ಚುನಾವಣೆ ಗೆಲ್ಲಲು ಮತ್ತೆ ‘ಸರ್ವೇ’ ಕಸರತ್ತು?

Update: 2024-08-20 04:17 GMT
Editor : Thouheed | Byline : ವಿನಯ್ ಕೆ.

ಎಲ್ಲಿ ಯಾವಾಗ ಚುನಾವಣೆ ನಡೆದರೂ ಬಿಜೆಪಿ ತಾನೇ ಗೆಲ್ಲುವುದಕ್ಕೆ ಪೂರಕ ವಾತಾವರಣ ಸೃಷ್ಟಿಸಲು ಯತ್ನಿಸುತ್ತದೆ.

ಜನರ ಮೇಲೆ ಪ್ರಭಾವ ಬೀರುವುದು ಮತ್ತು ವಿಪಕ್ಷಗಳ ಮೇಲೆ ಒತ್ತಡ ಹೇರುವ ತಂತ್ರವಾಗಿ ಸಮೀಕ್ಷೆಗಳ ಮೂಲಕ ತನ್ನ ಗೆಲುವಿನ ಬಗ್ಗೆ ಬಿಂಬಿಸುವುದನ್ನು ಮಾಡುತ್ತಲೇ ಬಂದಿದೆ. ಕಳೆದ ಲೋಕಸಭೆ ಚುನಾವಣೆ ವೇಳೆಯಲ್ಲೂ ಬಿಜೆಪಿ ಭಾರೀ ಬಹುಮತದೊಂದಿಗೆ ಗೆಲ್ಲಲಿದೆ ಎಂಬ ಭ್ರಮೆಯನ್ನು ಸರ್ವೇಗಳ ಮೂಲಕ ಸೃಷ್ಟಿಸುವುದು ನಡೆದಿತ್ತು. ಈಗಲೂ ಮತ್ತೊಮ್ಮೆ ಅಂಥದೇ ತಯಾರಿಯನ್ನು ಅದು ನಡೆಸಿದೆ. ಮೀಡಿಯಾಗಳನ್ನು ಬಳಸಿಕೊಂಡು ತನ್ನ ಗೆಲುವಿನ ವಾತಾವರಣವಿದೆ, ತನ್ನ ಪರ ಅಲೆಯಿದೆ ಎಂದು ಹೇಳುವುದಕ್ಕಾಗಿ ಅದು ಯತ್ನಿಸುತ್ತಿದೆ.

ಜಮ್ಮು-ಕಾಶ್ಮೀರ ಮತ್ತು ಹರ್ಯಾಣ ಚುನಾವಣೆ ಘೋಷಣೆಯಾಗಿದ್ದು, ಅಕ್ಟೋಬರ್ 4ರಂದು ಫಲಿತಾಂಶ ಪ್ರಕಟವಾಗಲಿದೆ. ಅದನ್ನು ಗಮನದಲ್ಲಿಟ್ಟುಕೊಂಡು, ಚುನಾವಣೆಗೆ ಮೊದಲೇ, ಮತದಾನಕ್ಕೆ ಮೊದಲೇ ಬಿಜೆಪಿ ಪರ ಅಲೆಯಿದೆ ಎಂಬ ಸನ್ನಿವೇಶ ಸೃಷ್ಟಿಸುವುದು ನಡೆದಿದೆಯೆ?

ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ‘ಚಾರ್ ಸೌ ಪಾರ್’ ಎಂಬ ಬಡಾಯಿ ಫಲ ಕೊಡದೇ ಹೋಗಿತ್ತು. ಆದರೆ ಅದಕ್ಕೂ ಮೊದಲು ಬಿಜೆಪಿಯ ‘ಚಾರ್ ಸೌ ಪಾರ್’ ಎಂಬ ಬಡಾಯಿಗೆ ಪೂರಕವಾಗಿ ಮೀಡಿಯಾಗಳೂ ಜನರನ್ನು ಪ್ರಭಾವಿಸುವ ಕೆಲಸದಲ್ಲಿ ಪೂರಕವಾಗಿ ತೊಡಗಿಕೊಂಡಿದ್ದವು.

