ರೈತರಿಗೆ ದುಬಾರಿಯಾಗುತ್ತಿರುವ ಕೃಷಿ ಚಟುವಟಿಕೆ; ಎತ್ತುಗಳಿಲ್ಲದೇ ಮೂಲೆ ಸೇರಿದ ನೇಗಿಲು

Update: 2024-08-26 08:43 GMT

ಹೊಸಕೋಟೆ: ಹಳ್ಳಿಗಳೆಂದರೆ ಊರು ತುಂಬಾ ದನ, ಎಮ್ಮೆ ರಾಸುಗಳು ಸಾಮಾನ್ಯ. ಕೃಷಿ ಚಟುವಟಿಕೆಯೇ ಮೂಲಾಧಾರವಾಗಿರುವ ಗ್ರಾಮೀಣ ಪ್ರದೇಶಗಳಲ್ಲಿ ಇವುಗಳೇ ಜೀವಕಳೆ, ಆದರೆ ಇಂದು ರಾಸುಗಳೂ ಇಲ್ಲ, ಯುವ ಜನತೆಯೂ ಇಲ್ಲ. ಹಳ್ಳಿಗಳು ವೃದ್ಧಾಶ್ರಮದಂತಾಗಿ ಗ್ರಾಮೀಣ ಸೊಗಡೇ ಮರೆಯಾಗುತ್ತಿದೆ.

ಕೃಷಿಯಲ್ಲಿ ಬಳಕೆಯಾಗುತ್ತಿದ್ದ ರಾಸುಗಳ ಸಂಖ್ಯೆ ಕ್ಷೀಣಿಸುತ್ತಿದ್ದು, ಈಗ ಎಲ್ಲವೂ ಯಂತ್ರಮಯವಾಗಿದೆ. ಅಷ್ಟೇ ಅಲ್ಲ, ಜಾನುವಾರುಗಳ ಜಾಗದಲ್ಲಿ ಜನರೇ ನಿಂತು ಕೃಷಿ ಮಾಡಬೇಕಾದ ಅನಿವಾರ್ಯ ಪರಿಸ್ಥಿತಿ ಬಂದೊದಗಿದೆ. ಪ್ರತಿವರ್ಷ ಅತಿವೃಷ್ಟಿ-ಅನಾವೃಷ್ಟಿಯ ಏರಿಳಿತದ ನಡುವೆ ಕೃಷಿ ಚಟುವಟಿಕೆಯೇ ಡೋಲಾಯಮಾನವಾಗುತ್ತಿದ್ದು, ಹವಾಮಾನ ವೈಪರೀತ್ಯಗಳು ಕೃಷಿಯ ಮೇಲೆ ಗಾಢ ಪರಿಣಾಮ ಉಂಟುಮಾಡುತ್ತಿವೆ. ಇದೆಲ್ಲದರ ನಡುವೆ ಕೃಷಿಯನ್ನೇ ನಂಬಿ ಬದುಕು ಸಾಗಿಸುತ್ತಿರುವ ಕುಟುಂಬಗಳು ಈಗ ಅಕ್ಷರಶಃ ಆತಂತ್ರ ಪರಿಸ್ಥಿತಿಗೆ ಸಿಲುಕಿವೆ.

ಪ್ರತಿವರ್ಷ ಕೃಷಿ ಚಟುವಟಿಕೆ ಆರಂಭವಾಗುವ ಸಂದರ್ಭದಲ್ಲಿ ರೈತರು ಭೂಮಿ ಮತ್ತು ರಾಸುಗಳನ್ನು ಪೂಜಿಸಿದ ನಂತರವೇ ವ್ಯವಸಾಯ ಆರಂಭಿಸುತ್ತಿದ್ದರು. ವ್ಯವಸಾಯದ ನೇಗಿಲು ಸಹಿತ ಮರದ ಉಪಕರಣಗಳೇ ಆಗಿದ್ದವು. ಇದೆಲ್ಲದ್ದಕ್ಕೂ ಪೂಜೆ ಸಲ್ಲುತ್ತಿತ್ತು. ಕೃಷಿ ಚಟುವಟಿಕೆಗೆ ಕೂಲಿ ಕಾರ್ಮಿಕರನ್ನು ಹುಡುಕುವುದು ಕಷ್ಟಕರ. ಮನೆಗಳಲ್ಲಿ ಎತ್ತುಗಳಿಲ್ಲ. ಬಾಡಿಗೆ ಎತ್ತುಗಳನ್ನು ಎಲ್ಲರೂ ಬಳಸಲು ಸಾಧ್ಯವಾಗುತ್ತಿಲ್ಲ. ದಿನಗೂಲಿ ನೀಡಿ ಎಡೆಕುಂಟೆ ಹೊಡೆಯಲು ಆಗುತ್ತಿಲ್ಲ. ಕೃಷಿಯ ಖರ್ಚು ದುಪ್ಪಟ್ಟಾಗುತ್ತಿದ್ದು, ಆದಾಯ ಮಾತ್ರ ಸಿಗುತ್ತಿಲ್ಲ. ಪರಿಣಾಮವಾಗಿ ಕೃಷಿಯನ್ನೇ ನಂಬಿರುವವರು ಪರ್ಯಾಯ ಮಾರ್ಗಗಳತ್ತ ಮುಖ ಮಾಡುತ್ತಿದ್ದಾರೆ.

