ಅದಾನಿ ವಂಚನೆ ಆರೋಪ:ಮೋದಿ ಸರಕಾರದ ನಿಲುವೇನು?

Update: 2024-11-23 04:49 GMT

ಅಮೆರಿಕದ ನ್ಯಾಯಾಲಯದಲ್ಲಿ ಗೌತಮ್ ಅದಾನಿ ಮತ್ತು ಅವರ ಸೋದರಳಿಯ ವಿರುದ್ಧ ಗಂಭೀರ ಆರೋಪಗಳನ್ನು ಮಾಡಲಾಗಿದೆ. ಈಗ ಅಲ್ಲಿ ವಿಚಾರಣೆ ನಡೆಯಲಿದೆ. ಭಾರತದಲ್ಲಿ ಬೃಹತ್ ಸೌರ ವಿದ್ಯುತ್ ಉತ್ಪಾದನಾ ಘಟಕ ಸ್ಥಾಪನೆಗಾಗಿ ಮುಂದಿನ 20 ವರ್ಷಗಳಲ್ಲಿ 200 ಕೋಟಿ ಡಾಲರ್ ಹೂಡಿಕೆ ಆಕರ್ಷಿಸಲು ಭಾರತದ ಅಧಿಕಾರಿಗಳಿಗೆ ಲಂಚ ಹಾಗೂ ಅಮೆರಿಕ ಸೇರಿದಂತೆ ವಿದೇಶಿ ಹೂಡಿಕೆದಾರರಿಗೆ ತಪ್ಪು ಮಾಹಿತಿ ನೀಡಿರುವ ಆರೋಪ ಗೌತಮ್ ಅದಾನಿ, ಸಾಗರ್ ಅದಾನಿ, ವಿನೀತ್ ಜೈನ್ ಮೇಲಿದೆ.

ಎಂದಿನಂತೆ ಅದಾನಿ ಗ್ರೂಪ್ ಈ ಆರೋಪಗಳನ್ನು ಆಧಾರರಹಿತ ಎಂದಿದೆ. ಆದರೆ ಅಮೆರಿಕ ನ್ಯಾಯಾಲಯದ ಚಾರ್ಜ್‌ಶೀಟ್ ಎಲ್ಲಾ ರೀತಿಯ ಇಲೆಕ್ಟ್ರಾನಿಕ್ ಸಾಕ್ಷ್ಯಗಳನ್ನು ಹೊಂದಿದೆ ಎಂದು ಹೇಳುತ್ತಿದೆ. ಗೌತಮ್ ಅದಾನಿ ಅವರ ಸೋದರಳಿಯನನ್ನು ಎಫ್‌ಬಿಐ ವಿಚಾರಣೆಗೆ ಒಳಪಡಿಸಿದೆ ಮತ್ತು ಇಲೆಕ್ಟ್ರಾನಿಕ್ ಸಾಧನಗಳನ್ನು ವಶಪಡಿಸಿಕೊಂಡಿದೆ.

ನ್ಯಾಯಾಲಯದ ಮುಂದೆ ಹಲವು ರೀತಿಯ ಸಾಕ್ಷ್ಯಗಳಿವೆ. ಅದಾನಿಯನ್ನು ಅಮೆರಿಕಕ್ಕೆ ಒಪ್ಪಿಸಬೇಕೇ ಎಂಬ ಚರ್ಚೆಯೂ ನಡೆಯುತ್ತಿದೆ. ವಿದೇಶಾಂಗ ಸೇವೆಯ ಅಧಿಕಾರಿಯೊಬ್ಬರು ಭಾರತ ಮತ್ತು ಅಮೆರಿಕ ನಡುವೆ ಹಸ್ತಾಂತರ ಒಪ್ಪಂದವಿದೆ ಎಂದು ಟ್ವೀಟ್ ಮಾಡಿದ್ದಾರೆ.

ಅದಾನಿಯನ್ನು ಹಸ್ತಾಂತರದಿಂದ ರಕ್ಷಿಸಲು, ಭಾರತದಲ್ಲಿ ಪ್ರಕರಣವನ್ನು ದಾಖಲಿಸಬೇಕಾಗುತ್ತದೆ.

