ಪಶ್ಚಿಮ ಘಟ್ಟದ ದಟ್ಟ ಅರಣ್ಯದಲ್ಲಿ ಕಪ್ಪೆಗಳ ಅಧ್ಯಯನ!

Update: 2024-06-24 07:47 GMT

ಉಡುಪಿ: ಮುಂಗಾರು ಮಳೆ ಆರಂಭವಾಗುತ್ತಿದ್ದಂತೆ ಪಶ್ಚಿಮ ಘಟ್ಟದಲ್ಲಿ ಹಲವು ಪ್ರಭೇದಗಳ ಕಪ್ಪೆಗಳ ಚಟುವಟಿಕೆಗಳು ಆರಂಭವಾಗುತ್ತವೆ. ಸಂತಾನಾಭಿವೃದ್ಧಿಗಾಗಿ ಸಂಗಾತಿಯನ್ನು ಕರೆಯುವ ಶಬ್ದಗಳು ವಿವಿಧ ಆವರ್ತನದಲ್ಲಿ ಕೇಳಿಬರುತ್ತವೆ. ಈ ವಟಗುಟ್ಟುವಿಕೆಯ ಆಧಾರದಲ್ಲಿ ಯಾವ ಪ್ರಭೇದದ ಕಪ್ಪೆಗಳು ಎಲ್ಲಿವೆ ಎಂಬುದನ್ನು ಪತ್ತೆ ಹಚ್ಚಲು ಸಾಧ್ಯವಾಗುತ್ತದೆ. ಹಾಗಾಗಿ ಕಪ್ಪೆಗಳ ಅಧ್ಯಯನಕ್ಕೆ ಪಶ್ಚಿಮ ಘಟ್ಟ ಹಾಗೂ ಮುಂಗಾರು ಮಳೆ ಆರಂಭ ಸಕಾಲ.

ಆ ನಿಟ್ಟಿನಲ್ಲಿ ಕಾರ್ಕಳ ತಾಲೂಕಿನ ಪಶ್ಚಿಮ ಘಟ್ಟದ ತಪ್ಪಲಿನ ದಟ್ಟ ಅರಣ್ಯದ ಮಧ್ಯೆ ಇರುವ ಮಾಳ ಮಣ್ಣುಪಾಲು ಮನೆಯ ಪರಿಸರದಲ್ಲಿ ಕಪ್ಪೆ ಸಂಶೋಧಕ ಡಾ.ಗುರುರಾಜ ಕೆ.ವಿ. ನೇತೃತ್ವದಲ್ಲಿ ಫ್ರಾಗ್ ವಾಕ್-2024ನ್ನು ಹಮ್ಮಿಕೊಳ್ಳಲಾಗಿತ್ತು. ಜೂ.15ರಿಂದ 17ರವರೆಗೆ ನಡೆದ ಈ ಕಾರ್ಯಕ್ರಮದ ಮೊದಲ ದಿನ ‘ವಾರ್ತಾಭಾರತಿ’ ಬಳಗ ಕೂಡ ಅಧ್ಯಯನ ತಂಡದ ಜೊತೆ ಹೆಜ್ಜೆ ಹಾಕಿ ಕಪ್ಪೆಗಳ ಕುರಿತು ಕುತೂಹಲಕಾರಿ ಮಾಹಿತಿ ಸಂಗ್ರಹಿಸಿತು.

ಫ್ರಾಗ್ ವಾಕ್‌ನ ಮೊದಲ ದಿನವಾದ ಜೂ.15ರಂದು ಸಂಜೆ 6:30ಕ್ಕೆ ಆರಂಭಗೊಂಡ ಈ ಅಧ್ಯಯನವು ರಾತ್ರಿ 9ರವರೆಗೂ ನಡೆಯಿತು. ಸುಮಾರು ಎರಡು ಕಿ.ಮೀ. ವ್ಯಾಪ್ತಿಯ ದಟ್ಟ ಅರಣ್ಯದಲ್ಲಿ ಸುತ್ತಾಡಿ ಹಲವು ಕಪ್ಪೆಗಳ ಮಾಹಿತಿಯನ್ನು ಕಲೆ ಹಾಕಲಾಯಿತು.

