ಕಾಂಗ್ರೆಸ್ ಪಕ್ಷವನ್ನು ಹೊಸತಾಗಿ ಕಟ್ಟಲು ಈಗ ರಾಹುಲ್ ಜೊತೆ ಯುವ ನಾಯಕರ ಪಡೆ

ಈವರೆಗೆ ಪಕ್ಷದಲ್ಲಿ ರೇವಂತ್ ರೆಡ್ಡಿ, ಡಿ.ಕೆ.ಶಿವಕುಮಾರ್, ಭೂಪೇಶ್ ಬಘೇಲ್, ಸಚಿನ್ ಪೈಲಟ್ ಮತ್ತು ಹೂಡಾಗಳು ಹೀಗೇ ಕೆಲವೇ ‘ಸ್ಟಾರ್’ಗಳಿದ್ದರು. ಈಗ ಇದ್ದಕ್ಕಿದ್ದಂತೆ ಕಾಂಗ್ರೆಸ್‌ನಲ್ಲಿ ವಿವಿಧ ರಾಜ್ಯಗಳ ತಮ್ಮ ಕ್ಷೇತ್ರಗಳಲ್ಲಿ ಬಿಜೆಪಿಯನ್ನು ಯಶಸ್ವಿಯಾಗಿ ಸೋಲಿಸುವ ಮೂಲಕ ತಮ್ಮ ಸಾಮರ್ಥ್ಯವನ್ನು ಸಾಬೀತುಗೊಳಿಸಿರುವ ಹೋರಾಟಗಾರರು ತುಂಬಿಹೋಗಿದ್ದಾರೆ. ತಮ್ಮ ಗೆಲುವಿಗೆ ಮೋದಿ ಮತ್ತು ಅವರ ವ್ಯಕ್ತಿತ್ವ ಆಕರ್ಷಣೆಗೆ ಋಣಿಯಾಗಿರುವ ಬಿಜೆಪಿ ಸಂಸದರಂತಲ್ಲದೆ ಈ ಕಾಂಗ್ರೆಸ್ ಸಂಸದರು ಒಂದು ರೀತಿಯಲ್ಲಿ ಸ್ವಯಂ ರೂಪಿಸಿಕೊಂಡಿರುವ ಕಠಿಣ ಹೋರಾಟಗಾರರಾಗಿದ್ದಾರೆ. ಅವರು ರಾಹುಲ್ ಗಾಂಧಿಯವರಿಗೆ ಹೊಸದಾಗಿ ಆರಂಭಿಸಲು ಮತ್ತು ರಾಜ್ಯಗಳಲ್ಲಿ ಬಿಜೆಪಿ ವಿರುದ್ಧ ಹೇಗೆ ಹೋರಾಡಬೇಕು ಎನ್ನುವುದನ್ನು ತಿಳಿದಿರುವ ನಾಯಕರನ್ನು ಉತ್ತೇಜಿಸುವ ಮೂಲಕ ಕಾಂಗ್ರೆಸನ್ನು ಮರುನಿರ್ಮಾಣ ಮಾಡಲು ಅವಕಾಶವನ್ನು ಸೃಷ್ಟಿಸಿದ್ದಾರೆ.

Update: 2024-06-21 05:47 GMT

2024ರ ಲೋಕಸಭಾ ಚುನಾವಣಾ ಫಲಿತಾಂಶಗಳ ಕುರಿತು ಪ್ರತಿಪಕ್ಷದಲ್ಲಿನ ಸಂಭ್ರಮಾತಿರೇಕ ಇನ್ನೂ ಕಡಿಮೆಯಾಗಿಲ್ಲ. ಪ್ರಧಾನಿ ನರೇಂದ್ರ ಮೋದಿಯವರು ಅಜೇಯರಲ್ಲ ಎಂಬ ಅಗಾಧ ವಿಶ್ವಾಸ ಪ್ರತಿಪಕ್ಷಗಳಲ್ಲಿ ಮೂಡಿದೆ. ಮುಂದಿನ ಚುನಾವಣೆಗಳಲ್ಲಿ ಮೋದಿಯವರು ಬಿಜೆಪಿ ಮುಖವಾಗುವ ಸಾಧ್ಯತೆ ಕಡಿಮೆ ಎಂಬ ಖುಷಿಯ ಭಾವನೆ ಪ್ರತಿಪಕ್ಷಗಳಲ್ಲಿದೆ.

ಆದಾಗ್ಯೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರಿಗೆ 2024ರ ಫಲಿತಾಂಶಗಳ ಬಗ್ಗೆ ಸಂಭ್ರಮಿಸಲು ಮೋದಿಯವರ ಸೋಲಿಗಿಂತ ಉತ್ತಮ ಕಾರಣಗಳಿವೆ. ಮೊದಲನೆಯದಾಗಿ ಕಾಂಗ್ರೆಸ್ ನೇರ ಸ್ಪರ್ಧೆಗಳಲ್ಲಿ ಬಿಜೆಪಿ ವಿರುದ್ಧ ಕನಿಷ್ಠ ಹೋರಾಡಲು ಆರಂಭಿಸಿದೆ. ಇಂತಹ ನೇರ ಕಾದಾಟಗಳಲ್ಲಿ ಅದರ ಗೆಲುವಿನ ಪ್ರಮಾಣ 2019ರಲ್ಲಿ ಶೇ.8ರಷ್ಟಿದ್ದುದು 2024ರಲ್ಲಿ ಶೇ.29ಕ್ಕೆ ಬೆಳವಣಿಗೆಯನ್ನು ಕಂಡಿದೆ. ಬೇರೆ ರೀತಿಯಲ್ಲಿ ಹೇಳುವುದಾದರೆ ಬಿಜೆಪಿಯ ಗೆಲುವಿನ ಪ್ರಮಾಣ 2019ರಲ್ಲಿ ಶೇ.92ರಷ್ಟಿದ್ದುದು 2024ರಲ್ಲಿ ಶೇ.71ಕ್ಕೆ ಕುಸಿದಿದೆ.