ಮಾರ್ಚ್ ತಿಂಗಳಲ್ಲೇ ಅಮೆರಿಕದಲ್ಲಿ ತನಿಖೆ ನಡೆಯು ತ್ತಿದೆ ಎಂಬ ಸುದ್ದಿ ಬಂದಿತ್ತಾದರೂ, ಇಲ್ಲಿಯವರೆಗೆ ಭಾರತ ಸರಕಾರ ಏನು ಮಾಡುತ್ತಿತ್ತು? ಅಮೆರಿಕಕ್ಕಿಂತ ಮೊದಲು ಭಾರತದಲ್ಲಿ ಅದಾನಿಯನ್ನು ಬಂಧಿಸಬೇಕು ಎಂದು ವಿಪಕ್ಷ ನಾಯಕ ರಾಹುಲ್ ಗಾಂಧಿ ಒತ್ತಾಯಿಸಿದ್ದಾರೆ.

ನ್ಯಾಯಾಲಯದ ದಸ್ತಾವೇಜುಗಳ ಆಧಾರದಲ್ಲಿ ದಿ ಹಿಂದೂ, ರಾಯ್ಟರ್ಸ್, ಎಬಿಸಿ ಆಸ್ಟ್ರೇಲಿಯ ವರದಿ ಮಾಡಿದ್ದು, ಅದರ ಪ್ರಕಾರ ಅದಾನಿ ವಿರುದ್ಧ ಬಂಧನ ವಾರಂಟ್ ಜಾರಿಯಾಗಿದೆ. ಆರೋಪಗಳು ಆಧಾರ ರಹಿತ ಎನ್ನುವ ಅದಾನಿ ಗ್ರೂಪ್ ಕೋರ್ಟ್‌ನಲ್ಲಿ ಅದನ್ನು ಸಾಬೀತು ಮಾಡಬೇಕಾಗುತ್ತದೆ.

ಸೆಕ್ಯೂರಿಟೀಸ್ ವಂಚನೆ ಸಾಬೀತಾದರೆ 20 ವರ್ಷಗಳ ಜೈಲು ಶಿಕ್ಷೆಯಾಗಬಹುದು. ವಂಚನೆಯಲ್ಲಿ ಶಾಮೀಲಾದರೆ 5 ವರ್ಷಗಳವರೆಗೆ ಜೈಲಾಗಬಹುದು.

ಗೌತಮ್ ಅದಾನಿ ಮತ್ತು ಸಾಗರ್ ಅದಾನಿ ವಿರುದ್ಧ 265 ಮಿಲಿಯನ್ ಡಾಲರ್ ಲಂಚ ನೀಡಿದ ಆರೋಪ ಮಾಡಲಾಗಿದೆ. ರೂಪಾಯಿ ಲೆಕ್ಕದಲ್ಲಿ ಇದು 2,238 ಕೋಟಿ. ಇಲ್ಲಿಯವರೆಗೂ ಅದಾನಿ ಜೊತೆಗೆ ಸಹೋದರನ ಹೆಸರು ಬರುತ್ತಿತ್ತು. ಈ ಬಾರಿ ಸೋದರಳಿಯನ ಹೆಸರು ತಳುಕು ಹಾಕಿಕೊಂಡಿದೆ.

ಅದಾನಿ ವಿರುದ್ಧದ ಇಷ್ಟು ದೊಡ್ಡ ಹಗರಣದ ಆರೋಪ ಸಾಬೀತಾದರೆ ಮೋದಿ ಅದನ್ನು ಹೇಗೆ ಎದುರಿಸುತ್ತಾರೆ?

ವಂಚನೆಯ ಐದು ಪ್ರಕಾರಗಳಲ್ಲಿ ಅದಾನಿ ವಿರುದ್ಧದ ಆರೋಪಗಳ ಕುರಿತು ವಿಚಾರಣೆ ನಡೆಯಬೇಕಿದೆ.

ರಾಹುಲ್ ಗಾಂಧಿ ತಕ್ಷಣವೇ ಅದಾನಿಯನ್ನು ಬಂಧಿಸಬೇಕು ಎಂದು ಒತ್ತಾಯಿಸಿದ್ದಾರೆ. ಆದರೆ ಇಲ್ಲಿ ಅದಾನಿ ಬಂಧನ ಆಗುತ್ತದೆಯೇ?