ಆದರೆ ಏನೇ ಕಸರತ್ತು ಮಾಡಿದರೂ ಬಿಜೆಪಿಗೆ ನಾನೂರರ ಗಡಿ ದಾಟುವುದು ಹಾಗಿರಲಿ, ಇನ್ನೂರೈವತ್ತು ತಲುಪಲೂ ಆಗಿರಲಿಲ್ಲ.

ಬಿಜೆಪಿ ಆಗ ಚುನಾವಣಾ ಆಯೋಗವನ್ನೂ ಬಳಸಿಕೊಂಡು, ಚಲಾವಣೆಯಾದ ಮತಗಳ ಬಗ್ಗೆ ಸ್ಪಷ್ಟವಾದ ಚಿತ್ರವನ್ನು ಜನರಿಂದ ಮರೆಮಾಚುವ ಯುತ್ನವನ್ನು ಮಾಡಿತ್ತು ಎಂಬ ಆರೋಪವೂ ಬಂದಿದೆ.

ಎಡಿಆರ್ ಇಂಥ ಎಲ್ಲ ಕಸರತ್ತುಗಳ ಬಗ್ಗೆಯೂ ಬಯಲು ಮಾಡಿತ್ತು.

ಇಷ್ಟೆಲ್ಲ ಆದ ಮೇಲೆ ಮತ್ತೂ ಬಿಜೆಪಿ ಅಂಥದೇ ಕಸರತ್ತಿನಲ್ಲಿ ತೊಡಗಿದೆಯೆ? ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಎದುರು ಯಾವ ಪಕ್ಷದ ಆಟವೂ ನಡೆಯದು ಎಂದು ಬಿಂಬಿಸುವ ಯತ್ನ ನಡೆದಿದೆಯೆ?

ಮೊದಲ ಸರ್ವೇಗಳು ಜಮ್ಮು-ಕಾಶ್ಮೀರದಲ್ಲಿ ಏನಾಗಲಿದೆ ಎಂಬುದನ್ನು ಹೇಳಿಲ್ಲ. ಆದರೆ ಮುಂದಿನ ವಾರದ ಹೊತ್ತಿಗೆ ಅದರ ಬಗ್ಗೆಯೂ ಸಮೀಕ್ಷೆಗಳು ಹೊರಬೀಳಬಹುದು.

ಮಹಾರಾಷ್ಟ್ರ, ಹರ್ಯಾಣ, ಜಾರ್ಖಂಡ್‌ಗಳಲ್ಲೆಲ್ಲ ಎಷ್ಟು ಪ್ರತಿಶತ ಮತಗಳು ತನಗೆ ಸಿಗಬಹುದು ಎಂಬುದನ್ನು ಈ ಸಮೀಕ್ಷೆಗಳ ಮೂಲಕ ಬಿಂಬಿಸುವುದರೊಂದಿಗೆ ತನ್ನ ಪರ ನಿರೂಪಣೆಯನ್ನು ಹಬ್ಬಿಸಲು ಬಿಜೆಪಿ ಬಯಸುತ್ತದೆ.

ಬಿಜೆಪಿ ಯಾವ ರಾಜ್ಯದಲ್ಲೂ ಸೋಲುವುದಿಲ್ಲ ಎಂಬುದನ್ನು ಚುನಾವಣೆಗೆ ಮೊದಲೇ ಜನರ ಮನಸ್ಸಿನಲ್ಲಿ ಅಚ್ಚೊತ್ತುವುದು ಇದೆಲ್ಲದರ ಉದ್ದೇಶ.

ಹರ್ಯಾಣದಲ್ಲಿ 90 ಸೀಟುಗಳಲ್ಲಿ 42 ಸೀಟುಗಳವರೆಗೂ ಬಿಜೆಪಿ ಗೆಲ್ಲಬಹುದು ಎನ್ನಲಾಗುತ್ತಿದೆ. 45 ಶೇಕಡಾವಾರು ಮತಗಳು ಬರಬಹುದು ಎನ್ನಲಾಗುತ್ತಿದೆ. ಮುಂದಿನ ಸಮೀಕ್ಷೆಗಳು ಇದಕ್ಕೂ ಹೆಚ್ಚು ಪ್ರಮಾಣವನ್ನು ತೋರಿಸಲೂಬಹುದು ಎನ್ನುತ್ತಾರೆ ಖ್ಯಾತ ಪತ್ರಕರ್ತ ಪುಣ್ಯ ಪ್ರಸೂನ್ ಬಾಜಪೇಯಿ.

