ಚಾಲಕ ನಿದ್ರಿಸದಂತೆ ಎಚ್ಚರಿಸುವ ಉಪಕರಣ: ಕಳ್ಳರು ಬಂದರೆ ಮೊಳಗುವ ಸೈರನ್

Update: 2024-07-08 09:23 GMT

ಉಡುಪಿ: ವಾಹನ ಚಲಾಯಿಸುವಾಗ ಚಾಲಕನಿಗೆ ನಿದ್ದೆ ಬಾರದಂತೆ ಎಚ್ಚರಿಸುವ, ಮನೆಗೆ ಕಳ್ಳರು ನುಗ್ಗಿದರೆ ಸೈರನ್ ಮೊಳಗಿಸಿ ಸುತ್ತಮುತ್ತಲಿನ ಜನರನ್ನು ಅಲರ್ಟ್ ಮಾಡುವ ವಿಶಿಷ್ಟ ರೀತಿಯ ಉಪಕರಣಗಳನ್ನು ಸಾಮಾನ್ಯ ಚಾಲಕರೊಬ್ಬರು ತನ್ನ ವಿಶೇಷ ಕೌಶಲ್ಯದಿಂದ ಸಿದ್ಧಪಡಿಸಿದ್ದಾರೆ.

ಉಡುಪಿ ಕಲ್ಯಾಣಪುರ ಸಮೀಪದ ಎಡಬೆಟ್ಟು ನಿವಾಸಿ ಪ್ರಭಾಕರ ಮೇಸ್ತ(58) ಈ ವಿಶಿಷ್ಟ ಸಾಧನೆಯನ್ನು ಮಾಡಿದವರು. ಏಳನೇ ತರಗತಿ ವರೆಗೆ ಮಾತ್ರ ಕಲಿತಿರುವ ಇವರು, ತನ್ನ 16ನೇ ವಯಸ್ಸಿಗೆ ಗ್ಯಾರೇಜ್ ಸೇರಿಕೊಂಡು, ಬಳಿಕ ಮೆಕ್ಯಾನಿಕ್ ಆಗಿ ಕಾರ್ಯನಿರ್ವಹಿಸಿದರು. ತದನಂತರ ಅವರು ತನ್ನ 28ನೇ ವರ್ಷ ವಯಸ್ಸಿನಿಂದ ಈವರೆಗೆ ವೃತ್ತಿಪರ ಚಾಲಕರಾಗಿ ಕೆಲಸ ನಿರ್ವಹಿಸಿಕೊಂಡು ಬರುತ್ತಿದ್ದಾರೆ.

ಚಾಲಕರ ಜೀವ ಉಳಿಸುವ ಉಪಕರಣ

ವಾಹನ ಚಲಾಯಿಸುವಾಗ ಚಾಲಕನ ನಿದ್ದೆಗೆ ಜಾರಿದ ಪರಿಣಾಮ ಅಪಘಾತಗಳು ಸಂಭವಿಸಿರುವ ಸಾಕಷ್ಟು ಉದಾಹರಣೆಗಳು ನಮ್ಮ ಮುಂದೆ ಇವೆ. ಇಂತಹ ಅಪಘಾತಗಳನ್ನು ತಡೆಯುವ ಸಾಧನವೊಂದನ್ನು ಪ್ರಭಾಕರ ಮೇಸ್ತ ಆವಿಷ್ಕರಿಸಿ, ತನ್ನ ವಾಹನಕ್ಕೆ ಅಳವಡಿಸಿಕೊಂಡು ಯಶಸ್ವಿಯಾಗಿದ್ದಾರೆ. ಈ ಉಪಕರಣವು ವಾಹನ ಚಲಾವಣೆ ವೇಳೆ ಚಾಲಕನಿಗೆ ನಿದ್ದೆ ಬಾರದಂತೆ ಎಚ್ಚರಿಸುವ ಕೆಲಸ ಮಾಡುತ್ತದೆ.