ನೇರ ಸ್ಪರ್ಧೆಗಳಲ್ಲಿ ಬಿಜೆಪಿ ಈಗಲೂ ಕಾಂಗ್ರೆಸ್‌ಗಿಂತ ಮೇಲುಗೈ ಹೊಂದಿದೆ, ಆದರೆ ಕಾಂಗ್ರೆಸ್ ಇನ್ನು ಮುಂದೆ ಹತಾಶ ಸ್ಪರ್ಧಿಯಾಗುಳಿದಿಲ್ಲ. ಭವಿಷ್ಯದಲ್ಲಿ ಮೋದಿ ಇಲ್ಲದ ಬಿಜೆಪಿ ವಿರುದ್ಧ ಹೆಚ್ಚಿನ ಸಾಧನೆಯನ್ನು ಅದು ಆಶಿಸಬಹುದು.

ಈ ಫಲಿತಾಂಶಗಳಿಂದ ತಿಳಿದುಕೊಳ್ಳಲು ಕಾಂಗ್ರೆಸ್‌ಗೆ ಹಲವಾರು ಅಂಶಗಳಿವೆ. ತೆಲಂಗಾಣದ ಮುಖ್ಯಮಂತ್ರಿ ರೇವಂತ್ ರೆಡ್ಡಿ ಹೈಕಮಾಂಡ್ ತನ್ನಲ್ಲಿಟ್ಟಿರುವ ನಂಬಿಕೆಗೆ ಅನುಗುಣವಾಗಿ ಕೆಲಸ ಮಾಡುತ್ತಿದ್ದಾರೆ; ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪ್ರಾಬಲ್ಯವನ್ನು ಮುರಿಯುವಲ್ಲಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಅಸಮರ್ಥತೆ;ಕಾಂಗ್ರೆಸ್ ಬೆನ್ನಿಗೆ ನಿಂತಿರುವ ಅಲ್ಪಸಂಖ್ಯಾತ ಮತದಾರರು;ಈಶಾನ್ಯದಲ್ಲಿ ಒಂದು ರೀತಿಯಲ್ಲಿ ಕಾಂಗ್ರೆಸ್‌ನ ಪುನರುಜ್ಜೀವನ;ರಾಜಸ್ಥಾನ ಮತ್ತು ಕರ್ನಾಟಕದಲ್ಲಿ 2019ರಲ್ಲಿ ಬಿಜೆಪಿ ಹೊಂದಿದ್ದ ಪ್ರಾಬಲ್ಯಕ್ಕೆ ಹೊಡೆತ ನೀಡಿದ್ದು ಮತ್ತು ಕೊನೆಯದಾಗಿ, ಆದರೆ ಕನಿಷ್ಠವಲ್ಲ...‘ಭಾರತ ಜೋಡೊ ಯಾತ್ರೆ’ಯ ಎರಡು ಹಂತಗಳಲ್ಲಿ ‘ಪ್ರೀತಿ ವಿರುದ್ಧ ದ್ವೇಷ’ ರಾಹುಲ್ ನಿರೂಪಣೆಗೆ ಮತ್ತು ಬಡತನ, ಅಸಮಾನತೆ, ನಿರುದ್ಯೋಗ ಇತ್ಯಾದಿಗಳ ಕುರಿತು ಅವರ ನಿಲುವಿಗೆ ದೊರಕಿರುವ ಬೆಂಬಲ.

ಹರ್ಯಾಣದಲ್ಲಿ ಕಾಂಗ್ರೆಸ್ ಪವಾಡ

ಇವೆಲ್ಲ ಸಂಭ್ರಮಾಚರಣೆಗೆ ತೋರಿಕೆಯ ಕಾರಣಗಳಾಗಿವೆ, ಆದರೆ ಹರ್ಯಾಣದಲ್ಲಿ ತನ್ನ ‘ಹೂಡಾ ತಂತ್ರ’ದ ಯಶಸ್ಸು ರಾಹುಲ್‌ಗೆ ಸಂಭ್ರಮಿಸಲು ಕಾರಣವಾಗಬೇಕು. ಮೊದಲು ಅಲ್ಲಿಯ ಫಲಿತಾಂಶಗಳನ್ನು ನೋಡೋಣ: ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟವು ಕೇರಳದಲ್ಲಿ ಶೇ.45.1, ತಮಿಳುನಾಡಿನಲ್ಲಿ ಶೇ.46.9, ತೆಲಂಗಾಣದಲ್ಲಿ ಶೇ.40.1 ಮತ್ತು ಉತ್ತರ ಪ್ರದೇಶದಲ್ಲಿ ಶೇ.43.5ರಷ್ಟು ತನ್ನ ಮತಗಳಿಕೆಗೆ ಹೋಲಿಸಿದರೆ ಶೇ.47.6ರಷ್ಟು ಅತ್ಯಧಿಕ ಮತಗಳಿಕೆಯನ್ನು ಹರ್ಯಾಣದಲ್ಲಿ ದಾಖಲಿಸಿದೆ. ಇದು 1984ರಿಂದೀಚಿಗೆ ಹರ್ಯಾಣದಲ್ಲಿ ಕಾಂಗ್ರೆಸ್‌ನ ಅತ್ಯಂತ ಹೆಚ್ಚಿನ ಮತಗಳಿಕೆಯಾಗಿದೆ.

