ಅಗ್ನಿಪಥ ಎನ್ನುವ ಆಳವಾದ ಪ್ರಪಾತ

ನಾಲ್ಕು ವರ್ಷಗಳ ನಂತರ ಅರ್ಹ ಶೇ.25 ಪ್ರಮಾಣದ ಅಗ್ನಿವೀರರನ್ನು ಮಾತ್ರ ಸೇವೆಯಲ್ಲಿ ಮುಂದುವರಿಸಲಾಗುತ್ತದೆ. ಆದರೆ ಈ ಅರ್ಹತೆಯನ್ನು ನಿರ್ಧರಿಸುವ ಮಾನದಂಡಗಳೇನು? ಈ ರೀತಿಯ ನೀತಿ ನಿಯಮಾವಳಿಗಳು ಸೇವೆಯಲ್ಲಿರುವ ಯುವಜನತೆಯಲ್ಲಿ ತಾರತಮ್ಯವನ್ನು ಬಿತ್ತುವುದಿಲ್ಲವೇ? ಅವರ ನಡುವೆ ಒಡಕುಂಟು ಮಾಡುವುದಿಲ್ಲವೇ? ತಾನು ಅನರ್ಹ ಎನ್ನುವ ಹಣೆಪಟ್ಟಿಯನ್ನು ಹೊತ್ತುಕೊಂಡು ಸೇವೆಯಿಂದ ಬಿಡುಗಡೆಗೊಂಡ ಮಿಕ್ಕ ಶೇ.75 ಪ್ರಮಾಣದ 33,750 ಅಗ್ನಿವೀರರು ಯಾವುದೇ ವಿದ್ಯಾರ್ಹತೆಯಿಲ್ಲದೆ ಉದ್ಯೋಗವನ್ನು ಅರಸಿ ದೇಶದಾದ್ಯಂತ ಅಲೆದಾಡಬೇಕಾಗುತ್ತದೆ. ಇದು ಯಾವ ಕೇಡಿನ ಮುನ್ಸೂಚನೆಯಾಗಿದೆ?

Update: 2024-05-29 05:56 GMT

ಭಾಗ- 1

ಪೀಠಿಕೆ

ಒಂದು ಸರಕಾರ ತನ್ನ ಅಧಿಕಾರದ ಅವಧಿಯಲ್ಲಿ ಬಹು ಬಗೆಯಲ್ಲಿ ಪ್ರಮಾದಗಳನ್ನು ಎಸಗಿರುತ್ತದೆ. 2019ರಲ್ಲಿ ಕೇಂದ್ರದಲ್ಲಿ ಎರಡನೇ ಬಾರಿ ಅಧಿಕಾರಕ್ಕೆ ಬಂದ ಮೋದಿ ನೇತೃತ್ವದ ಬಿಜೆಪಿ ಸರಕಾರವೂ ಇದಕ್ಕೆ ಹೊರತಲ್ಲ. ಒಮ್ಮೆ ಎಡವಿದವರು ತಾನು ಎಡವಿದ್ದೇವೆ ಎಂದು ಗ್ರಹಿಸದೇ ಹೋದರೆ, ಗ್ರಹಿಸಿಯೂ ಭಂಡತನದಿಂದ ನಿರ್ಲಕ್ಷಿಸಿದರೆ, ಪ್ರಜ್ಞಾವಂತರ ಹಿತವಚನಗಳನ್ನು ಆಲಿಸದೆ ಹೋದರೆ ಪದೇ ಪದೇ ಎಡವುತ್ತಲೇ ಇರುತ್ತಾರೆ ಮತ್ತು ಈ ಪ್ರಮಾದಗಳಿಗೆ ದೇಶ ಮತ್ತು ಪ್ರಜೆಗಳು ಬೆಲೆ ತೆರಬೇಕಾಗುತ್ತದೆ. ಇದಕ್ಕೆ ಕಳೆದ ಹತ್ತು ವರ್ಷಗಳ ಮೋದಿ ನೇತೃತ್ವದ ಕೇಂದ್ರ ಸರಕಾರ ಉತ್ತಮ ಉದಾಹರಣೆ. ಸಂಘ ಪರಿವಾರದ ‘ಹಿಂದುತ್ವ-ಬ್ರಾಹ್ಮಣವಾದ’ ಸಿದ್ಧಾಂತದ ಕಾರಣದಿಂದ ಇಂದು ದೇಶದಲ್ಲಿ ವ್ಯಾಪಕವಾಗಿ ಹಬ್ಬಿಕೊಂಡಿರುವ ಮುಸ್ಲಿಮ್ ವಿರೋಧಿ ದ್ವೇಷದ ವಾತಾವರಣ, ದಲಿತರ ಮೇಲಿನ ದೌರ್ಜನ್ಯ, ಅಭಿವ್ಯಕ್ತಿ ಸ್ವಾತಂತ್ರ್ಯದ ದಮನ, ಮಾಧ್ಯಮಗಳ ಸ್ವಾಯತ್ತತೆ ಮತ್ತು ಸ್ವಾತಂತ್ರ್ಯದ ಹರಣ, ಸಾರ್ವಜನಿಕ ಸಂಸ್ಥೆಗಳ ದುರ್ಬಲಗೊಳಿಸುವಿಕೆ, ನೋಟು ರದ್ದತಿಯಂತಹ ತಪ್ಪು ನೀತಿಯಿಂದುಂಟಾದ ಆರ್ಥಿಕ ಹಿಂಜರಿತ, ನಿರುದ್ಯೋಗ, ಕಾಶ್ಮೀರದ ರಾಜ್ಯ ಸ್ಥಾನಮಾನ ರದ್ದತಿ, ಇಡಬ್ಲ್ಯುಎಸ್ ಶೇ. 10 ಎನ್ನುವ ಪ್ರತಿಕ್ರಾಂತಿ, ರೈತರಿಗೆ ವಂಚಿಸುವ ಕೃಷಿ ಮಸೂದೆಗಳು, ರಫೇಲ್ ಹಗರಣ, ಯಾವುದೇ ಗುರಿಯಿಲ್ಲದ ವಿದೇಶಾಂಗ ನೀತಿ ಹೀಗೆ ದೇಶವನ್ನು ಸಾಮಾಜಿಕ-ಆರ್ಥಿಕ-ರಾಜಕೀಯ ದಿವಾಳಿತನದ ಅಂಚಿಗೆ ದೂಡಿದ ಈ ವಿನಾಶಕಾರಿ ನೀತಿಗಳ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಆದರೆ ತನ್ನಿಂದಾದ ಈ ಪ್ರಮಾದಗಳನ್ನು ಅರಿತು, ಆ ತಪ್ಪುಗಳನ್ನು ತಿದ್ದಿಕೊಂಡು ಮುಂದಿನ ದಿನಗಳಲ್ಲಿ ಪ್ರಾಮಾಣಿಕವಾಗಿ ನಡೆದುಕೊಳ್ಳಬೇಕಾಗಿದ್ದ ಈ ಮೋದಿ ಸರಕಾರ ಅಂತಹ ಯಾವುದೇ ಲಕ್ಷಣಗಳನ್ನು ತೋರಿಸದೆ ‘ಅಗ್ನಿಪಥ’ ಎನ್ನುವ ಅವಾಂತರಕಾರಿ ಯೋಜನೆ ಮೂಲಕ ಮತ್ತೊಂದು ಪ್ರಮಾದಕ್ಕೆ ಮುಂದಾಗಿದೆ. 14, ಜೂನ್ 2022ರಂದು ಈ ಯೋಜನೆಗೆ ಅಧಿಸೂಚನೆ ಹೊರಡಿಸಿದ್ದಾರೆ.

