭಟ್ ತಿಳಿಸಿದರು.

‘ಸ್ಮಾರಕಗಳ ನಿರ್ಮಾಣಕ್ಕೆ ಬೇಕಾದ ಕಬ್ಬಿಣದ ರಾಡ್, ಸಿಮೆಂಟ್, ಮರಳುಗಳನ್ನು ತಂದು ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಲಾಗಿತ್ತು. ಕಲಾವಿದ ಅಜ್ಜಯ್ಯ ತನ್ನ ಕೈಚಳದಿಂದ ಆಲ್ಬಮ್‌ಗಳಲ್ಲಿ ಇರುವಂತೆಯೇ ದನಗಳ ಪ್ರತಿಮೆಗಳನ್ನು ತಯಾರಿಸಿದರು. ಈ ಕೆಲಸಕ್ಕೆ ನಾನು ಕೂಡ ಅವರೊಂದಿಗೆ ಕೈಜೋಡಿಸಿ ಸಹಾಯ ಮಾಡಿದೆ. ಹೀಗೆ ಅದ್ಭುತ ಕಲಾಕೃತಿಗಳು ನಮ್ಮ ತೋಟದಲ್ಲಿ ಎದ್ದು ನಿಂತವು’ ಎನ್ನುತ್ತಾರೆ ಶ್ರೀಕಾಂತ್ ಭಟ್

40 ಆಕರ್ಷಕ ಕಲಾಕೃತಿಗಳು

ಈ ಸ್ಮಾರಕಗಳಿಂದ ಇಡೀ ತೋಟ ಆಕರ್ಷಕ ವಾತಾವರಣವನ್ನು ಸೃಷ್ಟಿಸಿವೆ. ಮರ, ಗಿಡಗಳ ಮಧ್ಯೆ ಹಸುಗಳು, ಕರುಗಳ ಶಿಲ್ಪಗಳು ಕಂಗೊಳಿಸುತ್ತಿವೆ. ಪ್ರತಿಯೊಂದು ಕಲಾಕೃತಿಗಳು ಶ್ರೀಕಾಂತ್ ಭಟ್‌ರಲ್ಲಿದ್ದ ದನಗಳನ್ನೇ ಹೋಲುತ್ತಿವೆ. ಕಲಾವಿದನ ಅದ್ಭುತ ಕೌಶಲ್ಯಕ್ಕೆ ಈ ಕಲಾಕೃತಿಗಳು ಜೀವಂತ ಸಾಕ್ಷಿಯಾಗಿವೆ.

‘ಇಲ್ಲಿ ಒಟ್ಟು 40 ಹಸುಗಳ ಪ್ರತಿಮೆಗಳಿವೆ. ಇವು ಅಸಲಿ ಹಸುಗಿಂತ ಕಡಿಮೆಯಿಲ್ಲದ ರೀತಿಯಲ್ಲಿರುವುದು ನೋಡಿ ನನಗೆ ತುಂಬಾ ಸಂತೋಷವಾಗುತ್ತದೆ. ಇದರೊಂದಿಗೆ ಎರಡು ಮನುಷ್ಯರ ಪ್ರತಿಮೆಗಳನ್ನು ಕೂಡ ರಚಿಸಲಾಗಿದೆ. ಅದರಲ್ಲಿ ಒಂದು ಕಾವಲುಗಾರನ ಪ್ರತಿಮೆಯಾಗಿದೆ. ಇನ್ನೊಂದರಲ್ಲಿ ಹಸುವಿನ ಹಾಲು ಕರೆಯುವ ವ್ಯಕ್ತಿಯನ್ನು ಚಿತ್ರಿಸಲಾಗಿದೆ. ಈ ವ್ಯಕ್ತಿಯು ಈ ಹಿಂದೆ ನಮ್ಮ ಡೇರಿಯಲ್ಲಿದ್ದ ಹಾಲು ಕರೆಯುವ ವ್ಯಕ್ತಿಯನ್ನು ಹೋಲುತ್ತದೆ’ ಎಂದು ಶ್ರೀಕಾಂತ್ ಭಟ್ ಹೇಳಿದ್ದಾರೆ.

ಶ್ರೀರಾಮಚಂದ್ರಪುರ ಮಠದಲ್ಲಿದ್ದ ಹೋರಿಯ ಫೋಟೊವನ್ನು ಕೂಡ ಈ ಕಲಾವಿದನಿಗೆ ತಂದು ಕೊಟ್ಟಿದ್ದೆ. ಅವರು ಅದರಂತೆ ಬೃಹತ್ ಶಿಲ್ಪವನ್ನು ರಚಿಸಿದ್ದಾರೆ. ಅದೇ ರೀತಿ ನಮ್ಮಲ್ಲಿದ್ದ ಗೀರ್, ಸಾಯಿವಾಲ್, ಎಚ್‌ಎಫ್ ಸೇರಿದಂತೆ ವಿವಿಧ ತಳಿಗಳ ಜಾನುವಾರುಗಳ ಪ್ರತಿಮೆಗಳನ್ನು ಕೂಡ ಇಲ್ಲಿ ಅದ್ಭುತವಾಗಿ ಚಿತ್ರಿಸಲಾಗಿದೆ. ನಮ್ಮಲ್ಲಿದ್ದ ದಿನಕ್ಕೆ 30 ಲೀಟರ್ ಹಾಲು ನೀಡುವ ಹಸುವಿನ ಪ್ರತಿಮೆ ಕೂಡ ಮಾಡಲಾಗಿದೆ ಎಂದು ಶ್ರೀಕಾಂತ್ ಭಟ್ ಮಾಹಿತಿ ನೀಡಿದರು.

ಈ ಜಾನುವಾರು ಪ್ರತಿಮೆಗಳು ಕೇವಲ ಅಲಂಕಾರಕ್ಕೆ ಸೀಮಿತವಾಗಿರದೆ ನಮ್ಮ ನೆಲದ ಶ್ರೀಮಂತ ಕೃಷಿ ಸಂಸ್ಕೃತಿ ಮತ್ತು ಮಾನವ ಹಾಗೂ ಗೋವುಗಳ ನಡುವಿನ ಪ್ರೀತಿಯನ್ನು ಕೂಡ ಬಿಂಬಿಸುತ್ತದೆ. ತೋಟದ ಮೂಲೆ ಮೂಲೆಗಳಲ್ಲೂ ಪ್ರತಿಮೆಗಳನ್ನು ತಯಾರಿಸಿ ಇಟ್ಟಿದ್ದೇವೆ. ಇದನ್ನು ನೋಡುವುದೇ ಒಂದು ರೀತಿಯ ಸಂತೋಷ’

ಶ್ರೀಕಾಂತ್ ಭಟ್, ಕೃಷಿಕರು

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ನಝೀರ್ ಪೊಲ್ಯ

contributor

Similar News