ರೈತನಿಗೆ ಆಸರೆಯಾದ ರಾಗಿ ಒಕ್ಕಣೆ ಯಂತ್ರ
ಹೊಸಕೋಟೆ: ಸುಗ್ಗಿ ಕಾಲ ಆರಂಭವಾಯಿತೆಂದರೆ ಕೃಷಿ ಕಾರ್ಮಿಕರ ಸಮಸ್ಯೆ ರೈತರಿಗೆ ಬಹುದೊಡ್ಡ ಸವಾಲಾಗಿ ಪರಿಣಮಿಸಿದ್ದು ಸಕಾಲದಲ್ಲಿ ಕೊಯ್ದು ಒಕ್ಕಣೆ ಮಾಡಲು ರೈತರು ಒಕ್ಕಣೆ ಯಂತ್ರಗಳತ್ತ ಮುಖ ಮಾಡುತ್ತಿದ್ದಾರೆ.
ರಾಗಿ ಕೊಯ್ದು ಸಮಯದಲ್ಲಿ ಗ್ರಾಮದ ಹತ್ತಾರು ರೈತರು ಒಟ್ಟಾಗಿ ಸೇರಿ ಹೊಲದಲ್ಲೇ ಕಣ ನಿರ್ಮಿಸಿ, ಎತ್ತುಗಳ ಸಹಾಯದಿಂದ ಭಾರವಾದ ಗುಂಡುಗಳನ್ನು ಹರಿಸಿ ರಾಗಿ, ಆವರೆ, ತೊಗರಿ, ಹುರುಳಿ ಮುಂತಾದ ಧಾನ್ಯಗಳನ್ನು ಒಕ್ಕಣೆ ಮಾಡುವ ಪದ್ಧತಿ ರೂಢಿಯಲ್ಲಿತ್ತು. ಕಷ್ಟಪಟ್ಟು ದುಡಿಯುವವರ ಸಂಖ್ಯೆ ಕಡಿಮೆಯಾಗಿದೆ. ಹೀಗಾಗಿ ರೈತರು ರಾಗಿ ತೆನೆ ಹುಲ್ಲನ್ನು ರಸ್ತೆಗಳ ಮೇಲೆ ಹರಡಿ, ವಾಹನಗಳ ಚಕ್ರಗಳ ಓಡಾಟದ ನೆರವಿನಲ್ಲಿ ಒಕ್ಕಣೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ರೈತರು ಒಕ್ಕಣೆಯಲ್ಲಿ ನಿರತರಾಗಿದ್ದ ವೇಳೆ ರಸ್ತೆಯಲ್ಲಿ ವೇಗವಾಗಿ ಸಂಚರಿಸುವ ವಾಹನಗಳಿಗೆ ಸಿಲುಕಿ ಜೀವಕ್ಕೆ ಹಾನಿಯಾಗುವ ಘಟನೆಗಳು ನಡೆದು ಆಪಾಯಕ್ಕೆ ಒಳಗಾಗುವುದಲ್ಲದೆ, ವಾಹನಗಳ ಚಕ್ರಗಳಲ್ಲಿರುವ ಕೊಳಕು, ರಾಸಾಯನಿಕ ವಸ್ತುಗಳು ರಾಗಿಯಲ್ಲಿ ಬೆರೆತು ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತವೆ.
ಯಂತ್ರಗಳ ಆವಿಷ್ಕಾರ: ರೈತರ ಕೃಷಿ ಚಟುವಟಿಕೆ ಅವಶ್ಯಕತೆ ಅರಿತ ತಜ್ಞರು, ಕಡಿಮೆ ಸಮಯದಲ್ಲಿ ಸುಲಭವಾಗಿ ಕೃಷಿ ಚಟುವಟಿಕೆಗೆ ಆಧುನಿಕ ಯಂತ್ರಗಳನ್ನು ಅಭಿವೃದ್ಧಿಗೊಳಿಸಿರುವುದು ರೈತರಿಗೆ ವರದಾನವಾಗಿ ಪರಿಣಮಿಸಿದೆ. ಯಂತ್ರಗಳ ಸಹಾಯದಿಂದ ಕಟಾವು ಮಾಡಿ, ಕೆಲವೇ ಗಂಟೆಗಳಲ್ಲಿ ಸ್ವಚ್ಛವಾದ ರಾಗಿ ಪಡೆಯಬಹುದಾಗಿದೆ.
ಎತ್ತುಗಳ ಸಂಖ್ಯೆ ಕ್ಷೀಣ: ಗ್ರಾಮೀಣ ಪ್ರದೇಶದಲ್ಲಿ ಮನೆ ಮಂದಿಯೆಲ್ಲರೂ ದುಡಿಯುವ ಸಂಖ್ಯೆ ಕಡಿಮೆಯಾಗಿದೆ. ಹೈನುಗಾರಿಕೆಯಲ್ಲಿ ಲಾಭ ಕಂಡುಕೊಂಡ ರೈತರು ಎತ್ತುಗಳ ಬದಲಾಗಿ ಸೀಮೆ ಹಸುಗಳನ್ನು ಸಾಕಲು ಆರಂಭಿಸಿದ್ದು, ಎತ್ತುಗಳ ಸಂಖ್ಯೆ ಬೆರಳೆಣಿಕೆಯಷ್ಟಾಗಿದೆ. ಅನಿವಾರ್ಯವಾಗಿ ಕೃಷಿಯಲ್ಲಿ ಆಧುನಿಕ ಯಂತ್ರಗಳ ಮುಂದಾಗಿದ್ದಾರೆ. ಬಳಕೆಗೆ ರೈತರು ಒಕ್ಕಣೆ ಯಂತ್ರವನ್ನು ಬಳಸಿ ಶುದ್ಧ ರಾಗಿಪಡೆದುಕೊಳ್ಳಲು ಸಾಧ್ಯವಾಗುತ್ತಿದೆ. ಒಕ್ಕಣೆ ಯಂತ್ರದ ಬಾಡಿಗೆ ದರ ದುಬಾರಿಯಾದರೂ ಕೂಲಿಕಾರರ ಸಮಸ್ಯೆ, ರಸ್ತೆ ಒಕ್ಕಣೆ ಆಪಾಯದ ಬಗ್ಗೆ ಆಲೋಚಿಸಿದರೆ ಇದು ಹೆಚ್ಚೇನೂ ಅಲ್ಲ ಎಂಬುದು ಹೆಚ್ಚಿನ ರೈತರ ಅಭಿಪ್ರಾಯವಾಗಿದೆೆ.