ಹರ್ಯಾಣದಲ್ಲಿ ಆಮ್ ಆದ್ಮಿ ಪಾರ್ಟಿ (ಆಪ್)ಯ ಶೇ.3.94ರಷ್ಟು ಮತಗಳಿಕೆಯನ್ನು ಹೊರಗಿರಿಸಿದರೂ ಕಾಂಗ್ರೆಸ್‌ನ ಮತಗಳಿಕೆ ಶೇ.43.67ರಷ್ಟಾಗುತ್ತದೆ ಮತ್ತು ಬಿಜೆಪಿಯ ಮತಗಳಿಕೆ ಪಾಲು ಕೊಂಚ ಹೆಚ್ಚು, ಅಂದರೆ ಶೇ.46.11ರಷ್ಟಿದೆ. ಆದರೆ ಹರ್ಯಾಣದಲ್ಲಿ ಕಾಂಗ್ರೆಸ್‌ನಿಂದ ಒಂದು ಸ್ಥಾನವನ್ನು ಗೆದ್ದುಕೊಳ್ಳುವಲ್ಲಿ ಯಶಸ್ವಿಯಾಗಿರುವ ಆಪ್ ಪಡೆದ ಮತಗಳು ವಾಸ್ತವದಲ್ಲಿ ಕಾಂಗ್ರೆಸ್‌ನ ಮತಗಳಾಗಿವೆ ಎನ್ನುವುದನ್ನು ನಿರಾಕರಿಸುವಂತಿಲ್ಲ. ಆದ್ದರಿಂದ ಹೇಗೆ ನೋಡಿದರೂ ಹರ್ಯಾಣದಲ್ಲಿ ಮತಗಳಿಕೆಯಲ್ಲಿ ಕಾಂಗ್ರೆಸ್ ಬಿಜೆಪಿಗಿಂತ ಮೇಲುಗೈ ಸಾಧಿಸಿದೆ ಮತ್ತು ಉಭಯ ಪಕ್ಷಗಳು ತಲಾ ಐದು ಸ್ಥಾನಗಳನ್ನು ಉಳಿಸಿಕೊಂಡಿವೆ.

ಹರ್ಯಾಣದಲ್ಲಿ ಕಾಂಗ್ರೆಸ್‌ನ ಈ ಸಾಧನೆಯ ಮಹತ್ವವನ್ನು 2019ರ ಲೋಕಸಭಾ ಚುನಾವಣಾ ಫಲಿತಾಂಶಗಳೊಂದಿಗೆ ಹೋಲಿಸುವ ಮೂಲಕ ಉತ್ತಮವಾಗಿ ವಿವರಿಸಬಹುದು. ಆಗ ಬಿಜೆಪಿ ಎಲ್ಲ ಹತ್ತೂ ಸ್ಥಾನಗಳನ್ನು ಗೆದ್ದುಕೊಂಡಿತ್ತು ಮತ್ತು ಅದರ ಮತಗಳಿಕೆ ಪ್ರಮಾಣ ಶೇ.58ರಷ್ಟಿತ್ತು, ಅಂದರೆ ಕಾಂಗ್ರೆಸ್‌ಗಿಂತ 30 ಶೇಕಡಾವಾರು ಅಂಶಗಳನ್ನು ಅದು ಹೆಚ್ಚಾಗಿ ಗಳಿಸಿತ್ತು. ಐದು ವರ್ಷಗಳ ಬಳಿಕ ಈ ಅಂತರವನ್ನು ಕಡಿಮೆ ಮಾಡುವುದರೊಂದಿಗೆ ಬಿಜೆಪಿಯನ್ನು ಮೀರಿಸಲು ಸಾಧ್ಯವಾಗಿದ್ದು ಕಾಂಗ್ರೆಸ್ ಪಾಲಿಗೆ ಒಂದು ರೀತಿಯಲ್ಲಿ ಪವಾಡವೇ ಆಗಿದೆ. ಒಟ್ಟಾರೆಯಾಗಿ 90 ವಿಧಾನಸಭಾ ಕ್ಷೇತ್ರಗಳ ಪೈಕಿ 46ರಲ್ಲಿ ಕಾಂಗ್ರೆಸ್ ಮುನ್ನಡೆಯನ್ನು ಸಾಧಿಸಿದೆ, ಅಂದರೆ ಅಕ್ಟೋಬರ್‌ನಲ್ಲಿ ನಿಗದಿಯಾಗಿರುವ ಹರ್ಯಾಣ ವಿಧಾನಸಭಾ ಚುನಾವಣೆ ಇಂದೇ ನಡೆದರೆ ಕಾಂಗ್ರೆಸ್ ಸ್ಪಷ್ಟ ಬಹುಮತವನ್ನು ಪಡೆಯಲಿದೆ.

ಪ್ರಧಾನಿ ಮೋದಿಯವರು ತನ್ನ ಆತ್ಮೀಯ ಸ್ನೇಹಿತ ಮನೋಹರಲಾಲ್ ಖಟ್ಟರ್ ಅವರನ್ನು ಸತತ ಎರಡು ಅವಧಿಗಳಿಗೆ ಮುಖ್ಯಮಂತ್ರಿಯಾಗಿ ನಿಯೋಜಿಸಿದ್ದನ್ನು ಪರಿಗಣಿಸಿದರೆ ಹರ್ಯಾಣ ಲೋಕಸಭಾ ಚುನಾವಣೆಗಳ ಫಲಿತಾಂಶಗಳು ಬಿಜೆಪಿಗೆ ದೊಡ್ಡ ಹೊಡೆತವನ್ನೇ ನೀಡಿವೆ. ಆಡಳಿತ ವಿರೋಧಿ ಅಲೆಯನ್ನು ನಿವಾರಿಸಲು ಚುನಾವಣೆಗೆ ಕೆಲವೇ ವಾರಗಳ ಮುನ್ನ ಮೋದಿಯವರು ಖಟ್ಟರ್ ಬದಲಿಗೆ ನೂತನ ಮುಖ್ಯಮಂತ್ರಿಯನ್ನು ತಂದಿದ್ದರು, ಆದರೆ ಇದು ಯಾವುದೇ ನಿರೀಕ್ಷಿತ ಫಲವನ್ನು ನೀಡಲಿಲ್ಲ. ಮೋದಿಯವರು ಖಟ್ಟರ್‌ರನ್ನು ಯಾವಾಗಲೂ ಬೆಂಬಲಿಸುತ್ತಾರೆ ಮತ್ತು ಅವರನ್ನು ಕೇಂದ್ರ ಸಂಪುಟದಲ್ಲಿಯೂ ಸೇರಿಸಿಕೊಂಡಿದ್ದಾರೆ, ಹೀಗಾಗಿ ಹರ್ಯಾಣದಲ್ಲಿಯ ಹಿನ್ನಡೆ ಅವರಿಗೆ ನೋವನ್ನುಂಟು ಮಾಡಲೇಬೇಕು.