ಈ ದೇಶದ ಮೀಡಿಯಾಗಳು ಹೇಗೆ ಬಿಜೆಪಿ ಪರ ನಿರೂಪಣೆಯನ್ನು ಕೊಡುತ್ತವೆ ಎಂಬುದನ್ನು ಕಾಣುತ್ತಿದ್ದೇವೆ. ಕಳೆದ ಸಲವೂ ಮತ ಎಣಿಕೆ ದಿನ ಬೆಳಗ್ಗೆ ಮೀಡಿಯಾಗಳು ಹೇಳುತ್ತಿದ್ದುದೆಲ್ಲ ಸಂಜೆಯ ಹೊತ್ತಿಗೆ ಸಂಪೂರ್ಣ ಬದಲಾಗಿ ಹೋಗಿತ್ತು.

ಇನ್ನು ಮಹಾರಾಷ್ಟ್ರದಲ್ಲಿ ಬಿಜೆಪಿ ತನ್ನದೇ ಬಲದಲ್ಲಿ 125ಕ್ಕೂ ಹೆಚ್ಚು ಸೀಟುಗಳನ್ನು ಗೆಲ್ಲಲಿದೆ ಎನ್ನುತ್ತಿವೆ ಈ ಸರ್ವೇಗಳು. ಲೋಕಸಭೆ ಚುನಾವಣೆಯಲ್ಲಿ ಅಲ್ಲಿ ಬಿಜೆಪಿ ನೆಲೆಯೇ ಇಲ್ಲದ ಮಟ್ಟಿಗೆ ಕುಸಿದಿದೆ ಎಂಬುದನ್ನು ಗಮನಿಸಬೇಕು.

ಶೇ. 24 ಮತಗಳು ಬರಬಹುದು ಎನ್ನಲಾಗುತ್ತಿದೆ. ಈ ಅಂದಾಜನ್ನು ಮುಂದಿನ ಸರ್ವೇಗಳಲ್ಲಿ ಶೇ.29ರವರೆಗೂ ಏರಿಸುವ ಸಾಧ್ಯತೆಯಿದೆ ಎನ್ನುತ್ತಾರೆ ಪುಣ್ಯ ಪ್ರಸೂನ್ ಬಾಜಪೇಯಿ.

ಜಾರ್ಖಂಡ್‌ನಲ್ಲಿ ಬಿಜೆಪಿ ತನ್ನದೇ ಬಲದಿಂದ ಸರಕಾರ ರಚಿಸಲು ಬಯಸುತ್ತಿದೆ.

ಅಲ್ಲಿ ಮೊದಲ ಸರ್ವೇಗಳು ಬಿಜೆಪಿಗೆ 81ರಲ್ಲಿ 45 ಸೀಟುಗಳನ್ನು ಕೊಡುತ್ತಿವೆ. ಇದು 49ರವರೆಗೂ ಮುಂದುವರಿಯಬಹುದು ಎಂಬುದು ಅಂದಾಜು. ಶೇ.41ರವರೆಗೂ ಮತಗಳು ಬರಬಹುದು ಎನ್ನಲಾಗುತ್ತಿದೆ ಈ ಸರ್ವೇಗಳಲ್ಲಿ.

ಹೀಗೆ ಸಮೀಕ್ಷೆಗಳು ಹೇಳುತ್ತಿರುವಾಗಲೇ ಇನ್ನೊಂದೆಡೆಗಿನ ರಾಜಕೀಯ ವಿದ್ಯಮಾನಗಳನ್ನೂ ಗಮನಿಸಬೇಕಾಗಿದೆ.