ಯಾಕಾಗಿ ಈ ಫ್ರಾಗ್ ವಾಕ್?

ಪಶ್ಚಿಮ ಘಟ್ಟಗಳಲ್ಲಿ ಮಾತ್ರ ಕಂಡುಬರುವ ಎಂಡೆಮಿಕ್(ಸ್ಥಳೀಯ) ಹಾಗೂ ಅತ್ಯಂತ ವಿಶಿಷ್ಟವಾಗಿರುವ ಕಪ್ಪೆ ಪ್ರಭೇದಗಳು ಮಾಳ ಅರಣ್ಯ ಪ್ರದೇಶದಲ್ಲಿ ಹೇರಳವಾಗಿ ಕಾಣಸಿಗುತ್ತವೆ. ಈ ಹಿನ್ನೆಲೆಯಲ್ಲಿ ಅಧ್ಯಯನಕ್ಕೆ ಅತ್ಯಂತ ಯೋಗ್ಯ ಎನಿಸಿರುವ ಮಾಳ ಮಣ್ಣಪಾಪು ಮನೆ ಪರಿಸರದಲ್ಲಿ 2017ರಿಂದ ಈ ಫ್ರಾಗ್ ವಾಕ್ ಕಾರ್ಯಾಗಾರ ನಡೆಸಿಕೊಂಡು ಬರಲಾಗುತ್ತಿದೆ.

ಜನಸಾಮಾನ್ಯರಿಗೆ ಕಪ್ಪೆಗಳ ಬಗ್ಗೆ ತಿಳುವಳಿಕೆ ನೀಡುವುದು, ಈ ಪ್ರದೇಶದಲ್ಲಿ ಯಾವ ಪ್ರಭೇದದ ಕಪ್ಪೆಗಳಿವೆ, ಅವುಗಳಿಂದ ಏನು ಪ್ರಯೋಜನ ಎಂಬುದನ್ನು ತಿಳಿಸುವ ಉದ್ದೇಶದಿಂದ ಈ ಫ್ರಾಗ್ ವಾಕ್ ಆಯೋಜಿಸಲಾಗುತ್ತಿದೆ.

ಇಲ್ಲಿರುವ ಅತ್ಯಂತ ವಿಶಿಷ್ಟ ಪ್ರಭೇದಗಳ ಕಪ್ಪೆಗಳ ಕುರಿತು ಜನಸಾಮಾನ್ಯರಿಗೆ ತಿಳಿಸಿದರೆ, ಅವರಿಗೆ ಅವುಗಳ ಬಗ್ಗೆ ಕುತೂ ಹಲ ಮೂಡಿ ಅಧ್ಯಯನಕ್ಕೆ ಮುಂದಾಗಬಹುದು. ಈ ಉದ್ದೇಶದಿಂದ ಜನ ವಿಜ್ಞಾನ ಕಾರ್ಯಕ್ರಮವಾಗಿರುವ ಫ್ರಾಗ್ ವಾಕ್‌ನ್ನು ಈ ಪ್ರದೇಶದಲ್ಲಿ ಕಳೆದ ಏಳೆಂಟು ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದೇವೆ ಎನ್ನುತ್ತಾರೆ ಕಪ್ಪೆ ಅಧ್ಯಯನಕಾರ ಗುರುರಾಜ್ ಕೆ.ವಿ.

ಮಳೆಯ ಮಧ್ಯೆ ಹುಡುಕಾಟ

ಜೀವವೈವಿಧ್ಯದಿಂದ ಕೂಡಿರುವ ಪಶ್ಚಿಮ ಘಟ್ಟದ ಅರಣ್ಯದೊಳಗೆ ಕಪ್ಪೆಯ ಹುಡುಕಾಟಕ್ಕೆ ಹೊರಡುವ ಮೊದಲು ಸಂಶೋಧಕ ವಿದ್ಯಾರ್ಥಿ ಅಫ್ರಾನ್ ತಂಡಕ್ಕೆ ಕೆಲವೊಂದು ಸಲಹೆ ಸೂಚನೆಗಳನ್ನು ನೀಡಿದರು.

