ಭೂಮಿಯ ಮೇಲಿನ ಸ್ವರ್ಗಕ್ಕೆ ಕಿಚ್ಚು ಹಚ್ಚುವ ಪ್ರಯತ್ನ
ನಿಜವಾಗಿಯೂ ಕಾಶ್ಮೀರದ ಪರಿಸ್ಥಿತಿ ಹೇಗಿದೆ ಎಂಬುದನ್ನು ನಾವು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕಾದರೆ ಕಾಶ್ಮೀರ ಮತ್ತು ಪಹಲ್ಗಾಮ್ ಪ್ರವಾಸ ಮುಗಿಸಿ, ಎಲ್ಲವನ್ನು ಅನುಭವಿಸಿ ಬಂದಿರುವವರ ಮಾತುಗಳನ್ನು ಆಲಿಸಬೇಕು ಮತ್ತು ಕಾಶ್ಮೀರ ಮತ್ತು ಪಹಲ್ಗಾಮ್ ಪ್ರದೇಶದ ಸ್ಥಳೀಯರ ಮಾತುಗಳನ್ನು ಕೇಳಬೇಕು.;

ಕಾಶ್ಮೀರ ಎಂದರೆ ಅದು ಭೂಮಿಯ ಮೇಲಿನ ಸ್ವರ್ಗವಿದ್ದಂತೆ. ಅಲ್ಲಿನ ಪ್ರಕೃತಿ ಸೌಂದರ್ಯ ಎಲ್ಲರ ಮನಸೂರೆಗೊಳ್ಳುತ್ತದೆ. ಬದುಕಿನ ಹಲವು ರೀತಿಯ ಒತ್ತಡಗಳಿಂದ ಸ್ವಲ್ಪಮಟ್ಟಿನ ವಿರಾಮ ಪಡೆಯಲು ಭಾರತದ ಹಲವು ಪ್ರವಾಸಿತಾಣಗಳಿಗೆ ಜನರು ಭೇಟಿ ನೀಡುತ್ತಾರೆ. ಅದರಲ್ಲೂ ಭಾರತದ ಕಿರೀಟದಂತಿರುವ ಜಮ್ಮು ಮತ್ತು ಕಾಶ್ಮೀರಕ್ಕೆ ಜೀವನದಲ್ಲಿ ಒಮ್ಮೆಯಾದರೂ ಹೋಗಬೇಕೆನ್ನುವುದು ಪ್ರತಿಯೊಬ್ಬ ಭಾರತೀಯ ಪ್ರಜೆಯ ಆಸೆಯಾಗಿರುತ್ತದೆ. ಇಂತಹ ಆಸೆಗಳನ್ನು ಪೂರೈಸಿಕೊಳ್ಳಲು ಕಾಶ್ಮೀರದ ಪಹಲ್ಗಾಮ್ ಕಣಿವೆ ಪ್ರದೇಶಕ್ಕೆ ದೇಶದ ಹಲವು ಮೂಲೆಗಳಿಂದ ಪ್ರವಾಸ ಬಂದಿದ್ದವರನ್ನು ಕೇಂದ್ರೀಕರಿಸಿ ನಡೆಸಿದ ಭಯೋತ್ಪಾದಕ ಕೃತ್ಯ ಎಲ್ಲರಲ್ಲೂ ಆತಂಕವನ್ನು ಮೂಡಿಸಿದೆ.
ಇದೇ ಸಂದರ್ಭದಲ್ಲಿ ದೇಶದ ಕೆಲ ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ನಡೆದ ಚರ್ಚೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ನಮ್ಮ ಸಮಾಜದ ಮನಸ್ಥಿತಿಯನ್ನು ಎತ್ತಕಡೆ ವಾಲಿಸಲು ಪ್ರಯತ್ನಿಸಲಾಗುತ್ತಿದೆ ಎಂಬುದು ಸ್ಪಷ್ಟವಾಗುತ್ತಾ ಹೋಗುತ್ತದೆ. ಹಸಿ ಹಸಿ ಸುಳ್ಳುಗಳನ್ನು ಸತ್ಯವೆಂಬಂತೆ ಬಿಂಬಿಸುವ, ಅವುಗಳ ಸೃಷ್ಟಿಯ ಕಾರ್ಖಾನೆಗಳನ್ನೇ ಕೆಲವು ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣಗಳು ಹೊಂದಿವೆ. ಇವುಗಳ ಕುರಿತು ಒಂದು ಸಾಮಾಜಿಕ ಎಚ್ಚರವನ್ನು ವಹಿಸಬೇಕಿದೆ. ಇಲ್ಲದಿದ್ದರೆ ಧರ್ಮದ ಆಧಾರದಲ್ಲಿ ಮನಸ್ಸುಗಳನ್ನು ಒಡೆದು ಆಳುವ ವರ್ಗಕ್ಕೆ ಅನುಕೂಲ ಮಾಡಿಕೊಡುತ್ತವೆ. ಮಾತ್ರವಲ್ಲದೆ ಮಾನವೀಯ ಸಮಾಜವನ್ನು ಇಲ್ಲವಾಗಿಸುತ್ತದೆ.
