ಸಿಡಿಲು ಬಡಿತ: ಎಚ್ಚರವಿರಲಿ

Update: 2024-06-12 07:03 GMT

ಮುಂಗಾರಿನ ಮಳೆಯ ಆಗಮನದ ಸಂದರ್ಭದಲ್ಲಿ ಸಿಡಿಲು ಬಡಿದ ಸುದ್ದಿ ದೃಶ್ಯಮಾಧ್ಯಮಗಳಲ್ಲಿ, ಪತ್ರಿಕೆಗಳಲ್ಲಿ ಸರ್ವೇಸಾಮಾನ್ಯವಾಗಿ ಬಿಟ್ಟಿದೆ. ಇದು ಇತ್ತೀಚಿನ ವರ್ಷಗಳಲ್ಲಿ ಜನರಲ್ಲಿ ಭಯ, ಭೀತಿ ಹೆಚ್ಚಿಸಿದೆ. ಈ ವರ್ಷವೂ ಸಿಡಿಲಿನ ಆರ್ಭಟ ಹೆಚ್ಚಾಗಿದೆ. ಸಿಡಿಲು ಬಡಿದು ಮಡಿದ ಜನ-ಜಾನುವಾರುಗಳ ಸಂಖ್ಯೆಯೂ ಹೆಚ್ಚುತ್ತಿದೆ. ಹೊಲಗಳಂತಹ ಬಯಲು ಪ್ರದೇಶಗಳಲ್ಲಿ ಕೆಲಸ ಮಾಡುವ ರೈತರು, ದನ-ಕುರಿ ಕಾಯುವವರು, ಮರಗಳಡಿ ನಿಂತಿರುವವರು ಹೆಚ್ಚಾಗಿ ಸಿಡಿಲಿಗೆ ಬಲಿಯಾಗುತ್ತಿದ್ದಾರೆ.

ನಮಗೆ ಮಿಂಚು ಮೊದಲು ಕಾಣಿಸಿ ಸ್ವಲ್ಪ ಸಮಯದ ನಂತರ ಗುಡುಗು ಸಿಡಿಲು ಕೇಳಿಸುತ್ತವೆ. ಇದಕ್ಕೆ ಕಾರಣ ಬೆಳಕಿನ ವೇಗ ಶಬ್ದದ ವೇಗಕ್ಕಿಂತ ಹೆಚ್ಚು ಇರುವುದು. ಬೆಳಕಿನ ವೇಗ ಸೆಕೆಂಡಿಗೆ 3 ಲಕ್ಷ ಕಿ.ಮೀ. ಆದರೆ, ಶಬ್ದದ ವೇಗ ಸೆಕೆಂಡಿಗೆ 330 ಮೀ. ಇರುತ್ತದೆ. ಆದ್ದರಿಂದ ಮಿಂಚುಕಂಡ ನಂತರ ಗುಡುಗು, ಸಿಡಿಲು ಕೇಳಿಸುತ್ತವೆ. ಮಿಂಚಿನಿಂದ 30,000 ಆ್ಯಂಪಿಯರ್‌ಗಳಷ್ಟು ವಿದ್ಯುತ್ ವಿಸರ್ಜನೆಯಾದರೆ ಮಾತ್ರ ಗುಡುಗು ಕೇಳಿಸುತ್ತದೆ!

ಲಕ್ಷಣಗಳು:

ಸಿಡಿಲು ಬಡಿದಾಗ ವ್ಯಕ್ತಿ ಒಮ್ಮಿಂದೊಮ್ಮೆಲೆ ಬವಳಿ ಬಂದಂತಾಗಿ ಪ್ರಜ್ಞಾಹೀನವಾಗುವರು. ಹೃದಯ ಚಟುವಟಿಕೆಗಳು ನಿಲ್ಲುವುದರಿಂದ ವ್ಯಕ್ತಿ ತಕ್ಷಣ ಸಾವನ್ನಪ್ಪಬಹುದು. ಇಲ್ಲವೇ ಸಿಡಿಲು ಹತ್ತಿರದಲ್ಲೇ ಬಡಿದಾಗ ಉಂಟಾಗುವ ಸುಟ್ಟಗಾಯಗಳಿಂದಾಗಿ, ಅವುಗಳ ನಂತರದ ಪರಿಣಾಮಗಳಿಂದಾಗಿ ಸಿಡಿಲು ಬಡಿದ ಕೆಲವು ದಿನಗಳು ಅಥವಾ ವಾರಗಳಲ್ಲಿ ಅಸು ನೀಗಬಹುದು. ಅಪಾಯಕಾರಿ ಅಲ್ಲದ ಸಂದರ್ಭಗಳಲ್ಲಿ ಹಿಸ್ಟಿರಿಯಾ, ತಲೆನೋವು, ತಲೆಸುತ್ತು ಬರಬಹುದು. ದಿನಗಳೆದಂತೆ ಈ ಲಕ್ಷಣಗಳು ಮಾಯವಾಗಿ ಅಶಕ್ತತೆ ಅಪ್ಪಿಕೊಳ್ಳಬಹುದು. ತೀವ್ರ ಸ್ವರೂಪದ ಸಿಡಿಲು ಬಡಿತದಲ್ಲಿ ಕಾರ್ನಿಯಾ ಹೊಳಪು ಕಳೆದುಕೊಂಡು ದೃಷ್ಟಿ ಮಸುಕಾಗಬಹುದು, ಕ್ಯಾಟರ್ಯಾಕ್ಟ್ ಕಾಣಿಸಬಹುದು. ದೃಷ್ಟಿಪಟಲದಲ್ಲಿ ರಕ್ತಸ್ರಾವವಾಗಬಹುದು ಅಥವಾ ದೃಷ್ಟಿಪಟಲ ಬೇರ್ಪಟ್ಟು ದೃಷ್ಟಿಮಾಂದ್ಯ ತಲೆದೋರಬಹುದು. ಕಿವುಡು ಕಂಗೆಡಿಸಬಹುದು. ಜೊತೆಗೆ ಎಲುಬುಗಳ ಮುರಿತ, ಆಳವಾದ ಸುಟ್ಟಗಾಯಗಳಂತಹ ತೀವ್ರ ಸ್ವರೂಪದ ಗಾಯಗಳಾಗುವುದು ಅಪರೂಪವೇನಲ್ಲ

