ಅಷ್ಟಮಠಗಳ ಕೋಟೆಯೊಳಗೆ ಅಂಬೇಡ್ಕರ್ ರಥವನ್ನು ಎಳೆದ ಹೆಜ್ಜೆ ಗುರುತು...

Update: 2025-04-28 13:00 IST
ಅಷ್ಟಮಠಗಳ ಕೋಟೆಯೊಳಗೆ ಅಂಬೇಡ್ಕರ್ ರಥವನ್ನು ಎಳೆದ ಹೆಜ್ಜೆ ಗುರುತು...
  • whatsapp icon

ಎದುರಿಗೆ ಸೃಷ್ಟಿಯ ರಹಸ್ಯಗಳನ್ನೆಲ್ಲಾ ತುಂಬಿಕೊಂಡು ನಿಂತ ಭೋರ್ಗರೆವ ನೀಲಿ ಸಮುದ್ರ..! ಪಕ್ಕದಲ್ಲಿ ತೆಂಗು-ಕಂಗುಗಳ ಮಧ್ಯೆ ಹಚ್ಚ ಹಸಿರಿನ ಭತ್ತದ ಗದ್ದೆಗಳ ನಡುವೆ ತುತ್ತು ಅನ್ನಕ್ಕೂ ಪರಿತಪಿಸುವ ಇತಿಹಾಸದ ಖಾಲಿ ಪುಟಗಳು...! ಇದು ನಮ್ಮ ಕರಾವಳಿ...!

ತುಳುನಾಡು ಎಂದೇ ಪ್ರಸಿದ್ಧಿಯಾದ ಕರಾವಳಿಯ ಮೂಲನಿವಾಸಿಗಳು ದೈವಾರಾಧನೆ, ಭೂತಾರಾಧನೆ, ನಾಗಾರಾಧನೆಗಳನ್ನು ಮೈಗೂಡಿಸಿಕೊಂಡ ಈ ಕಡಲ ತೀರದ ಸಮೀಪ ಧಾರ್ಮಿಕ ಕ್ಷೇತ್ರದಲ್ಲಿ ಹೆಸರುವಾಸಿಯಾಗಿರುವ ಉಡುಪಿಯಲ್ಲಿ ಮಧ್ವ್ವಾಚಾರ್ಯರು ಸ್ಥಾಪಿಸಿದ ಅಷ್ಟ ಮಠಗಳ ಕೋಟೆಯೊಳಗೆ ಅಂಬೇಡ್ಕರ್ ರಥವನ್ನು ಎಳೆದು ತಂದವರು ಹಾಸನ ಜಿಲ್ಲೆಯ ಬಿಲ್ಲವ ಸಮುದಾಯದ ಬಿ.ಸೋಮಶೇಖರ್! 

ಇವರು ಎಳೆದು ತಂದ ಈ ಅಂಬೇಡ್ಕರ್ ರಥದ ಹಗ್ಗಕ್ಕೆ ಮಂಗಳೂರಿನ ಹಿರಿಯ ಹೋರಾಟಗಾರರಾದ ಎಂ.ದೇವದಾಸ್, ಡಿ.ಬಿ.ಸಾಲ್ಯಾನ್, ರಾಮುಕುಮಾರ್, ರೋಹಿತಾಕ್ಷ, ಪಿ.ಡೀಕಯ್ಯ, ಕಾಂತಪ್ಪ ಅಲಂಗಾರ್ ಮುಂತಾದ ನಾಯಕರು ಕೈಜೊಡಿಸಿದ್ದರು.

ಅಲ್ಲಿಂದ ಮೈಸೂರಿನ ಕೆಂದೆಗಾಲ ಶಿವಣ್ಣ ಮಣಿಪಾಲದ ದೈನಿಕ ಒಂದರಲ್ಲಿ ಉಪ ಸಂಪಾದಕರಾಗಿ ತರಬೇತಿಗೆ ಬಂದವರು ಉಡುಪಿಯಲ್ಲಿ ದಲಿತ ಸಂಘರ್ಷ ಸಮಿತಿಯನ್ನು ಇನ್ನಷ್ಟು ಪ್ರಬಲವಾಗಿ ಬೆಳೆಸುವಲ್ಲಿ ಉಡುಪಿಯ ಹಿರಿಯ ದಲಿತ ಮುಖಂಡ ಕರುಣಾಕರ ಮಾಸ್ತರ್‌ರ ಸಹಯೋಗದಿಂದ ಅಂಬೇಡ್ಕರ್‌ರ ಹೋರಾಟದ ರಥವನ್ನು ಮನುವಾದಿಗಳ ರಾಜಬೀದಿಯಲ್ಲಿ ಎಳೆದು ತಂದಿದ್ದರು!