ನಿಜವಾಗಿಯೂ ಕಾಶ್ಮೀರದ ಪರಿಸ್ಥಿತಿ ಹೇಗಿದೆ ಎಂಬುದನ್ನು ನಾವು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕಾದರೆ ಕಾಶ್ಮೀರ ಮತ್ತು ಪಹಲ್ಗಾಮ್ ಪ್ರವಾಸ ಮುಗಿಸಿ, ಎಲ್ಲವನ್ನು ಅನುಭವಿಸಿ ಬಂದಿರುವವರ ಮಾತುಗಳನ್ನು ಆಲಿಸಬೇಕು ಮತ್ತು ಕಾಶ್ಮೀರ ಮತ್ತು ಪಹಲ್ಗಾಮ್ ಪ್ರದೇಶದ ಸ್ಥಳೀಯರ ಮಾತುಗಳನ್ನು ಕೇಳಬೇಕು.
ಕರ್ನಾಟಕದ ಶಿವಮೊಗ್ಗದಿಂದ ಕಾಶ್ಮೀರ ಪ್ರವಾಸಕ್ಕೆ ತೆರಳಿದ್ದ ಮಂಜುನಾಥ್ ಅವರ ಪತ್ನಿ ಮತ್ತು ಮಗ ಪಹಲ್ಗಾಮ್‌ನ ಈ ಘಟನೆಯಲ್ಲಿ ಸಿಕ್ಕಿಕೊಂಡು ಮಂಜುನಾಥ್ ಪ್ರಾಣಬಿಟ್ಟಿದ್ದಾರೆ. ತನ್ನ ಗಂಡನನ್ನು ಕಳೆದುಕೊಂಡ ಪಲ್ಲವಿ ಮಾಧ್ಯಮದವರೆದುರು ಆಡಿದ ಮಾತುಗಳು: ‘‘ತುಂಬಾ ಜನ ಪ್ರವಾಸಿಗರು ಸೇರಿದ ಆ ಪ್ರದೇಶದಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ಇರಬೇಕಿತ್ತು. ಅಲ್ಲಿ ಯಾರೂ ಇರಲಿಲ್ಲ. ಘಟನೆ ನಡೆದು ಒಂದು ಗಂಟೆಯ ನಂತರ ಪೊಲೀಸ್‌ನವರು ಬಂದರು. ಪಹಲ್ಗಾಮ್ ಪ್ರದೇಶ ಅತ್ಯಂತ ದುರ್ಗಮ ಕಣಿವೆ ಪ್ರದೇಶವಾಗಿರುವುದರಿಂದ ಅಲ್ಲಿಗೆ ವಾಹನಗಳ ಸಂಚಾರಕ್ಕೆ ಬೇಕಾದ ವ್ಯವಸ್ಥೆಯಿಲ್ಲ. ಆ ಪ್ರದೇಶವನ್ನು ತಲುಪಬೇಕಾದರೆ ಕುದುರೆ ಸವಾರಿ ಮಾಡಬೇಕು, ಇಲ್ಲವೇ ಕಾಲ್ನಡಿಗೆಯಲ್ಲಿ ಹೋಗಬೇಕು. ಕೈಯಲ್ಲಿ ಬಂದೂಕು ಹಿಡಿದು ಬಂದವರು ಯಾರನ್ನೂ ಯಾವ ಜಾತಿ, ಧರ್ಮವೆಂದು ಕೇಳಲಿಲ್ಲ, ಮಹಿಳೆ ಮತ್ತು ಮಕ್ಕಳನ್ನು ಹೊರತುಪಡಿಸಿ ಉಳಿದಿದ್ದ ಪುರುಷರ ಮೇಲೆ ಏಕಾಏಕಿ ಗುಂಡಿನ ದಾಳಿ ನಡೆಸಿ ಹೊರಟು ಹೋದರು. ಇಂತಹ ಕಠಿಣ ಸಂದರ್ಭದಲ್ಲಿ ನಮಗೆ ಸಹಾಯಕ್ಕೆ ಬಂದದ್ದು ಸ್ಥಳೀಯ ಕಾಶ್ಮೀರಿ ಮುಸ್ಲಿಮರು. ಅದರಲ್ಲಿ ಸಜ್ಜಾದ್ ಅಹಮದ್ ಎಂಬವರು ಕಿಲೋಮೀಟರ್‌ಗಟ್ಟಲೆೆ ನನ್ನ ಮಗನನ್ನು ತಮ್ಮ ಹೆಗಲಮೇಲೆ ಹೊತ್ತುಕೊಂಡು ನಮ್ಮನ್ನು ಅಲ್ಲಿಂದ ರಕ್ಷಿಸಿದರು’’. ಇದೇ ದಾಳಿಯಲ್ಲಿ ಮೃತಪಟ್ಟ ಬೆಂಗಳೂರಿನ ಭರತ್ ಪತ್ನಿ ಹೇಳಿದ ಮಾತು: ‘‘ಭಯೋತ್ಪಾದಕರಿಗೆ ಯಾವುದೇ ಧರ್ಮವಿಲ್ಲ. ಅವರು ನಮ್ಮ ಧರ್ಮ ಕೇಳಲಿಲ್ಲ. ಬದಲಿಗೆ ನಾವು ಸಂಕಷ್ಟದಲ್ಲಿರುವಾಗ, ನೀವು ಸಂತೋಷ ಪಡುತ್ತಿದ್ದೀರಾ? ಎಂದು ಪ್ರಶ್ನೆ ಹಾಕಿದರು. ನಮ್ಮ ಮನೆಯವರನ್ನು ಕೊಂದಿದ್ದೀರಿ ನಮ್ಮನ್ನು ಕೊಲ್ಲಿ ಎಂದು ಕೇಳಿದ್ದಕ್ಕೆ ಇದನ್ನು ಮೋದಿಗೆ ಹೇಳಿ’’ ಎಂದರು
ದಾಳಿಯಲ್ಲಿ ಮೃತಪಟ್ಟ ಕೇರಳ ರಾಜ್ಯದ ರಾಮಚಂದ್ರ ಅವರ ಮಗಳು: ‘‘ನಾನು ಆಸ್ಪತ್ರೆಗೆ ಹೋಗಿ ನನ್ನ ತಂದೆಯ ಮೃತದೇಹವನ್ನು ಗುರುತಿಸಿ ಮತ್ತೆ ವಿಮಾನ ನಿಲ್ದಾಣಕ್ಕೆ ವಾಪಸಾಗುವವರೆಗೆ ನನಗೆ ಸಹಾಯ ಮಾಡಿದ್ದು ಕಾಶ್ಮೀರದ ಇಬ್ಬರು ಮುಸಲ್ಮಾನರಾದ ಡ್ರೈವರ್ ಮುಝಪ್ಫರ್ ಮತ್ತು ಸಮೀರ್. ಇವರಿಬ್ಬರು ನನ್ನ ಸ್ವಂತ ಸಹೋದರರಂತೆ ನನ್ನ ಜೊತೆ ನಿಂತು ಸಹಾಯ ಮಾಡಿದರು. ಇಲ್ಲದಿದ್ದರೆ ನಾನು ತುಂಬಾ ಕಷ್ಟದಲ್ಲಿ ಸಿಲುಕಿಕೊಳ್ಳುತ್ತಿದ್ದೆ’’.
ಮಹಾರಾಷ್ಟ್ರದ ಮೃತ ಪ್ರವಾಸಿಗರ ಪತ್ನಿ ಮಾತನಾಡುತ್ತಾ, ‘‘ದೊಡ್ಡ ಸಂಖ್ಯೆಯ ಪ್ರವಾಸಿಗರು ಒಂದೆಡೆ ಸೇರುವ ಇಂತಹ ಪ್ರದೇಶಗಳಲ್ಲಿ ಒಬ್ಬನೇ ಒಬ್ಬ ಸೈನಿಕನಾಗಲಿ ಇರಲಿಲ್ಲ, ಯಾವ ಮಿಲಿಟರಿ, ಪೊಲೀಸರೂ ಅಲ್ಲಿರಲಿಲ್ಲ, ಪ್ರಥಮ ಚಿಕಿತ್ಸೆಗೆ ಬೇಕಾದ ವ್ಯವಸ್ಥೆ ಇರಲಿಲ್ಲ. ಬಂದೋಬಸ್ತ್‌ಗೆ ಬೇಕಾದ ಯಾವ ಕ್ರಮಗಳನ್ನೂ ಕೈಗೊಂಡಂತೆ ಕಾಣಲಿಲ್ಲ. ಕಾಶ್ಮೀರದಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿರುವ ಸೈನಿಕರು ಎಲ್ಲಿದ್ದರು? ಏನು ಮಾಡುತ್ತಿದ್ದರು? ಎಂಬ ಪ್ರಶ್ನೆ ಸಹಜವಾಗಿಯೇ ಮೂಡುತ್ತದೆ. ಇದನ್ನು ಹೇಗೆ ಅರ್ಥ ಮಾಡಿಕೊಳ್ಳುವುದು ಎಂಬುದೇ ತಿಳಿಯದಾಗಿದೆ’’.