‘ಮಳೆಗಾಲ ಆರಂಭವಾಗಿರುವುದರಿಂದ ಕಾಡಿನಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಲೀಚಸ್(ಜಿಗಣೆ)ಗಳು ಸಿಗುತ್ತವೆ. ಕಾಲುಗಳಿಗೆ ಅಂಟಿ ಕುಳಿತು ಸ್ವಲ್ಪ ರಕ್ತ ಹೀರುವ ಅವುಗಳ ಬಗ್ಗೆ ಭಯ ಪಡುವ ಅಗತ್ಯ ಇಲ್ಲ. ನಾವು ಬೇರೆ ಯಾವುದೇ ಜೀವಿಗಳಿಗೆ ಹಿಂಸೆ ಮಾಡದೆ ಮೌನವಾಗಿದ್ದುಕೊಂಡು ಪ್ರಕೃತಿ ವೈಶಿಷ್ಟ್ಯ ಅನುಭವಿಸುತ್ತ ಸಾಗಬೇಕು ಮತ್ತು ಅದರಿಂದ ಕಲಿಯಬೇಕು’ ಎಂದು ಸಲಹೆ ನೀಡಿದರು.

ಕತ್ತಲ ಅಡವಿಯಲ್ಲಿ ಸುಮಾರು ಮೂರು ಗಂಟೆಗಳ ಕಾಲ ಹುಡುಕಾಟದ ವೇಳೆ ಸ್ಥಳೀಯವಾಗಿಯೇ ಕಂಡುಬರುವ ಅತ್ಯಂತ ಅಪರೂಪದ ಕಪ್ಪೆಗಳು ಕಾಣಸಿಕ್ಕವು. ಒಂದೊಂದು ಪ್ರಭೇದದ ಕಪ್ಪೆಗಳ ವಟಗುಟ್ಟುವಿಕೆ ಒಂದೊಂದು ರೀತಿಯಲ್ಲಿ ಇರುವುದರಿಂದ ಅದರ ಆಧಾರದಲ್ಲೇ ಅವುಗಳ ಇರುವಿಕೆಯನ್ನು ಪತ್ತೆ ಹಚ್ಚಲಾಯಿತು. ಹೀಗೆ ನೆಲಗಪ್ಪೆ, ಪೊದೆ ಕಪ್ಪೆ ಹಾಗೂ ಮರಗಪ್ಪೆಗಳು ಕಂಡುಬಂದವು. ದಾರಿಯುದ್ದಕ್ಕೂ ಮಲಬಾರ್ ಪಿಟ್ ವೈಪರ್ ಸೇರಿದಂತೆ ವಿವಿಧ ಬಗೆಯ ಹಾವುಗಳು ಎದುರಾದವು.