ಇದರ ಫಲವಾಗಿ ಕರಾವಳಿಯಲ್ಲಿ ಅಲ್ಲಲ್ಲಿ ಚದುರಿದ ದಲಿತ ಸಮುದಾಯವನ್ನು ಒಂದೆಡೆ ಸೆಳೆದು ನಾಡಿನ ಉದ್ದಕ್ಕೂ ಸಂಘಟನೆಯ ಪ್ರಜ್ಞಾವಂತಿಕೆಯನ್ನು ಬೆಳೆಸಿ ಹೋರಾಟದ ಇತಿಹಾಸ ನಿರ್ಮಿಸಿದ ಕೀರ್ತಿ ಶಿವಣ್ಣ ಕೆಂದೆಗಾಲ ಮತ್ತು ಕರುಣಾಕರ ಮಾಸ್ತರರಿಗೆ ಸಲ್ಲುತ್ತದೆ!

ದಾಸ್ಯವೇ ಜೀವನ ವಿಧಾನ, ಅಸಮಾನತೆಯೇ ಬದುಕಾಗಿರುವ ಸಾಮಾಜಿಕ ವ್ಯವಸ್ಥೆಯಲ್ಲಿ ತುಳಿತಕ್ಕೊಳಪಟ್ಟ ಜನಾಂಗವೊಂದು ತನ್ನ ಹಕ್ಕುಗಳ ಬಗ್ಗೆ ಪ್ರಜ್ಞೆ ಬೆಳೆಸಿಕೊಂಡು ಕರಾವಳಿಯಲ್ಲಿ ಹೋರಾಟ ನಡೆಸಿದ ಆ ದಿನಗಳ ಒಂದೆರಡು ಘಟನೆಯನ್ನು ನಿಮ್ಮ ಮುಂದಿಡುತ್ತಿದ್ದೇನೆ...

1986ರಲ್ಲಿ ಉಡುಪಿಯ ದಲಿತ ಚಳವಳಿಯ ತಾಯಿ ಬೇರಾದ ಮಲ್ಪೆಯಲ್ಲಿ ದಲಿತ ಸಂಘರ್ಷ ಸಮಿತಿ ಹುಟ್ಟಿ ವರ್ಷನೂ ಕಳೆದಿಲ್ಲ. ಆಗಲೇ ಯುವಕರ ದಂಡು ಸಂಘಟನೆಯ ಪ್ರಜ್ಞೆಯನ್ನು ಬೆಳೆಸಿಕೊಂಡು ನಮ್ಮ ತಾಯಂದಿರಿಗೆ ನ್ಯಾಯ ಕೊಡಿ ಎಂದು ಪ್ರತಿಭಟನೆ ನಡೆಸಲು ಆಕ್ರೋಶಕ್ಕೆ ಒಳಗಾಗಿದ್ದರು.

ಹೌದು! ಅಂದು ರಾಜ್ಯದ ಅತೀ ದೊಡ್ಡ ಮೀನುಗಾರಿಕಾ ಬಂದರೆನಿಸಿದ ಮಲ್ಪೆಯ ಬಂದರಿನ ಒಳಗಡೆ ಮೀನು ಒಣಗಿಸಿ ಸ್ವತಂತ್ರ ವ್ಯಾಪಾರ ನಡೆಸುತ್ತಿದ್ದ ಪರಿಶಿಷ್ಟ ಜಾತಿಯ ದಲಿತ ಮಹಿಳೆಯರಿಗೆ ಈ ಬಂದರನ್ನು ಅಭಿವೃದ್ಧಿಪಡಿಸುವ ಉದ್ದೇಶದಿಂದ ಬಂದರಿನ ಒಳಗಡೆ ಮೀನು ಒಣಗಿಸುತ್ತಿದ್ದ ಸ್ಥಳವನ್ನು ಬಿಟುಕೊಡಲು ಬಂದರು ಇಲಾಖೆ ಆದೇಶಿಸಿತ್ತು. ಜೊತೆಗೆ ದಲಿತ ಮಹಿಳೆಯರಿಗೆ ಮೀನು ಒಣಗಿಸಲು ಬದಲಿ ವ್ಯವಸ್ಥೆಯನ್ನು ಮೀನುಗಾರಿಕಾ ಬಂದರಿನ ಹೊರ ಭಾಗದಲ್ಲಿ ಸರ್ವೇ ನಂ.265/3ರಲ್ಲಿ 1.10ಎಕ್ರೆ ಸ್ಥಳವನ್ನು ಮತ್ತು ಸರ್ವೇ ನಂ.262/ಸಿ1ರಲ್ಲಿ 1 ಎಕ್ರೆ ಸ್ಥಳವನ್ನು ದಿನಾಂಕ 26.08.1986ರಂದು ಮಂಜೂರುಗೊಳಿಸಿತ್ತು. ಜೊತೆಗೆ ಕೇಂದ್ರ ಸರಕಾರದ ವಿಶೇಷ ಘಟಕ ಯೋಜನೆಯನ್ವಯ ಉಡುಪಿ ತಾಲೂಕಿನ ಪರಿಶಿಷ್ಟ ಜಾತಿಯ ಯುವಕರಿಗೆ ಸುಮಾರು 8 ಯಾಂತ್ರೀಕೃತ ಬೋಟುಗಳನ್ನು ಮಂಜೂರು ಮಾಡಿತ್ತು!