ಶಿವಮೊಗ್ಗದ ಬಾಲಕನನ್ನು ಹೆಗಲ ಮೇಲೆ ಹೊತ್ತು ತರುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಆ ನಂತರ ಈ ಕೆಲಸವನ್ನು ಮಾಡಿ ಮಾನವೀಯತೆಯನ್ನು ಮೆರೆದಿದ್ದ ಸಜ್ಜಾದ್ ಅಹಮದ್‌ರನ್ನು ಮಾಧ್ಯಮದವರು ಸಂದರ್ಶಿಸಿದಾಗ ಆತ ಹೇಳಿದ್ದು ‘‘ನಾವೆಲ್ಲರೂ ಮನುಷ್ಯರು, ನಮಗೆ ಧರ್ಮಕ್ಕಿಂತ ಮೊದಲು ಮನುಷ್ಯತ್ವ ಮುಖ್ಯ. ಯಾವುದೇ ಒಬ್ಬ ಮನುಷ್ಯ ಕಷ್ಟದಲ್ಲಿದ್ದರೂ ಅವರನ್ನು ರಕ್ಷಿಸುವ ರೀತಿಯಲ್ಲೇ ನಾನು ಈ ಕೆಲಸ ಮಾಡಿದೆ. ಈ ಘಟನೆ ಇಡೀ ಕಾಶ್ಮೀರದ ಘನತೆಯನ್ನು ಕುಂದಿಸಿದೆ. ಕಾಶ್ಮೀರದ ಪ್ರತಿಯೊಂದು ಮನೆಯಲ್ಲೂ ಶೋಕದ ವಾತಾವರಣ ನಿರ್ಮಾಣವಾಗಿದೆ. ಎಲ್ಲರೂ ದುಃಖದಲ್ಲಿ ಮುಳುಗಿದ್ದಾರೆ. ಈ ಘಟನೆಯಿಂದ ಕಾಶ್ಮೀರಿ ಮುಸಲ್ಮಾನರನ್ನು ಅವಮಾನಿಸಬೇಡಿ. ನಾವು ನಮ್ಮ ಎದೆ ಸೀಳಿ ನಮ್ಮ ಭಾವನೆಗಳನ್ನು ತೋರ್ಪಡಿಸಲು ಸಾಧ್ಯವಾಗುವುದಿಲ್ಲ. ಈ ದುರ್ಘಟನೆ ನಮ್ಮೆಲ್ಲರನ್ನು ತಲೆತಗ್ಗಿಸುವಂತೆ ಮಾಡಿದೆ. ಈ ಘಟನೆಗೂ ಕಾಶ್ಮೀರಿ ಮುಸಲ್ಮಾನರಿಗೂ ಯಾವುದೇ ಸಂಬಂಧವಿಲ್ಲ. ಈ ಘಟನೆಯಲ್ಲಿ ಪ್ರವಾಸಿಗರನ್ನು ರಕ್ಷಿಸಲುಹೋದ ಸ್ಥಳೀಯ ಕುದುರೆ ಸವಾರನೂ ತನ್ನ ಪ್ರಾಣ ಕಳೆದುಕೊಂಡಿದ್ದಾನೆ’’.