ಅದಾನಿ ಭಾರತದಲ್ಲಿ ಲಂಚ ನೀಡಿದ್ದಾರೆ, ಅಧಿಕಾರಿಗಳನ್ನು ಬಳಸಿದ್ದಾರೆ ಎಂಬುದೆಲ್ಲವನ್ನೂ ಈಗ ಅಮೆರಿಕ ಹೇಳುತ್ತಿದೆ. ಆದರೆ ಪ್ರಧಾನಿ ಮೋದಿ ಅದರ ಬಗ್ಗೆ ಏನನ್ನೂ ಮಾತಾಡಿಲ್ಲ. ಬಹುಶಃ ಅವರು ಮಾತಾಡುವುದೂ ಇಲ್ಲ.

ಕೋರ್ಟಿನಲ್ಲಿ ವಿಚಾರಣೆ ನಡೆಯುತ್ತಿರುವುದು, ತಾನು ಹಾಜರಾಗಲು ಅದೇಶವಿದ್ದುದು ಅದಾನಿಗೆ ತಿಳಿದೇ ಇತ್ತು. ಸಾಗರ್ ಅದಾನಿಯ ಇಲೆಕ್ಟ್ರಾನಿಕ್ ಉಪಕರಣಗಳ ಶೋಧಕ್ಕೂ ವಾರಂಟ್ ಜಾರಿಯಾಗಿತ್ತು.

ಆದರೆ ಗೌತಮ್ ಅದಾನಿ ಟ್ರಂಪ್ ಗೆದ್ದಿದ್ದಕ್ಕೆ ಅಭಿನಂದನೆ ಹೇಳುತ್ತ, ತನ್ನದೇ ವ್ಯವಹಾರ ಕುದುರಿಸಲು ನೋಡುತ್ತಿದ್ದರು. ಅಮೆರಿಕದ ಎನರ್ಜಿ ಸೆಕ್ಯೂರಿಟಿ ವಲಯದಲ್ಲಿ 10 ಬಿಲಿಯನ್ ಡಾಲರ್ ಹೂಡಿಕೆ ಮತ್ತು 15,000 ಉದ್ಯೋಗಗಳ ಸೃಷ್ಟಿಗೆ ಅದಾನಿ ಗ್ರೂಪ್ ಬದ್ಧ ವಾಗಿರುವುದಾಗಿ ಅದಾನಿ ಟ್ವೀಟ್ ಮೂಲಕ ಹೇಳಿದ್ದರು.

ಅಮೆರಿಕಕ್ಕೆ ಅದಾನಿಯನ್ನು ಭಾರತ ಹಸ್ತಾಂತರ ಮಾಡುವ ಮೊದಲು, ಅಮೆರಿಕ ತನಿಖಾ ಏಜೆನ್ಸಿಯ ಪ್ರಶ್ನೆಗಳಿಗೆ ಅದಾನಿ ಉತ್ತರಿಸಬೇಕಾಗಿ ಬರಲಿದೆ.

ಕಳೆದ ತಿಂಗಳು ಅದಾನಿ ಗ್ರೂಪ್ ಹಾಗೂ ಕೆನ್ಯಾ ಸರಕಾರ ಮಹತ್ವದ ಒಪಂದಕ್ಕೆ ಸಹಿ ಹಾಕಿತ್ತು.

ಕೆನ್ಯಾದ ಪ್ರಮುಖ ವಿಮಾನ ನಿಲ್ದಾಣ ನಿರ್ವಹಣೆಯನ್ನು ಸರಕಾರಿ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ನಿರ್ವಹಣೆ ಮಾಡುವುದರ ಸಂಬಂಧ 30 ವರ್ಷಗಳ ಒಪ್ಪಂದವಾಗಿತ್ತು. 735 ಮಿಲಿಯನ್ ಡಾಲರ್‌ನಷ್ಟು ಬೃಹತ್ ಮೊತ್ತದ ಒಪ್ಪಂದ ಈಗ ರದ್ದಾಗಿದೆ.

ಬಾಂಗ್ಲಾದೇಶದ ನ್ಯಾಯಾಲಯ ಕೂಡ ಅದಾನಿ ಗ್ರೂಪ್ ಜೊತೆಗಿನ ಬಾಂಗ್ಲಾ ವಿದ್ಯುತ್ ಖರೀದಿ ಒಪ್ಪಂದ ಕುರಿತ ಸಮೀಕ್ಷೆಗಾಗಿ ಉನ್ನತ ಸಮಿತಿ ರಚನೆಗೆ ಆದೇಶಿಸಿದೆ.