ಖೆಡ್ಡಾದ ವಿವರಗಳು

ನಾಲ್ಕು ವರ್ಷಗಳ ಅಲ್ಪಕಾಲ ಅವಧಿಗೆ, ಗುತ್ತಿಗೆ ಆಧಾರದಲ್ಲಿ ರಕ್ಷಣಾ ಇಲಾಖೆಗೆ, ಅಧಿಕಾರಿ ರ್ಯಾಂಕ್‌ಗಿಂತ ಕೆಳಗಿನ ಹುದ್ದೆಗಳಿಗೆ 45,000 ‘ತಾತ್ಕಾಲಿಕ ಸೈನಿಕರನ್ನು’ ನೇಮಿಸಿಕೊಳ್ಳುವುದು ಇಡೀ ಯೋಜನೆಯ ಒಂದು ಸಾಲಿನ ಪರಿಚಯ. ಮೂಗಿಗೆ ತುಪ್ಪ ಸವರಲು ಇವರ ಪೈಕಿ ಶೇ.25ರಷ್ಟು ಅಗ್ನಿವೀರರನ್ನು ರಕ್ಷಣಾ ಇಲಾಖೆಯಲ್ಲಿ 15 ವರ್ಷಗಳ ಅವಧಿಗೆ ನೇಮಕ ಮಾಡಿಕೊಳ್ಳಲಾಗುವುದು ಎಂದು ಹೇಳಿದ್ದಾರೆ. ಇದರ ಸತ್ಯಾಸತ್ಯತೆ 2026ರ ನಂತರವಷ್ಟೇ ಗೊತ್ತಾಗುತ್ತದೆ. ಈ ಅಲ್ಪಾವಧಿ ಉದ್ಯೋಗ ಯೋಜನೆಯನ್ನು ‘ಕರ್ತವ್ಯದ ಪ್ರವಾಸ’ ಎಂದೂ ಬಣ್ಣಿಸಲಾಗಿದೆ. ಸೇನೆಯ ಲೆಪ್ಟಿನೆಂಟ್ ಜನರಲ್ ಅನಿಲ್ ಪುರಿ ದೇಶಭಕ್ತಿ ಮತ್ತು ಸೇನೆಯಲ್ಲಿ ಕೆಲಸ ಮಾಡುವ ಮೋಹಕ್ಕಾಗಿ ಸೇರುತ್ತಾರೆ, ಉದ್ಯೋಗಕ್ಕಾಗಿ ಅಲ್ಲ ಎಂದು ಹೇಳಿದ್ದಾರೆ. ಇದು ಅರ್ಧ ಸತ್ಯ ಮಾತ್ರ.