ಚಿಕಿತ್ಸೆ:

ಸಿಡಿಲು ಬಡಿದವರಿಗೆ ತಕ್ಷಣ ಕೃತಕ ಉಸಿರಾಟ ಪ್ರಾರಂಭಿಸಬೇಕು ಮತ್ತು ಅದನ್ನು ನಾಲ್ಕೈದು ತಾಸುಗಳವರೆಗೆ ಮುಂದುವರಿಸಬೇಕು. ವೆಂಟಿಲೇಟರ್ ಸೌಲಭ್ಯಗಳು ಸಿಗುವಲ್ಲಿಗೆ ಸ್ಥಳಾಂತರಿಸುವುದು ಸೂಕ್ತ. ಹೆಚ್ಚು ಒತ್ತಡದಲ್ಲಿರುವ ಆಮ್ಲಜನಕವನ್ನು ವ್ಯಕ್ತಿಗೆ ನೀಡಬೇಕು. ಉಸಿರಾಟ ಕ್ರಿಯೆ ಸಾಮಾನ್ಯ ಸ್ಥಿತಿಗೆ ತಲುಪಿದ ಮೇಲೆ ಹೃದಯದ ಚಟುವಟಿಕೆ ಪ್ರಚೋದಿಸುವುವಂತಹ ಔಷಧಿಗಳನ್ನು ನೀಡಬೇಕು.

ಸಾಮಾನ್ಯವಾಗಿ ಸಿಡಿಲು ಬಡಿದಾಗ ವ್ಯಕ್ತಿಗಳು ಗಾಬರಿಯಾಗಿ, ಹೌಹಾರಿ ಆಘಾತಕ್ಕೆ ಒಳಗಾಗಿರುತ್ತಾರೆ. ತುರ್ತು ಚಿಕಿತ್ಸೆ ನೀಡುವುದರ ಜೊತೆಗೆ ಸಲಾಯಿನ್‌ಗಳನ್ನು ಸಾಕಷ್ಟು ಪ್ರಮಾಣದಲ್ಲಿ ನೀಡಿ, ನಾಡಿಬಡಿತ, ಉಸಿರಾಟ, ಬಿ.ಪಿ. ಸಾಮಾನ್ಯ ಸ್ಥಿತಿಯಲ್ಲಿರುವಂತೆ ಕ್ರಮ ತೆಗೆದುಕೊಳ್ಳಬೇಕು. ಎಲ್ಲಾ ವೈದ್ಯಕೀಯ ಸೌಲಭ್ಯಗಳು ಸಿಗುವ ಸ್ಥಳದಲ್ಲಿ ಸಿಡಿಲು ಬಡಿದರೆ, ವ್ಯಕ್ತಿಯ ಅದೃಷ್ಟ ಎಂದೇ ಹೇಳಬೇಕು. ಏಕೆಂದರೆ ತುರ್ತು ಚಿಕಿತ್ಸೆಯಿಂದ ಬದುಕಿಸಬಹುದು. ಆದರೆ, ಸಾಮಾನ್ಯವಾಗಿ ಇಂತಹ ಅವಘಢಗಳು ವೈದ್ಯಕೀಯ ಸೌಲಭ್ಯಗಳು ಸಿಗದ ಸ್ಥಳದಲ್ಲೇ ಆಗುವುದು ಹೆಚ್ಚು. ಆಗ ಅಪಘಾತದಿಂದ ಹೊರಬರದ ವ್ಯಕ್ತಿಯ ಪ್ರಾಣಪಕ್ಷಿ ಹಾರಿಹೋಗಬಹುದು! ಹೀಗಾಗಿ ಸಿಡಿಲಿನ ಬಗ್ಗೆ ಎಚ್ಚರ ಅಗತ್ಯ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಡಾ. ಕರವೀರಪ್ರಭು ಕ್ಯಾಲಕೊಂಡ

contributor

Similar News