ಆದರೆ ಅಂದಿನ ಮೀನುಗಾರಿಕಾ ಸಚಿವೆಯಾಗಿದ್ದ ಮನೋರಮಾ ಮಧ್ವರಾಜ್ ತನ್ನ ಸ್ವಜಾತಿ ಮೀನುಗಾರರ ಅಭಿವೃದ್ಧಿಯ ದೃಷ್ಟಿಯಿಂದ ದಲಿತ ಮಹಿಳೆಯರಿಗೆ ಮೀನು ಒಣಗಿಸಲು ಮಂಜೂರಾಗಿದ್ದ ಭೂಮಿಯನ್ನು ಮತ್ತು ನಿರುದ್ಯೋಗಿ ದಲಿತ ಯುವಕರಿಗೆ ಮಂಜೂರಾಗಿದ್ದ ಎಂಟು ಯಾಂತ್ರೀಕೃತ ಬೋಟನ್ನು ತಡೆಹಿಡಿದು ವಂಚಿಸಿದ್ದರು.

ಈ ಅನ್ಯಾಯದ ವಿರುದ್ಧ ಎಚ್ಚೆತ್ತ ದಲಿತ ಸಂಘರ್ಷ ಸಮಿತಿಯ ಮೂಲಕ ದಿನಾಂಕ 06.10.1986ರಂದು ಸಚಿವೆ ಮನೋರಮಾ ಮಧ್ವರಾಜ್ ಮನೆ ಮುಂದೆ ಸುಮಾರು ಒಂದು ಸಾವಿರಕ್ಕೂ ಹೆಚ್ಚು ದಲಿತ ಮಹಿಳೆಯರು ಬೃಹತ್ ಪ್ರತಿಭಟನೆ ನಡೆಸಿದ್ದರು.

ಇದರಿಂದ ರೊಚ್ಚಿಗೆದ್ದ ಸಚಿವೆ ಮನೋರಮಾ ತನ್ನ ಸ್ವಜಾತಿಯ ಮೊಗವೀರ ಬಂಧುಗಳನ್ನು ಎತ್ತಿಕಟ್ಟಿ ಮರುದಿನ ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ ದಲಿತರಿಗೆ ಪ್ರವೇಶ ನೀಡದೆ ಸಾಮಾಜಿಕ ಬಹಿಷ್ಕಾರ ಹಾಕಿದರು!

ಸುಮಾರು ಒಂದು ತಿಂಗಳಿಗೂ ಹೆಚ್ಚು ಕಾಲ ಈ ಸಾಮಾಜಿಕ ಬಹಿಷ್ಕಾರದಿಂದ ಕೆಲಸವಿಲ್ಲದೆ ದಲಿತರ ಗುಡಿಸಲಲ್ಲಿ ಅನ್ನಕ್ಕಾಗಿ ಪರಿತಪಿಸುವಂತಾಯಿತು. ಹಬ್ಬಹರಿದಿನಗಳನ್ನು ಆಚರಿಸದೆ, ಸಾರ್ವಜನಿಕರಿಂದ ಹಣ ಸಂಗ್ರಹಿಸಿ ಒಂದಿಷ್ಟು ಅಕ್ಕಿ ವಿತರಣೆಯನ್ನು ಸಂಘಟನೆ ಮಾಡಿತ್ತು. ಈ ಪ್ರತಿಭಟನೆ ಮತ್ತು ಸಾಮಾಜಿಕ ಬಹಿಷ್ಕಾರವು ದಲಿತ ಚಳವಳಿಯ ಪ್ರಜ್ಞೆ ಪ್ರಬಲವಾಗಲು ಕಾರಣವಾಯಿತು!