ದೇಶದ ಯುವಜನತೆ ಅದರಲ್ಲಿಯೂ ಉತ್ತರ ಮತ್ತು ಪೂರ್ವ ಭಾರತದವರ ಪೈಕಿ ಬಹುತೇಕ ಅಲ್ಲಿನ ಅತಿ ಹಿಂದುಳಿದ ಜಾತಿಗಳ, ದಲಿತ ಸಮುದಾಯದ ಯುವಜನತೆ ತಮ್ಮ ಕುಟುಂಬದಲ್ಲಿನ ಬಡತನ ಮತ್ತು ಹಸಿವಿನಿಂದ ಹೊರಬರಲು ಮತ್ತು ಮುಖ್ಯವಾಗಿ ಖಾಯಂ ಉದ್ಯೋಗದ ಕಾರಣಕ್ಕಾಗಿ ಸೇನೆ ಸೇರಲು ಬಯಸುತ್ತಾರೆ. ಅನುಕೂಲವಂತ ಕುಟುಂಬಗಳ ತರುಣರು ಸೇನೆಗೆ ಸೇರಿಕೊಂಡಿರುವುದು ತಂಬಾ ಕಡಿಮೆ. ಇದರ ಜೊತೆಗೆ ಸೇನೆಯಲ್ಲಿನ ಉದ್ಯೋಗಿ ಎಂಬುದು ಸ್ವಂತ ಊರಿನಲ್ಲಿ ಒಂದು ಬಗೆಯ ಗೌರವ ತಂದುಕೊಡುತ್ತದೆ. ಖಾಯಂ ಪಿಂಚಣಿ ಸೌಲಭ್ಯವಿರುವ 17 ವರ್ಷಗಳ ಉದ್ಯೋಗ ಎನ್ನುವ ನಂಬಿಕೆಯೇ ಈ ಯುವಕರಿಗೆ ಆಶಾಕಿರಣವಾಗಿತ್ತು. ಇದಕ್ಕಾಗಿ ದಿನನಿತ್ಯ ಕಠಿಣ ಅಭ್ಯಾಸದಲ್ಲಿ ತೊಡಗಿರುತ್ತಾರೆ. ಕೋಚಿಂಗ್ ಕೇಂದ್ರಗಳಿಗೆ ಸಾಲ ಮಾಡಿ ಹಣ ತುಂಬುತ್ತಾರೆ. ಮುಂದಿನ ಭವಿಷ್ಯದ ಅನೇಕ ಕನಸುಗಳನ್ನು ಕಂಡಿರುವ ಈ ಯುವಜನತೆಗೆ ಸೇನೆಯ ಉದ್ಯೋಗ ಅಲ್ಪಾವಧಿ ಮಾತ್ರ ಮತ್ತು ಅದು ಗುತ್ತಿಗೆ ಪದ್ಧತಿ ಆಧರಿಸಿದೆ ಎನ್ನುವ ಸಂಗತಿ ಆಘಾತವನ್ನುಂಟು ಮಾಡುತ್ತದೆ. ಅವರ ಪ್ರತಿಭಟನೆಗೆ ಅರ್ಥವಿದೆ. ಅದು ಹಿಂಸಾತ್ಮಕ ರೀತಿಯಲ್ಲಿರುವುದನ್ನು ಒಪ್ಪಲು ಸಾಧ್ಯವಿಲ್ಲ. ಆದರೆ ಎಲ್ಲವನ್ನೂ ಬಳಸಿ ಬಿಸಾಡುವ ಗುಣವುಳ್ಳ ಸಂಘ ಪರಿವಾರವು ಈ ಯುವಜನತೆಯ ಭವಿಷ್ಯದೊಂದಿಗೆ ಆಟವಾಡುತ್ತಿರುವುದಂತೂ ದಿಟ.