ಆದಾಗ್ಯೂ ಇದು ಹರ್ಯಾಣದಲ್ಲಿ ‘ಹೂಡಾ ತಂತ್ರ’ವನ್ನು ಹೂಡಿದ್ದ ರಾಹುಲ್ ಅವರಿಗೆ ಖುಷಿಯನ್ನು ನೀಡಬೇಕು, ಅವರು ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ ಅವರಲ್ಲಿ ಸಂಪೂರ್ಣ ನಂಬಿಕೆಯನ್ನಿರಿಸುವ ಮೂಲಕ ಜಾಣ ಹೆಜ್ಜೆಗಳನ್ನು ಇರಿಸಿದ್ದರು. ತನ್ನ ಆಪ್ತ ವಲಯದಲ್ಲಿ ರಣದೀಪ್ ಸಿಂಗ್ ಸುರ್ಜೆವಾಲರಂತಹ ಕಟ್ಟಾ ಹೂಡಾ ವಿರೋಧಿಗಳಿದ್ದರೂ ರಾಜ್ಯದಲ್ಲಿ ಪಕ್ಷದ ಚುನಾವಣಾ ನಿರ್ವಹಣೆಯನ್ನು ಹೂಡಾಗೆ ಹಸ್ತಾಂತರಿಸಲು ರಾಹುಲ್ ನಿರ್ಧರಿಸಿದ್ದರು. ರಾಜ್ಯ ಕಾಂಗ್ರೆಸ್ ಘಟಕದ ಅಧ್ಯಕ್ಷೆ ಸೆಲ್ಜಾರನ್ನೂ ಬದಲಿಸಿ ಆ ಸ್ಥಾನಕ್ಕೆ ಹೂಡಾ ನಿಷ್ಠ ಉದಯ ಭಾನ್ ಅವರನ್ನು ತಂದಿದ್ದರು. ತನ್ಮೂಲಕ ಭಾನ್ 17 ವರ್ಷಗಳಲ್ಲಿ ಹರ್ಯಾಣ ಕಾಂಗ್ರೆಸ್‌ನ ನಾಲ್ಕನೇ ದಲಿತ ಅಧ್ಯಕ್ಷರಾಗಿದ್ದರು, ಫೂಲ್‌ಚಂದ್ ಮುಲ್ಲಾನಾ, ಅಶೋಕ ತನ್ವರ್ ಮತ್ತು ಕುಮಾರಿ ಸೆಲ್ಜಾ ದಲಿತ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದ ಇತರ ಮೂವರು. ಸೆಲ್ಜಾ ಮತ್ತು ತನ್ವರ್ ಅವರಿಗೆ ಹೂಡಾ ಜೊತೆ ಹೊಂದಾಣಿಕೆ ಸಾಧ್ಯವಾಗಿರಲಿಲ್ಲ ಮತ್ತು ಭಾನ್ ಅವರ ಪದೋನ್ನತಿ ರಾಜ್ಯ ಕಾಂಗ್ರೆಸ್ ಘಟಕವು ಹೂಡಾ ಜೊತೆಗೆ ಸಮನ್ವಯದೊಂದಿಗೆ ಕಾರ್ಯ ನಿರ್ವಹಿಸುವುದನ್ನು ಖಚಿತಪಡಿಸಿತ್ತು.