ಈಗ ವ್ಯವಸಾಯ ಮಾಡಲು ಎತ್ತುಗಳಿಲ್ಲ. ಮರದ ನೇಗಿಲುಗಳಂತೂ ಎಲ್ಲಿಯೂ ಕಾಣುತ್ತಿಲ್ಲ. ಕಬ್ಬಿಣದ ನೇಗಿಲುಗಳು ಮೂಲೆ ಗುಂಪಾಗಿವೆ. ಎಲ್ಲ ಕಡೆ ಟ್ರ್ಯಾಕ್ಟರ್ ಉಳುಮೆ ಸಾಮಾನ್ಯವಾಗಿದೆ. ಭೂಮಿಯನ್ನು ಹದ ಮಾಡಲು, ಉಳುಮೆ ಮಾಡಲು ಟ್ರ್ಯಾಕ್ಟರ್ ಬಳಕೆ ಅನಿವಾರ್ಯ. ಆದರೆ, ಆನಂತರದ ಕೃಷಿ ಚಟುವಟಿಕೆಗಳಿಗೆ ಜಾನುವಾರುಗಳು ಅವಶ್ಯ. ಮುಂಗಾರು ಬಿತ್ತನೆ ಅಥವಾ ಹಿಂಗಾರು ಕೃಷಿ ಬೆಳೆಗೆ ಅಕ್ಕಡಿ ಸಾಲುಗಳಿಗೆ ಕುಂಟೆ ಹೊಡೆಯುವುದು, ಕಳೆ ತೆಗೆಯುವುದು, ಬಿತ್ತನೆ ಮಾಡುವುದು ಹೀಗೆ ವಿವಿಧ ಹಂತದ ಚಟುವಟಿಕೆಗಳಿಗೆ ರಾಸುಗಳನ್ನು ಬಳಕೆ ಮಾಡಲಾಗುತ್ತಿತ್ತು.

ಆದರೆ ಈಗ ಜಾನುವಾರುಗಳ ಸಂಖ್ಯೆ ಕ್ಷೀಣಿಸುತ್ತಿರುವುದರಿಂದ ಈಗ ಯಂತ್ರಮಯವಾಗಿದೆ. ಆದರೆ ಎಲ್ಲ ರೈತರು ಯಂತ್ರಗಳನ್ನು ಬಳಸಲು ಸಾಧ್ಯವಾಗುತ್ತಿಲ್ಲ. ಇಂತಹ ಸಂದರ್ಭದಲ್ಲಿ ಕೃಷಿ ಕುಟುಂಬಗಳ ಜನರೇ ಎತ್ತುಗಳಾಗುತ್ತಿದ್ದಾರೆ. ಬೇಸಾಯದಿಂದ ಹಿಡಿದು ಬಿತ್ತನೆ ಬೀಜ ಹಾಕುವುದು, ಅಕ್ಕಡಿ ಸಾಲು ಹೊಡೆಯುವ ಕೆಲಸ ಕಾರ್ಯಗಳಲ್ಲಿ ಕೃಷಿ ಕುಟುಂಬದ ಸದಸ್ಯರೇ ಕೃಷಿ ಪರಿಕರಗಳನ್ನು ಹಿಡಿಯುತ್ತಿದ್ದಾರೆ. ಇದೀಗ ಇವೆಲ್ಲ ಅನಿವಾರ್ಯ ಎಂಬಂತಾಗಿವೆ. ಹಣ ಇದ್ದವರು ಎಲ್ಲದಕ್ಕೂ ಯಂತ್ರಗಳ ಮೊರೆ ಹೋಗುತ್ತಿದ್ದು, ಸಣ್ಣಪುಟ್ಟ ರೈತಾಪಿ ವರ್ಗದವರು ಎಲ್ಲವನ್ನೂ ತಾವೇ ಮಾಡಿಕೊಳ್ಳಬೇಕಾದ ಪರಿಸ್ಥಿತಿ ಬಂದೊದಗಿದೆ.

ಹೆಚ್ಚಿನ ಗ್ರಾಮಗಳಲ್ಲಿ ಈಗ ಎತ್ತುಗಳಿಲ್ಲ. ಕೃಷಿ ಚಟುವಟಿಕೆಗೆ ಕೆಲವು ಕಡೆ ಹಾಲು ಕೊಡುವ ಹಸುಗಳನ್ನೇ ಬಳಸುತ್ತಿದ್ದಾರೆ. ಇವೆಲ್ಲ ನಾಟಿ ಹಸುಗಳು. ಹೆಚ್ಚು ಕೃಷಿಗೆ ತೊಡಗಿಸಿಕೊಂಡರೆ ಹಾಲು ಕರೆಯುವುದು ಕಡಿಮೆಯಾಗುತ್ತದೆ ಎಂಬ ಕಾರಣಕ್ಕೆ ಅವುಗಳನ್ನೂ ಹೆಚ್ಚಿಗೆ ಬಳಸುತ್ತಿಲ್ಲ. ಹೀಗಾಗಿ ಬಹುತೇಕ ಎಲ್ಲ ಕಡೆ ಜನರೇ ಕೃಷಿ ಚಟುವಟಿಕೆಯಲ್ಲಿ ತೊಡಗುತ್ತಿದ್ದಾರೆ.