ಪತ್ತೆಯಾದ ಕಪ್ಪೆ ಪ್ರಭೇದಗಳು

ಒಟ್ಟು ಮೂರು ದಿನಗಳ ಕಾಲ ನಡೆದ ಫ್ರಾಗ್ ವಾಕ್‌ನಲ್ಲಿ ದತ್ತ ಪ್ರೀನಸ್(ಟ್ರೂ ಟೋಡ್), ನೈಟ್ ಫ್ರಾಗ್, ಕೆಂಪುಹೊಳೆ ನೈಟ್ ಫ್ರಾಗ್, ವೆಸ್ಟರ್ನ್ ಟ್ರೀ ಫ್ರಾಗ್, ಮಲಬಾರ್ ಗ್ಲಿಡ್ಡಿಂಗ್ ಫ್ರಾಗ್, ವಯನಾಡ್ ಬುಶ್ ಫ್ರಾಗ್, ಕುದುರೆಮುಖ ಬುಶ್‌ಫ್ರಾಗ್, ಸ್ಮಾಲ್ ಕ್ರಿಕೆಟ್ ಫ್ರಾಗ್, ಕೊಟ್ಟಿಗೆಹಾರ ಡ್ಯಾನ್ಸಿಂಗ್ ಫ್ರಾಗ್, ಇಂದಿರಾನ ಗುಂಡ್ಯ ಕಪ್ಪೆ ಪ್ರಭೇದಗಳು ಪತ್ತೆಯಾದವು. ಇಂದಿರಾನ ಕಪ್ಪೆ ಜಾಸ್ತಿ ವಟಗುಟ್ಟುವುದಿಲ್ಲ. ಇವು ತೇವಾಂಶ ಇರುವ ಜಾಗದಲ್ಲಿ ಮೊಟ್ಟೆಗಳನ್ನಿಡುತ್ತವೆ. ಬಳಿಕ ಗೊದ್ದು ಮೊಟ್ಟೆಗಳು ಹೊರಗಡೆ ಬಂದು ನೀರಿನ ಬದಲು ಕಲ್ಲುಗಳ ಮೇಲೆ ಬೆಳೆಯುತ್ತವೆ. ಇದು ಅತ್ಯಂತ ಅಪಾಯದ ಅಂಚಿನಲ್ಲಿರುವ ಪ್ರಭೇದಗಳಲ್ಲಿ ಒಂದಾಗಿದೆ. ವಯನಾಡ್ ಬುಶ್ ಫ್ರಾಗ್ ಮರದಲ್ಲಿ ಕೂತು ಶಬ್ದ ಮಾಡು ತ್ತದೆ. ಇದರ ಗಂಟಲಿನಲ್ಲಿ ಧ್ವನಿವರ್ಧಕ ಚೀಲ ಇರುತ್ತದೆ. ಅವು ವಟಗುಟ್ಟುವಾಗ ಗಾಳಿ ತುಂಬಿ ಬಲೂನ್ ತರ ಆಗುತ್ತದೆ. ಕಪ್ಪೆಗಳ ಕಣ್ಣಿನ ಹಿಂಭಾಗದಲ್ಲೇ ಕಿವಿಗಳು ಇರುತ್ತವೆ.

ಕೆಂಪುಹೊಳೆ ನೈಟ್ ಫ್ರಾಗ್ 1917ರಲ್ಲಿ ಗುಂಡ್ಯ ಶಿರಾಡಿ ಸಮೀಪದ ಕೆಂಪು ಹೊಳೆಯಲ್ಲಿ ಕಂಡುಬಂದವು. ಹಾಗಾಗಿ ಅದಕ್ಕೆ ಆ ಹೆಸರು ಇಡಲಾಗಿದೆ. ಸಣ್ಣ ಕಪ್ಪೆ ಪ್ರಭೇದಗಳ ಪೈಕಿ ಇದು ಕೂಡ ಒಂದಾಗಿದೆ. ಹೆಚ್ಚಾಗಿ ಎಲೆಗಳ ಮಧ್ಯೆ ಇರುವ ಇವು, ಅಲ್ಲೇ ಮೊಟ್ಟೆ ಇಡುತ್ತವೆ.

ವೆಸ್ಟರ್ನ್ ಟ್ರೀ ಫ್ರಾಗ್ ಸಂತಾನೋಭಿವೃದ್ಧಿ ಸಂದರ್ಭದಲ್ಲಿ ಗಂಡು ಮತ್ತು ಹೆಣ್ಣು ಕೂಡಿ, ನಂತರ ನೊರೆಯನ್ನು ಸೃಷ್ಟಿಸಿ ಅದರೊಳಗೆ ಮೊಟ್ಟೆಗಳನ್ನು ಇಡುತ್ತದೆ. ಆ ನೊರೆಯಿಂದ ಸಣ್ಣ ಗೊದ್ದು ಮೊಟ್ಟೆಗಳು ನೀರಿಗೆ ಬೀಳುತ್ತವೆ. ಗೊದ್ದು ಮೊಟ್ಟೆಗಳಿಂದ ಕಪ್ಪೆ ಮರಿಗಳು ಹೊರ ಬರುತ್ತವೆ. ಒಂದು ಬಾರಿಗೆ 150-200 ಮೊಟ್ಟೆಗಳಿಟ್ಟರೂ ಅವುಗಳಲ್ಲಿ ಶೇ.5 ಮಾತ್ರ ಕಪ್ಪೆಗಳಾಗುತ್ತವೆ ಎಂದು ಗುರುರಾಜ್ ಕೆ.ವಿ. ಮಾಹಿತಿ ನೀಡಿದರು.