ದೀಪೇಂದರ್ ಹೂಡಾ ಅವರು ರೋಹ್ಟಕ್‌ನಲ್ಲಿ ಗೆದ್ದ ರೀತಿಯು 2024ರ ಲೋಕಸಭಾ ಚುನಾವಣೆಗಳಲ್ಲಿ ಹರ್ಯಾಣದಲ್ಲಿ ಕಾಂಗ್ರೆಸ್‌ನ ಪ್ರಾಬಲ್ಯದ ಕಥೆಯನ್ನು ಹೇಳುತ್ತದೆ. ತನ್ನ ರಾಜ್ಯಸಭಾ ಸದಸ್ಯತ್ವದ ಅವಧಿ ಇನ್ನೂ ಎರಡು ವರ್ಷ ಇದ್ದರೂ ದೀಪೇಂದರ್ ಲೋಕಸಭಾ ಚುನಾವಣೆಗಳಲ್ಲಿ ಸ್ಪರ್ಧಿಸಲು ನಿರ್ಧರಿಸಿದ್ದರು ಮತ್ತು 3.5 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ರೋಹ್ಟಕ್‌ನಲ್ಲಿ ಅವರು ಶೇ.62.8ರಷ್ಟು ಮತಗಳನ್ನು ಗಳಿಸಿದ್ದು, ಇದು ರಾಜ್ಯದ ಇತರ ಯಾವುದೇ ಕ್ಷೇತ್ರಕ್ಕೆ ಹೋಲಿಸಿದರೆ ಗರಿಷ್ಠವಾಗಿದೆ. 2004ರಿಂದೀಚಿಗೆ ಹರ್ಯಾಣದಲ್ಲಿ ಸತತ ಐದನೇ ಸಲ ಕಾಂಗ್ರೆಸ್ ಅಭ್ಯರ್ಥಿಗಳ ಪೈಕಿ ಅತ್ಯಂತ ಹೆಚ್ಚಿನ ಮತಗಳಿಕೆಯ ಹೆಗ್ಗಳಿಕೆಗೂ ಅವರು ಪಾತ್ರರಾಗಿದ್ದಾರೆ. 2014ರಲ್ಲಿ ಖಟ್ಟರ್‌ರನ್ನು ಮುಖ್ಯಮಂತ್ರಿಯಾಗಿ ನೇಮಿಸುವ ಬಿಜೆಪಿ ನಿರ್ಧಾರದ ಹಿಂದೆ ಜಾಟೇತರ ಮತದಾರರನ್ನು ಕ್ರೋಡೀಕರಿಸುವ ಮತ್ತು ಅವರನ್ನು ಆಗ ಹೂಡಾಗಳು ಮತ್ತು ಚೌತಾಲಾಗಳ ನಡುವೆ ಹಂಚಿಹೋಗಿದ್ದ ಜಾಟ್‌ಗಳ ವಿರುದ್ಧ ಕಣಕ್ಕಿಳಿಸುವ ತಂತ್ರವಿತ್ತು. ಈ ತಂತ್ರ 2024ರ ಚುನಾವಣೆಗಳಲ್ಲಿ ವಿಫಲಗೊಂಡಿದೆ. ಉದಾಹರಣೆಗೆ ರೋಹ್ಟಕ್ ಸಂಸದೀಯ ಕ್ಷೇತ್ರದ ಅಹಿರ್ ಪ್ರಾಬಲ್ಯದ ಕೋಸ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಮತ್ತು ರಾಜ್ಯದಲ್ಲಿ ಪಂಜಾಬಿಗಳು ಅತಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎನ್ನಲಾಗಿರುವ ರೋಹ್ಟಕ್ ವಿಧಾನಸಭಾ ಕ್ಷೇತ್ರದಲ್ಲಿಯೂ ದೀಪೇಂದರ್ ಮುನ್ನಡೆಯನ್ನು ಸಾಧಿಸಿದ್ದಾರೆ.

ಕಾಂಗ್ರೆಸ್ ನಾಯಕರ ಪ್ರಕಾರ ದೀಪೇಂದರ್ ಸಂಸದೀಯ ಕ್ಷೇತ್ರದಲ್ಲಿ ದಲಿತ ಪ್ರಾಬಲ್ಯದ ಹೆಚ್ಚುಕಡಿಮೆ ಎಲ್ಲ ಮತಗಟ್ಟೆಗಳನ್ನೂ ಗೆದ್ದಿದ್ದಾರೆ. ಜಾಟ್ ವಿರುದ್ಧ ಜಾಟೇತರ ತಂತ್ರವು ಅಸ್ತಿತ್ವ ಕಳೆದುಕೊಂಡಿದ್ದರೆ ಜಾಟ್ ಮತಗಳಿಗಾಗಿ ಹೂಡಾರ ಪ್ರತಿಸ್ಪರ್ಧಿಗಳಾಗಿದ್ದ ಐಎನ್‌ಎಲ್‌ಡಿ ಮತ್ತು ಜೆಜೆಪಿ ಎರಡೂ ಒಟ್ಟಾಗಿ ಕೇವಲ ಶೇ.2.6ರಷ್ಟು ಮತಗಳನ್ನು ಪಡೆಯುವ ಮೂಲಕ ನಿರ್ನಾಮಗೊಂಡಿವೆ. ಈಗಿರುವಂತೆ ಹರ್ಯಾಣ ವಿಧಾನಸಭಾ ಚುನಾವಣೆಗೆ ಕೇವಲ ನಾಲ್ಕು ತಿಂಗಳುಗಳು ಬಾಕಿಯಿರುವಾಗ ಬಿಜೆಪಿ ರಾಜ್ಯದಲ್ಲಿ ಅತಂತ್ರ ಸ್ಥಿತಿಯಲ್ಲಿದೆ.

ಅಸ್ಸಾಂ, ಗುಜರಾತ್‌ನಿಂದ ಮಹಾರಾಷ್ಟ್ರವರೆಗೆ ಹೊರಹೊಮ್ಮಿದ ಹೊಸ ಹೋರಾಟಗಾರರು

ಹರ್ಯಾಣ ಫಲಿತಾಂಶವನ್ನು ಈ ಲೇಖನದ ಕೇಂದ್ರಬಿಂದುವನ್ನಾಗಿಸಿರುವ ಉದ್ದೇಶ ಬಿಜೆಪಿ ಪ್ರಾಬಲ್ಯದ ರಾಜ್ಯದಲ್ಲಿ ಕಾಂಗ್ರೆಸ್ ಪರವಾಗಿ ಬಹುದೊಡ್ಡ ರಾಜಕೀಯ ಸ್ಥಿತ್ಯಂತರಕ್ಕೆ ಒತ್ತು ನೀಡುವುದು ಮಾತ್ರವಲ್ಲ, 2024ರ ಚುನಾವಣಾ ಫಲಿತಾಂಶಗಳು ಇತರ ರಾಜ್ಯಗಳಲ್ಲಿ ಇದನ್ನು ಪುನರಾವರ್ತಿಸಲು ಪ್ರತಿಪಕ್ಷಗಳಿಗೆ ಅವಕಾಶವನ್ನು ನೀಡಿವೆ ಎನ್ನುವುದನ್ನು ಗಮನಕ್ಕೆ ತರುವುದೂ ಆಗಿದೆ.

ಉದಾಹರಣೆಗೆ ಅಸ್ಸಾಮಿನ ಜೋರ್ಹಾತ್ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರಿಗೆ ಹಿನ್ನಡೆಯನ್ನುಂಟು ಮಾಡಿದ ಯುವ ಕಾಂಗ್ರೆಸ್ ನಾಯಕ ಗೌರವ್ ಗೊಗೊಯಿ ಅವರ ಪ್ರಕರಣ. ತಪನ್ ಗೊಗೊಯಿ ಬಿಜೆಪಿ ಅಭ್ಯರ್ಥಿಯಾಗಿದ್ದು ಗೌರವ್‌ರನ್ನು ಸೋಲಿಸಲು ಶರ್ಮಾ ಮತ್ತು ಅವರ ಸಂಪುಟ ಸದಸ್ಯರು ದಿನಗಟ್ಟಲೆ ಕಾಲ ಜೋರ್ಹಾತ್‌ನಲ್ಲಿ ಮೊಕ್ಕಾಂ ಹೂಡಿದ್ದರು.

ಗೌರವ್ ಅವರ ರಾಜಕೀಯ ಪ್ರವೇಶವು ಅವರ ತಂದೆ ಹಾಗೂ ಆಗಿನ ಮುಖ್ಯಮಂತ್ರಿ ತರುಣ್ ಗೊಗೊಯಿ ಅವರೊಂದಿಗಿನ ಶರ್ಮಾ ಸಂಬಂಧವು ಹಳಸಲು ಮತ್ತು ಅಂತಿಮವಾಗಿ ಕಾಂಗ್ರೆಸ್‌ನಿಂದ ಶರ್ಮಾರ ನಿರ್ಗಮನಕ್ಕೆ ಕಾರಣವಾಗಿತ್ತು. ಜೋರ್ಹಾತ್‌ನಲ್ಲಿ ಶರ್ಮಾ ವಿರುದ್ಧ ಗೌರವ್ ಮೇಲುಗೈ ಸಾಧಿಸಿರುವುದರಿಂದ ರಾಹುಲ್ ರಾಜ್ಯದಲ್ಲಿ ಪಕ್ಷದ ಹೊಣೆಯನ್ನು ಅವರಿಗೆ ವಹಿಸಲು ಮತ್ತು 2026ರ ವಿಧಾನಸಭಾ ಚುನಾವಣೆಗಳಲ್ಲಿ ಅವರನ್ನು ಕಾಂಗ್ರೆಸ್‌ನ ಮುಖವಾಗಿಸಲು ಬಯಸಬಹುದು.

ಇದು ತಿರುವನಂತಪುರ ಲೋಕಸಭಾ ಕ್ಷೇತ್ರದಲ್ಲಿ ಕಠಿಣ ತ್ರಿಕೋನ ಸ್ಪರ್ಧೆಯಲ್ಲಿ ತನ್ನ ಸತತ ನಾಲ್ಕನೇ ಗೆಲುವನ್ನು ದಾಖಲಿಸಿರುವ ಶಶಿ ತರೂರ್ ಅವರಿಗೂ ಅನ್ವಯಿಸುತ್ತದೆ. ಕೇರಳದಾದ್ಯಂತ ತರೂರ್ ಜನಪ್ರಿಯತೆಯು ಜಾತಿ ಮತ್ತು ಧಾರ್ಮಿಕ ವಿಭಜನೆಗಳನ್ನು ಮೀರಿದೆ ಮತ್ತು 2026ರ ವಿಧಾನಸಭಾ ಚುನಾವಣೆಗಳಲ್ಲಿ ಅವರು ಕಾಂಗ್ರೆಸ್‌ನ ಅತ್ಯುತ್ತಮ ಪಣವಾಗಬಹುದು. ಆದಾಗ್ಯೂ ರಾಹುಲ್ ಅವರ ವಿಶ್ವಾಸಿಯಾಗಿರುವ ಮಹತ್ವಾಕಾಂಕ್ಷಿ ಕೆ.ಸಿ.ವೇಣುಗೋಪಾಲ್ ಅವರು ತರೂರ್ ಮಾರ್ಗದಲ್ಲಿ ದೊಡ್ಡ ತಡೆಯಾಗಿದ್ದಾರೆ. ಕೇರಳದಲ್ಲಿ ಪಕ್ಷದ ಹೆಚ್ಚಿನ ಹಿತಾಸಕ್ತಿಗಾಗಿ ರಾಹುಲ್ ವೇಣುಗೋಪಾಲ್ ಜೊತೆಯಲ್ಲಿನ ಸಖ್ಯವನ್ನು ಮೀರಿ ಯೋಚಿಸುವರೇ ಎನ್ನುವುದು ಒಂದು ಚರ್ಚಾಸ್ಪದ ಅಂಶವಾಗಿದೆ.