ಇದೆಲ್ಲದರ ನಡು ವೆಯೇ ಅಮೆರಿಕದ ತನಿಖೆಯನ್ನು ಅದಾನಿ ಎದುರಿಸಬೇಕಾಗಿದೆ.

ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಟ್ವೀಟ್ ಮಾಡಿದ್ದು, ಇದೆಲ್ಲವೂ ಸದ್ಯ ಆರೋಪಗಳಷ್ಟೇ ಹೊರತು ಶಿಕ್ಷೆ ಆಗಿಲ್ಲ. ಆರೋಪ ಸಾಬೀತಾಗುವವರೆಗೂ ಅದಾನಿ ನಿರ್ದೋಷಿಯಾಗಿಯೇ ಇರಲಿದ್ದಾರೆ ಎಂದಿದ್ದಾರೆ. ಆದರೆ ಇದೇ ಅಮಿತ್ ಮಾಳವೀಯ ಈ ಹಿಂದಿನ ಸುದ್ದಿಗೋಷ್ಠಿಯಲ್ಲಿ ಸೋನಿಯಾ ಮತ್ತು ರಾಹುಲ್ ಚಿತ್ರಗಳಿರುವ ಪೋಸ್ಟರ್ ತೋರಿಸಿ ಬೇಲ್ ಮೇಲೆ ಹೊರಗಿದ್ದಾರೆ ಎಂದಿದ್ದರು. ಬೇಲ್ ಮೇಲೆ ಹೊರಗಿದ್ದಾರೆ ಎಂದರೆ ದೋಷಿಗಳಲ್ಲ ಎನ್ನುವುದು ಅಮಿತ್ ಮಾಳವೀಯಗೆ ಗೊತ್ತಿಲ್ಲವೆ?

ಇಷ್ಟೆಲ್ಲ ದೊಡ್ಡ ಉದ್ಯಮ ಸಾಮ್ರಾಜ್ಯದ ಮಾಲಕ ಅಮೆರಿಕಕ್ಕೆ ಹೋಗಲಾರದ ಸ್ಥಿತಿ ಏರ್ಪಟ್ಟಿದೆ. ಅಮೆರಿಕ ನ್ಯಾಯಾಲಯಕ್ಕೆ ಸಲ್ಲಿಕೆಯಾಗಿರುವ ಚಾರ್ಜ್‌ಶೀಟ್‌ನಲ್ಲಿ ಮಾಡಲಾಗಿರುವ ಆರೋಪಗಳು 1.ಅಮೆರಿಕದ ಹೂಡಿಕೆದಾರರಿಗೆ ವಂಚನೆ ಮತ್ತು ಭಾರತೀಯ ಅಧಿಕಾರಿಗಳಿಗೆ ಲಂಚ ನೀಡಿಕೆ. 2. ಸೆಕ್ಯೂರಿಟಿ ಮತ್ತು ವೈರ್ ಫ್ರಾಡ್ ಮತ್ತು ಸುಳ್ಳು ಮಾಹಿತಿ ನೀಡಿ ಅಮೆರಿಕದ ಬ್ಯಾಂಕ್‌ಗಳು ಹಾಗೂ ಜಾಗತಿಕ ಹೂಡಿಕೆದಾರರಿಂದ ಫಂಡ್ ಪಡೆದಿರುವುದು.

ವೈರ್ ಫ್ರಾಡ್ ಎಂದರೆ, ಫೋನ್, ಇಂಟರ್ನೆಟ್ ಇಲ್ಲವೇ ಕಂಪ್ಯೂಟರ್ ಬಳಸಿ ಹಣಕಾಸು ವಂಚನೆ ನಡೆಸುವುದಾಗಿದೆ.

ಅಮೆರಿಕದ ಸೆಕ್ಯೂರಿಟಿ ಎಕ್ಸ್‌ಚೇಂಜ್‌ಗೆ ಅದಾನಿ ಕಂಪೆನಿ ಏನು ವರದಿ ನೀಡಿದೆ ಎಂಬುದರ ಬಗ್ಗೆ ಎಫ್‌ಬಿಐ ಪರಿಶೀಲಿಸಲಿದೆ.

ಸೆಕ್ಯೂರಿಟಿ ಫ್ರಾಡ್ ಎಂದರೆ, ಷೇರು ಮಾರುಕಟ್ಟೆಯಲ್ಲಿನ ಹೂಡಿಕೆದಾರರಿಗೆ ವಂಚನೆ ಎಸಗಿರುವ ಆರೋಪ. ಷೇರು ಮಾರುಕಟ್ಟೆಯಲ್ಲಿ ಹಣ ತೊಡಗಿಸುವವರ ಜೊತೆ ವಂಚನೆಗೆ ಇಳಿಯುವ ಹಾಗಿಲ್ಲ. ಇದರ ಬಗ್ಗೆ ಸೆಬಿ ತನಿಖೆ ಮಾಡಬೇಕಿತ್ತು.

ಆದರೆ ಸೆಬಿ ಮುಖ್ಯಸ್ಥೆಯ ವಿರುದ್ಧವೇ ಇಲ್ಲಿ ಹಲವು ಆರೋಪಗಳಿವೆ. ಅವುಗಳ ಬಗ್ಗೆಯೂ ತನಿಖೆ ನಡೆದಿಲ್ಲ.

ಗೌತಮ್ ಅದಾನಿ, ಸಾಗರ್ ಅದಾನಿ ಜೊತೆಗೆ, ವಿನೀತ್ ಜೈನ್, ರಂಜಿತ್ ಗುಪ್ತ, ಸೌರಭ್ ಅಗರ್ವಾಲ್, ದೀಪಕ್ ಮಲ್ಹೋತ್ರಾ, ರೂಪೇಶ್ ಅಗರ್ವಾಲ್ ಈ ಪ್ರಕರಣದಲ್ಲಿ ಇತರ ಆರೋಪಿಗಳು.

ಇವರೆಲ್ಲರ ನಡುವಿನ ಇಮೇಲ್ ವ್ಯವಹಾರಗಳೂ ಸೇರಿ ಎಲ್ಲ ಸಾಕ್ಷಿಗಳನ್ನೂ ಅಮೆರಿಕದ ತನಿಖಾ ಏಜನ್ಸಿ ಹೊಂದಿರುವುದಾಗಿ ತಿಳಿದುಬಂದಿದೆ.

ಆರೋಪಿಗಳೆಲ್ಲ ಅಮೆರಿಕನ್ ಫಾರಿನ್ ಕರಪ್ಟ್ ಪ್ರಾಕ್ಟಿಸ್ ಆ್ಯಕ್ಟ್ ಉಲ್ಲಂಘಿಸಿದ್ದಾರೆ ಎನ್ನಲಾಗಿದೆ.

ಸುಳ್ಳು ಮಾಹಿತಿ ನೀಡಿಯೇ 3 ಬಿಲಿಯನ್ ಡಾಲರ್ ಸಾಲ ಪಡೆದಿರುವ ಆರೋಪ ಇದೆ.

ಭಾರತದಲ್ಲಿ ಇದೆಲ್ಲವೂ ಮಾಮೂಲು ಎನ್ನುವ ಸ್ಥಿತಿ ಇದ್ದಿರಬಹುದು. ಆದರೆ ಅಮೆರಿಕದಲ್ಲಿ ಈ ರೀತಿಯ ವಂಚನೆಯೆಸಗಿ ವ್ಯವಹಾರ ಮಾಡುವುದು ಅಪರಾಧ. ಸಿಕ್ಕಿಬಿದ್ದರೆ ದಂಡ ಅಥವಾ ಜೈಲು ಪಕ್ಕಾ.

ಅಮೆರಿಕದ ಕೋರ್ಟ್ ಕ್ರಮದ ಬೆನ್ನಲ್ಲೇ ಅದಾನಿ ಗ್ರೀನ್ ಎನರ್ಜಿ ಸಂಸ್ಥೆ 5 ಸಾವಿರ ಕೋಟಿ ರೂ. ಸಂಗ್ರಹಿಸುವ ಬಾಂಡ್ ಬಿಡುಗಡೆ ಯೋಜನೆಯನ್ನು ಕೈಬಿಟ್ಟಿದೆ. ಈ ಬಾಂಡ್‌ಗಳಿಗೆ ಸಾಕಷ್ಟು ಹೂಡಿಕೆದಾರರು ಅರ್ಜಿ ಹಾಕಿದ್ದರು. ಆದರೆ ಈಗ ಬಾಂಡ್ ಬಿಡುಗಡೆ ಪ್ರಸ್ತಾವದಿಂದ ಅದಾನಿ ಕಂಪೆನಿ ಹಿಂದೆ ಸರಿದಿದೆ.