ಜಮ್ಮು-ಕಾಶ್ಮೀರ ಪ್ರವಾಸದಲ್ಲಿದ್ದ ಕರ್ನಾಟಕ ಮೂಲದ ಎಲ್ಲಾ ಪ್ರವಾಸಿಗರನ್ನು ರಕ್ಷಿಸಿ ಕರ್ನಾಟಕಕ್ಕೆ ವಿಶೇಷ ವಿಮಾನದಲ್ಲಿ ವಾಪಸ್ ಕರೆತರಲಾಯಿತು. ಈ ಸಂದರ್ಭದಲ್ಲಿ ಬೆಂಗಳೂರಿನ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಪ್ರವಾಸಿ ಗಣೇಶ್: ‘‘ಕಾಶ್ಮೀರದಲ್ಲಿ ವಾತಾವರಣವೂ ಅನಿರೀಕ್ಷಿತ ಮತ್ತು ಇಂತಹ ದಾಳಿಗಳೂ ಅನಿರೀಕ್ಷಿತ. ಕಾಶ್ಮೀರದ ಜನ ತುಂಬಾ ಹೃದಯವಂತರು, 9 ದಿನಗಳ ಪ್ರವಾಸದಲ್ಲಿದ್ದ ನಮ್ಮನ್ನು ಮುದಸ್ಸಿರ್ ಎಂಬ ಡ್ರೈವರ್ ತಮ್ಮ ಮನೆಯ ಸದಸ್ಯರಂತೆ ನೋಡಿಕೊಂಡಿದ್ದು ಮಾತ್ರವಲ್ಲ, ‘ನಿಮ್ಮನ್ನು ಸುರಕ್ಷಿತವಾಗಿ ವಿಮಾನ ನಿಲ್ದಾಣಕ್ಕೆ ತಲುಪಿಸುವ ಜವಾಬ್ದಾರಿ ನನ್ನದು. ನೀವು ಯಾವುದಕ್ಕೂ ಹೆದರಬೇಡಿ’ ಎಂದು ಹೇಳಿದರು. ಪಹಲ್ಗಾಮ್ ಘಟನೆ ನಡೆದ ನಂತರ ನಮ್ಮಿಂದ ಯಾವುದೇ ರೀತಿಯ ಹಣಕಾಸಿನ ಖರ್ಚನ್ನು ಮಾಡಿಸದೆ ಎಲ್ಲಾ ರೀತಿಯ ವ್ಯವಸ್ಥೆಗಳನ್ನು ಕಿಫಾಯತ್ ಎಂಬ ಟ್ರಾವೆಲ್ ಏಜೆಂಟ್ ನೋಡಿಕೊಂಡರು. ಅಲ್ಲಿ ಎಲ್ಲಾ ಧರ್ಮದವರೂ ಒಟ್ಟಿಗೇ ಬದುಕುತ್ತಿದ್ದಾರೆ. ಧರ್ಮದ ಆಧಾರದ ಮೇಲೆ ಯಾರನ್ನೂ ನೋಡಬಾರದು. ನಾವು ಮತ್ತೆ ಕಾಶ್ಮೀರಕ್ಕೆ ಖಂಡಿತವಾಗಿಯೂ ಪ್ರವಾಸ ಮಾಡುತ್ತೇವೆ. ಇದು ಭೂಮಿಯ ಮೇಲಿನ ಸ್ವರ್ಗ. ನಾವು ನಾಲ್ಕು ಜನ ಪ್ರವಾಸ ಆರಂಭಿಸಿದೆವು. ಇಂದು ನಾಲ್ಕು ಜನರೂ ಸುರಕ್ಷಿತವಾಗಿ ರಾಜ್ಯ ತಲುಪಲು ಕರ್ನಾಟಕ ಸರಕಾರ ಮತ್ತು ಅದರ ಜವಾಬ್ದಾರಿ ಹೊತ್ತ ಮಂತ್ರಿ ಸಂತೋಷ್ ಲಾಡ್ ಅವರಿಗೆ ಧನ್ಯವಾದಗಳು’’.
ಪಹಲ್ಗಾಮ್ ಘಟನೆ ನಡೆದ ಮೇಲೆ ಕಣಿವೆ ರಾಜ್ಯ ದುಃಖದ ಮಡುವಿನಲ್ಲಿತ್ತು. ಈ ಸಂದರ್ಭವನ್ನು ಬಳಸಿಕೊಂಡು ವಿಮಾನಯಾನ ಕಂಪೆನಿಗಳು ಟಿಕೆಟ್ ದರಗಳನ್ನು ಮನಸೋಇಚ್ಛೆ ಹೆಚ್ಚಳ ಮಾಡಿದವು. ಆದರೆ ಪ್ರತೀ ದಿನ ದುಡಿದು ಬದುಕುವ ಆಟೋ ರಿಕ್ಷಾ ಚಾಲಕರು ಅಂದು ಪ್ರವಾಸಿಗರನ್ನು ವಿಮಾನ ನಿಲ್ದಾಣ, ರೈಲ್ವೆ ನಿಲ್ದಾಣ, ಬಸ್ ನಿಲ್ದಾಣಗಳಿಗೆ ಬಿಡಲು ಉಚಿತ ಪ್ರಯಾಣ ಏರ್ಪಡಿಸಿದ್ದರು. ಕಾಶ್ಮೀರದ ಲಾಲ್ ಚೌಕ್‌ನಲ್ಲಿರುವ ಸುಮಾರು 40 ಆಟೊಗಳು ತಮ್ಮ ಆಟೊಗಳಿಗೆ ಉಚಿತ ಪ್ರಯಾಣದ ಬೋರ್ಡ್ ಮತ್ತು ಭಯೋತ್ಪಾದಕ ದಾಳಿಯನ್ನು ಖಂಡಿಸಿ ಫಲಕಗಳನ್ನು ಅಂಟಿಸಿಕೊಂಡಿದ್ದರು. ಸುಮಾರು 40 ವರ್ಷಗಳಿಂದ ಆಟೋ ಚಲಾಯಿಸುತ್ತಿರುವ ಚಾಲಕ ಆಡಿದ ಮಾತು. ‘‘ಪ್ರವಾಸಿಗರು ನಮ್ಮ ಜೀವಾಳ, ಅವರಿಗಾಗಿ ನಾವು ಜೀವವನ್ನೇ ಕೊಡುತ್ತೇವೆ. ಈ ದಾಳಿಯನ್ನು ತೀವ್ರವಾಗಿ ಖಂಡಿಸುತ್ತೇವೆ. ದುಃಖತಪ್ತರ ಜೊತೆ ನಾವಿದ್ದೇವೆ. ಕಾಶ್ಮೀರದ ಪ್ರಾಕೃತಿಕ ಸೌಂದರ್ಯವನ್ನು ಸವಿದು ಸುತ್ತಾಡಲು ದೇಶದ ಮೂಲೆ ಮೂಲೆಗಳಿಂದ ಪ್ರವಾಸಿಗರು ಬರುತ್ತಾರೆ, ಅದರಿಂದ ಬರುವ ಆದಾಯದಿಂದಲೇ ನಾವು ಬದುಕುತ್ತೇವೆ. ದಾಳಿಯ ಸಮಯದಲ್ಲಿ ನಾನು ಸ್ಥಳದಲ್ಲಿದ್ದಿದ್ದರೆ ಉಗ್ರರ ಗುಂಡಿಗೆ ನಾನು ಎದೆಯೊಡ್ಡಿ ಪ್ರವಾಸಿಗರ ಪ್ರಾಣ ರಕ್ಷಣೆ ಮಾಡುತ್ತಿದ್ದೆ. ನಾವು ಇವತ್ತಲ್ಲಾ ನಾಳೆ ಸಾಯುತ್ತೇವೆ. ಪ್ರವಾಸಕ್ಕೆ ಬಂದ ಅತಿಥಿಗಳನ್ನು ಗುರಿಯಾಗಿಟ್ಟುಕೊಂಡು ನಡೆಸಿರುವ ದಾಳಿ ಖಂಡನೀಯ, ಈ ಘಟನೆಯಲ್ಲಿ ತೊಡಗಿರುವವರು ಮನುಷ್ಯರೇ ಅಲ್ಲ, ಅವರಿಗೆ ಮನುಷ್ಯತ್ವದ ಬೆಲೆ ಗೊತ್ತಿಲ್ಲ. ಇಂತಹವರೊಂದಿಗೆ ಕಾಶ್ಮೀರಿ ಮುಸಲ್ಮಾನರನ್ನು ಹೋಲಿಕೆ ಮಾಡಬೇಡಿ. 40 ವರ್ಷಗಳಿಂದ ನಾನು ಆಟೊ ಓಡಿಸುತ್ತಿದ್ದೇನೆ, ಇಲ್ಲಿ ಪ್ರವಾಸಿಗಳಿಲ್ಲದೆ ಸ್ಥಳೀಯರು ಬದುಕು ನಡೆಸುವುದು ಕಷ್ಟ. ಇಂದು ಅತಿಥಿಗಳು ಸಂಕಷ್ಟದಲ್ಲಿದ್ದಾರೆ ಅದಕ್ಕಾಗಿ ಅವರಿಗೆ ಉಚಿತ ಆಟೋ ಸೇವೆಯನ್ನು ಕಲ್ಪಿಸಿದ್ದೇವೆ. ಈ ದಾಳಿಯ ಸುದ್ದಿ ಕೇಳಿ ರಾತ್ರಿಯಿಡೀ ನಾನು ನಿದ್ದೆ ಮಾಡಿಲ್ಲ, ದುಃಖ ಉಮ್ಮಳಿಸಿ ಬರುತ್ತದೆ. ದಾಳಿಕೋರರನ್ನು ಭಗವಂತ ಕ್ಷಮಿಸುವುದಿಲ್ಲ. ಮನೆಯ ಸದಸ್ಯರು ನಿಧನರಾಗಿದ್ದಾಗಲೂ ನನಗೆ ಇಷ್ಟೊಂದು ದುಃಖವಾಗಿರಲಿಲ್ಲ ಅಷ್ಟೊಂದು ದುಖಃವಾಗುತ್ತಿದೆ. ನಮ್ಮೆಲ್ಲರಿಗೂ ಮನುಷ್ಯತ್ವ ಮಾತ್ರ ಮುಖ್ಯವಾಗಬೇಕು’’.