ಮೋದಿಯವರ ಸೋಲನ್ನು ಸಂಭ್ರಮಿಸುವ ಬದಲು ಕಾಂಗ್ರೆಸ್ ತನಗಾಗಿರುವ ಲಾಭವನ್ನು ಬುನಾದಿ ಮಾಡಿಕೊಳ್ಳಬೇಕಿದೆ. ಲೋಕಸಭಾ ಚುನಾವಣಾ ಫಲಿತಾಂಶಗಳು ಅನೇಕ ಹೋರಾಟಗಾರರನ್ನು ಬೆಳಕಿಗೆ ತಂದಿರುವುದು ಕಾಂಗ್ರೆಸ್‌ಗೆ ಖುಷಿಯ ವಿಷಯವಾಗಿದೆ. ಗೆನಿಬೆನ್ ಠಾಕೂರ್ ಅವರನ್ನೇ ನೋಡಿ, ಶಾಸಕಿಯಾಗಿದ್ದು ಗುಜರಾತಿನ ಬನಾಸ್‌ಕಾಂತಾ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧೆಗಿಳಿದಿದ್ದ ಅವರು ಗೆಲುವಿನ ನಗೆ ಬೀರುವ ಮೂಲಕ ಸತತ ಮೂರನೇ ಸಲ ರಾಜ್ಯದ ಎಲ್ಲ 26 ಸ್ಥಾನಗಳನ್ನು ಗೆದ್ದು ಹ್ಯಾಟ್ರಿಕ್ ಸಾಧಿಸುವ ಬಿಜೆಪಿ ಕನಸಿಗೆ ತಣ್ಣೀರೆರಚಿದ್ದಾರೆ. ಅವರ ಚುನಾವಣಾ ಪ್ರಚಾರಕ್ಕೆ ನೀಡಲು ಕಾಂಗ್ರೆಸ್ ಬಳಿ ಹಣವಿರಲಿಲ್ಲ, ಠಾಕೂರ್ ತನ್ನ ಬೆಂಬಲಿಗರು ಮತ್ತು ಹಿತೈಷಿಗಳಿಂದ ತಲಾ 111 ರೂ.ಗಳ ದೇಣಿಗೆ ಕೋರಲು ಕ್ರೌಡ್‌ಫಂಡಿಂಗ್‌ನ ಮೊರೆ ಹೋಗುವುದು ಅನಿವಾರ್ಯವಾಗಿತ್ತು.

ದಶಕಗಳಿಂದಲೂ ಗುಜರಾತಿನಲ್ಲಿ ಪ್ರಬಲ ಹೋರಾಟಗಾರ ನಾಯಕನ ಕೊರತೆಯನ್ನು ಕಾಂಗ್ರೆಸ್ ಎದುರಿಸುತ್ತಿದೆ ಮತ್ತು 48ರ ಹರೆಯದ ಠಾಕೂರ್ ಈ ಸ್ಥಾನಕ್ಕೆ ಅತ್ಯಂತ ಅರ್ಹರಾಗಬಹುದು.

ಕಾಂಗ್ರೆಸ್ ಪಕ್ಷದಿಂದ ಹಲವಾರು ಪ್ರಮುಖ ನಾಯಕರ ನಿರ್ಗಮನಕ್ಕೆ ಸಾಕ್ಷಿಯಾಗಿರುವ ಮಹಾರಾಷ್ಟ್ರದಲ್ಲಿ 2024ರ ಚುನಾವಣೆಗಳು ಗಮನಾರ್ಹ ಹೋರಾಟ ಸಾಮರ್ಥ್ಯವನ್ನು ಹೊಂದಿರುವ ಕೆಲವು ಯುವ ವಿಜೇತರನ್ನು ಮುನ್ನೆಲೆಗೆ ತಂದಿವೆ. ಮುಂಬೈ ನಾರ್ಥ್ ಸೆಂಟ್ರಲ್‌ನಿಂದ ಆಯ್ಕೆಯಾಗಿರುವ ವರ್ಷಾ ಗಾಯಕ್ವಾಡ್ (49), ಸೋಲಾಪುರ ಸಂಸದೆ ಹಾಗೂ ಮಾಜಿ ಗೃಹಸಚಿವ ಸುಶೀಲ್ ಕುಮಾರ್ ಶಿಂದೆಯವರ ಪುತ್ರಿ ಪ್ರಣೀತಿ ಶಿಂದೆ (43), ಶಿವಸೇನೆ (ಯುಬಿಟಿ) ಸಾಂಗ್ಲಿ ಕ್ಷೇತ್ರವನ್ನು ಕಾಂಗ್ರೆಸ್‌ಗೆ ಬಿಟ್ಟುಕೊಡಲು ನಿರಾಕರಿಸಿದ ಬಳಿಕ ಅಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿ ಗೆದ್ದಿರುವ ಮಾಜಿ ಮುಖ್ಯಮಂತ್ರಿ ವಸಂತದಾದಾ ಪಾಟೀಲ್ ಅವರ ಮೊಮ್ಮಗ ವಿಶಾಲ್ ಪಾಟೀಲ್ (43) ಕಾಂಗ್ರೆಸ್‌ನಲ್ಲಿ ಉತ್ಸಾಹ ತುಂಬಿರುವ ಉದಯೋನ್ಮುಖ ನಾಯಕರಾಗಿದ್ದಾರೆ.

ಉತ್ತರ ಪ್ರದೇಶದ ಸೀತಾಪುರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ನಾಯಕರಿಗೆ ಹೆಚ್ಚು ಪರಿಚಿತರಲ್ಲದ ರಾಜೇಶ್ ರಾಠೋಡ್ ಬಿಜೆಪಿಯನ್ನು ಸೋಲಿಸಿದ್ದಾರೆ. ಎಸ್‌ಪಿ ಶಾಸಕರೋರ್ವರು ಸ್ಪರ್ಧಿಸಲು ನಿರಾಕರಿಸಿದ ಮತ್ತು ಕಾಂಗ್ರೆಸ್ ಅಭ್ಯರ್ಥಿ ತನ್ನ ಟಿಕೆಟ್ ಮರಳಿಸಿದ ಬಳಿಕ ಅಲ್ಲಿಂದ ಸ್ಪರ್ಧಿಸಲು ರಾಠೋಡ್‌ಗೆ ಅವಕಾಶ ದಕ್ಕಿತ್ತು ಮತ್ತು ಅವರು 35 ವರ್ಷಗಳ ಬಳಿಕ ಸೀತಾಪುರ ಕ್ಷೇತ್ರವನ್ನು ಮರಳಿ ಕಾಂಗೆಸ್ ಉಡಿಯಲ್ಲಿ ಹಾಕಲು ಯಶಸ್ವಿಯಾಗಿದ್ದಾರೆ. 2009ರಲ್ಲಿ ಲುಧಿಯಾನಾದಿಂದ ಗೆದ್ದು 2019ರಲ್ಲಿ ಆನಂದಪುರ ಸಾಹಿಬ್‌ನಿಂದ ಸ್ಪರ್ಧಿಸಿ ಗೆದ್ದಿದ್ದ ಕಾಂಗ್ರೆಸ್‌ನ ಮನೀಶ್ ತಿವಾರಿ 2024ರಲ್ಲಿಯೂ ಕ್ಷೇತ್ರವನ್ನು ಚಂಡಿಗಡಕ್ಕೆ ಬದಲಿಸಿ ಬಿಜೆಪಿಯ ಭದ್ರಕೋಟೆಯಲ್ಲಿಯೇ ಅದನ್ನು ಸೋಲಿಸಿ ಗೆಲುವಿನ ನಗೆ ಬೀರಿದ್ದಾರೆ.