ಅದಾನಿ ವಿರುದ್ಧ ಇಂಥ ಗಂಭೀರ ಆರೋಪ ಬಂದಿರುವಾಗಲೂ ಇಡೀ ಮೋದಿ ಸರಕಾರ ಸುಮ್ಮನೆ ಕೂತಿದೆ.

ಲಂಚದ ಭರವಸೆ ಅದಾನಿ ಕಡೆಯಿಂದ ಅಧಿಕಾರಿಗಳಿಗೆ ಸಿಕ್ಕಿದ ಬಳಿಕವೇ ಅದಾನಿ ಸಮೂಹದಿಂದ ವಿದ್ಯುತ್ ಖರೀದಿಗೆ ಭಾರತದ ಐದು ರಾಜ್ಯಗಳ ವಿದ್ಯುತ್ ವಿತರಕರು ಮುಂದಾಗಿದ್ದರು ಎಂಬುದು ಕೂಡ ಅಮೆರಿಕ ಕೋರ್ಟ್‌ಗೆ ಸಲ್ಲಿಸಿರುವ ಮಾಹಿತಿಯಲ್ಲಿದೆ.

ಆಂಧ್ರಪ್ರದೇಶದ ಅಧಿಕಾರಿಗಳು ಲಂಚ ಪಡೆದಿರುವ ಬಗ್ಗೆಯೂ ಆರೋಪಗಳು ಇವೆ.

ಇಂಧನ ಪೂರೈಕೆಗಾಗಿ ಸೋಲಾರ್ ಎನರ್ಜಿ ಕಾರ್ಪೊರೇಷನ್ ಆಫ್ ಇಂಡಿಯಾ (ಎಸ್‌ಇಸಿಐ) ಜೊತೆ ಕರಾರು ಮಾಡಿಕೊಂಡಿತ್ತು.

ಈ ವಲಯದಲ್ಲಿ 2030ರ ವೇಳೆಗೆ ದೇಶದ ಅತಿ ದೊಡ್ಡ ಕಂಪೆನಿಯಾಗುವ ನಿಟ್ಟಿನಲ್ಲಿ ಅದಾನಿ ಗ್ರೂಪ್ ಗುರಿಯಿತ್ತು.

ಅದಾನಿ ವಿರುದ್ಧದ ಆರೋಪಗಳನ್ನು ಒಪ್ಪಿಕೊಳ್ಳಲು ತಯಾರಿಲ್ಲದ ಬಿಜೆಪಿ, ಅಮೆರಿಕ ಅದಾನಿ ಗ್ರೂಪ್ ವಿರುದ್ಧ ಮಾಡಿರುವ ಆರೋಪದಲ್ಲಿ ಉಲ್ಲೇಖಿಸಲಾಗಿರುವ ನಾಲ್ಕು ರಾಜ್ಯಗಳಲ್ಲಿ ಇದ್ದಿದ್ದು ಕಾಂಗ್ರೆಸ್ ಸರಕಾರ ಎಂಬ ವಿಚಾರವನ್ನು ಮಾತ್ರ ಎತ್ತಿಕೊಳ್ಳುತ್ತದೆ. ಸಂಬೀತ್ ಪಾತ್ರಾರಂತಹವರು ಇದನ್ನು ಹೇಳುತ್ತಾರೆ.

ಕೆಲವು ಮಾಹಿತಿಗಳ ಪ್ರಕಾರ ಜಮ್ಮು-ಕಾಶ್ಮೀರದಲ್ಲಿ ಕೂಡ ಅದಾನಿ ಸಮೂಹದ ಗುತ್ತಿಗೆ ಆಗಿತ್ತು.

ಬಜೆಪಿಯೇತರ ಸರಕಾರಗಳಿರುವ ರಾಜ್ಯಗಳ ವಿಚಾರದಲ್ಲಿ ಸಂಬೀತ್ ಪಾತ್ರಾ ಹಾಗೆ ಹೇಳುವುದಾದರೆ ಲೆಫ್ಟಿನಂಟ್ ಗವರ್ನರ್ ಇದ್ದ ಜಮ್ಮು-ಕಾಶ್ಮೀರದ ವಿಚಾರದಲ್ಲಿಯೂ ಸಂದೇಹ ಮೂಡಬೇಕಲ್ಲವೆ?