ಇನ್ನೊಂದು ಘಟನೆ 1997ರಲ್ಲಿ ಉಡುಪಿಯ ಅಷ್ಟಮಠಗಳ ಸ್ಥಾಪಕರೆನಿಸಿದ ಮಧ್ವಾಚಾರ್ಯರು ತಪಸ್ಸು ಮಾಡಿದ ಸ್ಥಳವಾದ ಉಡುಪಿ ಸಮೀಪದ ಪಾಜಕ ಕ್ಷೇತ್ರದಲ್ಲಿ ಹೊರ ರಾಜ್ಯದಿಂದ ವಲಸೆ ಬಂದ ದಲಿತ ಕೂಲಿ ಕಾರ್ಮಿಕರು ಕಲ್ಲುಕೋರೆಮಾಡುವ ಕೆಲಸ ಮಾಡಿಕೊಂಡು ಬದುಕುತ್ತಿದ್ದರು. ಈ ಬಂಡೆ ಕಲ್ಲು ಹೊಡೆಯುವುದರಿಂದ ಪರಿಸರಕ್ಕೆ ಹಾನಿಯಾಗುವುದಾಗಿ ದಿ.ಅನಂತಮೂರ್ತಿ ಹೇಳಿಕೆಯನ್ನು ಮುಂದಿಟ್ಟು ಉಡುಪಿಯ ಜಿಲ್ಲಾಡಳಿತ ಈ ಪಾಜಕ ಕ್ಷೇತ್ರದ ಸುತ್ತಮುತ್ತ ಕಲ್ಲುಕೋರೆ ಕೆಲಸವನ್ನು ನಿಷೇಧಿಸಲು ಹೊರಟಾಗ ಇದರ ವಿರುದ್ಧ ಉಡುಪಿಯಲ್ಲಿ ದಲಿತ ಸಂಘರ್ಷ ಸಮಿತಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿತು!

ಸುಮಾರು ಮೂರು ಸಾವಿರಕ್ಕೂ ಹೆಚ್ಚು ದಲಿತರು ಈ ಜಿಲ್ಲಾಡಳಿತದ ಮತ್ತು ಉಡುಪಿಯ ಅಷ್ಟಮಠಗಳ ದಲಿತ ದೌರ್ಜನ್ಯದ ವಿರುದ್ಧ ಉಡುಪಿ ನಗರದ ಬೀದಿ-ಬೀದಿಯಲ್ಲಿ ಧಿಕ್ಕಾರ ಕೂಗುತ್ತಾ ಬೃಹತ್ ಮೆರವಣಿಗೆ ನಡೆಸಿದರು.

ಈ ಪ್ರತಿಭಟನೆಯಿಂದ ಅವಮಾನಕ್ಕೊಳಗಾದ ಜಿಲ್ಲಾಡಳಿತ ಮತ್ತು ಅಷ್ಠಮಠಗಳ ಸ್ವಾಮೀಜಿಗಳು ಕೆಲವು ದಲಿತರನ್ನು ಎತ್ತಿಕಟ್ಟಿ ದಲಿತ ಸಂಘರ್ಷ ಸಮಿತಿಯ ನಾಯಕರ ವಿರುದ್ಧ ಸುಳ್ಳು ಪತ್ರಿಕಾ ಹೇಳಿಕೆ ನೀಡಿರುವುದರ ವಿರುದ್ಧ ಮರುದಿನ ಮಲ್ಪೆ ಪೊಲೀಸ್ ಠಾಣೆಯ ಎದುರು ದಲಿತ ಸಂಘರ್ಷ ಸಮಿತಿ ಶಾಂತಿಯುತವಾಗಿ ಪ್ರತಿಭಟನೆ ನಡೆಸಿತ್ತು. ಆದರೆ ದಲಿತ ಸಂಘರ್ಷ ಸಮಿತಿಯ ಬೇಡಿಕೆಗೆ ಸ್ಪಂದಿಸದೆ ಸಂಜೆಯಾಗುವವರೆಗೂ ಪ್ರತಿಭಟನಾಕಾರರನ್ನು ಕಾಯಿಸಿ, ಬಳಿಕ ಕೆಲವು ದಲಿತ ವಿರೋಧಿಗಳ ಮೂಲಕ ಪ್ರತಿಭಟನಾಕಾರರಿಗೆ ಕಲ್ಲು ಹೊಡೆದು ಪ್ರತಿಭಟನೆಯನ್ನು ಹಿಂಸಾರೂಪಕ್ಕೆ ತಿರುಗಿಸಿ, ಲಾಠಿಚಾರ್ಜ್ ನಡೆಸಿ ಶಾಂತಿಯುತ ಪ್ರತಿಭಟನೆ ನಡೆಸಿದವರ ಮೇಲೆಯೇ ಸುಳ್ಳು ಕೇಸು ದಾಖಲಿಸಿ ಸುಮಾರು 31 ಮಂದಿ ದಸಂಸ ಕಾರ್ಯಕರ್ತರ ವಿರುದ್ಧ ಮೊಕದ್ದಮೆ ದಾಖಲಿಸಿದ್ದರು. ಇದರಲ್ಲಿ 16 ಮಂದಿಯನ್ನು ಅದೇ ದಿನ ಬಂಧಿಸಿ ಮಂಗಳೂರಿನ ಜೈಲಿಗೆ ತಳ್ಳಿದರು. ಇದರಲ್ಲಿ ಸುಮಾರು 9 ಮಂದಿ ಸರಕಾರಿ ನೌಕರರಿದ್ದು, 7 ಮಂದಿ ಅಮಾನತಿಗೆ ಒಳಗಾಗಿದ್ದರು.

