ಮಿನಿ ಸ್ವಿಟ್ಸರ್‌ಲ್ಯಾಂಡ್‌ ಪಹಲ್ಗಾಮ್‌ನ ಒಂದು ನೆನಪು

Update: 2025-04-27 12:10 IST
ಮಿನಿ ಸ್ವಿಟ್ಸರ್‌ಲ್ಯಾಂಡ್‌ ಪಹಲ್ಗಾಮ್‌ನ ಒಂದು ನೆನಪು
  • whatsapp icon

ನಾನು ಕನಿಷ್ಠ ನಾಲ್ಕು ಸಲ ಜಮ್ಮು-ಕಾಶ್ಮೀರ ಪ್ರದೇಶಗಳನ್ನು ಸುತ್ತಾಡಿರುವೆ. ಒಂದು ಸಲ 50 ದಿನಗಳ ಕಾಲ ಪಹಲ್ಗಾಮ್ ಹತ್ತಿರದ ಐಶ್ಮುಖಮ್‌ನಲ್ಲಿ ಭೂವಿಜ್ಞಾನಿಗಳ ತರಬೇತಿಯಲ್ಲಿದ್ದೆ. ಅದಕ್ಕೆ ಮುಂಚೆ 1980-82ರಲ್ಲಿ ಎಂಎಸ್ಸಿ ಓದುತ್ತಿದ್ದಾಗ ಜಮ್ಮು-ಕಾಶ್ಮೀರ ನೋಡಲು ಹೋಗಿದ್ದೆವು. ಆಗ ನಮಗೆ ಉತ್ತರ ಭಾರತದ ಚಳಿಯ ಬಗ್ಗೆ ಏನೇನೂ ಗೊತ್ತಿರಲಿಲ್ಲ. ನಮ್ಮಲ್ಲಿ ಚಳಿಗಾಲಕ್ಕೆ ತಕ್ಕಂತೆ ಬಟ್ಟೆಗಳೂ ಇರಲಿಲ್ಲ. ಹೋಗುವುದೇನೊ ಹೋಗಿಬಿಟ್ಟೆವು. ಜಮ್ಮುವರೆಗೆ ಚಳಿಯ ಬಗ್ಗೆ ನಮಗೆ ಏನೂ ಗೊತ್ತಾಗಲಿಲ್ಲ. ಜಮ್ಮು ದಾಟಿ ಶ್ರೀನಗರದ ಕಡೆಗೆ ಪ್ರಯಾಣ ಬೆಳೆಸಿದಾಗ ಇಡೀ ದೇಹ ಚಳಿಗೆ ಗಡಗಡ ನಡುಗತೊಡಗಿತ್ತು. ನಾನು ಖಾದಿಯ ಹತ್ತಿ ಶರ್ಟು ಧರಿಸಿ ಮಫ್ಲರ್ ಒಂದನ್ನು ತಲೆಗೆ ಸುತ್ತುಕೊಂಡಿದ್ದೆ. ಶ್ರೀನಗರದಲ್ಲಿ ಯಾವುದೋ ಒಂದು ಹೋಟೆಲಿನಲ್ಲಿ ದೊಡ್ಡ ಕೋಣೆಯನ್ನು ನಿಗದಿಪಡಿಸಲಾಗಿದ್ದು ನೆಲದ ಮೇಲೆ ಒಂದು ಜಮಖಾನ ಹಾಸಿದ್ದು 37 ವಿದ್ಯಾರ್ಥಿಗಳು ಅದರ ಮೇಲೆ ಒಬ್ಬರ ಪಕ್ಕದಲ್ಲಿ ಒಬ್ಬರು ಮಲಗಿಕೊಂಡು ಚಳಿಯ ಇಡೀ ರಾತ್ರಿಯನ್ನು ಎದುರಿಸಿದ್ದೆವು.