ಇವರು ಆವಿಷ್ಕರಿಸಿದ ಈ ಉಪಕರಣ ಅಳವಡಿಸಿರುವ ವಾಹನದ ಚಾಲಕನಿಗೆ ವಾಹನ ಚಾಲನೆ ವೇಳೆ ನಿದ್ದೆ ಸಮಸ್ಯೆ ಕಾಡಿದರೆ ತಕ್ಷಣ ಈ ಸಾಧನವನ್ನು ಆನ್ ಮಾಡಬೇಕು. ಆಗ ಈ ಉಪಕರಣ ಆ್ಯಕ್ಟಿವ್ ಆಗುತ್ತದೆ. ಆ ಬಳಿಕ ಚಾಲಕ ವಾಹನದ ಸ್ಟೇರಿಂಗ್‌ನ್ನು ಎರಡು ಕೈಗಳು ಹಿಡಿಯುವಲ್ಲಿ ಅಳವಡಿಸಿರುವ ರಿಮೋಟ್ ಬಟನ್‌ಗಳನ್ನು ಪ್ರತೀ ನಾಲ್ಕು ಸೆಕೆಂಡ್‌ಗೆ ಒಮ್ಮೆ ಪ್ರೆಸ್ ಮಾಡಲೇಬೇಕು!

ಒಂದು ವೇಳೆ ಚಾಲಕ ನಾಲ್ಕು ಸೆಕೆಂಡ್‌ನೊಳಗೆ ರಿಮೋಟ್ ಬಟನ್ ಒತ್ತದಿದ್ದರೆ (ಅಂದರೆ ಚಾಲಕ ನಿದ್ದೆಗೆ ಜಾರಿದ್ದಾನೆ ಎಂಬುದು ಅರ್ಥ) ಐದನೇ ಸೆಕೆಂಡ್‌ಗೆ ವಾಹನದ ಇಂಜಿನ್ ತನ್ನಿಂತಾನೆ ಬಂದ್ ಆಗಿ ಸೈರನ್ ಮೊಳಗಲಾರಂಭಿಸುತ್ತದೆ. ಚಾಲಕ ಎಚ್ಚೆತ್ತುಕೊಂಡು ಮತ್ತೆ ಆತ ಆ ರಿಮೋಟ್ ಬಟನ್ ಒತ್ತಿದರೆ ಇಂಜಿನ್ ಆನ್ ಆಗುತ್ತದೆ.

ಒಂದು ವೇಳೆ ನಾಲ್ಕು ಸೆಕೆಂಡ್ ಬಳಿಕ ಇಂಜಿನ್ ಆಫ್ ಆದ ನಂತರವೂ ಚಾಲಕ ಎಚ್ಚರಗೊಳ್ಳದಿದ್ದಲ್ಲಿ ವಾಹನದ ನಾಲ್ಕು ಕಡೆಗಳಲ್ಲಿರುವ ಇಂಡಿಕೇಟರ್ ಬ್ಲಿಂಕ್ ಆಗುತ್ತದೆ. ಅಷ್ಟೇ ಅಲ್ಲ, ಈ ಉಪಕರಣದ ಬ್ರೇಕ್ ಮೋಟರ್ ಆನ್ ಆಗುತ್ತದೆ. ಆ ಕ್ಷಣದಲ್ಲೇ ವಾಹನದ ಬ್ರೇಕ್ ಜಾಮ್ ಆಗಿ ಅಲ್ಲಿಗೆ ನಿಲ್ಲುತ್ತದೆ. ಇತ್ತ ಸೈರನ್ ಕೂಡ ಮೊಳಗುವುದು ಮುಂದುವರಿಯುತ್ತದೆ. ಹೊರಗಡೆ ಇಂಡಿಕೇಟರ್ ಕೂಡಾ ಬ್ಲಿಂಕ್ ಆಗುತ್ತಿರುತ್ತದೆ. ಇದು ಉಳಿದ ವಾಹನಗಳ ಚಾಲಕರನ್ನು ಎಚ್ಚರಿಸಲು ಸಹಕಾರಿ ಆಗುತ್ತದೆ ಎನ್ನುತ್ತಾರೆ ಪ್ರಭಾಕರ ಮೇಸ್ತ.

ಕಳ್ಳರು ಬಂದರೆ ಮೊಳಗುವ ಸೈರನ್!