ಈಗಿನ ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಬಿಜೆಪಿಯದ್ದೇ ಸಹಯೋಗಿಯಾಗಿದ್ದಾರೆ.ಚಂದ್ರಬಾಬು ನಾಯ್ಡು ಈ ಡೀಲ್ ಕುರಿತು ತನಿಖೆ ನಡೆಸುತ್ತಾರೆಯೇ? ಲಂಚದ ವಿಚಾರ ಬಯಲಾದರೆ ಡೀಲ್ ರದ್ದುಪಡಿಸುತ್ತಾರೆಯೇ?

ರಾಜ್ಯಗಳ ವಿರುದ್ಧ ಮಾತಾಡುವ ಸಂಬೀತ್ ಪಾತ್ರಾಗೆ ಪ್ರತಿಯೊಂದು ಕರಾರು ಕೂಡ ಕೇಂದ್ರದ ಸೋಲಾರ್ ಎನರ್ಜಿ ಕಾರ್ಪೊರೇಷನ್ ಜೊತೆ ಆಗಿರುವಂಥದ್ದು, ಅದರ ಸಮ್ಮತಿಯಿಲ್ಲದೆ ಏನೂ ನಡೆಯುವುದಿಲ್ಲ ಎಂಬುದು ಗೊತ್ತಿಲ್ಲವೆ?

ಅದಾನಿ ಕಂಪೆನಿಯ ಪ್ರತಿಯೊಂದು ಒಪ್ಪಂದವೂ ಎಸ್‌ಇಸಿಐ ಜೊತೆ ಆದದ್ದು. ಅದರ ಮೇಲೆ ಅದಾನಿಯ ಅಷ್ಟೊಂದು ಪ್ರಭಾವ ಸಾಧ್ಯವಾದದ್ದು ಹೇಗೆ?

ಭಾರತದ ಸ್ಟಾಕ್ ಎಕ್ಸ್‌ಚೇಂಜ್‌ಗೆ ಸುಳ್ಳು ಹೇಳಿದ ಆರೋಪ ಹೊತ್ತಿರುವ ಅದಾನಿ ಗ್ರೂಪ್ ವಿರುದ್ಧ ಇಲ್ಲಿ ತನಿಖೆ ಮಾಡಬೇಕಾದವರು ಯಾರು? ಈವರೆಗೂ ಇದರ ತನಿಖೆ ಆಗದೇ ಇರುವುದೇಕೆ?

ಅದಾನಿ ವಿರುದ್ಧ ಅಮೆರಿಕ ತನಿಖೆ ನಡೆಸಲಿರುವ ಬಗ್ಗೆ ಈ ಮಾರ್ಚ್‌ಲ್ಲಿಯೇ ವರದಿ ಪ್ರಕಟವಾಗಿದ್ದರೂ ಯಾಕೆ ಮೋದಿ ಸರಕಾರ ಅದನ್ನು ಗಂಭೀರವಾಗಿ ಪರಿಗಣಿಸದೇ ಉಳಿಯಿತು? ಯಾಕೆ ಸಂಬೀತ್ ಪಾತ್ರಾ ಆಗ ಸುದ್ದಿಗೋಷ್ಠಿ ನಡೆಸಲಿಲ್ಲ?

ಅಮೆರಿಕದಿಂದ ಅದಾನಿ ವಿಚಾರವಾಗಿ ಬಂದಿರುವ ಈ ಸುದ್ದಿ ಭಾರತದ ದೃಷ್ಟಿಯಿಂದಂತೂ ಒಳ್ಳೆಯದಲ್ಲ.

ಭಾರತದ ತನಿಖಾ ಸಂಸ್ಥೆಗಳು ತನಿಖೆಯ ಯೋಚನೆಯನ್ನೂ ಅದಾನಿ ವಿರುದ್ಧ ಮಾಡದೇ ಇದ್ದಾಗ, ಅಮೆರಿಕ ತನಿಖೆ ನಡೆಸುತ್ತಿದೆ.

ಭಾರತದಲ್ಲಿ ಅದಾನಿಯನ್ನು ಇನ್ನೂ ಸಮರ್ಥಿಸುತ್ತ, ರಕ್ಷಿಸುತ್ತ ಇರುವವರಿಗೆ ನಾಚಿಕೆಯಾಗಬೇಕು.

Tags:    

Writer - ವಾರ್ತಾಭಾರತಿ

contributor

Editor - Mushaveer

contributor

Byline - ಎಸ್. ಸುದರ್ಶನ್

contributor

Similar News