ಪ್ರಸಕ್ತ ವಿವಾದವನ್ನು ವಿಶ್ಲೇಷಿಸುವಾಗ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರಕಾರ, ರಕ್ಷಣಾ ಇಲಾಖೆ ಮತ್ತು ನಾಗರಿಕ ಸಮಾಜ ಈ ಮೂರು ಘಟಕಗಳು ಮುಖ್ಯವಾಗುತ್ತವೆ. ಆದರೆ ಕೇಂದ್ರ ಸರಕಾರವು ಈ ಅಗ್ನಿಪಥ ಯೋಜನೆಯನ್ನು ರೂಪಿಸುವಾಗ ಇದರ ಹಕ್ಕುದಾರರೊಂದಿಗೆ, ವಿಪಕ್ಷಗಳೊಂದಿಗೆ, ನಿವೃತ್ತ ಸೇನಾಧಿಕಾರಿಗಳೊಂದಿಗೆ ಯಾವುದೇ ಬಗೆಯ ಸಮಾಲೋಚನೆ ನಡೆಸಿದಂತೆ ಕಂಡುಬರುವುದಿಲ್ಲ. ರಕ್ಷಣಾ ಇಲಾಖೆಯ ಮೂವರು ಮುಖ್ಯಸ್ಥರೊಂದಿಗೆ ಚರ್ಚಿಸಿದ ದಾಖಲೆಗಳಿಲ್ಲ. ಮೋದಿ ಮಂತ್ರಿಮಂಡಲದಲ್ಲಿ ಸಚಿವರಾಗಿದ್ದ ನಿವೃತ್ತ ಸೇನಾ ಮುಖ್ಯಸ್ಥರಿಗೂ ಈ ಕುರಿತು ಮಾಹಿತಿ ಇರಲಿಲ್ಲ. ಸಂಸತ್ತಿನಲ್ಲಿ ಚರ್ಚೆಯಾಗಲಿಲ್ಲ. ಸಂಸತ್ತಿನ ರಕ್ಷಣಾ ಇಲಾಖೆಯ ವ್ಯವಹಾರಗಳ ಸಮಿತಿಯ ಮುಂದೆ ಸಹ ಮಂಡಿಸಲಿಲ್ಲ. ನೋಟು ರದ್ದತಿಯಂತೆ ಈ ಸಂದರ್ಭದಲ್ಲಿಯೂ ದಿಢೀರನೆ ಏಕಪಕ್ಷೀಯವಾಗಿ ನಿರ್ಧಾರ ತೆಗೆದುಕೊಂಡಂತಿದೆ. ಕನಿಷ್ಠ ಪ್ರಯೋಗಾತ್ಮಕವಾಗಿ ಪರೀಕ್ಷೆ ನಡೆಸುವ ಸಾಮಾನ್ಯ ತಿಳುವಳಿಕೆಯೂ ಇಲ್ಲದಂತಾಗಿದೆ. ಯಾವುದೇ ಘೋಷಣೆಗಳಿಲ್ಲದೆ ಒಂದು ಪೈಲಟ್ ಯೋಜನೆಯಂತೆ ಇದನ್ನು ಜಾರಿಗೊಳಿಸಿದ್ದರೆ ಈ ಮಟ್ಟದ ಪ್ರತಿಭಟನೆಯಾಗುತ್ತಿರಲಿಲ್ಲ ಎಂದು ನಿವೃತ್ತ ಸೇನಾಧಿಕಾರಿಗಳು ಅಭಿಪ್ರಾಯಪಡುತ್ತಾರೆ. ಇನ್ನು 2014ಕ್ಕೂ ಮುಂಚೆ ಯಾವುದೇ ಬಗೆಯ ರಾಜಕೀಯ ವಿವಾದಗಳಿಂದ ದೂರವಿದ್ದ, ಸ್ವಾಯತ್ತತೆ ಹೊಂದಿದ್ದ ರಕ್ಷಣಾ ಇಲಾಖೆ ಕಳೆದ ಹತ್ತು ವರ್ಷಗಳಿಂದ ಮೋದಿ ನೇತೃತ್ವದ ರಾಜಕಾರಣಕ್ಕೆ ಬಲಿಪಶುವಾಗಿರುವುದು ದುರಂತದ ಸಂಗತಿ. ರಾಜಕೀಯ ಉದ್ದೇಶದ, ಬಿಜೆಪಿಯ ಹಿತಾಸಕ್ತಿಯುಳ್ಳ ಅಗ್ನಿಪಥ ಯೋಜನೆಯನ್ನು ಸಾರ್ವಜನಿಕವಾಗಿ ಸಮರ್ಥಿಸಿಕೊಳ್ಳುವಂತಹ ಅಸಹಾಯಕತೆಗೆ ತಲುಪಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಇನ್ನು ನಾಗರಿಕ ಸಮಾಜ ಸಂಪೂರ್ಣವಾಗಿ ಹೊಣೆಗೇಡಿತನದಿಂದ ವರ್ತಿಸುತ್ತಿದೆ.

ರಕ್ಷಣಾ ವಲಯದ ಮೂರು ಇಲಾಖೆಗಳಲ್ಲಿ ಸದ್ಯಕ್ಕೆ ಅಂದಾಜು 1,50,000 ಹುದ್ದೆಗಳು ಖಾಲಿ ಇದೆ. ಇದರಲ್ಲಿ ಆರ್ಮಿಯಲ್ಲಿಯೇ 1,36,000 ಹುದ್ದೆಗಳು ಖಾಲಿ ಇವೆ. ಈ ಮುಂಚೆ ಪ್ರತಿ ವರ್ಷ ರಕ್ಷಣಾ ವಲಯದಿಂದ 50,000 ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳುತ್ತಿದ್ದರು. ಆದರೆ ಕೋವಿಡ್ ಕಾಯಿಲೆಯ ಕಾರಣದಿಂದ ಕಳೆದ ಮೂರು ವರ್ಷಗಳಲ್ಲಿ (2020-21, 2021-22, 2022-23) ಯಾವುದೇ ಬಗೆಯ ನೇಮಕಾತಿ ನಡೆಯಲಿಲ್ಲ. ಸೈನಿಕರು ಮತ್ತು ಅಧಿಕಾರಿ ಹುದ್ದೆಗಳಿಗಿಂತ ಕೆಳಗಿನ ಹುದ್ದೆಗಳಿಗೆ 45,000 ನೇಮಕಾತಿಗಳನ್ನು ಮಾಡಿಕೊಳ್ಳುವ ಈ ಅಗ್ನಿಪಥ ಯೋಜನೆಗೆ 17.5ರಿಂದ 21 ವಯಸ್ಸಿನ ಅಭ್ಯರ್ಥಿಗಳು ಅರ್ಹರಾಗಿರುತ್ತಾರೆ. (ಆಗ ದೇಶದ ವಿವಿಧ ಭಾಗಗಳಲ್ಲಿ ನಡೆದ ಪ್ರತಿಭಟನೆಯ ನಂತರ ಈಗಿನ ವರ್ಷಕ್ಕೆ ಮಾತ್ರ ಗರಿಷ್ಠ ಮಿತಿಯನ್ನು 23ಕ್ಕೆ ಹೆಚ್ಚಿಸಲಾಗಿದೆ. ಮುಂದಿನ ವರ್ಷಕ್ಕೆ ಇದು ಅನ್ವಯಿಸುವುದಿಲ್ಲ)