ಪ್ರಭಾಕರ ಮೇಸ್ತ ಇದೇ ರೀತಿ ಮತ್ತೊಂದು ವಿಶಿಷ್ಟ ರೀತಿಯ ಹಾಗೂ ಪ್ರತೀ ಮನೆ, ಅಂಗಡಿ, ಧಾರ್ಮಿಕ ಕೇಂದ್ರಗಳಿಗೆ ಅನುಕೂಲ ಆಗುವ ತಂತ್ರಜ್ಞಾನವೊಂದನ್ನು ಅಭಿವೃದ್ಧಿಪಡಿಸಿದ್ದಾರೆ. ಅದೇನೆಂದರೆ ಕಳ್ಳತನ ತಡೆಗಟ್ಟುವ ಉಪಕರಣ. ರಿಮೋಟ್ ಕಂಟ್ರೋಲ್ ಹೊಂದಿರುವ ಈ ಸಾಧನವು ಮನೆಗೆ ಕಳ್ಳರು ನುಗ್ಗಿದರೆ ಕೂಡಲೇ ಸೈರನ್ ಮೊಳಗಿಸಿ ಎಚ್ಚರಿಸುವ ಕೆಲಸ ಮಾಡುತ್ತದೆ. ಇದನ್ನು ಇವರು ತನ್ನ ಮನೆಗೆ ಅಳವಡಿಸಿಕೊಂಡು ಯಶಸ್ವಿಯೂ ಆಗಿದ್ದಾರೆ.

ಮನೆಗೆ ಬೀಗ ಹಾಕಿ ಹೋಗುವಾಗ ಮನೆಯವರು ಈ ಉಪಕರಣವನ್ನು ಆನ್ ಮಾಡಿ ಹೋಗಬೇಕು. ಈ ಅವಧಿಯಲ್ಲಿ ಯಾರಾದರೂ ಮನೆಯ ಬಾಗಿಲು ತೆರೆಯಲು ಯತ್ನಿಸಿದರೆ ಈ ಉಪಕರಣ ನಿರಂತರ ಸೈರನ್ ಮೊಳಗಿಸಲಾರಂಭಿ ಸುತ್ತದೆ. ಒಂದು ವೇಳೆ ಬೀಗ ಹಾಕಿದ ಮನೆಬಾಗಿಲಿಗೆ ಯಾರಾದರೂ ನೆಂಟರು, ಪೋಸ್ಟ್ ಮೆನ್ ಬಂದರೆ ಸಣ್ಣ ಪ್ರಮಾಣದ ಸಿಗ್ನಲ್ ಆಗುತ್ತದೆ. ಆದರೆ ಯಾರಾದರು ಬಾಗಿಲು ತೆಗೆಯುವ ಪ್ರಯತ್ನ ಮಾಡಿದರೆ ಆ ವೇಳೆ ಅಬ್ಬರದ ಸೈರನ್ ಮೊಳಗಲು ಆರಂಭವಾಗುತ್ತದೆ ಎಂದು ಪ್ರಭಾಕರ್ ಮೇಸ್ತ ತಿಳಿಸಿದ್ದಾರೆ.