ಇನ್ನೊಮ್ಮೆ ಕೆಲವು ಕುಟುಂಬಗಳ ಜೊತೆಗೆ ನಾನೂ ನನ್ನ ಪತ್ನಿ ಹೋಗಿದ್ದೆವು. ಶ್ರೀನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳನ್ನು ಸುತ್ತುತ್ತಿರುವ ವೇಳೆ ನನಗೆ ಅಲರ್ಜಿ ಆಗಿ ಕಾಲುಗಳು ಊದಿಕೊಂಡು, ಮೂತ್ರದಲ್ಲಿ ರಕ್ತಬರತೊಡಗಿ ಎರಡು ದಿನ ಮುಂಚೆಯೇ ಪ್ರಯಾಣ ಮೊಟಕುಗೊಳಿಸಿ ಹೋಟೆಲ್ ಖಾಲಿ ಮಾಡಿಕೊಂಡು ಶ್ರೀನಗರ ವಿಮಾನ ನಿಲ್ದಾಣಕ್ಕೆ ಹೋಗಿ ಅಲ್ಲೇ ಟಿಕೆಟ್ ಕ್ಯಾನ್ಸಲ್ ಮಾಡಿ ಹೊಸ ಟಿಕೆಟ್ ತೆಗೆದುಕೊಂಡು ಹೋಗುವುದು ನಮ್ಮ ಯೋಚನೆಯಾಗಿತ್ತು. ಆದರೆ ಟಿಕೆಟ್ ಸಿಗದೆ ಮತ್ತೆ ಹಿಂದಕ್ಕೆ ಬಂದು ಹೋಟೆಲ್ ಸೇರಿಕೊಂಡೆವು. ಹೋಟೆಲ್ ಹತ್ತಿರಕ್ಕೆ ಬಂದಾಗ ವಾಹನ ಚಾಲಕನಿಗೆ 100 ರೂಪಾಯಿ ಭಕ್ಷೀಸು ಕೊಡಲು ಹೋದಾಗ ಆತ ‘‘ನೀವೇ ಕಾಯಿಲೆ ಮನುಷ್ಯ ನಿಮ್ಮ ಹತ್ತಿರ ಹೇಗೆ ತೆಗೆದುಕೊಳ್ಳಲಿ?’’ ಎಂದು ನಿರಾಕರಿಸಿದ್ದನು.

ಇನ್ನೊಮ್ಮೆ ಸುಶೀಲ ಜೊತೆಗೆ ಕಾಶ್ಮೀರದ ಅನೇಕ ಪ್ರದೇಶಗಳನ್ನು ನೋಡಿಕೊಂಡು ಆರಾಮಾಗಿ ಹಿಂದಕ್ಕೆ ಬಂದಿದ್ದೆವು. ಆಗ ನಮ್ಮಲ್ಲಿ ಎಲ್ಲಾ ರೀತಿಯ ಉಡುಪುಗಳೂ ಇದ್ದವೂ. ಕೈಯಲ್ಲಿ ಹಣವೂ ಇತ್ತು. ಅದೇ ವೇಳೆ ಪಹಲ್ಗಾಮ್‌ನಿಂದ ಐದು ಕಿ.ಮೀ.ಗಳ ದೂರದ ಮಿನಿ ಸ್ವಿಟ್ಸರ್‌ಲ್ಯಾಂಡ್ ಅನ್ನು (ಈಗ 26 ಜನರ ಹತ್ಯೆಯಾದ ಪ್ರದೇಶ) ನೋಡಿಕೊಂಡು ಬಂದಿದ್ದೆವು. ಒಂದೆರಡು ಕಿ.ಮೀ.ಗಳ ದೂರವನ್ನು ವಾಹನದಲ್ಲಿ ಹೋಗಿ ಅಲ್ಲಿಂದ ಕುದುರೆಗಳ ಮೇಲೆ ಹೋಗಿ ಮಿನಿ ಸ್ವಿಟ್ಸರ್‌ಲ್ಯಾಂಡ್ ಹುಲ್ಲುಗಾವಲು ಮೈದಾನದಲ್ಲಿ ಸುತ್ತಾಡಿಕೊಂಡು ಎದುರಿಗೆ ಕಾಣಿಸುತ್ತಿದ್ದ ಸಾಲುಸಾಲು ಪೈನ್ ಮರಗಳ ತಪ್ಪಲುಗಳು, ಹಿಮರಾಶಿಯ ಬೆಟ್ಟಗಳು ಮತ್ತು ಆಕಾಶವನ್ನು ಕಣ್ಣುಗಳ ತುಂಬಾ ತುಂಬಿಕೊಂಡು ಬಂದಿದ್ದೆವು. ಆ ದೃಶ್ಯಗಳು ಈಗಲೂ ನನ್ನ ಕಣ್ಣುಗಳ ಮುಂದೆ ಹಾಗೆಯೇ ಇವೆ. ಇತ್ತೀಚೆಗೆ ಸ್ವಿಟ್ಸರ್‌ಲ್ಯಾಂಡ್ ದೇಶ ನೋಡಿಬಂದಿದ್ದ ನನಗೆ ಮನುಷ್ಯನಾಗಿ ಅಂತಹ ಪ್ರದೇಶಗಳಲ್ಲಿ ಆಗಾಗ ಸುತ್ತಾಡಿ ಬರಬೇಕು ಎನಿಸುತ್ತದೆ. ಆದರೆ ಮೊನ್ನೆ ಕಾಶ್ಮೀರದ ಇದೇ ಮಿನಿ ಸ್ವಿಟ್ಸರ್‌ಲ್ಯಾಂಡ್‌ನಲ್ಲಿ ನಡೆದ ಭಯೋತ್ಪಾದಕರ ಅಟ್ಟಹಾಸ ನೋಡಿ ಮನಸ್ಸು ತಳಮಳಗೊಂಡಿತು.