ಕಾಂಗ್ರೆಸ್‌ನ 99 ಸಂಸದರಲ್ಲಿ ತಮ್ಮ ವೈಯಕ್ತಿಕ ಸಾಮರ್ಥ್ಯದಿಂದಲೇ ಗೆಲುವು ಸಾಧಿಸಿರುವ ಹಲವರಿದ್ದಾರೆ ಮತ್ತು ಇವರೆಲ್ಲ ಕಾಂಗ್ರೆಸ್ ಪಾಲಿಗೆ ಬಲವಾದ ಆಸರೆಯನ್ನು ಒದಗಿಸಬಲ್ಲರು. ಈವರೆಗೆ ಪಕ್ಷದಲ್ಲಿ ರೇವಂತ್ ರೆಡ್ಡಿ, ಡಿ.ಕೆ.ಶಿವಕುಮಾರ್, ಭೂಪೇಶ್ ಬಘೇಲ್, ಸಚಿನ್ ಪೈಲಟ್ ಮತ್ತು ಹೂಡಾಗಳು ಹೀಗೇ ಕೆಲವೇ ‘ಸ್ಟಾರ್’ಗಳಿದ್ದರು. ಈಗ ಇದ್ದಕ್ಕಿದ್ದಂತೆ ಕಾಂಗ್ರೆಸ್‌ನಲ್ಲಿ ವಿವಿಧ ರಾಜ್ಯಗಳ ತಮ್ಮ ಕ್ಷೇತ್ರಗಳಲ್ಲಿ ಬಿಜೆಪಿಯನ್ನು ಯಶಸ್ವಿಯಾಗಿ ಸೋಲಿಸುವ ಮೂಲಕ ತಮ್ಮ ಸಾಮರ್ಥ್ಯವನ್ನು ಸಾಬೀತುಗೊಳಿಸಿರುವ ಹೋರಾಟಗಾರರು ತುಂಬಿಹೋಗಿದ್ದಾರೆ. ತಮ್ಮ ಗೆಲುವಿಗೆ ಮೋದಿ ಮತ್ತು ಅವರ ವ್ಯಕ್ತಿತ್ವ ಆಕರ್ಷಣೆಗೆ ಋಣಿಯಾಗಿರುವ ಬಿಜೆಪಿ ಸಂಸದರಂತಲ್ಲದೆ ಈ ಕಾಂಗ್ರೆಸ್ ಸಂಸದರು ಒಂದು ರೀತಿಯಲ್ಲಿ ಸ್ವಯಂ ರೂಪಿಸಿಕೊಂಡಿರುವ ಕಠಿಣ ಹೋರಾಟಗಾರರಾಗಿದ್ದಾರೆ. ಅವರು ರಾಹುಲ್ ಗಾಂಧಿಯವರಿಗೆ ಹೊಸದಾಗಿ ಆರಂಭಿಸಲು ಮತ್ತು ರಾಜ್ಯಗಳಲ್ಲಿ ಬಿಜೆಪಿ ವಿರುದ್ಧ ಹೇಗೆ ಹೋರಾಡಬೇಕು ಎನ್ನುವುದನ್ನು ತಿಳಿದಿರುವ ನಾಯಕರನ್ನು ಉತ್ತೇಜಿಸುವ ಮೂಲಕ ಕಾಂಗ್ರೆಸನ್ನು ಮರುನಿರ್ಮಾಣ ಮಾಡಲು ಅವಕಾಶವನ್ನು ಸೃಷ್ಟಿಸಿದ್ದಾರೆ. ಯಾರಿಗೆ ಗೊತ್ತು, ಅವರು ತಮ್ಮ ರಾಜ್ಯಗಳಲ್ಲಿ ಹರ್ಯಾಣದಂತಹ ಹೋರಾಟವನ್ನು ಪುನರಾವರ್ತಿಸಬಹುದು. ರಾಹುಲ್ ಲೋಕಸಭೆಯಲ್ಲಿ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿಯ ಬಹುಮತವನ್ನು ಕಸಿದುಕೊಂಡಿದ್ದಕ್ಕಲ್ಲ, ಹೊಸ ಕಾಂಗ್ರೆಸ್ ಪಕ್ಷವನ್ನು ಕಟ್ಟಲು ತನಗೆ ಅವಕಾಶವನ್ನು ಒದಗಿಸಿರುವುದಕ್ಕಾಗಿ 2024ರ ಚುನಾವಣಾ ಫಲಿತಾಂಶಗಳನ್ನು ಸಂಭ್ರಮಿಸಬೇಕು.

ಕೃಪೆ: theprint.in

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ಡಿ.ಕೆ. ಸಿಂಗ್‌ theprint.in

contributor

Similar News