ಈ ‘ಅಗ್ನಿವೀರರಿಗೆ’ ನಾಲ್ಕು ವರ್ಷಗಳ ಅವಧಿಯಲ್ಲಿ ಮೊದಲ ಆರು ತಿಂಗಳಿಗೆ ಮಾತ್ರ ತರಬೇತಿ ಕೊಡಲಾಗುತ್ತದೆ. ಮಿಕ್ಕ ಮೂರೂವರೆ ವರ್ಷಗಳಲ್ಲಿ ಅವರನ್ನು ನೇರವಾಗಿ ಸೇವೆಗೆ ಬಳಸಿಕೊಳ್ಳಲಾಗುತ್ತದೆ.

ನಾಲ್ಕು ವರ್ಷಗಳ ನಂತರ ಅರ್ಹ ಶೇ.25 ಪ್ರಮಾಣದ ಅಗ್ನಿವೀರರನ್ನು ಮಾತ್ರ ಸೇವೆಯಲ್ಲಿ ಮುಂದುವರಿಸಲಾಗುತ್ತದೆ. ಆದರೆ ಈ ಅರ್ಹತೆಯನ್ನು ನಿರ್ಧರಿಸುವ ಮಾನದಂಡಗಳೇನು? ಈ ರೀತಿಯ ನೀತಿ ನಿಯಮಾವಳಿಗಳು ಸೇವೆಯಲ್ಲಿರುವ ಯುವಜನತೆಯಲ್ಲಿ ತಾರತಮ್ಯವನ್ನು ಬಿತ್ತುವುದಿಲ್ಲವೇ? ಅವರ ನಡುವೆ ಒಡಕುಂಟು ಮಾಡುವುದಿಲ್ಲವೇ? ತಾನು ಅನರ್ಹ ಎನ್ನುವ ಹಣೆಪಟ್ಟಿಯನ್ನು ಹೊತ್ತುಕೊಂಡು ಸೇವೆಯಿಂದ ಬಿಡುಗಡೆಗೊಂಡ ಮಿಕ್ಕ ಶೇ.75 ಪ್ರಮಾಣದ 33,750 ಅಗ್ನಿವೀರರು ಯಾವುದೇ ವಿದ್ಯಾರ್ಹತೆಯಿಲ್ಲದೆ ಉದ್ಯೋಗವನ್ನು ಅರಸಿ ದೇಶದಾದ್ಯಂತ ಅಲೆದಾಡಬೇಕಾಗುತ್ತದೆ. ಇದು ಯಾವ ಕೇಡಿನ ಮುನ್ಸೂಚನೆಯಾಗಿದೆ?

ನಾಲ್ಕು ವರ್ಷಗಳ ತಾತ್ಕಾಲಿಕ ಅವಧಿಯ ಈ ಅಗ್ನಿವೀರರ ವೇತನ ವಿವರಗಳು ಹೀಗಿದೆ

ಒಟ್ಟು ಪ್ಯಾಕೇಜ್: 11-12 ಲಕ್ಷ.

ಮೊದಲ ವರ್ಷ : 30,000 ರೂ. ಪ್ರತಿ ತಿಂಗಳಿಗೆ. ಇದರಲ್ಲಿ 9,000 ರೂ. ಸೇವಾನಿಧಿಗೆ ಕಡಿತಗೊಳಿಸಲಾಗುತ್ತದೆ. ಸರಕಾರ 9000 ರೂ. ಕೊಡುತ್ತದೆ.

(ಕೈಗೆ ಬರುವ ವೇತನ 21,000 ರೂ. ಪ್ರತಿ ತಿಂಗಳಿಗೆ, 2,32,000 ರೂ. ಪ್ರತಿ ವರ್ಷಕ್ಕೆ)

ಎರಡನೇ ವರ್ಷ : 33,000 ರೂ. ಪ್ರತಿ ತಿಂಗಳಿಗೆ. ಇದರಲ್ಲಿ 9,900 ರೂ. ಸೇವಾನಿಧಿಗೆ ಕಡಿತಗೊಳಿಸಲಾಗುತ್ತದೆ. ಸರಕಾರ 9,900 ರೂ. ಕೊಡುತ್ತದೆ.

(ಕೈಗೆ ಬರುವ ವೇತನ 23,100 ರೂ. ಪ್ರತಿ ತಿಂಗಳಿಗೆ, 2,77,200 ರೂ. ಪ್ರತಿ ವರ್ಷಕ್ಕೆ)

ಮೂರನೇ ವರ್ಷ : 36,500 ರೂ. ಪ್ರತಿ ತಿಂಗಳಿಗೆ. ಇದರಲ್ಲಿ 10,950 ರೂ. ಸೇವಾನಿಧಿಗೆ ಕಡಿತಗೊಳಿಸಲಾಗುತ್ತದೆ. ಸರಕಾರ 10,950 ರೂ. ಕೊಡುತ್ತದೆ.