ರಾಸುಗಳ ದರ ದುಬಾರಿಯಾಗಿದೆ. ದನಗಳು ಸೇರಿದಂತೆ ಹಸುಗಳು ರಾಸುಗಳಿಗೆ ತರಾವರಿ ರೋಗರುಜಿನಗಳು ವಕ್ಕರಿಸುತ್ತಿವೆ. ಸಾವಿರಾರು ರೂಪಾಯಿಗಳನ್ನು ತೆತ್ತು ಖರೀದಿಸಿ ತಂದ ಜಾನುವಾರು ಮರಣ ಹೊಂದುವ ಸಾಧ್ಯತೆಗಳಿಗೆ ಹೆದರುತ್ತಿರುವ ರೈತರು ಈ ಉಸಾಬರಿಯೇ ಬೇಡವೆಂದು ಜಾನುವಾರುಗಳ ತಂಟೆಗೆ ಹೋಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಸುಲಭ ಮಾರ್ಗಗಳನ್ನು ಹುಡುಕುತ್ತಿದ್ದಾರೆ. ಕೃಷಿ ಗ್ರಾಮಗಳ ಪ್ರತೀ ಮನೆಯಲ್ಲಿಯೂ ನಾಟಿ ರಾಸುಗಳ ಬದಲಿಗೆ ಸೀಮೆಹಸುಗಳು ಬಂದು ನಿಂತಿವೆ.

ಯಂತ್ರೋಪಕರಣಗಳಿಗೆ ಹೆಚ್ಚು ಬೇಡಿಕೆ

ಜಾನುವಾರುಗಳ ಸಂಖ್ಯೆ ಕ್ಷೀಣಿಸುತ್ತಿರುವ ಇಂದಿನ ದಿನಗಳಲ್ಲಿ ಯಂತ್ರೋಪಕರಣಗಳಿಂದಲೇ ಕೃಷಿ ಚಟುವಟಿಕೆಗಳು ನಡೆಯುತ್ತಿವೆ. ಭೂಮಿ ಹದ ಮಾಡುವುದರಿಂದ ಹಿಡಿದು ಕಟಾವು ಮಾಡುವವರೆಗೂ ಎಲ್ಲವೂ ಯಂತ್ರೋಪಕ ರಣಗಳಿಂದಲೇ ನಡೆಯುತ್ತಿವೆ. ಎಲ್ಲೋ ಕೆಲವು ಕಡೆಗಳಲ್ಲಿ ಮಾತ್ರ ಜಾನುವಾರುಗಳ ಸಹಾಯದಿಂದ ಕೃಷಿ ಚಟುವಟಿಕೆ ನಡೆಯುತ್ತಿದೆ. ತಮ್ಮ ತಮ್ಮ ಹೊಲಗಳಲ್ಲಿಯೇ ಕೃಷಿ ಚಟುವಟಿಕೆ ಮಾಡಿಕೊಳ್ಳುತ್ತಿದ್ದಾರೆ. ಹೀಗಿರುವಾಗ ಯಂತ್ರೋಪಕರಣಗಳಿಗೆ ಬೇಡಿಕೆ ಹೆಚ್ಚಾಗಿದೆ.

ಕೂಲಿ ಕಾರ್ಮಿಕರ ಸಮಸ್ಯೆ

ಕೃಷಿ ಚುಟವಟಿಕೆಗೆ ಜನರು ಸಿಗುತ್ತಿಲ್ಲ. ದುಬಾರಿ ಕೂಲಿ ನೀಡಬೇಕಿದೆ. ದುಬಾರಿ ಕೂಲಿ ನೀಡಿದರೂ ಸಮರ್ಪಕ ಕೆಲಸ ಕಾರ್ಯಗಳಾಗುತ್ತಿಲ್ಲ. ಬೆಳಗಿನ ತಿಂಡಿ, ಕಾಫಿ, ಬೀಡಿ ಸಿಗರೇಟು, ಊಟ, ನೀಡಬೇಕು. ಇದೆಲ್ಲವನ್ನು ನೋಡಿಕೊಂಡು ಕೂಲಿ ಹಣ ನೀಡಬೇಕು. ಇಷ್ಟೆಲ್ಲಾ ಪೂರೈಸಿದರೂ ನಿಗದಿತವಾಗಿ ಕೆಲಸ ಕಾರ್ಯಗಳು ಆಗುತ್ತಿಲ್ಲ. ಇದೆಲ್ಲದ್ದರ ಸಹವಾಸವೇ ಬೇಡವೆಂದು ರೈತರು ಯಂತ್ರೋಪಕರಣಗಳ ಮೊರೆ ಹೋಗುತ್ತಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ನಾರಾಯಣಸ್ವಾಮಿ ಸಿ.ಎಸ್.

contributor

Similar News