ಈ ನಡುವೆ 1999ರಲ್ಲಿ ಉಡುಪಿ ಸಮೀಪದ ನಿಟ್ಟೂರಿನಲ್ಲಿ ಸುಮಾರು 60ಕ್ಕೂ ಹೆಚ್ಚು ವಲಸೆ ಬಂದ ಬಡಪಾಯಿ ಕುಟುಂಬ ಹಲವು ವರ್ಷಗಳಿಂದ ಸರಕಾರದ ಪಾಳುಬಿದ್ದ ಭೂಮಿಯಲ್ಲಿ ಚಿಕ್ಕ ಚಿಕ್ಕ ಜೋಪಡಿ ಕಟ್ಟಿಕೊಂಡು ಬದುಕು ಸಾಗಿಸುತ್ತಿದ್ದರು. ಒಂದು ದಿನ ಏಕಾಏಕಿ ಈ ಭೂಮಿ ಕೆಎಸ್ಸಾರ್ಟಿಸಿ ಡಿಪೋಗೆ ಮಂಜೂರಾಗಿದ್ದೆಂದು ಬೆಳ್ಳಂಬೆಳಗ್ಗೆ ಇಲ್ಲಿದ್ದ ಸುಮಾರು 60ಕ್ಕೂ ಹೆಚ್ಚು ಗುಡಿಸಲನ್ನು ಜೆಸಿಬಿ ಮೂಲಕ ನೆಲಸಮ ಮಾಡಲಾಗಿತ್ತು.

ಈ ಘಟನೆಯನ್ನು ಕಂಡ ದಲಿತ ಸಂಘರ್ಷ ಸಮಿತಿ ಬಡಪಾಯಿ ವಲಸೆ ಕಾರ್ಮಿಕರ ನೋವನ್ನು ಅರ್ಥೈಸಿಕೊಂಡು ಜಿಲ್ಲಾಡಳಿತದ ಈ ದೌರ್ಜನ್ಯದ ವಿರುದ್ಧ ಹಲವಾರು ಬಾರಿ ಧರಣಿಯನ್ನು ನಡೆಸಿತ್ತು. ಕೊನೆಗೂ ಆಗಿನ ಜಿಲ್ಲಾಧಿಕಾರಿ ಗಂಗಾರಾಮ್ ಬಡೇರಿಯಾ ದಲಿತ ಸಂಘರ್ಷ ಸಮಿತಿಯ ಮನವಿಗೆ ಸ್ಪಂದಿಸಿ ಮಣಿಪಾಲದ ಮಂಚಿಕೇರಿ ಬಳಿ ಈ ಎಲ್ಲಾ 60 ಕುಟುಂಬಕ್ಕೂ ತಲಾ 5 ಸೆಂಟ್ಸ್ ಭೂಮಿಯನ್ನು ಮಂಜೂರು ಮಾಡುವಲ್ಲಿ ಯಶಸ್ವಿಯಾಯಿತು.