(ಕೈಗೆ ಬರುವ ವೇತನ 25,550 ರೂ. ಪ್ರತಿ ತಿಂಗಳಿಗೆ, 3,06,600 ರೂ. ಪ್ರತಿ ವರ್ಷಕ್ಕೆ)

ನಾಲ್ಕನೇ ವರ್ಷ : 40,000 ರೂ. ಪ್ರತಿ ತಿಂಗಳಿಗೆ. ಇದರಲ್ಲಿ 12,000 ರೂ. ಸೇವಾನಿಧಿಗೆ ಕಡಿತಗೊಳಿಸಲಾಗುತ್ತದೆ. ಸರಕಾರ 12,000 ರೂ. ಕೊಡುತ್ತದೆ.

(ಕೈಗೆ ಬರುವ ವೇತನ 28,000 ರೂ. ಪ್ರತಿ ತಿಂಗಳಿಗೆ. 3,36,000 ರೂ. ಪ್ರತಿ ವರ್ಷಕ್ಕೆ)

ಆದರೆ ಈ ಖೆಡ್ಡಾವನ್ನು ಅಗೆಯತ್ತಾ ಹೋದಂತೆ ಅಸ್ಥಿಪಂಜರದ ಮೂಳೆಗಳು ಉದುರುತ್ತಾ ಹೋಗುತ್ತವೆ. ಮೋದಿ ಸರಕಾರದ ಪ್ರತೀ ಘೋಷಣೆಯಂತೆ ಇದರ ಹಣೆಬರಹವೂ ಸಹ ಮರೆ ಮೋಸದ ಪಿತೂರಿಯಾಗಿದೆ. ಕೆಡುಕನ್ನು ಮಾತ್ರ ತರಬಲ್ಲ ಈ ವಂಚನೆಯನ್ನು ಅರಿಯಲು ಈ ‘ದೇಶಸೇವೆ ಯೋಜನೆಯ’ ಮುಖವಾಡವನ್ನು ಎಳೆ ಎಳೆಯಾಗಿ ಕಳಚಬೇಕಾಗುತ್ತದೆ

1. ನಾಲ್ಕು ವರ್ಷದ ನಂತರ ಸೇವಾನಿಧಿಯಿಂದ ಅಗ್ನಿವೀರರಿಗೆ ಉಳಿತಾಯದ ಮೊತ್ತವಾಗಿ 10 ಲಕ್ಷ ರೂ. ಪ್ಯಾಕೇಜ್ ದೊರಕುತ್ತದೆ ಎಂದು ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಬಣ್ಣ ತುಂಬಿ ಬಹಿರಂಗವಾಗಿ ಪ್ರಚಾರ ಮಾಡುತ್ತಿದ್ದಾರೆ. ಆದರೆ ಈ ಹತ್ತು ಲಕ್ಷದಲ್ಲಿನ ಅರ್ಧ ಮೊತ್ತವಾದ 5 ಲಕ್ಷ ರೂ. ಈ ಅಗ್ನಿವೀರರ ವೇತನದಿಂದ ಸೇವಾ ನಿಧಿಗೆ ಪಾವತಿಸಿದ ಉಳಿತಾಯದ ಮೊತ್ತ ಎನ್ನುವ ಸತ್ಯವನ್ನು ಮರೆ ಮಾಚುತ್ತಾರೆ. ತಮ್ಮದೇ ಹಣವನ್ನು ನಾಲ್ಕು ವರ್ಷಗಳ ನಂತರ ಮರಳಿ ಪಡೆಯುವ ಅಗ್ನಿವೀರರಿಗೆ ಇದು ಸರಕಾರದ ಪ್ಯಾಕೇಜ್ ಎಂದು ಮರೆಮೋಸ ಮಾಡುತ್ತಿರುವುದು ನೇರವಾದ ವಂಚನೆಯಾಗಿದೆ.

ಅಂಗವಿಕಲತೆ ಪರಿಹಾರ ಕೊಡುತ್ತೇವೆ ಎಂದು ಹೇಳಿಕೊಳ್ಳುತ್ತಾರೆ. ಆದರೆ ಇದು ಅಂಗವಿಕಲತೆ ಪಿಂಚಣಿಯಲ್ಲ. ಇದು ಹೇಗೆ ವೇತನ ಪ್ಯಾಕೇಜ್ ಅಡಿಯಲ್ಲಿ ಬರುತ್ತದೆ? ಇದು ಒಂದು ಬಾರಿ ಮಾತ್ರ ನೀಡುವ ಪರಿಹಾರ ಮಾತ್ರ.