ಜಾರ್ಖಂಡ್ ವಿಚಾರದಲ್ಲೇ ಹೇಳುವುದಾದರೆ, ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಚಂಪಯಿ ಸೋರೆನ್ ಬಿಜೆಪಿ ಸೇರುತ್ತಾರೆಯೇ ಎಂಬ ಅನುಮಾನಗಳು ಎದ್ದಿವೆ.

ಅವರು ದಿಲ್ಲಿಗೆ ಬಂದಿದ್ದು ಮಗಳನ್ನು ಭೇಟಿಯಾಗಲು ಎಂದು ಹೇಳಿದ್ದಾರೆ. ಆದರೆ ರಾಜಕೀಯವಾಗಿ ಗೋಚರಿಸುತ್ತಿರುವ ಚಿತ್ರಗಳು ಅವರು ಮರೆಮಾಚಲು ಯತ್ನಿಸುತ್ತಿರುವ ಎಲ್ಲವನ್ನೂ ಹೊರಗೆಡಹುವ ಹಾಗೆ ಇವೆ.

ಈ ನಡುವೆ ಅವರು ಚುನಾವಣೆವರೆಗೂ ತಮಗೆ ಎಲ್ಲಾ ಆಯ್ಕೆಗಳು ಮುಕ್ತವಾಗಿವೆ ಎಂದು ಹೇಳಿರುವುದು ಕೂಡ ಅವರು ಬಿಜೆಪಿ ಸೇರುವ ಬಗ್ಗೆ ಬಹುತೇಕ ನಿರ್ಧರಿಸಿರುವ ಹಾಗಿದೆ ಎಂಬ ಸುಳಿವನ್ನೇ ನೀಡಿದೆ.

ಜಾರ್ಖಂಡ್‌ಗೆ ಮಾತ್ರ ಇದು ಸೀಮಿತವಾಗಿರಲಾರದು.

ಬಿಜೆಪಿ ಗೆಲುವಿನ ಬಗ್ಗೆ ಸಮೀಕ್ಷೆಗಳು ಹೇಳುತ್ತಿರುವುದರ ಹಿಂದಿನ ರಾಜಕೀಯವನ್ನು ಈ ಹಿನ್ನೆಲೆಯಿಂದಲೂ ಊಹಿಸಬಹುದಾಗಿದೆ.

ಡಬಲ್ ಇಂಜಿನ್ ಸರಕಾರ ಮತ್ತು ಮೋದಿ ಪ್ರಭಾವ ಇವೆರಡೂ ವಿಷಯಗಳನ್ನು ಮತ್ತೊಮ್ಮೆ ಮುನ್ನೆಲೆಗೆ ತರುವ ಯತ್ನಗಳೂ ನಡೆಯಬಹುದು.

ಸರ್ವೇಗಳನ್ನು ಇದಕ್ಕೆ ಪೂರಕವಾಗಿ, ಆಧಾರವಾಗಿ ನಿರ್ದಿಷ್ಟ ಸುದ್ದಿವಾಹಿನಿಗಳು ಮುಂದಿನ ದಿನಗಳಲ್ಲಿ ಪ್ರಕಟಿಸುತ್ತ ಹೋಗುವುದು ನಡೆಯಲಿದೆ. ಇಲ್ಲಿ ದೇಶವನ್ನು ಅಥವಾ ಆ ನಿರ್ದಿಷ್ಟ ರಾಜ್ಯಗಳನ್ನು ಕಾಡುತ್ತಿರುವ ಇತರ ವಿಷಯಗಳೆಲ್ಲ ಗೌಣವಾಗಿಬಿಡಲಿವೆ.

ಸರ್ವೇಗಳಿಂದ ಮಾತ್ರವೇ ಎಲ್ಲವೂ ಆಗುವುದಿಲ್ಲ ಎನ್ನುವುದು ಬಿಜೆಪಿಗೂ ಗೊತ್ತಿದೆ. ಹಾಗಾಗಿಯೇ ಚುನಾವಣಾ ಆಯೋಗವನ್ನೂ ಅದು ತನಗೆ ಬೇಕಾದಂತೆ ಬಳಸಿಕೊಳ್ಳುವುದರ ಬಗ್ಗೆ ಆರೋಪಗಳು ಕೇಳಿಬರುತ್ತಲೇ ಇವೆ.