ಪ್ರತಿದಿನ ಸಾವಿರಾರು ಜನರು ಪ್ರಯಾಣ ಮಾಡಿ ಬರುವ ಈ ಪ್ರದೇಶದಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಭದ್ರತೆಯನ್ನು ಒದಿಗಿಸಲಿಲ್ಲ ಎಂದರೆ ಯಾಕೋ ಏನೋ ಎಡವಟ್ಟಾಗಿದೆ ಎನಿಸುತ್ತದೆ. ಒಂದು ಕಡೆ ಪಾಕಿಸ್ತಾನ, ಇನ್ನೊಂದು ಕಡೆ ಚೀನಾ ಗಡಿಗಳಿರುವ ಪ್ರದೇಶಗಳಲ್ಲಿ ನಮ್ಮವರು ಮೈಮರೆತಿರುವುದು ದುಃಖ ಮತ್ತು ಕೋಪ ತರಿಸುವ ವಿಷಯವಾಗಿದೆ. ಸತ್ತ ನಾಗರಿಕರ ಕುಟುಂಬಗಳಿಗೆ ಸರಕಾರಗಳು ಸ್ವಾಂತನ ಹೇಳಿ ಏನು ಪ್ರಯೋಜನ? ಮತ್ತೆ ಇಂತಹ ಘಟನೆಗಳು ನಡೆಯದಂತೆ ಎಚ್ಚರ ವಹಿಸುತ್ತೇವೆ ಎನ್ನುತ್ತವೆ ಸರಕಾರಗಳು. ಮತ್ತೆ ಕೆಲವು ವರ್ಷಗಳ ನಂತರ ಎಲ್ಲವನ್ನೂ ಎಲ್ಲರೂ ಮರೆತುಹೋಗಿ ಮತ್ತೆ ದಿಢೀರನೆ ಅದೇ ರೀತಿಯ ಅನಾಹುತಗಳು ಮರುಕಳಿಸಿಬಿಡುತ್ತವೆ. ಮತ್ತೆ ಅದೇ ಗೋಳು. ಜಮ್ಮು-ಕಾಶ್ಮೀರದಲ್ಲಿ ಒಂದಷ್ಟು ಋತುಮಾನಗಳಿಗೆ ತಕ್ಕ ಬೆಳೆಗಳು ಬೆಳೆಯುವುದು ಬಿಟ್ಟರೆ ಹೆಚ್ಚಾಗಿ ಪ್ರವಾಸೋದ್ಯಮದಿಂದಲೇ ಜನರ ಬದುಕು ನಡೆಯುತ್ತದೆ. ವಾರ್ಷಿಕ ಪ್ರವಾಸೋದ್ಯಮದಿಂದ ಸುಮಾರು 2,000 ಕೋಟಿ ರೂಪಾಯಿಗಳ ವಹಿವಾಟು ನಡೆಯುತ್ತದೆ ಎನ್ನಲಾಗಿದೆ. ಈ ಅನಾಹುತದಿಂದ ಕನಿಷ್ಠ ಒಂದೆರಡು ವರ್ಷಗಳ ಕಾಲ ಆ ಕಡೆಗೆ ಪ್ರವಾಸಿಗರು ತಲೆ ಇಟ್ಟು ಕೂಡ ಮಲಗುವುದಿಲ್ಲ. ಯಾರೋ ಮಾಡುವ ತಪ್ಪು ಕೆಲಸಗಳಿಗೆ ಇಡೀ ರಾಜ್ಯದ ಜನರು ಬೆಲೆ ತೆರಬೇಕಾಗಿದೆ.