ಈ ಅಲ್ಪಾವಧಿ ಯೋಜನೆಯ ಬಲು ದೊಡ್ಡ ದುರ್ಬಲ ಕೊಂಡಿಯೆಂದರೆ ಅಗ್ನಿವೀರರಿಗೆ ಯಾವುದೇ ಬಗೆಯ ಪಿಂಚಣಿ, ಗ್ರಾಚ್ಯುಯಿಟಿ ಸೌಲಭ್ಯಗಳಿರುವುದಿಲ್ಲ. ಈ ಅಂಶ ಯುವಜನತೆಗೆ ಆತಂಕವನ್ನುಂಟು ಮಾಡಿದೆ. ಪಿಂಚಣಿ ಎಂಬುದೇ ಸರಕಾರದ ಖಜಾನೆಗೆ ಹೊರೆಯಾಗಿರುವ ಬಾಬತ್ತು ಎನ್ನುವ ನೀತಿಯನ್ನು ಹೊಂದಿರುವ ಸರಕಾರ ಪಿಂಚಣಿಯ ವೆಚ್ಚದಿಂದ ಹೊರಬರಲು ಈ ಯೋಜನೆ ರೂಪಿಸಿರುವುದು ಎನ್ನುವುದನ್ನು ಅಲ್ಲಗೆಳೆಯುತ್ತಿದೆ. ರಕ್ಷಣಾ ಮಂತ್ರಿ ರಾಜನಾಥ ಸಿಂಗ್ ಮತ್ತು ಸೇನಾ ಮುಖ್ಯಸ್ಥರು ಸಹ ಇದನ್ನು ನಿರಾಕರಿಸಿದ್ದಾರೆ. ಆದರೆ ಬೆಕ್ಕು ಕಣ್ಣು ಮುಚ್ಚಿಕೊಂಡು ಹಾಲು ಕುಡಿದಂತೆ ಎನ್ನುವ ಗಾದೆ ಮಾತು ಹಳೆಯದಾದರೂ ಸಹ ಇಂದಿಗೂ ಪ್ರಸ್ತುತ ಎಂಬುದು ಇವರು ಮರೆತಿರುವಂತಿದೆ. ಲೆಫ್ಟಿನೆಂಟ್ ಜನರಲ್ (ನಿವೃತ್ತ) ಕೆ.ಜೆ.ಸಿಂಗ್ ‘‘ಸರಕಾರವು ಈ ಅಗ್ನಿಪಥ ಯೋಜನೆ ಪಿಂಚಣಿ ಹೊರೆ ತಗ್ಗಿಸಲು ಎಂಬುದನ್ನು ಪ್ರಾಮಾಣಿಕವಾಗಿ ಒಪ್ಪಿಕೊಳ್ಳಲಿ’’ ಎಂದು ಹೇಳಿದ್ದಾರೆ.

2. ಇಂದಿನ ದೇಶದ ಆರ್ಥಿಕ ದುಸ್ಥಿತಿಯ ಕಾರಣಕ್ಕೆ, ಅದನ್ನು ನಿಭಾಯಿಸಲು ವಿಫಲಗೊಂಡಿರುವುದಕ್ಕೆ ಗುಣಾತ್ಮಕವಾದ ಪರಿಹಾರಗಳನ್ನು ರೂಪಿಸುವಲ್ಲಿ ಮೋದಿ ಸರಕಾರ ವಿಫಲಗೊಂಡಿದೆ ಮತ್ತು ಅವರಿಗೆ ಆ ಸಾಮರ್ಥ್ಯವೂ ಇಲ್ಲ. ಆದರೆ ಇದನ್ನು ಮರೆ ಮಾಚಲು ಮತ್ತು ಸದ್ಯದ ಕಳವಳಕಾರಿ ಸ್ಥಿತಿಯಲ್ಲಿ ಬೀಸುವ ದೊಣ್ಣೆ ತಪ್ಪಿಸಿಕೊಳ್ಳುವುದಕ್ಕೆ ಈ ಅಗ್ನಿಪಥ ಎನ್ನುವ ವಾಮಮಾರ್ಗವನ್ನು ಕಂಡುಕೊಂಡಿದೆ. ಈ ಯೋಜನೆಗೆ ‘ದೇಶಸೇವೆ, ಕರ್ತವ್ಯದ ಪ್ರವಾಸ’ ಎನ್ನುವ ಸುಳ್ಳುಗಳ ಮುಖವಾಡ ತೊಡಿಸಲಾಗಿದೆ ಮತ್ತು ರಕ್ಷಣಾ ವಲಯದಲ್ಲಿನ ಅನಗತ್ಯ ವೆಚ್ಚವನ್ನು ಕಡಿತಗೊಳಿಸುವುದು ಸಹ ಈ ಯೋಜನೆಯ ಉದ್ದೇಶ ಎಂದು ಹೇಳಲಾಗಿದೆ. 20, ಜೂನ್ 2022ರ ‘ದ ಹಿಂದೂ’ ದಿನಪತ್ರಿಕೆಯಲ್ಲಿ ಪ್ರಕಟವಾದ ವರದಿಯ ಅನುಸಾರ ರಕ್ಷಣಾ ಇಲಾಖೆಯಲ್ಲಿ 2014ರಲ್ಲಿ 24 ಲಕ್ಷ ಪಿಂಚಣಿದಾರರಿದ್ದರೆ 2021ರ ವೇಳೆಗೆ 34 ಲಕ್ಷ ಪಿಂಚಣಿದಾರರಿದ್ದಾರೆ. ಏಳು ವರ್ಷಗಳಲ್ಲಿ ಪಿಂಚಣಿದಾರರ ಸಂಖ್ಯೆ 10 ಲಕ್ಷ ಹೆಚ್ಚಾಗಿದೆ. 2020-21ರಲ್ಲಿ 1.33 ಲಕ್ಷ ಕೋಟಿ ಪಿಂಚಣಿಗೆ ವೆಚ್ಚವಾಗಿದೆ. ರಕ್ಷಣಾ ವಲಯದ ಬಜೆಟ್‌ನ ಶೇ.27 ಪ್ರಮಾಣದ ಮೊತ್ತವು ಅಲ್ಲಿನ ಪಿಂಚಣಿಗೋಸ್ಕರ ವೆಚ್ಚವಾಗುತ್ತದೆ. ಬಹುಮುಖ್ಯ ಚಟುವಟಿಕೆಯಾದ ‘ಸಂಶೋಧನೆ ಮತ್ತು ಅಭಿವೃದ್ಧಿ’ (ಆರ್ ಆ್ಯಂಡ್ ಡಿ)ಗೋಸ್ಕರ ಕೇವಲ ಶೇ.4ರಷ್ಟು ವೆಚ್ಚ ಮಾಡಲಾಗುತ್ತದೆ. ಶೇ. 69ರಷ್ಟು ರೆವಿನ್ಯೂ ವೆಚ್ಚವಾಗುತ್ತದೆ. ಸಾರಾಂಶದಲ್ಲಿ ಈಗಿನ ಹಣಕಾಸು ಮುಗ್ಗಟ್ಟಿನ ಸಂದರ್ಭದಲ್ಲಿ ರಕ್ಷಣಾ ಇಲಾಖೆಯನ್ನು ಆಧುನೀಕರಣಗೊಳಿಸಲು, ಸಂಶೋಧನೆಗೋಸ್ಕರ, ಹೊಸ ಬಗೆಯ ಯುದ್ಧ ವಿಮಾನಗಳು ಮುಂತಾದವುಗಳ ಖರೀದಿಗೆ ಸರಕಾರದ ಬಳಿ ಹಣವಿಲ್ಲ. ಹೆಚ್ಚೂ ಕಡಿಮೆ ದಿವಾಳಿಯಾದಂತಹ ಪರಿಸ್ಥಿತಿಯಿದೆ. ಇದರಿಂದ ಹೊರಬರಲು ಮತ್ತು ಕೋಟ್ಯಂತರ ಮೊತ್ತದ ಪಿಂಚಣಿ ಮತ್ತು ಗ್ರಾಚ್ಯುಯಿಟಿ ಹಣವನ್ನು ಉಳಿಸಲು ಈ ಗುತ್ತಿಗೆ ಆಧಾರಿತ ಅಗ್ನಿಪಥ ಎನ್ನುವ ದುಸ್ಸಾಹಸಕ್ಕೆ ಮುಂದಾಗಿದೆ. ಹೀಗಾಗಿಯೇ 5 ವರ್ಷ ಪೂರೈಸಿದರೆ ನಿಯಮಾನುಸಾರ ಗ್ರಾಚ್ಯುಯಿಟಿ ಕೊಡುವ ಕಟ್ಟುಪಾಡಿನಿಂದ ಹೊರಬರಲು ಸೇವಾ ಅವಧಿಯನ್ನು ನಾಲ್ಕು ವರ್ಷಗಳಿಗೆ ಸೀಮಿತಗೊಳಿಸಲಾಗಿದೆ.