ಕಳ್ಳರು ಹೆಂಚು ತೆಗೆದು, ಕಿಟಕಿ ಅಥವಾ ಹಿಂಬಾಗಿಲಿನ ಮೂಲಕ ಮನೆಯೊಳಗೆ ಪ್ರವೇಶಿಸಿದರೂ ಈ ಸೈರನ್ ಮೊಳಗುತ್ತದೆ. ಅದೇ ರೀತಿ ಮನೆಯಲ್ಲಿ ವೃದ್ಧರು ಒಬ್ಬರೇ ಇದ್ದಾಗ ಅಪಾಯವನ್ನುಂಟು ಮಾಡುವ ಯಾರಾದರೂ ಮನೆಗೆ ನುಗ್ಗಿದರೆ, ಮನೆಯಲ್ಲಿರುವವರು ಈ ಉಪಕರಣದ ರಿಮೋಟ್ ಬಟನ್ ಪ್ರೆಸ್ ಮಾಡಿದರೆ ಆಗಲೂ ಅದು ಸೈರನ್ ಮೊಳಗಿಸುತ್ತದೆ. ಬಳಿಕ ಮನೆಗೆ ನುಗ್ಗಿದವರು ಆ ವ್ಯಕ್ತಿಯಿಂದ ರಿಮೋಟ್ ಕಿತ್ತು ಮತ್ತೆ ಬಟನ್ ಒತ್ತಿದರೂ ಸೈರನ್ ನಿಲ್ಲುವುದಿಲ್ಲ. ಇದರಿಂದ ಅಕ್ಕಪಕ್ಕದ ಮನೆಯವರು ಎಚ್ಚೆತ್ತುಕೊಂಡು ಸಹಾಯಕ್ಕೆ ಧಾವಿಸಲು ಸಹಾಯವಾಗುತ್ತದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಹೊಸ ತಂತ್ರಜ್ಞಾನ ಆವಿಷ್ಕಾರ

ಸಿಸಿಟಿವಿ ಕ್ಯಾಮರಾ ಅಳವಡಿಸಿರುವ ಮನೆ, ಅಂಗಡಿಗಳಿಗೆ ಅನುಕೂಲವಾಗುವಂತೆ ಇನ್ವರ್ಟರ್ ಚೇಂಜರ್ ಎಂಬ ಉಪಕರಣವನ್ನು ಅಭಿವೃದ್ಧಿಪಡಿಸಿದ್ದಾರೆ. ಗುಡುಗು- ಸಿಡಿಲಿನ ವೇಳೆ ಈ ಉಪಕರಣ ಬಳಸಿದರೆ ಸಿಸಿಟಿವಿ ಕ್ಯಾಮರಾಗಳಿಗೆ ಇನ್ವರ್ಟರ್‌ನಿಂದ ವಿದ್ಯುತ್ ಪ್ರವಹಿಸುತ್ತಿರುತ್ತದೆ. ಆದರೆ ಹೊರಗಿನಿಂದ ಇನ್ವರ್ಟರ್‌ಗೆ ಯಾವುದೇ ವಿದ್ಯುತ್ ಬರುತ್ತಿರುವುದಿಲ್ಲ. ಈ ರೀತಿ ಸಿಸಿಟಿವಿ ಕ್ಯಾಮರಾಕ್ಕೆ ಸಿಡಿಲಿನಿಂದ ರಕ್ಷಣೆ ಸಿಗುತ್ತದೆ. ಅದೇ ರೀತಿ ಮನೆಯ ನೀರಿನ ಟ್ಯಾಂಕ್‌ಗೆ ಇವರೇ ಅವಿಷ್ಕರಿಸಿರುವ ಒಂದು ಉಪಕರಣವನ್ನು ಅಳವಡಿಸಿದ್ದಾರೆ. ಇದು ಟ್ಯಾಂಕ್‌ನಲ್ಲಿ ನೀರು ಖಾಲಿಯಾದಾಗ ಸ್ವಯಂಚಾಲಿತವಾಗಿ ಪಂಪ್‌ಸೆಟ್ ಆನ್ ಆಗಿ ನೀರು ತುಂಬಿಸುತ್ತದೆ. ಟ್ಯಾಂಕ್ ತುಂಬಿದರೆ ಅದೇ ಸ್ವಯಂಚಾಲಿತವಾಗಿ ಆಫ್ ಕೂಡಾ ಆಗುತ್ತದೆ ಎಂದು ಪ್ರಭಾಕರ್ ಮೇಸ್ತ ವಿವರಿಸಿದರು.