ಗಂಡು ಕಪ್ಪೆಗಳು ಮಾತ್ರ ಕೂಗುತ್ತವೆ!

ಗಂಡು ಕಪ್ಪೆಗಳು ಮಾತ್ರ ಕೂಗುತ್ತವೆ. ಮಳೆಗಾಲದ ಸಂದರ್ಭದಲ್ಲಿ ಗಂಡು ಕಪ್ಪೆಗಳು ಸಂಗಾತಿಯನ್ನು ಕರೆಯಲು ವಟಗುಟ್ಟುತ್ತವೆ. ಈ ಶಬ್ದ ಹೆಣ್ಣು ಕಪ್ಪೆಯನ್ನು ಆಕರ್ಷಿಸಲು ಮತ್ತು ಸೇರಲು ತಾನು ಸಿದ್ಧನಿದ್ದೇನೆ ಎಂಬ ಸಂದೇಶ ಕೂಡ ಆಗಿರುತ್ತದೆ.

ನೆಲಗಪ್ಪೆಗಳಲ್ಲಿ ಸಂತಾನಾಭಿವೃದ್ಧಿ ಸಂದರ್ಭದಲ್ಲಿ ಎಲ್ಲ ಗಂಡು ಹಳದಿ ಬಣ್ಣಕ್ಕೆ ತಿರುಗುತ್ತವೆ. ಆದರೆ ಹೆಣ್ಣು ಮಾತ್ರ ಬೂದು ಬಣ್ಣದಲ್ಲೇ ಇರುತ್ತದೆ. ಇದರಿಂದ ಗಂಡು ಕಪ್ಪೆಗಳು ತಮ್ಮನ್ನು ತಾವು ಗುರುತಿಸಿಕೊಂಡು ಹೆಣ್ಣನ್ನು ಪತ್ತೆ ಹಚ್ಚಲು ಸುಲಭವಾಗುತ್ತದೆ ಎಂದು ಸಂಶೋಧಕ ಗುರುರಾಜ್ ಕೆ.ವಿ. ಮಾಹಿತಿ ನೀಡಿದರು.

ಕಾಣದ ಮಲಬಾರ್ ಟ್ರೀ ಟೋಡ್!

ಕಳೆದ ಮೂರು ವರ್ಷಗಳಿಂದ ಮಾಳದಲ್ಲಿ ಕಾಣಸಿಗುತ್ತಿದ್ದ ಅಪರೂಪದ ಕಪ್ಪೆ ಎನಿಸಿರುವ ಮಲಬಾರ್ ಟ್ರೀ ಟೋಡ್(ಮಲೆನಾಡಿನ ಗ್ರಂಥಿ ಕಪ್ಪೆ) ಈ ಬಾರಿಯ ಫ್ರಾಗ್ ವಾಕ್‌ನಲ್ಲಿ ಪತ್ತೆಯಾಗಿಲ್ಲ. ಸುಮಾರು 130 ವರ್ಷಗಳ ಹಿಂದೆ ಅಂದರೆ 1875ಕ್ಕೆ ವಿಜ್ಞಾನಿಯೊಬ್ಬರು ಈ ಕಪ್ಪೆಯನ್ನು ಮೊದಲ ಬಾರಿಗೆ ಆವಿಷ್ಕಾರ ಮಾಡಿದ್ದರು. ಆ ನಂತರ ಅದು ಬಹಳ ಕಡಿಮೆ ಜಾಗದಲ್ಲಿ ಕಂಡುಬಂದಿತ್ತು. ಪಶ್ಚಿಮ ಘಟ್ಟದಲ್ಲಿ ಮಾತ್ರ ಕಂಡುಬರುವ ಬಹಳ ಅಪರೂಪದ ಈ ಕಪ್ಪೆ ಪ್ರಭೇದ ಮಳೆಗಾಲದ ಪ್ರಾರಂಭದಲ್ಲಿ ಕೂಗಿ, ಸಂಗಾತಿ ಜೊತೆ ಸೇರಿ ಸಂತಾನಾಭಿವೃದ್ದಿ ಮಾಡುತ್ತದೆ. ಈ ಕಪ್ಪೆಯನ್ನು ರಾಜ್ಯ ಕಪ್ಪೆಯನ್ನಾಗಿ ಘೋಷಿಸುವಂತೆಯೂ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಲಾಗಿದೆ.