ಹೀಗೆ ಉಡುಪಿ ಸಮೀಪದ ಕೆಳನೇಜಾರುವಿನ ಮದಗಾ ಪ್ರದೇಶದ ಭೂ ಹೋರಾಟ, ಕಾಪು ಸಮೀಪದ ಮೂಳೂರಿನ ವಸಂತಿ ಕೊಲೆ ಪ್ರಕರಣ, ಹಂಗಾರಟ್ಟೆಯ ದಲಿತ ಯುವತಿ ಉಷಾಳ ಅತ್ಯಾಚಾರ ಮತ್ತು ಕೊಲೆ, ಕೋಟಾದ ಬಿಲ್ಲಾಡಿಯ ದಲಿತರ ಜೋಡಿ ಕೊಲೆ ಪ್ರಕರಣ, ಮಾಣೂರಿನ ಭಾಸ್ಕರನ ಕೊಲೆ ಪ್ರಕರಣ ಹೀಗೆ ಮುಂತಾದ ದಲಿತ ದೌರ್ಜನ್ಯದ ವಿರುದ್ಧ ಸಾಕಷ್ಟು ಹೋರಾಟ ನಡೆಸಿದೆ.

ಒಟ್ಟಾರೆ ಕರಾವಳಿಯ ಕಡಲ ತೀರದ ಉದ್ದಕ್ಕೂ ತಾಲೂಕು, ಹೋಬಳಿ ಮಟ್ಟದ ಸಮಿತಿಗಳು ಒಂದಲ್ಲೊಂದು ಕಾರ್ಯಕ್ರಮ ಚಟುವಟಿಕೆ ನಡೆಸುತ್ತಲೇ ಬರುತ್ತಿತ್ತು. ಅದು ದಲಿತರ ಹಲ್ಲೆ ಪ್ರತಿಭಟಿಸಿ ಧರಣಿ, ನೀರಿಗಾಗಿ ಹೋರಾಟ, ಅಧಿಕಾರಿಗಳ ನಿರ್ಲಕ್ಷ್ಯ ಖಂಡಿಸಿ ಪ್ರಬಲ ಪ್ರತಿರೋಧ ಒಡ್ಡುತ್ತಲೇ ಬರುತ್ತಿತ್ತು!.

ಈ ನಡುವೆ ಅನೇಕ ಸಮಾವೇಶ, ನೂರಾರು ವಿಚಾರ ಸಂಕಿರಣ, ಅಂರ್ತಜಾತಿ ವಿವಾಹ ನಡೆಸುತ್ತಾ ಸುಮಾರು ನಾಲ್ಕು ದಶಕಗಳಲ್ಲಿ ಇದುವರೆಗೆ ಅನೇಕ ಹೋರಾಟಗಳನ್ನು ಕೈಗೆತ್ತಿಕೊಂಡು ನಾನಾ ಏಳು-ಬೀಳುಗಳನ್ನು ಕಂಡಿದೆ. ಅದು ತೆಗೆದುಕೊಂಡ ರಾಜಕೀಯ ನಿಲುವುಗಳು ಟೀಕೆ, ವಿಮರ್ಶೆ, ವಿವಾದಗಳಿಗೆ ಕಾರಣವಾಗಿತ್ತು!

ಕರ್ನಾಟಕ ದಲಿತ ಸಂಘರ್ಷ ಸಮಿತಿ ಉಡುಪಿ ಜಿಲ್ಲೆಯಲ್ಲಿ ಇದೀಗ ನಾಲ್ಕು ದಶಕಗಳನ್ನು ಪೂರೈಸಿದೆ. ಇದರ ಮೊದಲ ಎರಡು ದಶಕ ವೀರೋಚಿತ ಹೋರಾಟಗಳ ವೀರಗಾಥೆ; ತ್ಯಾಗ, ಬಲಿದಾನ, ಸಮರ್ಪಣೆಗಳ ಸಾಹಸಗಾಥೆ! ಹೋರಾಟವೆನ್ನುವುದು ಆಗ ಹೃದಯಾಂತರಾಳದಿಂದ ಬದಲಾವಣೆ ಬಯಸುವ ಭಾಷೆಯಾಗಿತ್ತೇ ಹೊರತು ಇಂದಿನಂತೆ ಜೀವನೋಪಾಯಕ್ಕಾಗಿ ಹೊಟ್ಟೆ ಹೊರೆಯುವವರ ದಂಧೆಯಾಗಿರಲಿಲ್ಲ.

ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯಮಟ್ಟದಲ್ಲಿ ಪ್ರಬಲವಾಗಿ ಬೆಳೆದಿದ್ದ ಕಾಲಘಟ್ಟದಲ್ಲಿ, ನಮ್ಮ ಕರಾವಳಿಯಲ್ಲಿಯೂ ದಟ್ಟವಾಗಿ ಬೇರುಬಿಟ್ಟ ಸಂಘಟನೆಯಾಗಿತ್ತು. ನೂರಾರು ಗಟ್ಟಿ ಕಾರ್ಯಕರ್ತರನ್ನು ಪಡೆದು ಸಾವಿರಾರು ಜನರನ್ನು ಒಳಗೊಂಡು ಅನೇಕ ಹೋರಾಟ, ಚಳವಳಿ ಮಾಡಿ ಹೆಸರುಗಳಿಸಿತ್ತು. ಆದರೆ ರಾಜ್ಯಮಟ್ಟದಲ್ಲಿ ದಸಂಸ ಎಂಬ ಯುದ್ಧ ಭೂಮಿಯ ಕಪ್ತಾನನಂತಿದ್ದ ಕೃಷ್ಣಪ್ಪನವರು ಅಪಾರ ಸೋಲು, ನಿರಾಶೆ, ಹತಾಶೆ, ತಲ್ಲಣಗಳನ್ನು ಎದೆಯಲ್ಲಿಟ್ಟುಕೊಂಡು ತೀರಿಕೊಂಡ ಬಳಿಕ ಛಿದ್ರಗೊಂಡ ದಲಿತ ಸಂಘರ್ಷ ಸಮಿತಿ ನಮ್ಮ ಕರಾವಳಿಯಲ್ಲೂ ವಿಘಟನೆಗೊಂಡು ನಾಯಿಕೊಡೆಯಂತೆ ಹಲವಾರು ದಲಿತ ಸಂಘರ್ಷ ಸಮಿತಿ ಹುಟ್ಟಿಕೊಂಡಿದೆ.

ದಸಂಸದ ಈಗಿನ ವಿದ್ರೋಹ ವಿಘಟನೆಗಳ ಕರಾಳಗಾಥೆ. ಒಂದು ಪ್ರಬಲ ಚಳವಳಿಯಾಗಿ ರೂಪುಗೊಂಡಿದ್ದ ದಸಂಸದ ನಾಯಕರು ಆಳುವ ವರ್ಗದ ಪಿತೂರಿಗಳಿಗೆ ಬಲಿಯಾಗಿದ್ದು ಈಗ ಇತಿಹಾಸ. ಅಧಿಕಾರ, ಹಣ, ಲೋಲುಪತೆಯನ್ನು ಎಂದೂ ಕಂಡರಿಯದಿದ್ದ ದಸಂಸ ನಾಯಕತ್ವ ಈಗ ಆಳುವ ವರ್ಗದ ಆಮಿಷದ ಮುಂದೆ ಸಮೋಹಿನಿಗೊಳಗಾಗಿದೆ.

ದಸಂಸಕ್ಕೆ ಈಗ ಸರಿಸುಮಾರು 50 ವರ್ಷ ತುಂಬಿದೆ! ಕಾಲಾವಧಿಗೆ ಸಂಬಂಧಿಸಿದಂತೆ ಇದು ಸಾಮಾನ್ಯ ಅವಧಿಯೇನು ಅಲ್ಲ. ಜಾತಿ ಅದರ ಮೂಲ ವಿವೇಚನೆಯಾದರೂ, ಅದರ ನಿಜವಾದ ಗುಣ ಜಾತ್ಯತೀತ ಮೌಲ್ಯಗಳಿಗೆ ಸ್ಪಂದನೆ.