3. ಭಾರತದ ಆರ್ಥಿಕ ಪರಿಸ್ಥಿತಿ ಸಂಪೂರ್ಣ ಹದಗೆಟ್ಟಿದೆ. 2023ರ ಡಿಸೆಂಬರ್ ವೇಳೆಗೆ ಭಾರತದ ಒಟ್ಟು ಸಾಲದ ಮೊತ್ತ 151 ಲಕ್ಷ ಕೋಟಿ ರೂ.ಯಷ್ಟಿದೆ. ಆದಾಯದ ಶೇ.45ರಷ್ಟು ಮೊತ್ತವನ್ನು ಸಾಲದ ಮೇಲಿನ ಬಡ್ಡಿ ಪಾವತಿಸಲಾಗುತ್ತಿದೆ. ರೂಪಾಯಿಯ ಮೌಲ್ಯ ಕುಸಿಯುತ್ತಿದೆ. ಹಣದುಬ್ಬರ ಶೇ.7.6ರಷ್ಟಿದೆ. ಸಾರಾಂಶದಲ್ಲಿ ನಾವು ಮತ್ತು ನಮ್ಮ ದೇಶ ಆರ್ಥಿಕ ದಿವಾಳಿತನದ ಹಂತದಲ್ಲಿದೆ. ಇದು ಕಟು ವಾಸ್ತವ. ಈ ಎಲ್ಲಾ ವೈಫಲ್ಯಗಳನ್ನು ಮರೆಮಾಚಲು ಮತ್ತು ರಕ್ಷಣಾ ಇಲಾಖೆಯ ವೆಚ್ಚವನ್ನು ಕಡಿತಗೊಳಿಸಲು ಈ ಅಲ್ಪಾವಧಿ ಯೋಜನೆಯ ಬೆಲೂನನ್ನು ತೇಲಿ ಬಿಟ್ಟಿದ್ದಾರೆ. ಇಂತಹ ಕಪಟತನದ ರಾಜಕಾರಣದಿಂದ ದೇಶಕ್ಕೆ ಹಿನ್ನಡೆಯಾಗುವ ಪ್ರಮಾಣ ಊಹೆಗೂ ನಿಲುಕುವುದಿಲ್ಲ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಬಿ. ಶ್ರೀಪಾದ ಭಟ್

contributor

Similar News