ಕಪ್ಪೆಗಳ ಶಬ್ದ ಗ್ರಹಣಕ್ಕೆ ಸಾಫ್ಟ್‌ವೇರ್

ಬೇರೆ ಬೇರೆ ರೀತಿಯಲ್ಲಿ ಕೂಗುವ ಕಪ್ಪೆಗಳ ಶಬ್ದವನ್ನು ಗ್ರಹಿಸಲು ಸಾಫ್ಟ್‌ವೇರ್‌ವೊಂದನ್ನು ಅಭಿವೃದ್ಧಿಪಡಿಸಲಾಗಿದೆ. ಇದು ಕಪ್ಪೆ ಅಧ್ಯಯನಕ್ಕೆ ಪೂರಕವಾಗಿದ್ದು, ಅದರ ಸಹಾಯದಿಂದಲೇ ಕಪ್ಪೆಯ ಇರುವಿಕೆಯನ್ನು ಕೂಡ ಪತ್ತೆ ಮಾಡಬಹು

ದಾಗಿದೆ. ಒಂದು ಪ್ರಭೇದ ಕಪ್ಪೆ ಕೂಗುವ ಪ್ರೀಕ್ವೆನ್ಸ್ (ಆವರ್ತನ)ನಲ್ಲಿ ಇನ್ನೊಂದು ಕಪ್ಪೆ ಕೂಗುವುದಿಲ್ಲ. ಕೆಲವೊಂದರ ಶಬ್ದ ಕಡಿಮೆ ಇದ್ದರೆ, ಇನ್ನು ಕೆಲವು ಕಪ್ಪೆಗಳ ಶಬ್ದ ಹೆಚ್ಚಿರುತ್ತದೆ. ಇದರಿಂದ ಆಯಾ ಪ್ರಭೇದಗಳ ಹೆಣ್ಣು ಕಪ್ಪೆಗಳಿಗೆ ಈ ಕರೆಯನ್ನು ಗ್ರಹಿಸಲು ಅನುಕೂಲ ಆಗುತ್ತದೆ. ಈ ಶಬ್ದ ಸ್ಪೆಕ್ಟ್ರಗ್ರಾಮದಲ್ಲಿ ಸ್ಪಷ್ಟವಾಗಿ ಕಂಡು ಬರುತ್ತದೆ. ಒಂದೇ ಬಾರಿ ನಾಲ್ಕು ಪ್ರಭೇದದ ಕಪ್ಪೆಗಳು ಕೂಗುತ್ತಿದ್ದರೆ, ಅವು ಎಲ್ಲಿಂದ ವಟಗುಟ್ಟುತ್ತಿವೆ ಎಂಬುದನ್ನು ಗುರುತಿಸಲು ಸಾಧ್ಯವಾಗುತ್ತದೆ ಎಂದು ಗುರುರಾಜ್ ಕೆ.ವಿ. ಮಾಹಿತಿ ನೀಡಿದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ನಝೀರ್ ಪೊಲ್ಯ

contributor

Similar News