‘ನಾನು ಅಭಿವೃದ್ಧಿಪಡಿಸಿರುವ ಉಪಕರಣಗಳನ್ನು ಬೇರೆ ಬೇರೆ ವಾಹನಗಳು, ಮನೆಗಳಿಗೆ ಅಳವಡಿಸಲು ಕಷ್ಟವಾಗುತ್ತದೆ. ಯಾಕೆಂದರೆ ಒಂದೊಂದು ವಾಹನ ಒಂದೊಂದು ರೀತಿಯಲ್ಲಿರುತ್ತದೆ. ಅವುಗಳ ಡಿವೈಸ್ ಒಂದೇ ರೀತಿಯಾಗಿದ್ದರೂ ವೈಯರಿಂಗ್ ವ್ಯವಸ್ಥೆ ಭಿನ್ನವಾಗಿ ಇರುತ್ತದೆ. ಹಾಗಾಗಿ ಆಯಾ ವಾಹನಗಳಿಗೆ ತಕ್ಕಂತೆ ಉಪಕರಣಗಳನ್ನು ಸಿದ್ಧಪಡಿಸಬೇಕಾಗುತ್ತದೆ. ಅದೇ ರೀತಿ ಮನೆಗಳಿಗೂ ನಾನೇ ಹೋಗಿ ಅಳವಡಿಸಿದರೆ ಮುಂದೆ ಅದರ ನಿರ್ವಹಣೆ ಕಷ್ಟವಾಗುತ್ತದೆ. ಇದನ್ನು ಯಾವುದಾದರೂ ಕಂಪೆನಿ ವಹಿಸಿಕೊಂಡರೆ ನಾನು ಅವರಿಗೆ ಕೊಡಲು ಸಿದ್ಧನಿದ್ದೇನೆ’

-ಪ್ರಭಾಕರ ಮೇಸ್ತ, ಸಂಶೋಧಕ

ಲಾಕ್‌ಡೌನ್ ಸಂದರ್ಭ ಒಲಿದ ಕೌಶಲ್ಯ!

ಮೆಕ್ಯಾನಿಕ್ ಆಗಿದ್ದ ಪ್ರಭಾಕರ ಮೇಸ್ತರಿಗೆ ಮೊದಲಿ ನಿಂದಲೂ ಇಲೆಕ್ಟ್ರಾನಿಕ್ ಉಪಕರಣಗಳ ರಿಪೇರಿ ಬಗ್ಗೆ ಆಸಕ್ತಿ. ಹಾಗೇ ಲಾಕ್‌ಡೌನ್ ಸಂದರ್ಭದಲ್ಲಿ ಮನೆಯಲ್ಲೇ ಇದ್ದ ಇವರು ಮೊಬೈಲ್ ಫೋನ್‌ನಲ್ಲಿ ಯೂಟ್ಯೂಬ್ ಮೂಲಕ ಹೊಸ ತಂತ್ರಜ್ಞಾನ ಆವಿಷ್ಕಾರದ ವಿಡಿಯೋಗಳನ್ನು ವಿಕ್ಷೀಸುತ್ತಿದ್ದರು. ತಾನು ಕೂಡ ಇದೇರೀತಿ ವಿಶೇಷ ಉಪಕರಣಗಳನ್ನು ಏಕೆ ತಯಾರಿಸಬಾರದು ಎಂಬ ಆಲೋಚನೆ ಅವರಲ್ಲಿ ಮೂಡಿತು. ಹೀಗೆ ಅವರು ಹೊಸಹೊಸ ಉಪಕರಣಗಳನ್ನು ಸಂಶೋಧಿಸಿ ಅಭಿವೃದ್ಧಿಪಡಿಸಿದರು.

‘ನಾನು ಮಾಡಿರುವ ಈ ಸಂಶೋಧನೆ ಯಾರು ಕಂಡುಕೊಂಡಿಲ್ಲ. ಇದೆಲ್ಲ ನನ್ನದೇ ಆಲೋಚನೆಯಲ್ಲಿ ಬಂದ ತಂತ್ರಜ್ಞಾನವಾಗಿದೆ. ಇದಕ್ಕೆ ಅಗತ್ಯವಾದ ಕಚ್ಚಾ ಸಾಮಗ್ರಿಗಳನ್ನು ಆನ್‌ಲೈನ್ ಮೂಲಕ ತರಿಸಿ, ಮನೆಯಲ್ಲೇ ತಯಾರಿಸಿದ್ದೇನೆ’ ಎಂದು ಪ್ರಭಾಕರ ಮೇಸ್ತ ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ನಝೀರ್ ಪೊಲ್ಯ

contributor

Similar News