ಪಹಲ್ಗಾಮ್ ಭಯೋತ್ಪಾದಕ ದಾಳಿಯ ಕುರಿತು ಸಿಪಿಐಎಂ ಪೊಲಿಟ್ ಬ್ಯೂರೋ ಸದಸ್ಯರು ಮತ್ತು ಕುಲ್ಗಾಮ್ ಶಾಸಕ ಮುಹಮ್ಮದ್ ಯೂಸುಫ್ ತಾರಿಗಾಮಿ ಆಡಿರುವ ಮಾತುಗಳು ಇಡೀ ಕಾಶ್ಮೀರ ಜನತೆಯ ಮಾತುಗಳಂತೆ ಮೂಡಿಬಂದಿವೆ.
‘‘ಈ ಹೇಯ ಕೃತ್ಯದ ವಿರುದ್ಧ ಕಾಶ್ಮೀರದಲ್ಲಿ ಅಪಾರ ನೋವು ಮತ್ತು ದುಃಖವಿದೆ. ಭಯೋತ್ಪಾದನೆಗೆ ಯಾವುದೇ ಧರ್ಮ ಅಥವಾ ಸಮರ್ಥನೆ ಇಲ್ಲ. ನಾವು ಕಾಶ್ಮೀರದ ಜನರು, ಇಡೀ ದೇಶದೊಂದಿಗೆ ಒಗ್ಗಟ್ಟಿನಿಂದ ನಿಲ್ಲುತ್ತೇವೆ, ದುಃಖ ಮತ್ತು ಸಹಾನುಭೂತಿಯಲ್ಲಿ ಒಂದಾಗಿದ್ದೇವೆ. ಈ ದಾಳಿಗಳು ನಮ್ಮೆಲ್ಲರ ಮಾನವೀಯತೆಯ ಮೇಲಿನ ದಾಳಿಯಾಗಿದ್ದು, ಧಾರ್ಮಿಕ ಅಥವಾ ಕೋಮು ಆಧಾರದ ಮೇಲೆ ನಮ್ಮನ್ನು ವಿಭಜಿಸಲು ಸಾಧ್ಯವಿಲ್ಲ.
ಅನಂತ್‌ನಾಗ್‌ನ ಸ್ಥಳೀಯ ಕುದುರೆ ಸವಾರನನ್ನೂ ಒಳಗೊಂಡಂತೆ 28 ಜೀವಗಳನ್ನು ಬಲಿ ಪಡೆದ ಪಹಲ್ಗಾಮ್‌ನ ಬೈಸರನ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯು ಜಮ್ಮು ಮತ್ತು ಕಾಶ್ಮೀರದ ಇಡೀ ಪ್ರದೇಶವನ್ನು ಬೆಚ್ಚಿಬೀಳಿಸಿದ ತೀವ್ರ ದುರದೃಷ್ಟಕರ ಮತ್ತು ದುರಂತ ಘಟನೆಯಾಗಿದೆ.
ಹಿಂಸೆ ಯಾವುದೇ ಉದ್ದೇಶವನ್ನು ಪೂರೈಸುವುದಿಲ್ಲ ಮತ್ತು ಅದನ್ನು ನಿಸ್ಸಂದಿಗ್ಧವಾಗಿ ಖಂಡಿಸಬೇಕು. ಭಯೋತ್ಪಾದಕರಿಗೆ ನಮ್ಮನ್ನು ನಿರ್ದೇಶಿಸಲು ಸಾಧ್ಯವಿಲ್ಲ ಮತ್ತು ಮುಗ್ಧ ನಾಗರಿಕರನ್ನು ಗುರಿಯಾಗಿಸಿಕೊಂಡು ನಡೆದ ಇಂತಹ ಹೇಡಿತನದ ಕೃತ್ಯಗಳಿಗೆ ಯಾವುದೇ ನಾಗರಿಕ ಸಮಾಜದಲ್ಲಿ ಸ್ಥಾನವಿಲ್ಲ. ಅಪರಾಧಿಗಳನ್ನು ಗುರುತಿಸಿ ವಿಳಂಬವಿಲ್ಲದೆ ನ್ಯಾಯ ವ್ಯವಸ್ಥೆಯಲ್ಲಿ ಶಿಕ್ಷಿಸಬೇಕು.