ಕಳೆದ ಲೋಕಸಭೆ ಚುನಾವಣೆಯಲ್ಲಿ ಆದ ಮತಗಳ ಎಣಿಕೆಯಲ್ಲಿ ವ್ಯತ್ಯಾಸದ ಬಗ್ಗೆ ಎದ್ದ ಅನುಮಾನಗಳಿಗೆ ಚುನಾವಣಾ ಆಯೋಗ ಇನ್ನೂ ಉತ್ತರ ಕೊಟ್ಟಿಲ್ಲ. ಆರಂಭಿಕ ಮತದಾನದ ಅಂಕಿಅಂಶಗಳಿಗಿಂತಲೂ ಅಂತಿಮವಾಗಿ ಪ್ರಕಟಿಸಲಾದ ಮತಗಳಲ್ಲಿ 4.65 ಕೋಟಿ ಹೆಚ್ಚಳ ಆಗಿದೆ ಎಂದು ವೋಟ್ ಫಾರ್ ಡೆಮಾಕ್ರಸಿ ಪ್ರಕಟಿಸಿರುವ ವರದಿ ಪ್ರತಿಪಾದಿಸಿದೆ.

ಇದು ಹೇಗಾಯಿತು ಎಂಬುದು ಸ್ಪಷ್ಟವಿಲ್ಲ. ಈ ವ್ಯತ್ಯಾಸ ಕುರಿತು ಸ್ವತಂತ್ರ ತನಿಖೆ ಆಗಬೇಕಿದೆ ಎಂದೂ ವರದಿಯಲ್ಲಿ ಒತ್ತಾಯಿಸಲಾಗಿತ್ತು.

ಆದರೆ ಅನುಮಾನಗಳನ್ನು ಪರಿಹರಿಸಲು ಚುನಾವಣಾ ಆಯೋಗ ಈವರೆಗೂ ಯತ್ನಿಸಿಲ್ಲ.

ಮತಗಳ ಈ ಏರಿಕೆ ಬಿಜೆಪಿ ಮತ್ತದರ ಮಿತ್ರಪಕ್ಷಗಳು 15 ರಾಜ್ಯಗಳಲ್ಲಿ ಏನಿಲ್ಲವೆಂದರೂ 79 ಸೀಟುಗಳನ್ನು ಗೆಲ್ಲುವುದಕ್ಕೆ ಅನುಕೂಲಕರವಾಗಿ ಒದಗಿರಬಹುದಾದ ಸಾಧ್ಯತೆ ಬಗ್ಗೆ ವರದಿ ಗಮನ ಸೆಳೆದಿದೆ. ಅಂಥ ಏರಿಕೆ ಇಲ್ಲದೆ ಹೋಗಿದ್ದಲ್ಲಿ ಆ ಸ್ಥಾನಗಳನ್ನು ಅವು ಬಹುಶಃ ಕಳೆದುಕೊಳ್ಳುತ್ತಿದ್ದವು.

ಆ ರಾಜ್ಯಗಳೆಂದರೆ, ಒಡಿಶಾ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಆಂಧ್ರಪ್ರದೇಶ, ಕರ್ನಾಟಕ, ಛತ್ತೀಸ್‌ಗಡ, ರಾಜಸ್ಥಾನ, ಬಿಹಾರ, ಹರ್ಯಾಣ, ಮಧ್ಯಪ್ರದೇಶ, ತೆಲಂಗಾಣ, ಅಸ್ಸಾಂ, ಅರುಣಾಚಲ ಪ್ರದೇಶ, ಗುಜರಾತ್ ಮತ್ತು ಕೇರಳ.