1986ರಲ್ಲಿ ನಾನು ಪಹಲ್ಗಾಮ್ ಹತ್ತಿರದ ಐಶ್ಮುಖಮ್‌ನಲ್ಲಿದ್ದಾಗ ಮಿನಿ ಸ್ವಿಟ್ಸರ್‌ಲ್ಯಾಂಡ್ ರೀತಿಯ ಬಯಲಿನಲ್ಲಿ ಅರೆ ಟೆಂಟ್‌ಗಳು ಮತ್ತು ತಾತ್ಕಾಲಿಕವಾಗಿ ನಿರ್ಮಿಸಿದ್ದ ಮನೆಗಳಲ್ಲಿ 35 ಜನ ಭೂವಿಜ್ಞಾನಿಗಳಿದ್ದೆವು. ಆಗ ಭಾರತೀಯ ಭೂಸರ್ವೇಕ್ಷಣೆ ಇಲಾಖೆಯಲ್ಲಿ (ಜಿಎಸ್‌ಐ) ಯುಪಿಎಸ್‌ಸಿ ಮೂಲಕ ಆಯ್ಕೆಯಾಗಿದ್ದ ನಾವು 50 ದಿನಗಳು ಕಾಲ ಇಡೀ ಕಾಶ್ಮೀರದ ಎಲ್ಲಾ ಪ್ರದೇಶಗಳಲ್ಲಿ ನಿರ್ಭಯವಾಗಿ ಓಡಾಡಿಕೊಂಡಿದ್ದೆವು. ಎಂತಹ ಸೊಗಸಾದ ದೃಶ್ಯಗಳು ಮತ್ತು ಶಾಂತವಾದ ವಾತಾವರಣ. ಹಿಮಚ್ಛಾದಿತ ಗಿರಿಶಿಖರ ಶ್ರೇಣಿಗಳು, ಸ್ವಚ್ಛ ನೀರಿನ ತೊರೆಗಳು, ಹಚ್ಚ ಹಸಿರು ಸಸ್ಯರಾಶಿ, ಸೇಬು, ಅಕ್ರೋಟ್, ಬಾದಾಮಿ ತೋಟಗಳು, ಸುಂದರವಾದ ಉದ್ಯಾನವನಗಳು. ಹೀಗೆ ಹೇಳುತ್ತಾ ಹೋದರೆ ಮೈ ಪುಳಕಗೊಳ್ಳುತ್ತದೆ. ಹಸಿರು ಗದ್ದೆಗಳಲ್ಲಿ ಬೆಳ್ಳಕ್ಕಿಗಳಂತೆ ಸಾಲುಸಾಲಾಗಿ ಕೆಲಸ ಮಾಡುತ್ತಿರುವ ನೀಳ ಮೂಗು, ಗುಲಾಬಿ ಕೆನ್ನೆಗಳ ಕಾಶ್ಮೀರಿ ಹೆಣ್ಣುಗಳು ತಲೆಗೆ ಹಲ್ಚಲ್ ಬಟ್ಟೆಗಳನ್ನು ಕಟ್ಟಿಕೊಂಡು ಸೊಗಸಾಗಿ ಕಾಣಿಸುತ್ತಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಡಾ.ಎಂ. ವೆಂಕಟಸ್ವಾಮಿ

contributor

Similar News