ಘಟನೆ ನಂತರ, ಅನೇಕ ಕಾಶ್ಮೀರಿಗಳು ಗಾಯಗೊಂಡವರಿಗೆ ರಕ್ತದಾನ ಮಾಡಲು ಮತ್ತು ಇತರ ಸಹಾಯ ಮಾಡಲು ಮುಂದೆ ಬಂದರು. ಪ್ರವಾಸಿಗರನ್ನು ಉಳಿಸಲು ಪ್ರಯತ್ನಿಸಿದ್ದಕ್ಕಾಗಿ ಕೊಲ್ಲಲ್ಪಟ್ಟ ಕಾಶ್ಮೀರಿ ಕುದುರೆ ಸವಾರನ ಪ್ರಯತ್ನ, ಕಾಶ್ಮೀರದ ಸಾಮಾನ್ಯ ಜನರು ಕೋಮು ಭಾವನೆಗಳನ್ನು ಕೆರಳಿಸುವ ಯಾವುದೇ ಪ್ರಯತ್ನಗಳಿಗೆ ಬಲಿಯಾಗಲು ನಿರಾಕರಿಸಿದ್ದಾರೆ ಎಂಬುದರ ಸಂಕೇತವಾಗಿದೆ.
ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿದಂತೆ ಭದ್ರತಾ ಕ್ರಮಗಳನ್ನು ಮರುಪರಿಶೀಲಿಸಬೇಕು ಮತ್ತು ಅಂತಹ ಅಮಾನವೀಯ ಕೃತ್ಯಗಳು ಮರುಕಳಿಸದಂತೆ ನೋಡಿಕೊಳ್ಳಬೇಕು ಎಂದು ನಾನು ಕೇಂದ್ರ ಸರಕಾರವನ್ನು ಒತ್ತಾಯಿಸುತ್ತೇನೆ.
ಏತನ್ಮಧ್ಯೆ, ಬಿಕ್ಕಟ್ಟಿನ ಈ ಸಮಯದಲ್ಲಿ, ಜನರು ಒಗ್ಗಟ್ಟಿನಿಂದ ಇರಬೇಕು ಮತ್ತು ಭಯೋತ್ಪಾದಕರ ವಿಭಜಕ ಮತ್ತು ಮೋಸಗೊಳಿಸುವ ಕಾರ್ಯಸೂಚಿಗೆ ಬಲಿಯಾಗಬಾರದು.
ಗಾಯಗೊಂಡ ಪ್ರವಾಸಿಗರ ಸ್ಥಿತಿಯ ಬಗ್ಗೆ ವಿಚಾರಿಸಲು ಆಸ್ಪತ್ರೆಗೆ ಭೇಟಿ ನೀಡಲು ನಾನು ಅಧಿಕಾರಿಗಳಿಂದ ಅನುಮತಿ ಕೋರಿದ್ದೆ, ಆದರೆ ದುರದೃಷ್ಟವಶಾತ್, ನನ್ನ ವಿನಂತಿಯನ್ನು ನಿರಾಕರಿಸಲಾಯಿತು.
ಈ ದಾಳಿಯು ಕಾಶ್ಮೀರಿ ನೀತಿಯ ಮೂಲತತ್ವ ಮತ್ತು ಸಾವಿರಾರು ಜನರ, ವಿಶೇಷವಾಗಿ ಪ್ರವಾಸೋದ್ಯಮ ವಲಯದಲ್ಲಿ ತೊಡಗಿಸಿಕೊಂಡವರ ಜೀವನೋಪಾಯದ ಮೇಲೆ ಪರಿಣಾಮ ಬೀರುತ್ತದೆ. ಪ್ರವಾಸೋದ್ಯಮವು ಈ ಪ್ರದೇಶದಾದ್ಯಂತ ಪುನರುಜ್ಜೀವನಗೊಳ್ಳುತ್ತಾ, ಭರವಸೆ ಮತ್ತು ಆರ್ಥಿಕ ಚಟುವಟಿಕೆಯನ್ನು ಉತ್ತೇಜಿಸುತ್ತಿತ್ತು. ಇಂತಹ ಕೃತ್ಯವು ಕೇವಲ ಪ್ರವಾಸಿಗರ ಮೇಲಿನ ದಾಳಿಯಲ್ಲ, ಬದಲಾಗಿ ನಮ್ಮೆಲ್ಲರ ಮೇಲಿನ ದಾಳಿಯಾಗಿದೆ’’.