ವಿಧಾನಸಭೆ ಚುನಾವಣೆ ನಡೆಯಲಿರುವ ರಾಜ್ಯಗಳಲ್ಲಿ ಕಳೆದ ಲೋಕಸಭೆ ಚುನಾವಣೆಯಲ್ಲಿ ಕಂಡ ಮತಗಳ ಏರುಪೇರು ಗಮನಿಸುವುದಾದರೆ,

ಮಹಾರಾಷ್ಟ್ರದ 11 ಕ್ಷೇತ್ರಗಳಲ್ಲಿ ಮತದಾನ ದಿನ ಮತ್ತು ನಂತರ ಪ್ರಕಟಿಸಲಾದ ಅಂತಿಮ ಅಂಕಿಅಂಶಗಳ ನಡುವೆ ಭಾರೀ ವ್ಯತ್ಯಾಸ ಕಾಣಿಸಿತ್ತು. ಇಲ್ಲಿ ಬಿಜೆಪಿ ಇಲ್ಲವೆ ಮಿತ್ರಪಕ್ಷಗಳ ಗೆಲುವಿನ ಅಂತರ ತೀರಾ ಕಡಿಮೆಯಿತ್ತು ಮತ್ತು ಗೆಲುವಿನ ಅಂತರಕ್ಕಿಂತಲೂ ಅಂತಿಮ ಮತದಾರರ ಪ್ರಮಾಣ ಹೆಚ್ಚಿತ್ತು.

ಹರ್ಯಾಣದ 3 ಕ್ಷೇತ್ರಗಳಲ್ಲಿ ಮತಗಳ ಹೆಚ್ಚಳ ಕಾಣಿಸಿತ್ತು. ಹರ್ಯಾಣದ ಕುರುಕ್ಷೇತ್ರದಲ್ಲಿ ಬಿಜೆಪಿ ಗೆದ್ದಿತ್ತು. ಹೆಚ್ಚು ಮತಗಳು ಕಂಡುಬಂದ ಕ್ಷೇತ್ರದಲ್ಲಿ ಗೆಲುವಿನ ಅಂತರ 29 ಸಾವಿರ ಮಾತ್ರ ಇತ್ತು.

ಮಹೇಂದ್ರಗಡದಲ್ಲಿ 41,510 ಮತಗಳ ಅಂತರದಿಂದ ಬಿಜೆಪಿ ಗೆದ್ದಿತ್ತು.

ಗುರುಗ್ರಾಮದಲ್ಲಿ 75,079 ಮತಗಳ ಅಂತರದಿಂದ ಗೆದ್ದಿತ್ತು,

ಮಹಾರಾಷ್ಟ್ರದ 11 ಕ್ಷೇತ್ರಗಳಲ್ಲೂ ಇದೇ ಆಗಿತ್ತು. ಒಂದೂವರೆ ಲಕ್ಷಕ್ಕೂ ಹೆಚ್ಚು ಮತಗಳು ಆ ಕ್ಷೇತ್ರಗಳಲ್ಲಿ ದಾಖಲಾಗಿದ್ದರೂ ಗೆಲುವಿನ ಅಂತರ ಕಡಿಮೆಯಿತ್ತು.

ಅಕೋಲಾ, ಸತಾರಾ, ರತ್ನಗಿರಿ, ಬುಲ್ಡಾನಾ, ಮುಂಬೈ ವಾಯವ್ಯ, ಮಾವಲ್, ನಾಗಪುರ ಇವೇ ಮೊದಲಾದ ಕ್ಷೇತ್ರಗಳಲ್ಲಿ ಮೊದಲು ಪ್ರಕಟಿಸಲಾದ ಮತಗಳಿಗೂ ಆನಂತರ ಹೇಳಲಾದ ಮತಗಳಿಗೂ ವ್ಯತ್ಯಾಸವಿತ್ತು.

ಈಗ ವಿಧಾನಸಭೆ ಚುನಾವಣೆಯಲ್ಲೂ ಬಿಜೆಪಿ ತನ್ನ ಗೆಲುವಿನ ಸಾಧ್ಯತೆಗಳನ್ನು ಬಿಂಬಿಸಿಕೊಳ್ಳುವಲ್ಲಿ ವಾಸ್ತವಕ್ಕಿಂತ ಬೇರೆಯೇ ಆದ ಚಿತ್ರವನ್ನು ಕೊಡುವ ಯತ್ನ ಸ್ಪಷ್ಟವಾಗಿದೆ.