ಕರಾವಳಿಯಲ್ಲಿ ದಲಿತ ಸಂಘಟನೆಯನ್ನು ಕಟ್ಟಲು ನನ್ನ ಜೀವನದ ಅತ್ಯುತ್ತಮ ಕಾಲವನ್ನು ವ್ಯಯಿಸಿದ್ದೇನೆ. ವೈಯಕ್ತಿಕ ಬದುಕನ್ನೂ ಲೆಕ್ಕಿಸದೆ ನನ್ನ ಶ್ರಮ ಸಂಪತ್ತನ್ನು ಧಾರೆಯೆರೆದಿದ್ದೇನೆ. ಸರ್ವರಿಗೂ ಸಮಾನವಾದ ಅತ್ಯಂತ ಕ್ರಾಂತಿಕಾರಿ ಲೇಖನಗಳನ್ನು ಬರೆದಿದ್ದೇನೆ ಮತ್ತು ಇತಿಹಾಸದಲ್ಲಿ ದಾಖಲಾಗುವ ಹೋರಾಟವನ್ನು ನಡೆಸಿದ್ದೇನೆ. ನಮ್ಮಲ್ಲಿಯೇ ಇಚ್ಛಾ ಶಕ್ತಿಯಿಲ್ಲದಿದ್ದರೆ ನಮಗಾಗಿ ನಮ್ಮ ಸಮಾಜಕ್ಕಾಗಿ ನಾವು ಏನನ್ನೂ ಮಾಡಲಾರೆವು. ಗುರಿಯಿಲ್ಲದ ಹೋರಾಟಗಳಿಂದ, ಕೇವಲ ಪತ್ರಿಕಾ ಹೇಳಿಕೆಗಳಿಂದ ಯಾವ ಸಾಧನೆಯೂ ಆಗದು. ದಲಿತ ಸಂಘರ್ಷ ಸಮಿತಿಯ ಈ 50 ವರ್ಷದಲ್ಲಾದರೂ ಒಂದು ರಚನಾತ್ಮಕ ದಿಕ್ಕನ್ನು ಒದಗಿಸಬೇಕು. ಅದಾಗಲು ಹೊಸರಕ್ತ, ಹೊಸ ಮನಸ್ಸು, ಜನರ ನೋವುಗಳ ನಡುವೆಯೇ ಅಂಬೇಡ್ಕರ್ ಅವರನ್ನು ಕಾಣುವ ಯುವಜನಾಂಗ ಬರಬೇಕು. ಅಲ್ಲಿಯವರೆಗೆ ಈ ರೋಗಗ್ರಸ್ತ ದಲಿತ ಸಂಘರ್ಷ ಸಮಿತಿ ಉಳಿಯುವುದೇ ಎಂಬುದು ಈಗ ಪ್ರಶ್ನೆ.

ವಿಶಾಲವಾದ ದಲಿತ ಸಮುದಾಯವು ಇಂದು ಸಮಗ್ರ ಬದಲಾವಣೆಗೆ ಪಕ್ವವಾಗಿದೆ. ಇಲ್ಲಿ ಯಾವುದೇ ಚುನಾವಣೆ ನಡೆದರೂ, ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ಆದದ್ದೇನೂ ಇಲ್ಲ. ಇಂದು ಇಡೀ ಭಾರತವೇ ನವವಸಾಹತು ಲೂಟಿಗೆ ನೇರವಾಗಿ ಬಲಿಯಾಗಿದೆ. ಈ ಬೆಳವಣಿಗೆಯು ದೇಶದಲ್ಲಿ ಗಂಭೀರವಾದ ಆರ್ಥಿಕ ಬಿಕ್ಕಟ್ಟನ್ನು ಸೃಷ್ಟಿ ಮಾಡಿದೆ. ಈ ಹಿನ್ನೆಲೆಯಲ್ಲಿ ನಮ್ಮ ದಲಿತರನ್ನು ಶೋಷಣೆಯಿಂದ ಮುಕ್ತಗೊಳಿಸಲು ಚಳವಳಿ ಕಟ್ಟುವುದು ಇಂದಿನ ತುರ್ತು ಅಗತ್ಯವಾಗಿದೆ.

ಈ 50 ವರ್ಷ ಸಾಗಿಬಂದ ದಲಿತ ಸಂಘರ್ಷ ಸಮಿತಿಯನ್ನು ಕಟ್ಟಿ ಬೆಳೆಸಿದ ನನ್ನ ಸಹೋದರ-ಸಹೋದರಿಯರಲ್ಲಿ ಕೊನೆಯದಾಗಿ ಒಂದು ಮಾತು. ಯಾವುದೇ ಚಳವಳಿಗೆ ತಾಯ್ತನದ ಅಂತಃಕರಣ ದಕ್ಕದೆ ಹೋದರೆ ಅದು ಅಪೂರ್ಣ. ತುಳಿಯುವ ಜಾತಿವಾದಿಗಳ ಕಾಲು ನನ್ನ ಸಹಜೀವಿಯದು ಅಥವಾ ಅವನ ಸ್ಥಾನದಲ್ಲಿ ನಾನಿದ್ದರೆ ಎಂದು ಒಂದು ಕ್ಷಣವಾದರೂ ಯೋಚಿಸಬೇಕಾದ ಹೊಣೆಗಾರಿಕೆ ದಲಿತರಾದ ನಮ್ಮ ಮೇಲಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ಜಯನ್ ಮಲ್ಪೆ

contributor

Similar News