ಈಗಿನ ಸರ್ವೇಗಳ ಲೆಕ್ಕದಲ್ಲಿ ಬಿಜೆಪಿ ಮತ್ತು ಮಿತ್ರಪಕ್ಷಗಳು 160ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆಲ್ಲಲಿವೆ.

ಪೂರ್ತಿ ಒಬಿಸಿ ಮತಗಳು ಎನ್‌ಡಿಎಗೆ ಸಿಗಲಿವೆ ಎಂದು ಬಿಂಬಿಸುವುದು ಮುಂದಿನ ಸರ್ವೇಗಳಲ್ಲಿ ನಡೆಯಬಹುದು ಎನ್ನಲಾಗುತ್ತಿದೆ.

ಇನ್ನು ಇಂಡಿಯಾ ಮೈತ್ರಿಕೂಟದಿಂದ ಯಾರನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಬಿಂಬಿಸಲಾಗುವುದು ಎಂಬುದು ಕೂಡ ವಿಷಯವಾಗಲಿದೆ.

ಉದ್ಧವ್ ಠಾಕ್ರೆ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿಸಿದರೆ ಅದು ಬೇರೆಯದೇ ಸಾಧ್ಯತೆಗಳನ್ನು ಉಂಟು ಮಾಡಬಹುದು.

ಹರ್ಯಾಣ, ಮಹಾರಾಷ್ಟ್ರ, ಜಾರ್ಖಂಡ್ ಮಾತ್ರವಲ್ಲ, ಜಮ್ಮು-ಕಾಶ್ಮೀರದ ಚುನಾವಣೆ ಕುರಿತಂತೆಯೂ ಸಮೀಕ್ಷೆಗಳು ತಯಾರಾಗುತ್ತಿವೆ. ಅಲ್ಲಿನ 3 ಲಕ್ಷಕ್ಕೂ ಹೆಚ್ಚು ಮತದಾರರು ಮೋದಿ ನೀತಿಗಳ ಜೊತೆಗೆ ಇರುವವರು ಎಂದು ಬಿಂಬಿಸುವ ಯತ್ನಗಳಾಗಲಿವೆ.

ಅಂದರೆ ಚುನಾವಣೆಯಲ್ಲಿ ಮತದಾರರು ಪಾಲ್ಗೊಳ್ಳುವುದನ್ನೂ ಮೀರಿ, ಚುನಾವಣೆಯನ್ನು, ಮತದಾನವನ್ನು ಬೇರೆಯವರೇ ನಿರ್ಧರಿಸುತ್ತಾರೆಯೆ?

ದೇಶದ ಗ್ರಾಮೀಣ ಪ್ರದೇಶಗಳಲ್ಲಂತೂ ಶೇ.36ಕ್ಕಿಂತ ಹೆಚ್ಚು ಮತಗಳನ್ನು ಗಳಿಸಲಾರದ ಸ್ಥಿತಿ ಬಿಜೆಪಿಯದ್ದಾಗಿದೆ. ನಗರ ಪ್ರದೇಶಗಳಲ್ಲೂ ಜನರಿಗೆ ಬಿಜೆಪಿ ಬಗ್ಗೆ ಅಸಮಾಧಾನವಿದ್ದೇ ಇದೆ.

ಆದರೆ ಬಿಜೆಪಿ ಸರ್ವೇಗಳ ಮೂಲಕ, ಟಿವಿ ಚಾನಲ್‌ಗಳ ಮೂಲಕ ಬಿಂಬಿಸುವುದು ಬೇರೆಯೇ ಇರಲಿದೆಯೆ?

ಜನಸಾಮಾನ್ಯರು, ಬಡವರು ತಮ್ಮ ಅಭಿಪ್ರಾಯವನ್ನು ಮತದ ಮೂಲಕ ವ್ಯಕ್ತಪಡಿಸಲಾರದ ಸ್ಥಿತಿ ಇದೆಯೆ?

ಇಂಥ ಎಲ್ಲ ಪ್ರಶ್ನೆಗಳಿಗೆ ಮುಂದಿನ ದಿನಗಳಲ್ಲಿ ಸಿಗಲಿರುವ ಉತ್ತರ ಏನು?

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಿನಯ್ ಕೆ.

contributor

Similar News